ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಿಗೆ ‘ವರ್ಚುವಲ್‌ ಸ್ಪರ್ಶ’ದ ತಿಳಿವಳಿಕೆಯನ್ನೂ ನೀಡಬೇಕು- ದೆಹಲಿ ಹೈಕೋರ್ಟ್‌

‘ಒಳ್ಳೆಯ ಸ್ಪರ್ಶ’, ‘ಕೆಟ್ಟ ಸ್ಪರ್ಶ’ದ ಮಾಹಿತಿ ಸಾಲದು: ದೆಹಲಿ ಹೈಕೋರ್ಟ್‌ ಅಭಿಪ್ರಾಯ
Published 7 ಮೇ 2024, 14:31 IST
Last Updated 7 ಮೇ 2024, 14:31 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ವರ್ಚುವಲ್‌ ಜಗತ್ತು ವಿಶಾಲವಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ‘ಒಳ್ಳೆಯ ಸ್ಪರ್ಶ’ ಮತ್ತು ‘ಕೆಟ್ಟ ಸ್ಪರ್ಶ’ ಕುರಿತು ತಿಳಿವಳಿಕೆ ನೀಡಿದರೆ ಸಾಲದು. ‘ವರ್ಚುವಲ್‌ ಸ್ಪರ್ಶ’ ಹಾಗೂ ಅದು ಒಡ್ಡಬಹುದಾದ ಅಪಾಯಗಳ ಕುರಿತು ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕು ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

‘ವರ್ಚುವಲ್‌ ಸ್ಪರ್ಶ’ ಎಂಬುದು ಹೊಸ ಪರಿಕಲ್ಪನೆ. ಆನ್‌ಲೈನ್‌ನಲ್ಲಿ ನಮ್ಮ ವರ್ತನೆ ಹೇಗಿರಬೇಕು, ಆಕ್ರಮಣಕಾರಿ ವರ್ತನೆ ಗ್ರಹಿಸುವುದು ಮತ್ತು ಪ್ರೈವಸಿ ಸೆಟ್ಟಿಂಗ್‌ಗಳ ಮಹತ್ವ ಕುರಿತು ಮಕ್ಕಳಿಗೆ ತಿಳಿವಳಿಕೆ ನೀಡುವುದು ಮುಖ್ಯ’ ಎಂದು ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮ ಸೋಮವಾರ ಹೇಳಿದ್ದಾರೆ.‘

ಕಮಲೇಶದೇವಿ ಎಂಬ ಮಹಿಳೆ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ವರ್ಚುವಲ್‌ ವೇದಿಕೆಗಳು ಹದಿಹರೆಯದವರ ನಡುವೆ ಪ್ರೀತಿ ಮೊಳಕೆಯೊಡೆಯಲು ಅವಕಾಶ ನೀಡುತ್ತಿವೆ ಎಂಬ ಆರೋಪಗಳಿವೆ ಎಂಬುದನ್ನು ಬಹಳ ಮುಜುಗರದಿಂದಲೇ ನ್ಯಾಯಾಲಯ ಹೇಳಲು ಬಯಸುತ್ತದೆ. ವರ್ಚುವಲ್‌ ವೇದಿಕೆಗಳನ್ನು ಬಳಸಿಕೊಂಡು ವೇಶ್ಯಾವಾಟಿಕೆಗೆ ನೂಕುವ ಉದ್ದೇಶದ ಮಾನವ ಕಳ್ಳಸಾಗಣೆಯಂತಹ ಅಪಾಯಗಳನ್ನು ಎದುರಿಸಲು ಹದಿಹರೆಯದವರಲ್ಲಿ ಸಿದ್ಧತೆ ಸಾಲದು’ ಎಂದು ನ್ಯಾಯಮೂರ್ತಿ ಶರ್ಮ ಹೇಳಿದ್ದಾರೆ.

‘ಮಕ್ಕಳಿಗೆ ದೈಹಿಕವಾಗಿ ಒಳ್ಳೆಯ ಸ್ಪರ್ಶ ಯಾವುದು, ಕೆಟ್ಟದಾದ ಸ್ಪರ್ಶ ಯಾವುದು ಎಂಬುದನ್ನು ತಿಳಿಸುವ ಬಗ್ಗೆಯೇ ನಮ್ಮ ಎಲ್ಲ ಪ್ರಯತ್ನಗಳು ಕೇಂದ್ರೀಕೃತವಾಗಿವೆ. ಈಗ ವರ್ಚುವಲ್‌ ಜಗತ್ತು ಹೊಸ ಅಪಾಯಗಳನ್ನು ಒಡ್ಡಿದೆ. ಹೀಗಾಗಿ, ನಾವು ಮಕ್ಕಳಿಗೆ ನೀಡುವ ಶಿಕ್ಷಣವು ‘ವರ್ಚುವಲ್‌ ಸ್ಪರ್ಶ’ ಎಂಬ ಪರಿಕಲ್ಪನೆಯನ್ನೂ ಒಳಗೊಂಡಿರಬೇಕು’ ಎಂದು ಹೇಳಿದ್ದಾರೆ.

ಕಮಲೇಶದೇವಿ ಪುತ್ರ ರಾಜೀವ್‌ ಎಂಬಾತನಿಗೆ ಸಾಮಾಜಿಕ ಜಾಲತಾಣಗಳ ಮೂಲಕ 16 ವರ್ಷದ ಬಾಲಕಿಯೊಬ್ಬಳ ಪರಿಚಯವಾಗಿತ್ತು. ತನ್ನನ್ನು ಭೇಟಿ ಮಾಡಲು ಮನೆಗೆ ಬಂದಿದ್ದ ಬಾಲಕಿಯನ್ನು ಅಪಹರಿಸಿದ್ದ ರಾಜೀವ್‌, ಆಕೆಯನ್ನು ಮಧ್ಯಪ್ರದೇಶಕ್ಕೆ ಕರೆದೊಯ್ದು 7 ದಿನಗಳ ಕಾಲ ಕೂಡಿ ಹಾಕಿದ್ದ. ಈ ವೇಳೆ, ರಾಜೀವ್‌ ಹಾಗೂ ಇತರರು ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾಗಿದೆ.

ನಂತರ, ಹಣಕ್ಕಾಗಿ 45 ವರ್ಷದ ವ್ಯಕ್ತಿಯೊಂದಿಗೆ ಮದುವೆಯಾಗುವಂತೆಯೂ ಬಾಲಕಿಗೆ ಬಲವಂತ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. 

Quote - ಆನ್‌ಲೈನ್‌ ವೇದಿಕೆಗಳನ್ನು ಬಳಸುವಾಗ ಸುರಕ್ಷತೆ ಹಾಗೂ ಸೈಬರ್‌ವಂಚನೆಯ ಅಪಾಯ ಗ್ರಹಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮ ದೆಹಲಿ ಹೈಕೋರ್ಟ್‌ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT