ದೇಶದ ಮೊದಲ ಎಚ್‌ಇಎಂಎಸ್ ಉತ್ತರಾಖಂಡದಲ್ಲಿ ಆರಂಭ
ಭಾರತದ ಮೊದಲ ಹೆಲಿಕಾಪ್ಟರ್ ಆಧರಿತ ವೈದ್ಯಕೀಯ ತುರ್ತುಸೇವೆಯನ್ನು (ಎಚ್‌ಇಎಂಎಸ್) ಉತ್ತರಾಖಂಡದಲ್ಲಿ ಶೀಘ್ರವೇ ಆರಂಭಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಗುರುವಾರ ತಿಳಿಸಿದ್ದಾರೆ. ಈ ಕುರಿತು ಸಿಂದಿಯಾ ಅವರು ‘ಎಕ್ಸ್’ನಲ್ಲಿ ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಆವರಣದಿಂದ ಈ ಹೆಲಿಕಾಪ್ಟರ್ ಕಾರ್ಯನಿರ್ವಹಿಸುತ್ತದೆ. ಆಸ್ಪತ್ರೆಯಿಂದ 150 ಕಿ.ಮೀ. ದೂರದ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾದವರನ್ನು ತುರ್ತು ಚಿಕಿತ್ಸೆಗಾಗಿ ಈ ಹೆಲಿಕಾಪ್ಟರ್ ಮೂಲಕ ಹೊತ್ತುತರಲಾಗುವುದು. ಈ ಕೆಲಸಕ್ಕೆ ಬಳಸುವ ಹೆಲಿಕಾಪ್ಟರ್‌ನ ಪ್ರಮಾಣೀಕರಣದ ಕೆಲಸ ಚಾಲ್ತಿಯಲ್ಲಿದೆ. ಇದು ಸಂಪೂರ್ಣ ನನ್ನದೇ ಜವಾಬ್ದಾರಿ’ ಎಂದು ಸಿಂದಿಯಾ ಹೇಳಿದ್ದಾರೆ.