ನವದೆಹಲಿ: ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಎನಿಸಿದೆ. ಆದರೆ, ಇಂತಹ ಕ್ಯಾನ್ಸರ್ ಅನ್ನೂ ಸಂಪೂರ್ಣ ಗುಣಪಡಿಸಲು ಸಾಧ್ಯವೆಂದು ಅಮೆರಿಕದಲ್ಲಿ ನಡೆದ ಅಪರೂಪದ ವೈದ್ಯಕೀಯ ಪ್ರಯೋಗದಿಂದ ಸಾಬೀತಾಗಿದೆ. ಈ ಫಲಿತಾಂಶ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.
ವಿಜ್ಞಾನಿಗಳು ‘ಡೋಸ್ಟಾರ್ಲಿಮಾಬ್‌ನ (Dostarlimab) ಎಂಬ ಪ್ರತಿಕಾಯದ ಔಷಧಿ ಕಂಡುಹಿಡಿದಿದ್ದು, ಈ ಔಷಧಿಯ ವೈದ್ಯಕೀಯ ಪ್ರಯೋಗವನ್ನುನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನಲ್ಲಿ ನಡೆಸಲಾಗಿದೆ.
ಒಬ್ಬ ಭಾರತೀಯ ಸೇರಿ, ಗುದನಾಳ ಕ್ಯಾನ್ಸರ್ ಇದ್ದ 12 ರೋಗಿಗಳಿಗೆರೋಗವು ಎರಡು ಮತ್ತು ಮೂರನೇ ಹಂತದಲ್ಲಿದ್ದಾಗಡೋಸ್ಟಾರ್ಲಿಮಾಬ್ ಔಷಧವನ್ನುಪ್ರತಿ ಮೂರು ವಾರಗಳಿಗೊಮ್ಮೆ ಆರು ತಿಂಗಳವರೆಗೆ ನೀಡಲಾಗಿದೆ. ಫಲಿತಾಂಶದಲ್ಲಿ ಎಲ್ಲ ಕ್ಯಾನ್ಸರ್ ಗೆಡ್ಡೆಗಳು ಸಂಪೂರ್ಣ ವಾಸಿಯಾಗಿದ್ದು, ಯಾವುದೇ ಅಡ್ಡಪರಿಣಾಮವಿಲ್ಲದೇ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ‘ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್’ ಜರ್ನಲ್‌ನಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿ ಹೇಳಿದೆ.
ಚಿಕಿತ್ಸೆಯ ನಂತರ ಈ 12 ರೋಗಿಗಳನ್ನುದೈಹಿಕ, ಎಂಡೋಸ್ಕೋಪಿ, ಬಯೋಸ್ಕೋಪಿ, ಪಿಇಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್‌ಗಳಂತಹ ಸರಣಿವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದಾಗ ಯಾವುದೇ ಗೆಡ್ಡೆಗಳು ಕಾಣಿಸಲಿಲ್ಲ.ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್‌ನಲ್ಲಿಯೂ ಗೆಡ್ಡೆಯ ಪುರಾವೆ ಇರಲಿಲ್ಲ ಎಂದು ಈ ಸಂಶೋಧನಾ ವರದಿಯ ಲೇಖಕರು ಹೇಳಿದ್ದಾರೆ.
‘ಡೆಫಿಸಿಯೆಂಟ್ ಮಿಸ್‌ಮ್ಯಾಚ್ ರಿಪೇರಿ’ (ಡಿಎಂಎಂಆರ್) ಗಟ್ಟಿ ಗೆಡ್ಡೆಗಳಿಗೆವಿಕಿರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಕಿಮೋಥೆರಫಿಗೆ ಬದಲಿಯಾಗಿಡೋಸ್ಟಾರ್ಲಿಮಾಬ್ ಪ್ರತಿಕಾಯ ಔಷಧ ಪರಿಣಾಮಕಾರಿ ಚಿಕಿತ್ಸೆಯಾಗಿದೆಯೇ ಎಂದು ಕಂಡುಹಿಡಿಯಲು ಸಂಶೋಧಕರು ಮುಂದಾಗಿದ್ದಾರೆ.
‘ಇದು ಕ್ರಾಂತಿಕಾರಿ ವಿಧಾನ’
‘ಈ ಚಿಕಿತ್ಸೆಯು ಖಂಡಿತವಾಗಿಯೂ ಕ್ರಾಂತಿಕಾರಿ ವಿಧಾನದ ಹೆಜ್ಜೆ. ಅಪರೂಪದ ಪ್ರಯೋಗ ನಡೆಸಿರುವ ಸಂಶೋಧಕರು ಅಭಿನಂದನಾರ್ಹರು. ಪ್ರಯೋಗದ ಫಲಿತಾಂಶ ಹೊಸ ಆಶಾಕಿರಣ ಮೂಡಿಸಿದೆ.ಆದರೆ, ಇದು ಪ್ರಯೋಗದ ಆರಂಭಿಕ ಹಂತದಲ್ಲಿದೆ. ಇದರಿಂದ ಪ್ರಸ್ತುತ ಕ್ಯುರೇಟಿವ್ ಮಲ್ಟಿಮೋಡಲಿಟಿ ಚಿಕಿತ್ಸಾ ವಿಧಾನವನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ಹೈದರಾಬಾದ್‌ನ ಯಶೋದಾ ಆಸ್ಪತ್ರೆಗಳ ಹಿರಿಯ ಸಲಹೆಗಾರ, ವೈದ್ಯಕೀಯ ಆಂಕೊಲಾಜಿಸ್ಟ್ ಮತ್ತು ಹೆಮಟೋ ಆಂಕೊಲಾಜಿಸ್ಟ್ ಡಾ.ನಿಖಿಲ್ ಎಸ್. ಘದ್ಯಾಲ್ ಪಾಟೀಲ್ ಹೇಳಿದರು.
‘ನಮ್ಮ ದೇಶದಲ್ಲಿ ಇದುವರೆಗೆ ಇಂತಹ ಯಾವುದೇ ರೀತಿಯ ಪ್ರಯೋಗಗಳು ನಡೆದಿಲ್ಲ. ಪೆಂಬ್ರೊಲಿಜುಮಾಬ್ ನಮ್ಮಲ್ಲಿ ಲಭ್ಯವಿದೆ. ಆದರೆ, ಡೋಸ್ಟಾರ್ಲಿಮಾಬ್ ಲಭ್ಯವಿಲ್ಲ, ಒಂದು ವೇಳೆ ಲಭಿಸಿದರೂ ಅದರ ಬೆಲೆ ಎಷ್ಟೆಂಬುದು ನಿಖರವಾಗಿ ತಿಳಿಯದು. ಆದರೆ, ಪ್ರತಿ ಡೋಸ್‌ಗೆ ಲಕ್ಷಾಂತರ ರೂಪಾಯಿಗಳ ಮೇಲಿರುವ ಅಂದಾಜಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.