ಮೈಸೂರು: `ಮೇಲ್ವರ್ಗದವರು ಬಸವಣ್ಣನಂತೆ ಜಾತಿ ಅಹಂಕಾರವನ್ನು ಬಿಡಬೇಕು. ದಲಿತರು ಅಂಬೇಡ್ಕರ್ ಅವರಂತೆ ಸ್ವಾಭಿಮಾನದಿಂದ ಬಾಳಬೇಕು~ ಎಂದು ತಮ್ಮ ಜೀವನದುದ್ದಕ್ಕೂ ಹೇಳುತ್ತಾ ಬಂದ ಎಲ್.ಬಸವರಾಜು ಅವರು ಸ್ವತಃ ಈ ಮಾತಿನಂತೆಯೇ ಬದುಕಿದ್ದರು.

ಎಲ್ಲ ಕೆಳವರ್ಗದ ಮೇಲೂ ಪ್ರೀತಿಯ ಸಿಂಚನವನ್ನು ಹರಿಸಿದ್ದ ಎಲ್.ಬಿ. ಅವರ ದಲಿತರ ಮೇಲಿನ ಕಾಳಜಿ ಒಂದು ಗುಲಗುಂಜಿಯಷ್ಟು ಹೆಚ್ಚೇ ಆಗಿತ್ತು. ದೇವನೂರ ಮಹಾದೇವ ಅವರ `ಕುಸುಮ ಬಾಲೆ~ಯನ್ನು `ಕಾವ್ಯ ಕುಸುಮ ಬಾಲೆ~ಯನ್ನಾಗಿ ಮಾಡಿದ ಕೋಮಲ ಮನಸ್ಸು ಅವರದ್ದು.

ಸಂಶೋಧನೆ ಕ್ಷೇತ್ರದಲ್ಲಿ ಅವರು ನಡೆದಿದ್ದೇ ದಾರಿ. ಇತರರು ನಡೆದ ದಾರಿಯನ್ನು ಎಂದೂ ಅವರು ತುಳಿದವರಲ್ಲ. ಮೊದ ಮೊದಲು ಅವರದ್ದು ವಿದ್ವತ್ಗಾಗಿ ವಿದ್ವತ್ತು ಎಂಬ ಧೋರಣೆ. ಪಂಪನ ಆದಿ ಪುರಾಣ, ವಚನ ಸಾಹಿತ್ಯ ಸಂಗ್ರಹ, ಶೂನ್ಯ ಸಂಪಾದನೆ ಮುಂತಾದವುಗಳು ಪ್ರಖರ ವಿದ್ವತ್ ಸಂಪಾದನೆಗಳು.

ಆದರೆ ಕೆಲವೇ ಕಾಲದಲ್ಲಿ ಈ ವಿದ್ವತ್ ಪ್ರಪಂಚದಿಂದ ಹೊರ ಬಂದ ಅವರಿಗೆ ಪಂಪನನ್ನು ಜನ ಸಾಮಾನ್ಯರಿಗೂ ಪರಿಚಯಿಸಬೇಕು ಎನ್ನುವ ಮನಸ್ಸಾಯಿತು. ಅದಕ್ಕಾಗಿಯೇ ಅವರು ಸರಳ ಪಂಪ ಭಾರತವನ್ನು ಪ್ರಕಟಿಸಿದರು. ಸರ್ವಜ್ಞನ ವಚನಗಳ, ಶರಣರ ವಚನಗಳ ಕೃತಿ ಸಾಲು ಕೂಡ ಈ ಹಿನ್ನೆಲೆಯಲ್ಲಿಯೇ ಬಂದವು.

ಪುರಾಣಗಳನ್ನು ಸರಳ ಮಾಡಿದರೆ ಸಾಲದು ಎಂದು ಅವುಗಳನ್ನು ಕಥಾಮೃತವನ್ನಾಗಿಯೂ ಮಾಡಿದರು. ಅದು ನಿಜವಾದ ಎಲ್.ಬಿ. ಶೈಲಿ. ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ ವಚನಗಳಿಗೆ ವ್ಯಾಖ್ಯಾನ ಮಾಡಿದರು. ಬಸವಣ್ಣನ ವಚನಗಳ ವ್ಯಾಖ್ಯಾನದ ಕೃತಿ ನಿಜವಾಗಿಯೂ ಥ್ರೀ ಇನ್ ಒನ್. ಅದರಲ್ಲಿ ಬಸವಣ್ಣನ ವಚನ, ಅದಕ್ಕೆ ಮಹಾಲಿಂಗನ ಟೀಕೆ ಆ ನಂತರ ಎಲ್.ಬಿ ಅವರ ವ್ಯಾಖ್ಯಾನ ಇತ್ತು.

ಎಲ್.ಬಸವರಾಜು ಮೂಲತಃ ಕವಿ. ಮೈಸೂರಿನಲ್ಲಿ ಅವರು ಓದುತ್ತಿರುವಾಗಲೇ ಗೋಪಾಲಕೃಷ್ಣ ಅಡಿಗರ ಜೊತೆಗೆ ಕವಿತೆಗಳನ್ನು ಬರೆಯುತ್ತಿದ್ದರು. ಒಮ್ಮೆ ಶಿವರಾಮ ಕಾರಂತರು ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಯಲ್ಲಿ ಅಡಿಗರು ಮತ್ತು ಬಸವರಾಜು ಇಬ್ಬರೂ ಸೇರಿ ಕವಿತೆ ವಾಚಿಸಿದ್ದರು.ಆರಂಭದಲ್ಲಿಯೇ ನವ್ಯ ಶೈಲಿಯ ಕವಿತೆಗಳನ್ನು ಬರೆದಿದ್ದ ಅವರು ನಂತರ ಸಂಶೋಧನೆಯತ್ತ ಹೊರಳಿದರು.

ಮತ್ತೆ ಕವಿತಾ ಕ್ಷೇತ್ರಕ್ಕೆ ಬಂದರು. ಆದರೆ ಸಂಶೋಧನೆಯನ್ನು ಬಿಡಲಿಲ್ಲ. ಈಗ 2 ತಿಂಗಳ ಹಿಂದೆ ಕಡಕೊಳ ಮಡಿವಾಳಪ್ಪನವರ ವಚನ ಸಂಗ್ರಹವನ್ನು ಅವರು ಪ್ರಕಟಿಸಿದ್ದರು. ಅವರ ಕೊನೆಯ ಕೃತಿ ಕೂಡ `ಚಿತ್ರಗುಪ್ತನ ಚಂಪೂ~ ಕವಿತಾ ಸಂಗ್ರಹ.

ಸುಮಾರು 56 ಕೃತಿಗಳನ್ನು ಅವರು ರಚಿಸಿದ್ದರೂ ಅದಕ್ಕಾಗಿ ಒಂದು ಚಿಕ್ಕಾಸನ್ನೂ ಅವರು ಪ್ರಕಾಶಕರಿಂದ ಪಡೆಯಲಿಲ್ಲ. ಇತ್ತೀಚೆಗೆ ವಿಶ್ವ ಕನ್ನಡ ಸಮ್ಮೇಳನ ನಡೆದ ಸಂದರ್ಭದಲ್ಲಿ ಅವರ ಶೂನ್ಯ ಸಂಪಾದನೆ ಕೃತಿಯನ್ನು ಪುನರ್ ಮುದ್ರಿಸಿ ಅದರ ಗೌರವ ಧನ 25 ಸಾವಿರ ರೂಪಾಯಿ ಚೆಕ್ಕನ್ನು ಸರ್ಕಾರ ಕಳುಹಿಸಿದಾಗಲೂ `ಇಷ್ಟು ಚೆನ್ನಾಗಿ ಪುಸ್ತಕ ಪ್ರಕಟಿಸಿದ್ದಾರೆ. ಮತ್ಯಾಕೆ ಹಣ ಕೊಡ್ತಾರೆ~ ಎಂದು ತಮ್ಮ ಶಿಷ್ಯರೊಂದಿಗೆ ಪ್ರಶ್ನಿಸಿದ್ದರಂತೆ.

ನೇರ ಮತ್ತು ನಿರ್ಭಿಡೆ ಮಾತಿಗೆ ಹೆಸರಾಗಿದ್ದ ಅವರು ಸಾಮಾನ್ಯವಾಗಿ ಯಾವುದೇ ಅಭಿನಂದನೆ, ಸನ್ಮಾನಕ್ಕೆ ಒಪ್ಪಿಕೊಳ್ಳುತ್ತಿರಲಿಲ್ಲ. ಅವರಿಗೆ ಪಂಪ ಪ್ರಶಸ್ತಿ ಬಂದಾಗ ಸುಮಾರು ಒಂದು ವಾರದಗಳ ಕಾಲ ಅವರಿಗೆ ಅಭಿನಂದನೆಯ ಸುರಿಮಳೆ ಆಯಿತು. ಆಗಲೂ ಅವರು ಕೇಳಿದ್ದು `ಈ ಪ್ರಶಸ್ತಿ ಮೊದಲೇ ಬಂದಿದ್ದರೆ ನಾನು ಇಷ್ಟು ಕೆಲಸ ಮಾಡಲು ಆಗುತ್ತಿರಲಿಲ್ಲ. ಇದು ಅಷ್ಟೊಂದು ದೊಡ್ಡ ಪ್ರಶಸ್ತಿ ಏನ್ರಿ~ ಎನ್ನುವುದು.

ಇದೇ ಸಂದರ್ಭದಲ್ಲಿ ಕೋಲಾರದ ಸಾಹಿತ್ಯಾಸಕ್ತರು ಹೇಗೋ ಕಷ್ಟಪಟ್ಟು ಅವರನ್ನು ಸನ್ಮಾನಕ್ಕೆ ಒಪ್ಪಿಸಿದರು. ಸನ್ಮಾನ ಸಮಾರಂಭದಲ್ಲಿಯೇ ಸಂಘಟಕರು ಆ ಸಮಾರಂಭಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬ ಜಮಾ ಖರ್ಚಿನ ವಿವರಗಳನ್ನು ನೀಡಿದರು. ಇದರಿಂದ ಸಂತುಷ್ಟರಾದ ಬಸವರಾಜು ಅವರು ಸಮಾರಂಭಕ್ಕೆ ಸಂಗ್ರಹವಾದ ಹಣದಲ್ಲಿ 50 ಸಾವಿರ ರೂಪಾಯಿ ಉಳಿದಿದ್ದಕ್ಕೆ ತಮ್ಮದೂ ಒಂದು ಲಕ್ಷ ಸೇರಿಸಿ ಸಾಹಿತ್ಯ ಚಟುವಟಿಕೆ ನಡೆಸುವಂತೆ ಸಲಹೆ ಮಾಡಿದರು.

75ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸಂದರ್ಭದಲ್ಲಿ ಅವರಿಗೆ 75 ಸಾವಿರ ರೂಪಾಯಿಗಳನ್ನು ಅರ್ಪಿಸಿದಾಗಲೂ ಅವರು ತಮ್ಮ 25 ಸಾವಿರ ರೂಪಾಯಿಗಳನ್ನು ಸೇರಿಸಿ ಒಂದು ಲಕ್ಷ ರೂಪಾಯಿಗಳನ್ನು ಕನ್ನಡ ಸಾಹಿತ್ಯ ಪರಿಷತ್ಗೆ ನೀಡಿ ದಲಿತ ಲೇಖಕರ ಅತ್ಯುತ್ತಮ ಕೃತಿಗೆ ಬಹುಮಾನ ನೀಡುವಂತೆ ವಿನಂತಿಸಿಕೊಂಡಿದ್ದರು.

ವಾಕಿಂಗ್ ಹೋಗುವಾಗ ಯಾರಾದರೂ ಭಿಕ್ಷುಕರು ಕಂಡರೆ ಅವರಿಗೂ ತಮ್ಮ ಸಿಗರೇಟ್ ಕೊಟ್ಟು ಅದಕ್ಕೆ ಬೆಂಕಿಯನ್ನೂ ತಾವೇ ಹಚ್ಚಿ ಅವರು ಹೊಗೆ ಬಿಡುವ ಶೈಲಿಯನ್ನು ನೋಡಿ ಖುಷಿ ಪಡುವ ಎಲ್.ಬಿ. ಅವರಿಗೆ ಅಭಿನಂದನೆ ಎಂದರೆ ಯಾವಾಗಲೂ ಮುಜುಗರ. ಅದಕ್ಕೇ ಕನ್ನಡ ಸಾಹಿತ್ಯದಲ್ಲಿ ಇಷ್ಟೊಂದು ಎತ್ತರದ ಸ್ಥಾನಕ್ಕೆ ಏರಿದ್ದರೂ ಅವರಿಗೆ ಒಂದೂ ಅಭಿನಂದನ ಗ್ರಂಥ ಸಮರ್ಪಣೆಯಾಗಲಿಲ್ಲ.

ನಿಜ, ಸಾಹಿತ್ಯದಲ್ಲಿ, ಸಂಶೋಧನೆಯಲ್ಲಿ ಅವರ ದಾರಿ ಬೇರೆ. ಆದರೆ ಅವರ ಬದುಕಿನ ಮಾರ್ಗ ಹಲವಾರು ಮಂದಿಗೆ ಸ್ಫೂರ್ತಿಯ ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.