ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ಕ್ಷೇತ್ರಕ್ಕೆ ಅಜೀಂ ಪ್ರೇಮ್‌ಜಿ ನೆರವಿನ ಭರವಸೆ

Published 8 ಸೆಪ್ಟೆಂಬರ್ 2023, 16:23 IST
Last Updated 8 ಸೆಪ್ಟೆಂಬರ್ 2023, 16:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಶಾಲಾ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅಡಿ ನೆರವು ನೀಡಬೇಕೆಂಬ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಅವರ ಮನವಿಗೆ ಉದ್ಯಮಿ ಅಜೀಂ ಪ್ರೇಮ್‌ಜಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಅಜೀಂ ಪ್ರೇಮ್‌ಜಿ ಅವರು ತಮ್ಮ ಮಗ ರಿಷದ್‌ ಪ್ರೇಮ್‌ಜಿ ಮತ್ತು ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅನುರಾಗ್‌ ಬೆಹರ್‌ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಸಚಿವ ಸುಧಾಕರ್‌ ಕೂಡ ಭೇಟಿ ವೇಳೆ ಇದ್ದರು.

ಈ ಸಂದರ್ಭದಲ್ಲಿ ಪ್ರಸ್ತಾವವೊಂದನ್ನು ಮುಂದಿಟ್ಟ ಸಚಿವರು, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ₹ 3,256 ಕೋಟಿ ನೆರವಿನ ಅಗತ್ಯವಿದೆ. ಸರ್ಕಾರಿ ಪದವಿ ಕಾಲೇಜುಗಳಿಗೆ ₹ 1,997 ಕೋಟಿ, ಸರ್ಕಾರಿ ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಿಗೆ ₹ 852 ಕೋಟಿ, ಕೌಶಲಾಭಿವೃದ್ಧಿ ಪ್ರಯೋಗಾಲಯಗಳಿಗೆ ₹ 386 ಕೋಟಿ, ಯೂನಿವರ್ಸಿಟಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿಗೆ ₹ 14 ಕೋಟಿ ಮತ್ತು ಡಾ.ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ಗೆ ₹ 6 ಕೋಟಿ ನೆರವಿನ ಅಗತ್ಯವಿದೆ ಎಂದು ವಿವರಿಸಿದರು.

ಸಿಎಸ್ಆರ್‌ ನಿಧಿ ಅಡಿಯಲ್ಲಿ ಆರ್ಥಿಕ ನೆರವಿನ ಜತೆಯಲ್ಲೇ ಶೈಕ್ಷಣಿಕ ನೆರವನ್ನೂ ಒದಗಿಸುವಂತೆ ಸುಧಾಕರ್‌ ಮನವಿ ಮಾಡಿದರು. ಈ ಕುರಿತು ಸ್ಪಷ್ಟವಾದ ಯೋಜನೆಯೊಂದಿಗೆ ಬರುವುದಾಗಿ ಅಜೀಂ ಪ್ರೇಮ್‌ಜಿ ಭರವಸೆ ನೀಡಿದ್ದಾರೆ.

ಭೇಟಿ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಅಜೀಂ ಪ್ರೇಮ್‌ಜಿ ರಾಜ್ಯಕ್ಕೆ ದೊಡ್ಡ ಆಸ್ತಿ. ಅವರ ಪ್ರಯತ್ನಗಳಿಗೆ ಸರ್ಕಾರ ಬೆಂಬಲ ನೀಡಲಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಸಮಸ್ಯೆ ಪರಿಹಾರಕ್ಕೆ ನೆರವಾಗುವ ಭರವಸೆಯನ್ನು ಅವರು ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT