ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ತವರಿನಲ್ಲಿ ಸಾಲ ವಸೂಲಿ ನೋಟಿಸ್

Last Updated 5 ಡಿಸೆಂಬರ್ 2018, 16:42 IST
ಅಕ್ಷರ ಗಾತ್ರ

ಚನ್ನಪಟ್ಟಣ: ಮುಖ್ಯಮಂತ್ರಿ ಸ್ವಕ್ಷೇತ್ರ ಚನ್ನಪಟ್ಟಣ ತಾಲ್ಲೂಕಿನವರಾದ ಟಿ. ಶಾರದಮ್ಮ ಹಾಗೂ ಅವರ ಕುಟುಂಬದವರಿಗೆ ಕೆನರಾ ಬ್ಯಾಂಕ್ ಬೇವೂರು ಶಾಖೆಯು ನ್ಯಾಯಾಲಯದ ಮೂಲಕ ಕೃಷಿ ಸಾಲ ವಸೂಲಾತಿ ನೋಟಿಸ್ ನೀಡಿದೆ.

ಶಾರದಮ್ಮ 2011ರಲ್ಲಿ ಬ್ಯಾಂಕ್‌ನಿಂದ ₹2 ಲಕ್ಷ ಕೃಷಿ ಸಾಲ ಪಡೆದಿದ್ದರು. ಬ್ಯಾಂಕಿಗೆ ಹಣ ಮರುಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಹಾಗೂ ಅವರ ಪುತ್ರ ಉಮಾಪತಿ ಮತ್ತು ಪುತ್ರಿ ಪಂಕಜಾ ಅವರಿಗೆ ನೋಟಿಸ್ ಜಾರಿಯಾಗಿದ್ದು, ಸಾಲ ಮರುಪಾವತಿ ಮಾಡದೇ ಹೋದಲ್ಲಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದೆ.

ರೈತ ಸಂಘ ಖಂಡನೆ: ‘ರೈತ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ. ಇದೀಗ ಅವರ ಕ್ಷೇತ್ರದಲ್ಲಿಯೇ ಅನ್ನದಾತರಿಗೆ ನೋಟಿಸ್ ನೀಡಿರುವುದು ಆತಂಕದ ಸಂಗತಿ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಲ್ಲಯ್ಯ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಾಲ ಮನ್ನಾ ಕುರಿತು ಬ್ಯಾಂಕಿನವರಿಗೆ ಮಾಹಿತಿ ಇಲ್ಲವೇ? ಸರ್ಕಾರದಿಂದ ಅವರಿಗೆ ಯಾವುದೇ ಸೂಚನೆ ಬಂದಿಲ್ಲವೇ’ ಎಂದು ಪ್ರಶ್ನಿಸಿದರು. ‘ಮುಖ್ಯಮಂತ್ರಿ ಕ್ಷೇತ್ರದಲ್ಲಿಯೇ ರೈತರ ಮೇಲೆ ಈ ರೀತಿಯ ದೌರ್ಜನ್ಯ ದುರದೃಷ್ಟಕರ. ಕುಮಾರಸ್ವಾಮಿ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ಸಾಲ ಮನ್ನಾ ಆಗಿರುವ ಕುರಿತು ಬ್ಯಾಂಕಿನವರಿಗೆ ಸುತ್ತೋಲೆ ಹೊರಡಿಸಬೇಕು. ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ರೈತ ಸಂಘವು ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರೈತಸಂಘದ ಪದಾಧಿಕಾರಿಗಳಾದ ವಿಜಯ್ ಕುಮಾರ್, ಎಚ್.ನಾಗೇಶ್, ಎಚ್.ಸಿ.ಕೃಷ್ಣಯ್ಯ, ಎ.ಆರ್. ವೆಂಕಟಪ್ಪ, ತಿಮ್ಮೇಗೌಡ, ಗುರುಲಿಂಗಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT