ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಸ್ವತ್ತು ಮಾರಾಟಕ್ಕೆ ಸರ್ಕಾರದ ಹುನ್ನಾರ: ಆರ್‌.ಅಶೋಕ

₹3,000 ಕೋಟಿ ಮೌಲ್ಯದ ಆಸ್ತಿ - ₹200 ಕೋಟಿ ಕಿಕ್‌ಬ್ಯಾಕ್‌ ಆರೋಪ
Published 7 ಮೇ 2024, 16:19 IST
Last Updated 7 ಮೇ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಸುಮಾರು ₹3,000 ಕೋಟಿ ಮೌಲ್ಯದಷ್ಟು ಬೆಲೆ ಬಾಳುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ರಾಜ್ಯ ಸರ್ಕಾರ ‘ಲೀಸ್‌’ ಹೆಸರಲ್ಲಿ ಭೂಗಳ್ಳರಿಗೆ ಮಾರಾಟ ಮಾಡಲು ಮುಂದಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ಇದರಿಂದಾಗಿ ಸರ್ಕಾರದಲ್ಲಿನ ಕೆಲವರಿಗೆ ₹200 ಕೋಟಿಗೂ ಅಧಿಕ ಕಿಕ್‌ ಬ್ಯಾಕ್‌ ಸಿಗಲಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಸರ್ಕಾರದ ಈ ಯತ್ನವನ್ನು ತಡೆಯಲು ಹೋರಾಟ ರೂಪಿಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಎಚ್‌ಎಸ್‌ಆರ್‌ ಲೇಔಟ್‌, ಆಸ್ಟಿನ್ ಟೌನ್‌, ಕೋರಮಂಗಲ, ವಿಜಯನಗರ, ಆರ್‌.ಟಿ.ನಗರ, ಸದಾಶಿವ ನಗರದ ಬಿಡಿಎ ಸ್ವತ್ತುಗಳ ಮಾರಾಟಕ್ಕೆ ಮುಂದಾಗಿದೆ. ಇವು ಅತ್ಯಂತ ಬೆಲೆ ಬಾಳುವ ಬೆಂಗಳೂರು ನಾಗರಿಕರಿಗೆ ಸೇರಿದ ಸ್ವತ್ತು. ಪರಭಾರೆ ಮಾಡಲು ಇವರಿಗೆ ಅವಕಾಶ ಕೊಟ್ಟವರು ಯಾರು? 2013–18 ರ ಅವಧಿಯಲ್ಲೂ ಕಾಂಗ್ರೆಸ್‌ ಸರ್ಕಾರ ಇದೇ ಮಾದರಿಯ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿತ್ತು. ಇದರ ವಿರುದ್ಧ ಬೆಂಗಳೂರಿನ ಜನತೆ ತೀವ್ರ ಪ್ರತಿಭಟನೆ ನಡೆಸಿದ್ದರು ಎಂದು ಅವರು  ನೆನಪಿಸಿದರು.

‘ಗ್ಯಾರಂಟಿಗಳಿಂದ ದಿವಾಳಿ ಆಗಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಬಿಡಿಎ ಆಸ್ತಿಗಳನ್ನು ಮಾರಿ ಹೈಕಮಾಂಡ್‌ಗೆ ಕಪ್ಪ ನೀಡಲು ಮುಂದಾಗಿದೆ. ಈಗಾಗಲೇ ಕೇರಳ ಸರ್ಕಾರ ದಿವಾಳಿ ಆಗಿದ್ದು, ಆ ರಾಜ್ಯಕ್ಕೆ ಎಲ್ಲಿಂದಲೂ ಸಾಲವೂ ಸಿಗುತ್ತಿಲ್ಲ. ಅದೇ ರೀತಿ ನಮ್ಮ ರಾಜ್ಯವೂ ಆರ್ಥಿಕತೆಯಲ್ಲಿ ಕೊನೆಯ ಸ್ಥಾನಕ್ಕೆ ಹೋಗಲಿದೆ. ಈಗ ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಿ ದುಡ್ಡು ಹೊಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಸರ್ಕಾರ ಪಾರ್ಕಿಂಗ್‌ ಕಾಂಪ್ಲೆಕ್ಸ್‌, ಹಾಕಿ ಸ್ಟೇಡಿಯಂ ಕಟ್ಟಡವನ್ನು ಗುತ್ತಿಗೆಗೆ ನೀಡಿ ಮಾರಾಟ ಮಾಡಿತ್ತು. ಈಗ ಆರು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಸುಮಾರು 50 ವರ್ಷಗಳಿಗೆ ಗುತ್ತಿಗೆಗೆ ನೀಡಲಾಗುತ್ತಿದೆ. ಇದು ಮಾರಾಟದ ಮಾದರಿಯಲ್ಲೇ ಇದೆ’ ಎಂದು ಹೇಳಿದರು.

‘ಸರ್ಕಾರ ಆದಾಯ ಹೆಚ್ಚಿಸಿಕೊಳ್ಳಲು ಬೇರೆ ಮಾರ್ಗ ನೋಡಲಿ. ಕೂಡಲೇ ಇದಕ್ಕೆ ಸಂಬಂಧಿಸಿದ ಟೆಂಡರ್ ಅನ್ನು ರದ್ದುಪಡಿಸಬೇಕು. ಇಲ್ಲವಾದರೆ ವಿಧಾನಸಭೆ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ’ ಎಂದು ಹೇಳಿದರು.

‘ಯಡಿಯೂರಪ್ಪ ಸರ್ಕಾರ ಇದ್ದಾಗ ಈ ಕಡತ ಬಂದಿತ್ತು. ಇದು ಲೂಟಿ ಮಾಡುವ ಸ್ಕೀಮ್‌ ಎಂದಿದ್ದಕ್ಕೆ ಯಡಿಯೂರಪ್ಪ ಅದನ್ನು ವಾಪಸ್‌ ಕಳಿಸಿದ್ದರು. ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ಈ ಲೂಟಿ ಮಾಫಿಯಾ ಮತ್ತೆ ಮುಂದೆ ಬಂದಿತ್ತು. ಆಗಲೂ ಮನವಿ ವಜಾ ಮಾಡಲಾಗಿತ್ತು. ಈಗ ರಾಹುಲ್‌ಗಾಂಧಿ, ಸೋನಿಯಾಗಾಂಧಿಗೆ ಕಪ್ಪ ನೀಡಲು ಆಸ್ತಿ ಲೂಟಿ ಮಾಡಲು ಹೊರಟಿದ್ದಾರೆ. ಬೆಂಗಳೂರಿನ ಜನ ಇದರ ವಿರುದ್ಧ ಪ್ರತಿಭಟನೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT