ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಬೆಂಬಲಿಸಿದ ಜೆಡಿಎಸ್‌: ಕಲಾಪ ಬಹಿಷ್ಕಾರ, ರಾಜ್ಯಪಾಲರಿಗೆ ದೂರು

ಗೆಹಲೋತ್‌ಗೆ ಮಾಹಿತಿ ನೀಡಿದ ಖಾದರ್
Published 20 ಜುಲೈ 2023, 21:30 IST
Last Updated 20 ಜುಲೈ 2023, 21:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಸಭಾಧ್ಯಕ್ಷರ ಪೀಠದತ್ತ ಕಾಗದ ತೂರಿದ 10 ಸದಸ್ಯರನ್ನು ಅಮಾನತ್ತುಗೊಳಿಸಿದ ಕ್ರಮವನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಗುರುವಾರ ವಿಧಾನಸಭೆ ಮತ್ತು ವಿಧಾನಪರಿಷತ್‌ ಕಲಾಪವನ್ನು ಬಹಿಷ್ಕರಿಸಿದವು.

ಬಿಜೆಪಿ ಸದಸ್ಯರು ಶಾಸಕ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಬಳಿಕ ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ತೆರಳಿ ಸಭಾಧ್ಯಕ್ಷರು ಮತ್ತು ಸರ್ಕಾರದ ವಿರುದ್ಧ ದೂರು ನೀಡಿದರು.

ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ ಸದನ ಬಹಿಷ್ಕರಿಸಿ, ಪ್ರತಿಭಟನೆ ನಡೆಸುವ ಮತ್ತು ರಾಜ್ಯಪಾಲರಿಗೆ ದೂರು ಸಲ್ಲಿಸಲು ತೀರ್ಮಾನಿಸಲಾಯಿತು. ಅಲ್ಲದೇ, ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತು.

ಮತ್ತೊಂದೆಡೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಕಲಾಪವನ್ನು ಬಹಿಷ್ಕರಿಸಲು ತೀರ್ಮಾನಿಸಿದರು. ಇದೇ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಪ್ರತಿಭಟನೆಗೆ ಕೈ ಜೋಡಿಸುವಂತೆ ಮನವಿ ಮಾಡಿದರು. ಪಕ್ಷದ ಶಾಸಕರ ಜತೆ ಚರ್ಚಿಸಿ ತಿಳಿಸುವುದಾಗಿ ಕುಮಾರಸ್ವಾಮಿ ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸದ ಕುಮಾರಸ್ವಾಮಿ ಮತ್ತು ಜೆಡಿಎಸ್‌ ಸದಸ್ಯರು ರಾಜಭವನದಲ್ಲಿ ಬಿಜೆಪಿ ನಾಯಕರು ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು. ಮನವಿಪತ್ರಕ್ಕೆ ಮೊದಲ ಸಹಿ ಕುಮಾರಸ್ವಾಮಿ ಅವರದ್ದೇ ಇದ್ದಿದ್ದು ವಿಶೇಷ.

ವಿಧಾನಸೌಧ ಮತ್ತು ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಬಳಿ ಕುಳಿತು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ಎಸ್‌.ಸುರೇಶ್‌ ಕುಮಾರ್, ಕೋಟ ಶ್ರೀನಿವಾಸಪೂಜಾರಿ, ಸುನಿಲ್‌ಕುಮಾರ್‌, ಆರಗ ಜ್ಞಾನೇಂದ್ರ,  ಮುನಿರತ್ನ, ಬೈರತಿ ಬಸವರಾಜ್‌ ಸೇರಿ ಬಹುತೇಕ ಶಾಸಕರು ಭಾಗವಹಿಸಿದ್ದರು.

ಬಳಿಕ ಅವರು ಕಾಲ್ನಡಿಗೆಯಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಗೆ ದೂರು ನೀಡಿದರು. ನಗರದಲ್ಲಿ ಇತ್ತೀಚೆಗೆ ನಡೆದ ವಿಪಕ್ಷಗಳ ನಾಯಕರ ಸಭೆಯ ಸಂದರ್ಭದಲ್ಲಿ ಆತಿಥ್ಯಕ್ಕಾಗಿ ಐಎಎಸ್‌ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದು, ಈ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸಿದಾಗ ನಡೆದ ಬೆಳವಣಿಗಗಳ ಅಷ್ಟೂ ಮಾಹಿತಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಇದ್ದರು.

ಸಭಾಧ್ಯಕ್ಷರಿಂದಲೂ ಭೇಟಿ: ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ, ಕಲಾಪದ ವೇಳೆ ನಡೆದ ಘಟನೆಗಳು ಮತ್ತು 10 ಶಾಸಕರನ್ನು ಅಮಾನತುಗೊಳಿಸಬೇಕಾದ ಸಂದರ್ಭದ ವಿವರಿಸಿ, ವರದಿಯೊಂದನ್ನು ಸಲ್ಲಿಸಿದರು.

ಖಾದರ್‌ ಅವರ ಜತೆಯಲ್ಲಿ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಇದ್ದರು. ಕಲಾಪವನ್ನು ಉತ್ತಮ ವಾತಾವರಣದಲ್ಲಿ ನಡೆಸಿಕೊಂಡು ಹೋಗುವಂತೆ ರಾಜ್ಯಪಾಲರು ಸಲಹೆ ನೀಡಿದರು ಎಂದು ಮೂಲಗಳು ಹೇಳಿವೆ.

ಬಿಜೆಪಿಯ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ನಡೆ ಖಂಡಿಸಿ ಬಸವರಾಜ ಬೊಮ್ಮಾಯಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ದೂರು ಸಲ್ಲಿಸಿದರು
ಬಿಜೆಪಿಯ ಶಾಸಕರನ್ನು ಅಮಾನತು ಮಾಡಿರುವ ಸ್ಪೀಕರ್ ನಡೆ ಖಂಡಿಸಿ ಬಸವರಾಜ ಬೊಮ್ಮಾಯಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ದೂರು ಸಲ್ಲಿಸಿದರು

ಸಭಾಧ್ಯಕ್ಷರ ಕೆಟ್ಟ ನಿರ್ಧಾರ: ಬೊಮ್ಮಾಯಿ ಕಿಡಿ

‘ವಿಪಕ್ಷಗಳ ರಾಜಕೀಯ ಕಾರ್ಯಕ್ರಮಕ್ಕೆ ಐಎಎಸ್‌ ಅಧಿಕಾರಿಗಳನ್ನು ಕಳುಹಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಪಕ್ಷದ 10 ಸದಸ್ಯರನ್ನು ಅಮಾನತು ಮಾಡಿದ್ದಾರೆ. ಇಂತಹ ಕೆಟ್ಟ ನಿರ್ಧಾರ ಇತಿಹಾಸದಲ್ಲೇ ನಡೆದಿಲ್ಲ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ಕಾಂಗ್ರೆಸ್‌ ಪಕ್ಷ ರಾಜಕೀಯ ಲಾಭಕ್ಕಾಗಿ ಸಭಾಧ್ಯಕ್ಷರ ಹುದ್ದೆಯನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.

‘ಧರಣಿಯಲ್ಲಿದ್ದ ನಮ್ಮನ್ನು ಕರೆದು ಮಾತನಾಡಿಸಿ ಸಮಸ್ಯೆ ಬಗೆಹರಿಸಬಹುದಿತ್ತು. ಈ ರೀತಿಯ ಪ್ರಕರಣಗಳು ಹಿಂದೆಯೂ ನಡೆದಿವೆ. ಆದರೆ ಈ ರೀತಿ ತೀರ್ಮಾನಗಳನ್ನು ಯಾರೂ ಮಾಡಿರಲಿಲ್ಲ. ಸಭಾಧ್ಯಕ್ಷರು ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಹಾಜರಾಗಬಾರದು ಎಂಬ ನಿಯಮ ಪಾಲಿಸಿಕೊಂಡು ಬರಲಾಗಿದೆ’ ಎಂದು ಬೊಮ್ಮಾಯಿ ಹೇಳಿದರು.

‘ಸಭಾಧ್ಯಕ್ಷರು ಕಾಂಗ್ರೆಸ್‌ ಪಕ್ಷದ ಔತಣಕೂಟಕ್ಕೆ ಹಾಜರಾಗಿ ಊಟ ಮಾಡಿ ಬಂದಿದ್ದಾರೆ. ಅವರ ಮೇಲೆ ವಿಶ್ವಾಸವಿಲ್ಲ ಎಂದು ನಾವು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೇಳಿದ್ದೇವೆ. ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ರೀತಿ ವರ್ತಿಸುತ್ತಿದೆ. ಜನರು ಅವರಿಗೆ ಅಧಿಕಾರ ನೀಡಿದ್ದರೆ ಜನರ ಪರವಾಗಿ ಧ್ವನಿ ಎತ್ತಲು ನಮಗೂ ಅವಕಾಶ ನೀಡಿದ್ದಾರೆ’ ಎಂದರು.

ಸದನಕ್ಕೆ ಸಿಎಂ ತಪ್ಪು ಮಾಹಿತಿ: ಎಚ್‌ಡಿಕೆ

‘ಅಧಿಕಾರಿಗಳ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಮತ್ತು ಸಭಾಧ್ಯಕ್ಷರು ಏಕಪಕ್ಷೀಯವಾಗಿ ವರ್ತಿಸಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ದೂರಿದ್ದಾರೆ.

ರಾಜ್ಯಪಾಲರ ಭೇಟಿಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ‘ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿಲ್ಲ. ಅವರನ್ನು ಗೌರವದಿಂದಲೇ ನಡೆಸಿಕೊಂಡಿದ್ದೇನೆ. ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಹೀಗೆ ಸುಳ್ಳು ಹೇಳುವುದಕ್ಕೆ ನಾಚಿಕೆ ಆಗಬೇಕು. ನನ್ನ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಅವರು ಸವಾಲು ಹಾಕಿದರು.

‘ವಿಧಾನಸಭೆಯಲ್ಲಿ ಬುಧವಾರ ನಡೆದ ಗೊಂದಲಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರವೇ ನೇರ ಕಾರಣ. ಸಭಾಧ್ಯಕ್ಷರ ಪೀಠವನ್ನು ದುರ್ಬಳಕೆ ಮಾಡಿಕೊಂಡಿದೆ. ಎರಡು ನಿಮಿಷದಲ್ಲಿ ಬಗೆಹರಿಸುವ ವಿಷಯವನ್ನು ಇಷ್ಟು ದೂರ ಎಳೆದು ತರಲಾಗಿದೆ’ ಎಂದು ಹೇಳಿದರು.

‘ಸಭ್ಯತೆ ಕಾಪಾಡುವುದು ಸಭಾಧ್ಯಕ್ಷರ ಹೊಣೆ’

‘ಸದನದ ಸಭ್ಯತೆ ಕಾಪಾಡುವುದು ಸಭಾಧ್ಯಕ್ಷರ ಹೊಣೆ. ಅದೇ ರೀತಿ ಆಡಳಿತ ಪಕ್ಷದ ಲೋಪದೋಷಗಳನ್ನು ತಿಳಿಸುವುದು ವಿಪಕ್ಷಗಳ ಜವಾಬ್ದಾರಿ ಆಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ‘ಸರ್ಕಾರ ತನ್ನ ಮನಸ್ಸಿಗೆ ಬಂದಂತೆ ವರ್ತಿಸಬಾರದು. ಮೊನ್ನೆ ಬಂದವರು ಸರ್ಕಾರದ ಅತಿಥಿಗಳಲ್ಲ ಎಂದ ಅವರು ಐಎಎಸ್‌ ಐಪಿಎಸ್‌ ಅಧಿಕಾರಿಗಳನ್ನು ನಿಯೋಜಿಸಿ ಸೇವಾ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಟೀಕಿಸಿದರು. ‘ಕಾಗದ ಹರಿದು ಹಾಕಿದ್ದಕ್ಕೆ ಅಮಾನತು ಮಾಡುವುದಾದರೆ ಹಿಂದೆ ಸಭಾಪತಿಯವರ ಕುರ್ಚಿ ಎಳೆದುದಕ್ಕೆ ವಜಾ ಮಾಡಬೇಕಿತ್ತು’ ಎಂದು ತಿಳಿಸಿದರು.

ಬಣಗುಟ್ಟಿದ ವಿಧಾನಸಭೆ, ಪರಿಷತ್

ಬಿಜೆಪಿ ಮತ್ತು ಜೆಡಿಎಸ್ ಶಾಸಕರು ವಿಧಾನಸಭೆ ಮತ್ತು ಪರಿಷತ್‌ ಕಲಾಪವನ್ನು ಬಹಿಷ್ಕರಿಸಿದ್ದರಿಂದ ವಿರೋಧ ಪಕ್ಷಗಳ ಆಸನಗಳು ಖಾಲಿ ಇದ್ದವು. ವಿಧಾನಸಭೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಾಲಿ ಜನಾರ್ದನ ರಡ್ಡಿ ಮಾತ್ರ ಹಾಜರಿದ್ದರು. ಆಡಳಿತ ಪಕ್ಷದ ಸದಸ್ಯರು ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ವಿಧಾನ ಪರಿಷತ್‌ನಲ್ಲೂ ಬಿಜೆಪಿ ಜೆಡಿಎಸ್‌ ಸದಸ್ಯರು ಕಲಾಪ ಬಹಿಷ್ಕರಿಸಿದರು. ಕೋರಂ ಕೊರತೆಯಿಂದ ಒಂದೂವರೆ ಗಂಟೆ ತಡವಾಗಿ ಕಲಾಪ ಆರಂಭವಾಯಿತು. ಸಭಾಪತಿ ಬಸವರಾಜ ಹೊರಟ್ಟಿ ನಡೆಸಿದ ವಿರೋಧ ಪಕ್ಷಗಳ ಸದಸ್ಯರ ಮನವೊಲಿಕೆ ಪ್ರಯತ್ನ ಫಲನೀಡಲಿಲ್ಲ. ಬಿಜೆಪಿಯ ಎಚ್‌.ವಿಶ್ವನಾಥ್ ಜೆಡಿಎಸ್‌ನ ಮರಿತಿಬ್ಬೇಗೌಡ ಮಾತ್ರ ಹಾಜರಿದ್ದು ಮಸೂದೆಗಳ ಪರ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT