ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯ ಮುಗಿಸಲು ಬಿಜೆಪಿ ಹುನ್ನಾರ: ಸಚಿವ ದಿನೇಶ್‌ ಗುಂಡೂರಾವ್‌

Published : 3 ಆಗಸ್ಟ್ 2024, 9:24 IST
Last Updated : 3 ಆಗಸ್ಟ್ 2024, 9:24 IST
ಫಾಲೋ ಮಾಡಿ
Comments

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತ ವರ್ಗದವರ ದೊಡ್ಡ ಧ್ವನಿ. ಅವರ ವಿರುದ್ಧ‌ ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯವಾಗಿ ಅವರನ್ನು ಮುಗಿಸಲು ಹುನ್ನಾರ ನಡೆಸಿದ್ದಾರೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಆರೋಪಿಸಿದರು.

‘ಮುಡಾ’ ಹಗರಣ ವಿರೋಧಿಸಿ ಬಿಜೆಪಿ–ಜೆಡಿಎಸ್‌ನವರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಕೈಗೊಂಡಿರುವ ವಿಚಾರವಾಗಿ, ಇಲ್ಲಿ ಶನಿವಾರ ಸುದ್ದಿಗಾರರಿಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ನಮ್ಮ ರಾಜ್ಯಕ್ಕೆ ಅನ್ಯಾಯವಾದಾಗಲೆಲ್ಲ ಸಿದ್ದರಾಮಯ್ಯ ಅವರು ಕೇಂದ್ರದ ವಿರುದ್ಧ ಧ್ವನಿ ಎತ್ತಿದ್ದಾರೆ. ರಾಜ್ಯದ ಪಾಲಿನ ತೆರಿಗೆ ಹಣ ಬಾರದಿದ್ದಾಗ ದೆಹಲಿಗೆ ನಿಯೋಗ ಕೊಂಡೊಯ್ದು ಪ್ರತಿಭಟಿಸಿದ್ದಾರೆ. ಸುಪ್ರೀಂಕೋರ್ಟ್‌ನಿಂದ ಕೇಂದ್ರಕ್ಕೆ ಛೀಮಾರಿ ಹಾಕಿಸಿ, ಕಳೆದ ವರ್ಷ ಬರ ಪರಿಹಾರ ಪಡೆದಿದ್ದಾರೆ. ಇವೆಲ್ಲ ಬೆಳವಣಿಗೆಯಿಂದ ಕಂಗೆಟ್ಟ ಬಿಜೆಪಿಯವರು, ರಾಜಕೀಯವಾಗಿ ಸಿದ್ದರಾಮಯ್ಯ ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ವಾಲ್ಮೀಕಿ ‌ಅಭಿವೃದ್ಧಿ ನಿಗಮದ ಹಗರಣದಲ್ಲೂ ಸಿದ್ದರಾಮಯ್ಯ ಸಿಲುಕಿಸಲು ಯೋಜಿಸಿದ್ದರು. ವಿಚಾರಣೆಗಾಗಿ ಅನಗತ್ಯವಾಗಿ ಇಲ್ಲಿಗೆ ಸಿಬಿಐ ಪ್ರವೇಶ ಮಾಡಿತು. ಈಗ ಜಾರಿ ನಿರ್ದೇಶನಾಲಯ (ಇ.ಡಿ)ದಿಂದ ವಿಚಾರಣೆ ನಡೆಯುತ್ತಿದೆ. ಇ.ಡಿ ವಶದಲ್ಲಿ ಇರುವವರಿಗೆ ಬೆದರಿಕೆ ಹಾಕಿ, ನಮ್ಮ ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಚೋದಿಸಲಾಗುತ್ತಿದೆ’ ಎಂದು ದೂರಿದರು.

‘ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಯಾವುದೇ ತಪ್ಪಿಲ್ಲ. ಬಿಜೆಪಿ ‌ಸರ್ಕಾರದ ಅವಧಿಯಲ್ಲೇ‌ 50:50 ಯೋಜನೆ ಜಾರಿಗೆ ತರಲಾಗಿದೆ. ಮುಡಾ ನಿವೇಶನಗಳು ಜೆಡಿಎಸ್ ಶಾಸಕರಿಗೂ ಹಂಚಿಕೆಯಾಗಿವೆ. ಹಾಗಾಗಿ ಹೋರಾಟದಿಂದ ಹಿಂದೆ ಸರಿದಿದ್ದ ಜೆಡಿಎಸ್‌ನವರು, ಈಗ ಬಿಜೆಪಿ ಹೈಕಮಾಂಡ್ ಸೂಚನೆ ಮೇರೆಗೆ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ತಪ್ಪಾಗಿದೆ. ಆದರೆ, ಬಿಜೆಪಿಯವರು ಗೂಬೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

‘ಬಿಜೆಪಿಯವರಿಗೆ ಕಾನೂನು ಎಂಬುದೇ ಇಲ್ಲ. ಶೇ 95ರಷ್ಟು ತನಿಖಾ ಸಂಸ್ಥೆಗಳನ್ನು ಅವರು ದುರುಪಯೋಗ ಪಡಿಸಿಕೊಂಡಿದ್ದಾರೆ. ದೆಹಲಿ ಮುಖ್ಯಮಂತ್ರಿ ಬಂಧಿಸಿದ ಅವರು, ಈಗ ಕರ್ನಾಟಕದ ಮುಖ್ಯಮಂತ್ರಿ ಬಂಧನಕ್ಕಾಗಿ ರಾಜಭವನ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಯಾದಗಿರಿಯಲ್ಲಿ ಪಿಎಸ್‌ಐ ಅನುಮಾನಾಸ್ಪದ ಸಾವಿಗೆ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ ಕಾರಣ’ ಎಂಬ ಕುಟುಂಬಸ್ಥರ ಆರೋಪಕ್ಕೆ ಪ್ರತಿಕ್ರಿಯಿಸಿದ ಗುಂಡೂರಾವ್‌, ‘ಈ ಬಗ್ಗೆ ದೂರು ದಾಖಲಾಗಿದ್ದರೆ, ಕಾನೂನು ಪ್ರಕಾರ ಕ್ರಮವಾಗುತ್ತದೆ. ಯಾರೇ ತಪ್ಪು ಕೆಲಸ ಮಾಡಿದ್ದರೂ ರಕ್ಷಿಸುವ ಮಾತೇ ಇಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT