ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಶಿಬಿರ: ರಕ್ತದ ಅಭಾವ

ಚುನಾವಣೆ ನೀತಿ ಸಂಹಿತೆಯಿಂದ ರಕ್ತದಾನ ಶಿಬಿರಕ್ಕೆ ಹಿನ್ನಡೆ
Published 27 ಏಪ್ರಿಲ್ 2023, 3:11 IST
Last Updated 27 ಏಪ್ರಿಲ್ 2023, 3:11 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ನೀತಿ ಸಂಹಿತೆಯ ಪರಿಣಾಮ ನಗರದಲ್ಲಿ ರಕ್ತದಾನ ಶಿಬಿರಗಳ ಆಯೋಜನೆ ಮೇಲೂ ಬೀರಿದೆ. ಇದರಿಂದಾಗಿ ರಕ್ತದ ಅಭಾವ ಎದುರಾಗಿದೆ. 

ರಕ್ತದ ಬೇಡಿಕೆ ಮತ್ತು ಪೂರೈಕೆ ನಡುವೆ ಶೇ 50 ರಷ್ಟು ವ್ಯತ್ಯಾಸ ಉಂಟಾಗಿದೆ. ಇದೇ ಸ್ಥಿತಿ ಮುಂದುವರಿದಲ್ಲಿ ಸಮಸ್ಯೆ ಇನ್ನಷ್ಟು ಗಂಭೀರವಾಗಬಹುದು ಎಂದು ರಕ್ತನಿಧಿ ಕೇಂದ್ರದ ಪ್ರತಿನಿಧಿಗಳು ಕಳವಳ ವ್ಯಕ್ತಪಡಿಸಿದ್ದಾರೆ. 

ಬೇಸಿಗೆ ರಜೆ ಅವಧಿಯಲ್ಲಿ ವಿವಿಧ ಸಂಘ–ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ನಡೆಸುತ್ತಿದ್ದವು. ರಾಜಕಾರಣಿಗಳು, ಸಿನಿಮಾ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರ ಜನ್ಮದಿನದ ನೆನಪಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತಿತ್ತು.

ಎರಡು ವರ್ಷ ಕೋವಿಡ್‌ನಿಂದಾಗಿ ಶಿಬಿರಗಳು ಅಷ್ಟಾಗಿ ನಡೆದಿರಲಿಲ್ಲ. ಇದರಿಂದಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿ ವಿವಿಧ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಎದುರಾಗಿತ್ತು. ಲಸ್ಸೇಮಿಯಾ ಮತ್ತು ಹೀಮೊಫಿಲಿಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳು ಸಮಸ್ಯೆ ಎದುರಿಸಿದ್ದರು. ಸದ್ಯ, ಕೋವಿಡ್ ನಿಯಂತ್ರಣದಲ್ಲಿದ್ದರೂ ಚುನಾವಣೆ ನೀತಿ ಸಂಹಿತೆಯ ಕಾರಣ ರಕ್ತದಾನ ಶಿಬಿರಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿಲ್ಲ. 

ಕೋವಿಡ್‌ ಬಳಿಕ ಐಟಿ–ಬಿಟಿ ಕಂಪನಿಗಳು ಪುನಾರಂಭ ಆಗಿದ್ದರೂ, ವಾರದ ಎಲ್ಲಾ ದಿನಗಳು ಕಾರ್ಯನಿರ್ವಹಿಸುತ್ತಿಲ್ಲ. ಈಗಲೂ ಕೆಲ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಐಟಿ–ಬಿಟಿ ಕಂಪನಿಗಳು ಶಿಬಿರ ನಡೆಸಲು ಆಸಕ್ತಿ ತೋರುತ್ತಿ. ಇದರಿಂದಲೂ ರಕ್ತ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 

ಪೂರೈಕೆ ಕಷ್ಟ: ಪ್ರಮುಖ ರಕ್ತ ನಿಧಿ ಸಂಸ್ಥೆಯಾದ ಭಾರತೀಯ ರೆಡ್‌ ಕ್ರಾಸ್‌ ನಗರದ ವಿವಿಧ ಆಸ್ಪತ್ರೆಗಳಿಗೆ ರಕ್ತ ಪೂರೈಕೆ ಮಾಡುತ್ತಿತ್ತು. ಕೆಲ ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ರಕ್ತ ಸಂಗ್ರಹವಾಗದಿದ್ದರಿಂದ ಆಸ್ಪತ್ರೆಗಳಿಗೆ ಲಭ್ಯತೆಯ ಆಧಾರದಲ್ಲಿ ಕೇಂದ್ರವು ಒದಗಿಸುತ್ತಿದೆ. ಪ್ರತಿ ತಿಂಗಳು 3 ಸಾವಿರ ಯೂನಿಟ್‌ ರಕ್ತವನ್ನು ಸಂಗ್ರಹಿಸುತ್ತಿದ್ದ ಸಂಸ್ಥೆ, ಎರಡು ತಿಂಗಳಿಂದ 1.5 ಸಾವಿರ ಯೂನಿಟ್ ರಕ್ತವನ್ನು ಸಂಗ್ರಹಿಸುತ್ತಿದೆ. 

‘ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಕ್ತದಾನ ಶಿಬಿರಗಳು ಅಷ್ಟಾಗಿ ನಡೆಯುತ್ತಿಲ್ಲ. ಪೂರ್ವ ನಿಗದಿತ ಶಿಬಿರಗಳನ್ನೂ ಆಯೋಜಕರೇ ರದ್ದು ಮಾಡುತ್ತಿದ್ದಾರೆ. ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಸಂಗ್ರಹವಾಗಿದ್ದ ರಕ್ತದಲ್ಲಿಯೇ ನಿರ್ವಹಣೆ ಮಾಡುತ್ತಿದ್ದೇವೆ. ಬೇಡಿಕೆಯಷ್ಟು ಪೂರೈಕೆ ಸಾಧ್ಯವಾಗುತ್ತಿಲ್ಲ. ಯುವಜನರು ರಕ್ತದಾನದ ಜೊತೆಗೆ ಇತರರನ್ನೂ ರಕ್ತದಾನ ಮಾಡಲು ಪ್ರೇರೇಪಿಸಬೇಕು’ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯಶಾಖೆಯ ಕಾರ್ಯಕಾರಿ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. 

‘ಸರ್ಕಾರಿ ಆಸ್ಪತ್ರೆಗಳಲ್ಲಿ ಥಲಸ್ಸೇಮಿಯಾ ರೋಗಿಗಳಿಗೆ ಉಚಿತವಾಗಿ ರಕ್ತ ಒದಗಿಸಲಾಗುತ್ತಿದೆ. ಕೊರತೆ ನೀಗಿಸಲು ಸಂಚಾರಿ ವಾಹನಗಳ ಮೂಲಕವೂ ರಕ್ತ ಸಂಗ್ರಹಿಸಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು. 

ಥಲಸ್ಸೇಮಿಯಾ ರೋಗಿಗಳಿಗೆ ಸಮಸ್ಯೆ

‘ರಕ್ತ ದಾನ ಶಿಬಿರಗಳು ನಡೆಯುತ್ತಿಲ್ಲ. ರಕ್ತ ಸಂಗ್ರಹಿಸಲು ಬಹಳ ಕಷ್ಟ ಪಡುತ್ತಿದ್ದೇವೆ.  ನಮ್ಮ ಸಂರಕ್ಷಾ ಥಲಸ್ಸೇಮಿಯಾ ಕೇಂದ್ರದಲ್ಲಿ 426 ಮಕ್ಕಳಿದ್ದಾರೆ. ಅವರಿಗೆ ನಿತ್ಯ 30ರಿಂದ 35 ಯೂನಿಟ್ ರಕ್ತ ಒದಗಿಸಬೇಕಾಗುತ್ತದೆ. ಕಾಯಂ ದಾನಿಗಳನ್ನು ಸಂಪರ್ಕಿಸಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ಅಗತ್ಯ ಪ್ರಮಾಣದ ರಕ್ತವನ್ನು ಸಂಗ್ರಹಿಸಿ ಒದಗಿಸುವುದು ಸವಾಲಾಗಿದೆ’ ಎಂದು ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಅಧಿಕಾರಿ ರಾಧಾ ತಿಳಿಸಿದರು. ‘ರಕ್ತದಾನ ಶಿಬಿರಗಳು ನಡೆದರೂ ದಾನಿಗಳು ಬರುತ್ತಿಲ್ಲ. ಈ ಮೊದಲು ಪ್ರತಿನಿತ್ಯ 80ರಿಂದ 100 ಯೂನಿಟ್ ರಕ್ತವನ್ನು ಆಸ್ಪತ್ರೆಗಳಿಗೆ ಒದಗಿಸುತ್ತಿದ್ದೇವು. ಈಗ ನಮ್ಮಲ್ಲಿನ ಮಕ್ಕಳಿಗೆ ಅವರ ಪಾಲಕರಲ್ಲಿ ರಕ್ತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆಸ್ಪತ್ರೆಗಳಿಗೆ ರಕ್ತವನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಂಪರ್ಕ ಸಂಖ್ಯೆ: 080 26608870 ಅಥವಾ 9945299369

ಭಾರತೀಯ ರೆಡ್‌ ಕ್ರಾಸ್‌ ಕರ್ನಾಟಕ ಶಾಖೆಯ ಸಂಪರ್ಕ ಸಂಖ್ಯೆ: 080 22268435 ಅಥವಾ 9902859859

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT