ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಬುಡಕಟ್ಟು ಜನರ ಶ್ರೇಯಕ್ಕಾಗಿ ಶ್ರಮಿಸುತ್ತಿರುವ ಸೋಮಣ್ಣಗೆ ‘ಪದ್ಮಶ್ರೀ’

Published 25 ಜನವರಿ 2024, 17:52 IST
Last Updated 25 ಜನವರಿ 2024, 17:52 IST
ಅಕ್ಷರ ಗಾತ್ರ

ಮೈಸೂರು: ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ನಾಲ್ಕು ದಶಕಗಳಿಂದ ಅವಿರತವಾಗಿ ಶ್ರಮಿಸುತ್ತಿ ರುವ ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ಮೊತ್ತ ಹಾಡಿಯ ಸೋಮಣ್ಣ ಅವರಿಗೆ ‘ಪದ್ಮಶ್ರೀ’ ಗೌರವ ದೊರೆತಿದೆ.

ರಾಜ್ಯ ಸರ್ಕಾರ 2016ನೇ ಸಾಲಿನಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿತ್ತು. ಮರು ದಿನ ಅವರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿತ್ತು. ಇದನ್ನು ಖಂಡಿಸಿ ನಾಡಿನ ಪ್ರಗತಿಪರರು–ಚಿಂತಕರು ಸೇರಿಕೊಂಡು ಸಾಹಿತಿ ದೇವನೂರ ಮಹಾದೇವ ಅವರ ಸಮ್ಮುಖದಲ್ಲಿ ಅವರಿಗೆ ₹1 ಲಕ್ಷ ನಗದು ಒಳಗೊಂಡ ‘ಜನ ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ವಿಶೇಷವಾಗಿ ಗೌರವಿಸಿದ್ದರು. ಜನರಿಂದ ದೇಣಿಗೆ ಸಂಗ್ರಹಿಸಿ ನೀಡಿದ್ದರು.

ಈಚೆಗೆ ರಾಜ್ಯ ಸರ್ಕಾರದಿಂದ ನೀಡಲಾಗುವ ವಾಲ್ಮೀಕಿ ಪ್ರಶಸ್ತಿಗೆ ಅವರು ಭಾಜನವಾಗಿದ್ದರು. ₹5 ಲಕ್ಷ, 20 ಗ್ರಾಂ. ಚಿನ್ನದ ಪದಕ ಒಳಗೊಂಡ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು. ಪ್ರಶಸ್ತಿ ಪ್ರದಾನ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಆಗ ರಾಜ್ಯೋತ್ಸವ ಮಿಸ್ ಆಗಿತ್ತು ಕಣಯ್ಯ, ಈಗ ವಾಲ್ಮೀಕಿ ಪ್ರಶಸ್ತಿ ಕೊಟ್ಟಿದ್ದೇವೆ’ ಎಂದು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ್ದರು. ಈಗ, ದೇಶದ 4ನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಶ್ರೀ’ಯೂ ಸೋಮಣ್ಣ ಅವರನ್ನು ಹುಡುಕಿಕೊಂಡು ಬಂದಿದೆ.

ಆಲತ್ತಾಳಹುಂಡಿಯ ಜೇನುಕುರುಬರಾದ ಅವರು ತಳ ಸಮುದಾಯದವರ ಅದರಲ್ಲೂ ಬುಡಕಟ್ಟು ಜನರ ಸಾಕ್ಷಿಪ್ರಜ್ಞೆ. ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಆದಿವಾಸಿಗಳನ್ನು ಮುಖ್ಯವಾಹಿನಿಗೆ ತರಲು ಹೋರಾಡುತ್ತಿದ್ದಾರೆ. ನಾಗರಹೊಳೆ, ಕಾಕನಕೋಟೆ ಅಭಯಾರಣ್ಯದಿಂದ ಮೂಲನಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಬುಡಕಟ್ಟು ಹಾಡಿಗಳಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಅವರ ಕಷ್ಟ–ಸುಖದಲ್ಲಿ ಭಾಗಿಯಾದವರು. ಆದಿವಾಸಿಗಳಿಗೆ ಹಕ್ಕು ಕಲ್ಪಿಸಲು ನ್ಯಾಯಾಲಯದ ಮೆಟ್ಟಲೇರಿ ಹೋರಾಟವನ್ನೂ ನಡೆಸಿದವರು.

ಬಡತನದ ಕಾರಣದಿಂದ ಅವರು ಶಾಲೆಗೆ ಹೋದವರಲ್ಲ. ಆದರೆ, ಲೋಕಜ್ಞಾನ ಪಡೆದು ಸಣ್ಣ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾರೆ. ಪ್ರಗತಿಪರ ಹೋರಾಟಗಾರರ ಜೊತೆಗೂಡಿ ಕಟ್ಟಿದ ‘ರಾಜ್ಯ ಮೂಲ ನಿವಾಸಿ ವೇದಿಕೆ’ಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸಂಘಟಿತ ಪ್ರಯತ್ನದಿಂದ ಆದಿವಾಸಿಗಳಿಗೆ ಅರಣ್ಯ ಪ್ರದೇಶದಿಂದ ಆರು ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಟ್ಟು ಗಮನಸೆಳೆದಿದ್ದಾರೆ.

ಆರಂಭದಲ್ಲಿ ಜೀತದಾಳಾಗಿದ್ದ ಅವರು ಅದರಿಂದ ಹೊರಬಂದು, ತನ್ನವರಾದ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಡುತ್ತಲೇ ಬಂದಿದ್ದಾರೆ.

ಕಾಡಂಚಿನಲ್ಲಿ ಹೋಟೆಲ್‌ ನಿರ್ಮಾಣಕ್ಕೆ ಮುಂದಾದ ಬಂಡವಾಳಶಾಹಿಗಳ ವಿರುದ್ಧವೂ ಹೋರಾಟ ನಡೆಸಿದ್ದರು. ಅದರಲ್ಲಿ ಯಶಸ್ಸನ್ನೂ ಕಂಡಿದ್ದರು. ‘ನರ್ಮದಾ ಬಚಾವೋ’ ಹೋರಾಟದಲ್ಲಿ ಮೇಧಾ ಪಾಟ್ಕರ್ ಜೊತೆ ಪಾಲ್ಗೊಂಡಿದ್ದರು. 2008ರಿಂದ ಜಾರಿಗೆ ಬಂದ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯರಾಗಿದ್ದಾರೆ. 1991ರಲ್ಲಿ ಫಿಲಿಪ್ಪೀನ್ಸ್ ದೇಶದಲ್ಲಿ ನಡೆದ ಆದಿವಾಸಿಗಳ ಮೇಳದಲ್ಲಿ ಕರ್ನಾಟಕದ ಬುಡಕಟ್ಟು ಪ್ರತಿನಿಧಿಯಾಗಿ ಭಾಗವಹಿಸಿದ್ದರು. 

66 ವರ್ಷದ ಸೋಮಣ್ಣ ಪುತ್ರ ಕಾಳಸ್ವಾಮಿ ಜೊತೆ ಮೊತ್ತ ಹಾಡಿಯಲ್ಲಿ ವಾಸವಾಗಿದ್ದಾರೆ. ಈಚೆಗೆ ‘ಕನ್ಹೇರಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ಪತ್ನಿ (ರಾಜಮ್ಮ) ಜ.7ರಂದು ನಿಧನರಾದರು. ಆ ನೋವಿನಲ್ಲಿದ್ದ ನನಗೆ ಪದ್ಮಶ್ರೀ ಸಿಕ್ಕಿದ್ದು ಚೈತನ್ಯ ತುಂಬಿದಂತಾಗಿದೆ’ ಎಂದರು.

‘ದೊಡ್ಡ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ’

‘ಈ ರೀತಿಯ ದೊಡ್ಡ ಪ್ರಶಸ್ತಿ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲ. ಖುಷಿಯಾಗಿದೆ. ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ. 1978ರಿಂದ ನನ್ನ ಜನರ ಪರವಾಗಿ ಹೋರಾಡುತ್ತಿದ್ದೇನೆ. ಒಂದು ಸಮುದಾಯಕ್ಕೆ ಸೀಮಿತವಾಗಲಿಲ್ಲ. ಎಲ್ಲರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಲಿಂಗದೇವರು ಹಳೆಮನೆ ಮೊದಲಾದವರನ್ನು ನೆನಪಿಸಿಕೊಳ್ಳುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT