ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಇಟಿ ಕಣ್ಗಾವಲಿಗೆ ‘ಎಐ’: ಸರ್ಕಾರಕ್ಕೆ ಕೆಇಎ ಪ್ರಸ್ತಾವ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ತಂತ್ರಜ್ಞಾನ ಬಳಕೆ
Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಅಕ್ರಮ ಆರೋಪದ ಬೆನ್ನಲ್ಲೆ, ರಾಜ್ಯದಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗಳ (ಸಿಇಟಿ) ಅಕ್ರಮ ತಡೆಯಲು ‘ಕೃತಕ ಬುದ್ಧಿಮತ್ತೆ’ ತಂತ್ರಜ್ಞಾನ ಅಳವಡಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮುಂದಾಗಿದೆ.

‘ಸಿಇಟಿ, ಸರ್ಕಾರದ ನಾನಾ ಇಲಾಖೆ, ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಳ್ಳಮಾರ್ಗ ಅನುಸರಿಸುವ ಅಭ್ಯರ್ಥಿಗಳ ಮೇಲೆ ಕಣ್ಗಾವಲು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಉದ್ದೇಶಿಸಲಾಗಿದೆ. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲು ತೀರ್ಮಾನಿಸಿದ್ದು, ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ತಿಳಿಸಿದರು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರಗಳಲ್ಲಿ ಎಐ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಆ ಮೂಲಕ, ಸಾಮೂಹಿಕ ನಕಲು, ಬ್ಲೂಟೂತ್‌ ಬಳಕೆ, ಅಸಲಿ ವ್ಯಕ್ತಿಯ ಬದಲು ನಕಲಿ ವ್ಯಕ್ತಿ ಪರೀಕ್ಷೆ ಬರೆಯಲು ಹಾಜರಾಗುವುದನ್ನು ತಡೆಯಲಾಗುವುದು’ ಎಂದರು.

ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಕಾತಿಗೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಲು ಕೆಇಎ ನಿರ್ಧರಿಸಿದೆ. 

‘ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಒಟ್ಟು 36 ಹುದ್ದೆಗಳಿಗೆ ರಾಜ್ಯದ ನಾಲ್ಕು (ಬೆಂಗಳೂರು, ಧಾರವಾಡ, ಬಳ್ಳಾರಿ, ಕಲಬುರಗಿ) ಜಿಲ್ಲೆಗಳಲ್ಲಿ ಜುಲೈ 13, 14ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಳ ಕೇಂದ್ರಗಳಲ್ಲಿ ಎಐ ವ್ಯವಸ್ಥೆ ಅಳವಡಿಸಲು ಟೆಂಡರ್‌ ಆಹ್ವಾನಿಸಿದ್ದೇವೆ. ಮೊದಲ ದಿನ 8,542 (377 ಕೇಂದ್ರಗಳು), ಎರಡನೇ ದಿನ 9001 ಅಭ್ಯರ್ಥಿಗಳು (377 ಕೇಂದ್ರಗಳು) ಪರೀಕ್ಷೆ ಬರೆಯಲಿದ್ದಾರೆ. ಇದು ಯಶಸ್ವಿಯಾದರೆ ಮತ್ತು ಸರ್ಕಾರ ಅನುಮತಿ ನೀಡಿದರೆ  ಈ ವ್ಯವಸ್ಥೆಯನ್ನು ಭವಿಷ್ಯದಲ್ಲಿ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಳವಡಿಸಿಕೊಳ್ಳಲು ಉದ್ದೇಶಿಸಿದ್ದೇವೆ’ ಎಂದು ವಿವರಿಸಿದರು.

‘ಎಲ್ಲ ವ್ಯವಸ್ಥೆಗಳನ್ನು ಮೀರಿಯೂ ಅಕ್ರಮವಾಗಿ ನೇಮಕಾತಿಯ ಅವಕಾಶ ಗಿಟ್ಟಿಸಿಕೊಂಡವರನ್ನು ತಡೆಯಲು ಕೂಡಾ ಕ್ರಮ ತೆಗೆದುಕೊಳ್ಳಲಾಗುವುದು. ಪರೀಕ್ಷಾ ಕೇಂದ್ರಗಳಲ್ಲಿ ಸಂಗ್ರಹಿಸಿದ ಅಭ್ಯರ್ಥಿಗಳ ಹಸ್ತ ಮತ್ತು ಬೆರಳಚ್ಚನ್ನು ಉದ್ಯೋಗದಾತ ಇಲಾಖೆಗೆ ನೀಡಲಾಗುವುದು. ನೇಮಕಾತಿ ಆದೇಶ ನೀಡುವ ಸಂದರ್ಭದಲ್ಲಿ ಹಸ್ತ, ಬೆರಳಚ್ಚು ಹೊಂದಾಣಿಕೆಯಾಗುತ್ತಿದೆಯೇ ಎಂದು ಪರಿಶೀಲಿಸಲು ಕೂಡಾ ತೀರ್ಮಾನಿಸಲಾಗಿದೆ’ ಎಂದೂ ತಿಳಿಸಿದರು.

ಅಭ್ಯರ್ಥಿಗಳ ಮೇಲೆ ನಿಗಾಕ್ಕೆ ‘ತ್ರಿ’ಸೂತ್ರ

* ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವೆಬ್‌ ಕಾಸ್ಟಿಂಗ್. ಆಯಾ ಜಿಲ್ಲಾಧಿಕಾರಿ ಕಚೇರಿ ಮತ್ತು ಕೆಇಎ ಕೇಂದ್ರ ಕಚೇರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನೇರ ನಿಗಾ

* ಅಭ್ಯರ್ಥಿಗಳ ಭಾವಚಿತ್ರವನ್ನು ಏಜೆನ್ಸಿಗಳಿಗೆ ಮೊದಲೇ ಕೊಟ್ಟು ಪರೀಕ್ಷೆ ಬರೆಯಲು ಬಂದಾಗ ‍‘ಹೊಂದಾಣಿಕೆ’ ಆಗುತ್ತಿದೆಯೇ ಎಂದು ಪರಿಶೀಲನೆ. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಹಸ್ತ ಮತ್ತು ಬೆರಳಚ್ಚು ಸಂಗ್ರಹ.

* ದೇಹದ ಯಾವುದೇ ಭಾಗದಲ್ಲಿ ಬ್ಲೂಟೂತ್‌ನಂತಹ ಸೂಕ್ಷ್ಮ ಎಲೆಕ್ಟ್ರಾನಿಕ್‌ ಉಪಕರಣಗಳಿದ್ದರೂ ಶೋಧಿಸುವ ಲೋಹ ಶೋಧಕ (ಫ್ರಿಸ್ಕಿಂಗ್‌) ಪರೀಕ್ಷಾ ಕೇಂದ್ರದಲ್ಲಿ ಅಳವಡಿಕೆ

ಒಂದೇ ವ್ಯಕ್ತಿ ಎರಡು ಹಾಲ್ ಟಿಕೆಟ್!

‘ಹೇಗಾದರು ಮಾಡಿ ಹುದ್ದೆ ಗಿಟ್ಟಿಸಿಕೊಳ್ಳಬೇಕೆಂದು ನಾನಾ ಅಡ್ಡದಾರಿಗಳನ್ನು ಅಭ್ಯರ್ಥಿಗಳು ಹುಡುಕುತ್ತಿರುವುದು ಗಮನಕ್ಕೆ ಬಂದಿದೆ. ಒಬ್ಬ ಅಭ್ಯರ್ಥಿ ಎರಡು ಅರ್ಜಿಗಳನ್ನು (ಒಂದರಲ್ಲಿ ತನ್ನ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡು) ಸಲ್ಲಿಸಿ ಎರಡು ಹಾಲ್‌ ಟಿಕೆಟ್‌ ಪಡೆದುಕೊಂಡು ಅಸಲಿ ವ್ಯಕ್ತಿ ಒಂದು ಕೇಂದ್ರದಲ್ಲಿ ನಕಲಿ ವ್ಯಕ್ತಿ (ಪ್ರತಿಭಾವಂತ) ಇನ್ನೊಂದು ಕೇಂದ್ರದಲ್ಲಿ ಪರೀಕ್ಷೆ ಬರೆದಿರುವುದು ಗೊತ್ತಾಗಿದೆ. ಪ್ರತಿಭಾವಂತ ಬರೆದ ಪರೀಕ್ಷೆಯ ಮೂಲಕ ಅಸಲಿ ಅಭ್ಯರ್ಥಿ ಆಯ್ಕೆಗೆ ಯತ್ನಿಸಿರುವುದನ್ನು ಪತ್ತೆ ಹಚ್ಚಲಾಗಿದೆ’ ಎಂದು ಪ್ರಸನ್ನ ತಿಳಿಸಿದರು. ಈ ರೀತಿಯ ಅಕ್ರಮ ತಡೆಯಲು ಅಭ್ಯರ್ಥಿಗಳ ಭಾವಚಿತ್ರವನ್ನು ಏಜೆನ್ಸಿಗಳಿಗೆ ನೀಡಿ ಪರೀಕ್ಷಾ ಕೇಂದ್ರಕ್ಕೆ ಬರುವಾಗಲೇ ಅಸಲಿ ವ್ಯಕ್ತಿಯನ್ನು ಪತ್ತೆ ಮಾಡಲು ಭಾವಚಿತ್ರದ ಜೊತೆ ‘ಹೊಂದಾಣಿಕೆ’ ಮಾಡಲಾಗುವುದು. ಈ ವ್ಯವಸ್ಥೆಯಲ್ಲಿ ಶೇ 85ರಷ್ಟು ಹೊಂದಾಣಿಕೆಯಾಗುತ್ತಿದೆ. ಅನುಮಾನ ಬಂದ ಶೇ 15ರಷ್ಟು ಅಭ್ಯರ್ಥಿಗಳ ಆಧಾರ ಕಾರ್ಡ್‌ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲಿಸಲು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗುವುದು’ ಎಂದರು.

ಭವಿಷ್ಯದ ದಿನಗಳಲ್ಲಿ ಸಿಇಟಿ ಮತ್ತು ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ತಡೆಯಲು ಎಐ ತಂತ್ರಜ್ಞಾನ ಅಳವಡಿಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
–ಎಚ್‌. ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ ಕೆಇಎ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT