ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭರವಸೆ ಉಚಿತ, ಸಾಲ ಖಚಿತ ಎಂಬ ಅರ್ಥನೀತಿ ಬಿಡಿ: ಸಿದ್ದರಾಮಯ್ಯಗೆ ಸಚಿವ ಸುನಿಲ್ ಸಲಹೆ

Last Updated 15 ಜನವರಿ 2023, 9:52 IST
ಅಕ್ಷರ ಗಾತ್ರ

ಬೆಂಗಳೂರು: 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಕಾಂಗ್ರೆಸ್‌ನ ಆಶ್ವಾಸನೆಗೆ ಸಂಬಂಧಿಸಿದಂತೆ ಇಂಧನ ಸಚಿವ ಸುನಿಲ್‌ ಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ಮತ್ತೊಂದು ಸುತ್ತಿನ ವಾಗ್ವಾದ ಆರಂಭವಾಗಿದೆ.

ಕಾಂಗ್ರೆಸ್‌ ಪಕ್ಷ ತನ್ನ ಚುನಾವಣಾ ಆಶ್ವಾಸನೆಯಾಗಿ 200 ಯೂನಿಟ್‌ ಉಚಿತ ವಿದ್ಯುತ್‌ ಘೋಷಿಸುತ್ತಲೇ ಟೀಕೆ ಮಾಡಿದ್ದ ಸಚಿವ ಸುನಿಲ್‌ ಕುಮಾರ್‌, ‌ಉಚಿತ ವಿದ್ಯುತ್ ಕಾಂಗ್ರೆಸ್‌ನ ಸುಳ್ಳು ಡಂಗುರ ಎಂದು ಗೇಲಿ ಮಾಡಿದ್ದರು. ಸುನಿಲ್‌ ಅವರ ಅಪಹಾಸ್ಯಕ್ಕೆ ತಿರುಗೇಟು ನೀಡಿದ್ದ ಸಿದ್ದರಾಮಯ್ಯ, ‘ಸಚಿವ ಸುನಿಲ್‌ಕುಮಾರ್‌ ಅಸಾಮರ್ಥ್ಯಕ್ಕೆ ತಕ್ಕಂತೆ ಇಂಧನ ಇಲಾಖೆಯೂ ಕೆಲಸ ಮಾಡುತ್ತಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಇಲಾಖೆಯನ್ನು ಲಾಭದ ಹಳಿಗೆ ತಂದು ಜನರಿಗೆ 200 ಯುನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಸಲಾಗುವುದು. ಉದ್ಘಾಟನಾ ಸಮಾರಂಭಕ್ಕೆ ಸುನಿಲ್‌ ಅವರನ್ನೂ ಆಹ್ವಾನಿಸುತ್ತೇವೆ’ ಎಂದಿದ್ದರು.

ಸಿದ್ದರಾಮಯ್ಯ ಅವರ ಈ ಮಾತಿಗೆ ಸುನಿಲ್‌ ಇಂದು ಸರಣಿ ಟ್ವೀಟ್‌ ಮಾಡಿ ವಾಗ್ದಾಳಿ ನಡೆಸಿದ್ದಾರೆ. ’ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ “ವಿತ್ತನೀತಿ”ಯನ್ನು ಸಿದ್ದರಾಮಯ್ಯ ನವರು ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ. ಸಾಲ ಎತ್ತುವಳಿಯನ್ನೇ ಬಂಡವಾಳ ಹೂಡಿಕೆ ಎಂದು ವ್ಯಾಖ್ಯಾನಿಸುವ ಅವರ ಭಂಡತನ ಅರ್ಥಶಾಸ್ತ್ರದ ಹೊಸ ವ್ಯಾಖ್ಯಾನವೇ ಸರಿ. ದಿವಾಳಿ ಹೊಂದುವುದನ್ನೇ ಪ್ರಧಾನ ಗುರಿಯಾಗಿಸಿಕೊಂಡ ಅರ್ಥವ್ಯವಸ್ಥೆಗೆ ನಿಮ್ಮ ನೀತಿ ಆದರ್ಶ’ ಎಂದು ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.

‘ಕುತ್ತಿಗೆವರೆಗೆ ಮುಳುಗಿದ್ದ ಎಸ್ಕಾಂಗಳನ್ನು ಸಾಲದ ಹೊರೆಯಿಂದ ಮೇಲೆತ್ತಿದ್ದೇವೆ ಎಂದು ಬೆನ್ನು ಚಪ್ಪರಿಸಿಕೊಂಡಿದ್ದೀರಿ, ಸಂತೋಷ. ಸಮಕಾಲೀನ ರಾಜಕಾರಣದ ಉತ್ತರಪುರುಷ ಎಂದು ಬಿರುದಾಂಕಿತರಾದ ನಿಮ್ಮಿಂದ ಇಂಥ ಸುಳ್ಳು ಬಡಾಯಿಗಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವೇ? ನೀವು ಎಸ್ಕಾಂಗಳ ಮೇಲೆ ಹೊರಿಸಿ ಹೋದ ಸಾಲದ ಗಂಟನ್ನು ಇಳಿಸಿದ್ದು ನಾವು. ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಎಲ್‌ ಮೇಲಿನ ₹10,203 ಕೋಟಿ ಸಾಲವೂ ಸೇರಿದಂತೆ 2013 ರಿಂದ 2018ರ ಅವಧಿಯಲ್ಲಿ ₹33,414.20 ಕೋಟಿ ಸಾಲದ ಗಂಟನ್ನು ಎಸ್ಕಾಂಗಳ ಮೇಲೆ ಹೊರಿಸಿದ್ದಿರಿ. ನೀವೇ ಸ್ಟೇರಿಂಗ್‌ ಹಿಡಿದು ಸಮನ್ವಯ ಸಾಧಿಸಿದ ಮೈತ್ರಿ ಸರ್ಕಾರದ ಕಾಲದಲ್ಲಿ ₹27,178 ಕೋಟಿ ಸಾಲದ ಹೊರೆ ಎಸ್ಕಾಂಗಳ ಮೇಲೆ ಬಿತ್ತು’ ಎಂದು ಅವರು ಹೇಳಿದ್ದಾರೆ.

‘ವಾಸ್ತವವನ್ನು ಮರೆ ಮಾಚುವುದಕ್ಕಾಗಿ ನೀವು ಸಾಲವನ್ನು ಬಂಡವಾಳ ಹೂಡಿಕೆ ಎಂದು ವ್ಯಾಖ್ಯಾನಿಸಿದ್ದೀರಿ. ಇಷ್ಟೊಂದು ಸಾಲ ಮಾಡಿದ ಮೇಲೆ ಹೊರೆ ಇಳಿಸಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುವ ನಿಮ್ಮ ಜ್ಞಾನನಿಧಿಯ ಬಗ್ಗೆ ಸಾಮಾನ್ಯ ಪ್ರಜೆಯೂ ಸರ್ವಾಂಗಗಳಿಂದಲೂ ಕನಿಕರ ವ್ಯಕ್ತಪಡಿಸಬಹುದು. ಈ ಕಾರಣಕ್ಕಾಗಿಯೇ ನೀವು ಕತ್ತಲೆಯಲ್ಲಿ ಬಜೆಟ್‌ ಓದಿದ ಸಂಗತಿಯನ್ನು ನಾನು ನೆನಪು ಮಾಡಿಕೊಂಡಿದ್ದೇನೆ. ನುಡಿದಂತೆ ನಡೆಯುವವರು ನಾವು ಎಂದು ಅತಿಯಾಗಿ ಬೆನ್ನುತಟ್ಟಿಕೊಳ್ಳಬೇಡಿ. ನಿಮ್ಮ ನಡೆ-ನುಡಿಯೊಳಗಿನ ಕಪಟ ಎಲ್ಲರಿಗೂ ಗೊತ್ತು. ಇದೇ ನನ್ನ ಕೊನೆಯ ಚುನಾವಣೆ ಎಂದು ಎಷ್ಟು ಬಾರಿ ನುಡಿದಿರಿ, ಎಷ್ಟು ಬಾರಿ ತಪ್ಪಿದಿರಿ ?’ ಎಂದು ಸುನಿಲ್‌ ಪ್ರಶ್ನೆ ಮಾಡಿದ್ದಾರೆ.

‘ರಾಜಕೀಯವಾಗಿ ಮರು ಜನ್ಮ ನೀಡಿದ ಬಾದಾಮಿಯನ್ನು ತ್ಯಜಿಸಿ ಕೋಲಾರಕ್ಕೆ ವಲಸೆ ಹೊರಟಿದ್ದೀರಿ. ಇದು ನುಡಿದಂತೆ ನಡೆಯುವ ಪರಿಯಾ? ನಿಮ್ಮ ಮಾತು, ಕೃತಿ ಒಂದು ರೀತಿಯಲ್ಲಿ “ಹಸ್ತಿ ದಂತ” ಇದ್ದಂತೆ. ಆನೆಗೆ ಇರುವುದು ಎರಡೇ ದಂತ ಎಂದು ಭಾವಿಸುವುದು ಎಷ್ಟು ಮೂರ್ಖತನವೋ, ಸಿದ್ದರಾಮಯ್ಯನವರ ನುಡಿಯಂತೆ ನಡೆ ಎಂಬುದು ಅಷ್ಟೇ ಅಪಾಯಕಾರಿ. ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ನೀಡಬೇಕಿದ್ದ ವಿದ್ಯುತ್‌ ಸಬ್ಸಿಡಿಯನ್ನೇ ಬಾಕಿ ಇಟ್ಟು ಹೋದ ಘನ ಸರ್ಕಾರ ತಮ್ಮದ್ದಾಗಿತ್ತು ಎಂಬುದನ್ನು ಮರೆಯದಿರಿ. ಎಲ್ಲ ಆಯಾಮಗಳನ್ನು ಪರಿಶೀಲಿಸಿದಾಗ ನೀವು ಕೊಟ್ಟ ಉಚಿತ ವಿದ್ಯುತ್‌ ಭರವಸೆ ಈಡೇರಿಸುವುದಕ್ಕೆ ವಾರ್ಷಿಕ ₹9000 ಕೋಟಿ ಬೇಕಾಗುತ್ತದೆ. ಅಂದರೆ, ವಾರ್ಷಿಕವಾಗಿ ಮತ್ತೆ 9000 ಕೋಟಿ ಸಾಲದ “ಹೂಡಿಕೆ” ಮಾಡುವ ಯೋಚನೆ ನಿಮ್ಮದಾಗಿದೆ. “ಭರವಸೆ ಉಚಿತ, ಸಾಲ ಖಚಿತ” ಎಂಬ ಅರ್ಥನೀತಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT