ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಮ್ಮಗಳ ನೋವಿಗೆ ‘ಕಿವಿ’ಯಾಗದ ಸರ್ಕಾರ!

ಶ್ರವಣದೋಷವುಳ್ಳ ಮಕ್ಕಳಿಗೆ ನೀಡುತ್ತಿದ್ದ ನೆರವು ಕಿತ್ತುಕೊಂಡ ‘ಆರೋಗ್ಯ ಕರ್ನಾಟಕ’
Last Updated 8 ಅಕ್ಟೋಬರ್ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಆರೋಗ್ಯ ಕರ್ನಾಟಕ’ ಯೋಜನೆ ಆರಂಭವಾದಾಗಿನಿಂದ ರಾಜ್ಯದ ರೋಗಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಶ್ರವಣದೋಷವುಳ್ಳ ಮಕ್ಕಳಿಗೆ ಸಿಗುತ್ತಿದ್ದ ನೆರವಿಗೂ ಈಗ ಈ ಯೋಜನೆ ಎರವಾಗಿದೆ.

ನಗರದ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಶ್ರವಣದೋಷವುಳ್ಳ ಮಕ್ಕಳಿಗೆ ಇಲ್ಲಿಯವರೆಗೂ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್‌ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಜೊತೆಗೆ ಥೆರಪಿಯನ್ನೂ ಉಚಿತವಾಗಿ ಮಾಡಲಾಗುತ್ತಿತ್ತು. ಆದರೆ ಈಗ ‘ಆರೋಗ್ಯ ಕರ್ನಾಟಕ’ ಯೋಜನೆಯ ಅಡಿಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನೂ ಸೇರಿಸಿರುವ ಕಾರಣ, ಆರು ವರ್ಷದ ಒಳಗಿನ ಶ್ರವಣದೋಷವುಳ್ಳ ಮಕ್ಕಳು ಎಂಟು ತಿಂಗಳಿನಿಂದ ದುಡ್ಡು ಕೊಟ್ಟು ಥೆರಪಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯಕ್ಕೆ ಸಿಲುಕಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದರೆ ₹ 7 ಲಕ್ಷದಿಂದ ₹ 8 ಲಕ್ಷ ಖರ್ಚಾಗುತ್ತದೆ. ಥೆರಪಿಗಾಗಿ ಸುಮಾರು ₹1.5 ಲಕ್ಷ ಖರ್ಚು ಮಾಡಬೇಕು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಅನುಮೋದನೆ ಸಿಕ್ಕ ಮಕ್ಕಳಿಗೆ ಮೇಲಿನ ಎರಡೂ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆರೋಗ್ಯ ಇಲಾಖೆ ಥೆರಪಿ ಮಾಡಲು ಮೈಸೂರಿನ ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆ, ಬೆಂಗಳೂರಿನ ಚಂದ್ರಶೇಖರ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್ ಮತ್ತು ಮಾನಸ ಕಾಕ್ಲಿಯರ್‌ ಇಂಪ್ಲಾಂಟ್‌ ಸೆಂಟರ್‌ಗಳಿಗೆ ಅವಕಾಶ ನೀಡಿದೆ.

ಆದರೆ, ಈಗ ಎಪಿಎಲ್ ಕಾರ್ಡ್‌ ಹೊಂದಿರುವ ಮಕ್ಕಳು ಥೆರಪಿಗಾಗಿ ಹಣ ಕೊಡಬೇಕಿದೆ. ‘ಆರೋಗ್ಯ ಕರ್ನಾಟಕ’ದ ಹೆಸರಿನಲ್ಲಿ ರಾಜ್ಯದ ಅನೇಕ ಮಕ್ಕಳು ಶ್ರವಣದೋಷವುಳ್ಳವರಾಗಿಯೇ ಉಳಿಯಬೇಕಾದ ಸ್ಥಿತಿ ಇದೆ.

ಒಂದು ವರ್ಷದಿಂದ 80 ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

80: ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಇದುವರೆಗೂ ಮಾಡಲಾದ ಉಚಿತ ಶಸ್ತ್ರಚಿಕಿತ್ಸೆಗಳು

2017 ಆಗಸ್ಟ್‌: ಯೋಜನೆ ಆರಂಭವಾದ ವರ್ಷ

₹27 ಸಾವಿರ: ಎಪಿಎಲ್‌ ಕುಟುಂಬಕ್ಕೆ ಸೇರಿದ ಮಗುವಿನ ಥೆರಪಿಗೆ ಸರ್ಕಾರ ಕೊಡುವ ಹಣ

₹1.25 ಲಕ್ಷ: ಎಪಿಎಲ್‌ ಕುಟುಂಬಕ್ಕೆ ಸೇರಿದ ಮಗುವಿನ ಥೆರಪಿಗೆ ಪಾಲಕರು ಕಟ್ಟಬೇಕಾದ ಹಣ

‘ಇನ್ನೂ ಅಂತಿಮವಾಗಿಲ್ಲ’

ಶಸ್ತ್ರಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ಒಂದು ಎಪಿಎಲ್‌ ಅರ್ಜಿ ಬಂದಿದೆ. ಮಗುವಿನ ಹೆಸರು ಸಯಾನ್‌. ಈ ಅರ್ಜಿಗೆ ಸಂಬಂಧಿಸಿದಂತೆ, ಥೆರಪಿಗೆ ಅಗತ್ಯವಿರುವ ಶೇ 30ರಷ್ಟು ಹಣವನ್ನು ಮಾತ್ರ ಸರ್ಕಾರದ ವತಿಯಿಂದ ನೀಡುವ ಮಾಹಿತಿ ಇದೆ. ಆದರೆ ನಾವು ಸುವರ್ಣ ಆರೋಗ್ಯ ಟ್ರಸ್ಟ್‌ಗೆ ಪತ್ರ ಬರೆದಿದ್ದೇವೆ. ಈ ಕುರಿತು ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.

-ಡಾ. ಪ್ರೇಮಕುಮಾರ್‌, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ವೈದ್ಯ

ವೆರಿಯಾ ಸರ್ಜರಿ

ಕಾಕ್ಲಿಯರ್‌ನಲ್ಲಿ ಸಮಸ್ಯೆ ಇದ್ದು, ಶ್ರವಣ ಸಾಧನಗಳಿಂದ ಉಪಯೋಗ ಆಗದ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯೊಂದೇ ಪರಿಹಾರ. ‘ಶೇ 70ಕ್ಕಿಂತಲೂ ತೀವ್ರವಾದ ಶ್ರವಣದೋಷದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ವರದಾನವಾಗಿದೆ. ಈ ಸರ್ಜರಿಯ ಹೆಸರು ವೆರಿಯಾ (VERIA). ಗ್ರೀಸ್‌ನ ವೈದ್ಯ ಪ್ರಿಪಾಂಡ್‌ ಎನ್ನುವವರು ಕಂಡುಹಿಡಿದ ತಂತ್ರಜ್ಞಾನವಿದು.

ಥೆರಪಿ ಏಕೆ ಮುಖ್ಯ?

ಕಾಕ್ಲಿಯರ್ ಇಂಪ್ಲಾಂಟ್ ಆದ ನಂತರ ಒಂದು ವರ್ಷ ಥೆರಪಿ ಮಾಡಬೇಕಾಗುತ್ತದೆ. ಈ ಮೊದಲು ಮಕ್ಕಳಿಗೆ ವಾರಕ್ಕೆ ಎರಡು ಬಾರಿಯಂತೆ ಒಂದು ವರ್ಷದಲ್ಲಿ 102 ಥೆರಪಿಗಳನ್ನು ಉಚಿತವಾಗಿ ಮಾಡಲಾಗುತ್ತಿತ್ತು. ಥೆರಪಿಯ ಸಂದರ್ಭದಲ್ಲಿಯೇ ಕಾಕ್ಲಿಯರ್‌ ಇಂಪ್ಲಾಂಟ್‌ನ್ನು ಜೀವಂತಗೊಳಿಸಲಾಗುತ್ತದೆ (ಸ್ವಿಚ್‌ ಆನ್‌). ಹೀಗಾಗಿ ಇದು ಶಸ್ತ್ರಚಿಕಿತ್ಸೆಯ ಬಹುಮುಖ್ಯ ಹಂತವಾಗಿದೆ.

‘ಪ್ರಪಂಚದ ಆಗುಹೋಗು ಗೊತ್ತಾಗುತ್ತಿಲ್ಲ’

‘ಮಗನಿಗೆ ಎರಡೂವರೆ ವರ್ಷ ಇದ್ದಾಗಲೇ ಶ್ರವಣದೋಷ ಕಾಣಿಸಿಕೊಂಡಿತು. ಆಗಿನಿಂದಲೇ ಚಿಕಿತ್ಸೆ ಕೊಡಿಸಿದೆವು. ಆದರೆ ಪ್ರಯೋಜನ ಆಗಲಿಲ್ಲ. 2018ರ ಏಪ್ರಿಲ್‌ ತಿಂಗಳಿನಲ್ಲಿ ನಮ್ಮ ಅರ್ಜಿಯನ್ನು ಸುವರ್ಣ ಆರೋಗ್ಯ ಟ್ರಸ್ಟ್‌ ಮಾನ್ಯ ಮಾಡಿತು. ಆದರೆ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ₹1 ಲಕ್ಷ ಕಟ್ಟಬೇಕಾಗುತ್ತದೆ ಎಂದು ಹೇಳಿದರು. ಕಟ್ಟಲೂ ನಾವು ತಯಾರಿದ್ದೆವು. ಆದರೆ ಎಲ್ಲಿ ಕಟ್ಟಬೇಕು ಎಂಬುದು ನಿರ್ಧಾರ ಆಗಿಲ್ಲ. ಸಭೆ ನಡೆಸಿ ಟ್ರಸ್ಟ್‌ನಿಂದ ಅನುಮತಿ ಪಡೆಯುತ್ತೇವೆ ಎಂದಿದ್ದಾರೆ ಆಸ್ಪತ್ರೆಯವರು. ಇಲ್ಲಿಯವರೆಗೂ ಏನೂ ಆಗಿಲ್ಲ’ ಎಂದು ಬಾಲಕ ಸಯಾನ್‌ನ ತಂದೆ ಸಲ್ಮಾನ್‌ ಹೇಳಿದರು.

‘ಮಗನಿಗೆ ಎರಡು ವರ್ಷ ಕಿವಿ ಕೇಳುತ್ತಿತ್ತು. ಆದಷ್ಟು ಬೇಗ ಶಸ್ತ್ರಚಿಕಿತ್ಸೆ ಆಗದಿದ್ದರೆ ಅವನು ಎಲ್ಲವನ್ನೂ ಮರೆಯುತ್ತಾನೆ. ಪ್ರಪಂಚದ ಆಗು ಹೋಗುಗಳು ಅವನಿಗೆ ಗೊತ್ತಾಗುತ್ತಿಲ್ಲ. ಈಗ ಅವನಿಗೆ ಐದು ವರ್ಷ’ ಎಂದು ಅವರು ಅಲವತ್ತುಕೊಂಡರು.

‘ನಮಗೆ ಇಬ್ಬರು ಮಕ್ಕಳಿದ್ದಾರೆ. ದೊಡ್ಡ ಮಗನಿಗೆ ಕೂಡ ಇದೇ ಸಮಸ್ಯೆ ಆಗಿತ್ತು. ನಮ್ಮ ಊರು ತೀರ್ಥಹಳ್ಳಿ. ಮಕ್ಕಳ ಚಿಕಿತ್ಸೆಗಾಗಿಯೇ ನಾವು ಬೆಂಗಳೂರಿಗೆ ಬಂದಿದ್ದೇವೆ. ಮೆಜೆಸ್ಟಿಕ್‌ ಹತ್ತಿರದ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡಿ ಸಂಸಾರ ತೂಗಿಸುತ್ತಿದ್ದೇನೆ’ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT