ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಷತ್ ಚುನಾವಣೆ | ಬಿಜೆಪಿ ಗೆಲುವಿನ ಸರಣಿ ಮುರಿಯಲು ‘ಕೈ’ ಹರಸಾಹಸ

Published 31 ಮೇ 2024, 23:17 IST
Last Updated 31 ಮೇ 2024, 23:17 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಹಿಡಿತದಲ್ಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಕಸಿದುಕೊಳ್ಳಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ಇದಕ್ಕಾಗಿ ಹಲವು ತಂತ್ರಗಳಿಗೆ ಮೊರೆ ಹೋಗಿದೆ. ಈ ಕ್ಷೇತ್ರವನ್ನು ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಪ್ರತಿನಿಧಿಸುತ್ತಿದ್ದು, ಕಾಂಗ್ರೆಸ್‌ನಿಂದ ಡಿ.ಟಿ.ಶ್ರೀನಿವಾಸ್‌ ಕಣಕ್ಕೆ ಇಳಿದಿದ್ದಾರೆ.

ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿರುವ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕರ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಭರವಸೆಗಳನ್ನು ನೀಡುವ ಮೂಲಕ ಮರು ಆಯ್ಕೆ ಬಯಸಿದ್ದಾರೆ. ಶ್ರೀನಿವಾಸ್ ಅವರು 2020 ರಲ್ಲಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಸಾಕಷ್ಟು ಪೂರ್ವ ತಯಾರಿಗಳೊಂದಿಗೇ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿದ್ದಾರೆ. ಇವರು ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಅವರ ಪತಿ. ಮೇಲಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಭಯ ಇವರ ಮೇಲಿದೆ. ಇದು ಶ್ರೀನಿವಾಸ್ ಅವರಿಗೆ ಹೆಚ್ಚಿನ ಬಲ ನೀಡಿದೆ.

ಇವರಿಬ್ಬರಿಗೂ ನಿದ್ದೆಗೆಡಿಸಿರುವವರು ಪಕ್ಷೇತರರಾಗಿ ಸ್ಪರ್ಧಿಸಿರುವ ಲೋಕೇಶ್‌ ತಾಳಿಕಟ್ಟೆ. ಇವರು ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಅಧ್ಯಕ್ಷ (ರುಪ್ಸಾ). ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಆಗಿದ್ದ ಲೋಕೇಶ್, ಟಿಕೆಟ್‌ ಸಿಗದ ಕಾರಣ ಸ್ವತಂತ್ರವಾಗಿ ಸ್ಪರ್ಧಿಸಿದ್ದು, ಅನುದಾನಿತ ಶಾಲೆಗಳ ಮೇಲೆ ಸಾಕಷ್ಟು ಹಿಡಿತ ಹೊಂದಿರುವುದರಿಂದ ಇವರು ಗಳಿಸುವ ಮತ ಯಾರಿಗೆ ಹೊಡೆತ ನೀಡುತ್ತದೆ ಎಂಬುದು ಕಾದು ನೋಡಬೇಕು. ಶಾಲಾ ಶಿಕ್ಷಕರ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಇವರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಮತ್ತೊಬ್ಬ ಪಕ್ಷೇತರ  ವಿನೋದ್‌ ಶಿವರಾಜ್‌ ಕೂಡಾ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ನಾರಾಯಣಸ್ವಾಮಿ ಅವರು ಈ ಬಾರಿ ಕಠಿಣ ಸ್ಪರ್ಧೆ ಎದುರಿಸುತ್ತಿದ್ದಾರೆ.

ನಾರಾಯಣ ಸ್ವಾಮಿ ಅವರು 18 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಅವರು ನಂತರ ಬಿಜೆಪಿಯನ್ನು ಸೇರಿದರು. ಆ ಬಳಿಕ ಬಿಜೆಪಿಯಿಂದಲೇ ಗೆಲುವು ಸಾಧಿಸಿದ್ದರು. ಹೆಬ್ಬಾಳ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದ ನಾರಾಯಣಸ್ವಾಮಿ, ಮೇಲ್ಮನೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಅಲ್ಪಾವಧಿಯಲ್ಲಿ ಅಂದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರಮೇಶಬಾಬು, ಈ ಕ್ಷೇತ್ರದಲ್ಲಿ ಗೆದ್ದಿದ್ದರು. 

ಈ ಬಾರಿ ಬಿಜೆಪಿ– ಜೆಡಿಎಸ್‌ ಮೈತ್ರಿ ಅಭ್ಯರ್ಥಿಯೂ ಆಗಿರುವುದರಿಂದ ಜೆಡಿಎಸ್‌ ಮತಗಳು ತಮ್ಮ ಬುಟ್ಟಿಗೆ ಬೀಳಲಿವೆ ಎಂಬುದು ನಾರಾಯಣಸ್ವಾಮಿ ಲೆಕ್ಕಾಚಾರ. ಜೆಡಿಎಸ್‌ ಕೂಡ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿರುವುದು ನಾರಾಯಣಸ್ವಾಮಿ ಅವರಿಗೆ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಶ್ರೀನಿವಾಸ್‌ ಈ ಬಾರಿ ಪ್ರಬಲ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವುದು ಮತ್ತು ಪತ್ನಿ ಕಾಂಗ್ರೆಸ್ ಸೇರಿಕೊಂಡಿರುವುದು ತಮಗೆ ಅನುಕೂಲ ಆಗಲಿದೆ ಎಂದು ಭಾವಿಸಿದ್ದಾರೆ.

‘ಕಾಂಗ್ರೆಸ್‌ ಸರ್ಕಾರ ಬಂದಮೇಲೆ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಎಡವಟ್ಟುಗಳು ಆಗಿವೆ. ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬಲಿಪಶುಗಳಾಗಿದ್ದಾರೆ. ಶಿಕ್ಷಕರಿಗೆ ಇದರಿಂದ ಆಗಿರುವ ಹೊರೆ ಮತ್ತು ಸಮಸ್ಯೆಗಳನ್ನು ಪ್ರಸ್ತಾಪಿಸುತ್ತಿದ್ದೇನೆ. ಸಮಸ್ಯೆಗಳಿಗೆ ತ್ವರಿತ ಸ್ಪಂದಿಸುವ ಮತ್ತು ಅವುಗಳನ್ನು ಪರಿಹರಿಸುವವರಿಗೇ ಶಿಕ್ಷಕರು ಮತ ನೀಡುತ್ತಾರೆ. ಆ ಕೆಲಸವನ್ನು ಹಿಂದಿನಿಂದ ನಾನು ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ನನ್ನ ಜತೆ ಮತದಾರರು ಗಟ್ಟಿಯಾಗಿ ನಿಂತಿದ್ದಾರೆ’ ಎಂಬುದು ನಾರಾಯಣಸ್ವಾಮಿ ಅವರ ವಿಶ್ವಾಸ.

ಇದಕ್ಕೆ ಪ್ರತಿಯಾಗಿ ಶ್ರೀನಿವಾಸ ಅವರು ಹಳೆ ಪಿಂಚಣಿ ವ್ಯವಸ್ಥೆ ಮತ್ತು ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡುತ್ತಿದ್ದು, ಈ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವರ್ಚಸ್ಸನ್ನು ನೆಚ್ಚಿಕೊಂಡಿದ್ದಾರೆ. ನಾರಾಯಣಸ್ವಾಮಿ ಅವರ ವೈಫಲ್ಯಗಳನ್ನು ವಿವರಿಸುತ್ತಾ ಮತದಾರರನ್ನು ತಮ್ಮ ಕಡೆ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನೂ ಹೇಳಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರವು ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಒಳಗೊಂಡಿದೆ. ಈ ಜಿಲ್ಲೆಗಳ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರ ಪ್ರಾಬಲ್ಯವಿದ್ದು, ಅವರು ತಮ್ಮ ಪರ ಕೆಲಸ ಮಾಡುತ್ತಿರುವುದರಿಂದ ತಮಗೆ ಅನುಕೂಲವಾಗಲಿದೆ ಎಂಬ ವಿಶ್ವಾಸ ಶ್ರೀನಿವಾಸ್ ಅವರದು.

ಶಿಕ್ಷಕರನ್ನು ಗೊಂದಲಕ್ಕೆ ದೂಡಲು ವೈ.ಎ.ನಾರಾಯಣ ಸ್ವಾಮಿ ಅವರ ಹೆಸರನ್ನು ಹೋಲುವ ವೈ.ಆರ್‌.ನಾರಾಯಣಸ್ವಾಮಿ, ವೈ.ಎಂ.ನಾರಾಯಣಸ್ವಾಮಿ, ವೈ.ಸಿ.ನಾರಾಯಣ ಸ್ವಾಮಿ ಹೆಸರಿನ ಅಭ್ಯರ್ಥಿಗಳನ್ನೂ ಕಣಕ್ಕೆ ಇಳಿಸಲಾಗಿದೆ. ವಿಧಾನಸಭಾ ಚುನಾವಣೆಗಳಲ್ಲಿ ಬಳಸುವ ತಂತ್ರವನ್ನು ಇಲ್ಲೂ ಬಳಸಲಾಗಿದೆ. ಈ ಚುನಾವಣೆಯಲ್ಲಿ ಪಕ್ಷದ ಚಿಹ್ನೆಗಳನ್ನು ಬಳಸುವುದಿಲ್ಲ. ಬದಲಿಗೆ ಭಾವಚಿತ್ರ ಮಾತ್ರ ಇರುತ್ತದೆ. ಒಂದೇ ಹೆಸರಿನ ಹಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಂತ್ರ ಫಲ ನೀಡುವುದೇ ಎಂಬುದು ಫಲಿತಾಂಶ ಬಂದಾಗಷ್ಟೇ ಗೊತ್ತಾಗಲಿದೆ. ರಾಜಕಾರಣದಲ್ಲಿ ಪಳಗಿರುವ ಮಾಜಿ ಶಾಸಕಿ ಪೂರ್ಣಿಮಾ ತಮ್ಮ ಪತಿ ಶ್ರೀನಿವಾಸ್‌ ಅವರನ್ನು ಗೆಲ್ಲಿಸಲು ಬೆವರು ಹರಿಸುತ್ತಿದ್ದಾರೆ. ಕ್ಷೇತ್ರ ವ್ಯಾಪಿ ಓಡಾಟ ನಡೆಸಿ ಮತಯಾಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಭಾಗದಲ್ಲಿ ಗೊಲ್ಲ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ತಮಗೆ ನೆರವಾಗಬಹುದು ಎಂದು ರಾಜ್ಯ ಗೊಲ್ಲ ಸಂಘದ ಅಧ್ಯಕ್ಷರೂ ಆಗಿರುವ ಶ್ರೀನಿವಾಸ್‌ ಭಾವಿಸಿದ್ದಾರೆ.

ಈ ಬಾರಿ ಕ್ಷೇತ್ರದಲ್ಲಿ ಮತದಾರರಿಗೆ ಹಣ ಸೇರಿ ವಿವಿಧ ಆಮಿಷಗಳನ್ನು ಒಡ್ಡಲಾಗುತ್ತಿದೆ. ಕೆಲ ಅಭ್ಯರ್ಥಿಗಳು ತಲಾ ₹2,000 ದಿಂದ ₹5,000ದವರೆಗೆ ಹಣವನ್ನು ವಿತರಿಸುತ್ತಿದ್ದಾರೆ. ಪ್ರತಿ ಶಿಕ್ಷಕರನ್ನೂ ಭೇಟಿ ಮಾಡಿ ಮತಚೀಟಿ ಜತೆಗೆ ಹಣವುಳ್ಳ ಕವರ್‌ ಕೂಡಾ ನೀಡಲಾಗುತ್ತಿದೆ. ಮತದಾರರ ಪಟ್ಟಿ ಮಾಡಿಕೊಂಡು ಅವರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಅವರಿಗೆ ಕರೆ ಮಾಡಿ, ಮನೆಗಳಿಗೆ ಭೇಟಿ ಹಣ ತಲುಪಿಸಲಾಗುತ್ತಿದೆ ಎಂದು ಮತದಾರರೊಬ್ಬರು ‘ಪ್ರಜಾವಾಣಿ’ಗೆ ದೂರಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು

ಕಿಶನ್‌ ಎಂ.ಜಿ, ಕರ್ನಾಟಕ ರಾಷ್ಟ್ರ ಸಮಿತಿ, ಪಕ್ಷೇತರರು–ಜಿ.ಎಚ್‌.ಇಮ್ರಾಪುರ್,ಕಪನಿಗೌಡ,ಎನ್.ಇ.ನಟರಾಜ್, ವೈ.ಆರ್‌.ನಾರಾಯಣಸ್ವಾಮಿ, ವೈ.ಎಂ.ನಾರಾಯಣಸ್ವಾಮಿ, ವೈ.ಸಿ.ನಾರಾಯಣಸ್ವಾಮಿ,ಬಾಬು ಯೋಗೀಶ್‌ ಆರ್‌,  ವನಿತಾ ಎಸ್‌, ವಿನೋದ್‌ ಶಿವರಾಜ್, ಶ್ರೀನಿವಾಸ್‌ ಬಿ, ಸೈಯ್ಯದ್‌ ಅಫ್ಕ್ ಅಹಮದ್.

ಹಾಲಿ ಸದಸ್ಯ

ವೈ.ಎ.ನಾರಾಯಣಸ್ವಾಮಿ, ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT