ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಸಿ.ಟಿ. ಸ್ಕ್ಯಾನ್‌ಗೆ ಒಳಪಟ್ಟರಷ್ಟೇ ಅಪಾಯ

ರೋಗ ಲಕ್ಷಣಗಳಿದ್ದರೆ ಮಾತ್ರ ಸಿ.ಟಿ. ಸ್ಕ್ಯಾನ್‌ಗೆ ಒಳಪಡಲು ವಿಕಿರಣ ತಜ್ಞರ ಸಲಹೆ
Last Updated 4 ಮೇ 2021, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಕಾಯಿಲೆಯ ಲಕ್ಷಣಗಳಿದ್ದು, ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕಿತರಾಗಿಲ್ಲ (ನೆಗೆಟಿವ್ ವರದಿ) ಎಂಬ ಫಲಿತಾಂಶ ಬಂದಲ್ಲಿ ಸಿ.ಟಿ. ಸ್ಕ್ಯಾನ್‌ಗೆ ಒಳಗಾಗಬೇಕು. ಕಾಯಿಲೆ ಖಚಿತಪಡಿಸಿಕೊಳ್ಳಲು ಒಮ್ಮೆ ಸಿ.ಟಿ. ಸ್ಕ್ಯಾನ್‌ ಮಾಡಿಸಿಕೊಳ್ಳುವುದರಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳು ಕಾಣಿಸಿಕೊಳ್ಳುವುದಿಲ್ಲ’ ಎನ್ನುತ್ತಾರೆ ವಿಕಿರಣ ತಜ್ಞರು.‌

ಕೊರೊನಾ ರೂಪಾಂತರ ವೈರಾಣು ಕೆಲ ಪ್ರಕರಣಗಳಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ಕೂಡ ಪತ್ತೆಯಾಗುತ್ತಿಲ್ಲ. ಹೀಗಾಗಿ, ಸೋಂಕಿನ ಲಕ್ಷಣಗಳಿದ್ದು, ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಲ್ಲಿ ವೈದ್ಯರು ಸಿ.ಟಿ. ಸ್ಕ್ಯಾನ್‌ಗೆ ಶಿಫಾರಸು ಮಾಡುತ್ತಿದ್ದಾರೆ. ಇದರಿಂದಾಗಿ ಕೆಲವರು ನೇರವಾಗಿ ಆಸ್ಪತ್ರೆಗಳಿಗೆ ತೆರಳಿ, ಸಿ.ಟಿ. ಸ್ಕ್ಯಾನ್‌ ಮಾಡಿಸಿಕೊಳ್ಳಲಾರಂಭಿಸಿದ್ದಾರೆ.

‘ಒಂದು ಸಿ.ಟಿ ಸ್ಕ್ಯಾನ್ 300 ಎದೆ ಎಕ್ಸ್‌–ರೇಗೆ ಸಮ. ಅತಿಯಾಗಿ ಮಾಡಿಸಿದಲ್ಲಿ ಕ್ಯಾನ್ಸರ್‌ ಆಹ್ವಾನಿಸಿದಂತಾಗುತ್ತದೆ’ ಎಂದು ಏಮ್ಸ್‌ ನಿರ್ದೇಶಕ ಡಾ.ರಣದೀಪ್‌ ಗುಲೇರಿಯಾ ಎಚ್ಚರಿಸಿದ್ದರು.

‘ನಿರಂತರ ದೇಹವನ್ನು ಸಿ.ಟಿ. ಸ್ಕ್ಯಾನ್‌ಗೆ ಒಳಪಡಿಸಿದಲ್ಲಿ ಮಾತ್ರ ಭವಿಷ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ರೋಗ ಪತ್ತೆ ಸಂಬಂಧ ಈ ಪರೀಕ್ಷಾ ವಿಧಾನಕ್ಕೆ ಒಳಪಡಬಹುದಾಗಿದೆ. ಕೊರೊನಾ ರೂಪಾಂತರ ವೈರಾಣು ಪತ್ತೆಗೆ ಸಹ ಸಿ.ಟಿ. ಸ್ಕ್ಯಾನ್ ನಡೆಸಲಾಗುತ್ತಿದೆ. ಆದರೆ, ಇದನ್ನು ಅಂತಿಮ ಆಯ್ಕೆಯಾಗಿ ಇರಿಸಿಕೊಳ್ಳಬೇಕು. ಅದಕ್ಕೂ ಮೊದಲು ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡುವುದು ಉತ್ತಮ. ಸಿ.ಟಿ. ಸ್ಕ್ಯಾನ್‌ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವ ತಂತ್ರಜ್ಞರು ಸುರಕ್ಷಾ ಸಾಧನಗಳನ್ನು ಧರಿಸದಿದ್ದಲ್ಲಿ ವಿಕಿರಣಗಳ ಪ್ರಭಾವದಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ’ ಎಂದು ವಿಕಿರಣ ತಜ್ಞರು ತಿಳಿಸಿದ್ದಾರೆ.

‘ರಕ್ತದಲ್ಲಿನ ಆಮ್ಲಜನಕ ಪ್ರಮಾಣ 94ಕ್ಕಿಂತ ಕಡಿಮೆ ಇದ್ದಾಗ ಅಥವಾ ಲಕ್ಷಣಗಳು ತೀವ್ರ ಸ್ವರೂಪ ಪಡೆದಾಗ ಈ ವಿಧಾನಕ್ಕೆ ಒಳಪಡಬಹುದು. ಅನಗತ್ಯವಾಗಿ ನಿರಂತರ ಸಿ.ಟಿ. ಸ್ಕ್ಯಾನ್‌ ಮಾಡಿಸಿಕೊಳ್ಳುತ್ತಾ ಇದ್ದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ನಾಲ್ಕರಿಂದ ಐದು ದಿನಗಳು ನಿರಂತರ ಕೆಮ್ಮು ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಮೊದಲು ಎದೆ ಎಕ್ಸ್‌–ರೇ ಮಾಡಿಸಬೇಕು. ಅದರಲ್ಲಿಯೇ ಶೇ 80ರಷ್ಟು ಮಾಹಿತಿ ದೊರೆಯಲಿದೆ. ಇನ್ನುಳಿದ ಶೇ 15ರಿಂದ ಶೇ 20 ರಷ್ಟು ಹೆಚ್ಚುವರಿ ಮಾಹಿತಿಗೆ ಸಿ.ಟಿ. ಸ್ಕ್ಯಾನ್‌ ಮಾಡಬೇಕಾಗುತ್ತದೆ’ ಎಂದು ವಿಕ್ಟೋರಿಯಾದ ವಿಕಿರಣ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವಿ ಎನ್. ತಿಳಿಸಿದರು.

‘ಗರ್ಭಿಣಿಯರು, ಯುವತಿಯರಿಗೆ ಸಿ.ಟಿ. ಸ್ಕ್ಯಾನ್ ಮಾಡುವುದಿಲ್ಲ. ಮಕ್ಕಳಿಗೆ ಕೂಡ ಮಾಡದಿರುವುದು ಒಳಿತು. ಒಂದು ಸಿ.ಟಿ. ಸ್ಕ್ಯಾನ್ 300 ಎಕ್ಸ್‌–ರೇಗೆ ಸಮವಾಗಲಿದೆ. ಹಾಗಾಗಿ, ವೈದ್ಯರ ಮಾರ್ಗದರ್ಶನ ಪಡೆದು, ಸಿ.ಟಿ. ಸ್ಕ್ಯಾನ್‌ ಮಾಡಿಸಿಕೊಳ್ಳಬೇಕು’ ಎಂದರು.

‘ರೋಗಿ ಉಳಿಸಲು ಸಿ.ಟಿ. ಸ್ಕ್ಯಾನ್ ಅಗತ್ಯ’

‘ನಿರಂತರವಾಗಿ ವಿಕಿರಣಗಳ ಪ್ರಭಾವಕ್ಕೆ ಒಳಗಾದಲ್ಲಿ ಮಾತ್ರ ದೇಹದ ಮೇಲೆ ಅದರ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಸಿ.ಟಿ.ಸ್ಕ್ಯಾನ್‌ಗೆ ಒಳಗಾಗಿ ಕ್ಯಾನ್ಸರ್‌ ಪೀಡಿತರಾದ ಪ್ರಕರಣಗಳು ನನ್ನ ಗಮನಕ್ಕೆ ಈವರೆಗೂ ಬಂದಿಲ್ಲ. ಕೊರೊನಾ ರೂಪಾಂತರ ವೈರಾಣು ಕೆಲವು ಪ್ರಕರಣಗಳಲ್ಲಿ ಆರ್‌ಟಿ–ಪಿಸಿಆರ್‌ ಪರೀಕ್ಷೆಯಲ್ಲಿ ಕೂಡ ಪತ್ತೆಯಾಗುತ್ತಿಲ್ಲ. ಸೋಂಕು ತಗುಲಿಲ್ಲ ಎಂದು ಸುಮ್ಮನೆ ಕುಳಿತರೆ ಕಾಯಿಲೆ ತೀವ್ರ ಸ್ವರೂಪ ಪಡೆದು, ವ್ಯಕ್ತಿ ಮೃತಪಡುತ್ತಾನೆ. ಹಾಗಾಗಿ, ಲಕ್ಷಣಗಳಿದ್ದಲ್ಲಿ ಸಿ.ಟಿ. ಸ್ಕ್ಯಾನ್‌ ಮಾಡಿಕೊಳ್ಳುವುದು ಉತ್ತಮ’ ಎಂದು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವಿಕಿರಣ ವಿಭಾಗದ ಮುಖ್ಯಸ್ಥ ಡಾ. ವಿಜಯ್ ಕುಮಾರ್ ಕೆ.ಆರ್. ತಿಳಿಸಿದರು.

‘ಸಿ.ಟಿ. ಸ್ಕ್ಯಾನ್‌ನಲ್ಲಿ ಕೋವಿಡ್‌ ನ್ಯೂಮೋನಿಯಾ ಎನ್ನುವುದು ದೃಢಪಡಲಿದೆ. ಸೌಮ್ಯ ಲಕ್ಷಣಗಳಿದ್ದರೆ ಸಿ.ಟಿ. ಸ್ಕ್ಯಾನ್‌ ಅಗತ್ಯವಿಲ್ಲ. ಮೂರು ದಿನಗಳಾದರೂ ಜ್ವರ, ಕೆಮ್ಮು ಸೇರಿದಂತೆ ವಿವಿಧ ಲಕ್ಷಣಗಳು ಕಡಿಮೆಯಾಗದಿದ್ದಲ್ಲಿ ಈ ವಿಧಾನಕ್ಕೆ ಒಳಪಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT