ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಪಾರ್ಟಿ: ಯುವತಿಯರಿಗೆ ಉಚಿತ ಪ್ರವೇಶ

ಆದಿತ್ಯ ಆಳ್ವ ಒಡೆತನದ ‘ಹೌಸ್ ಆಫ್ ಲೈಫ್’ ರೆಸಾರ್ಟ್‌ನಲ್ಲಿ ಬಚ್ಚಿಟ್ಟಿದ್ದ ಡ್ರಗ್ಸ್
Last Updated 28 ಆಗಸ್ಟ್ 2021, 23:15 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು, ನಗರದ ‘ಹೌಸ್‌ ಆಫ್ ಲೈಫ್’ ರೆಸಾರ್ಟ್‌ನಲ್ಲೂ ‘ಡ್ರಗ್ಸ್ ಪಾರ್ಟಿ’ ಆಯೋಜಿಸುತ್ತಿದ್ದರು. ತನಿಖೆಯಲ್ಲಿ ಸಿಕ್ಕ ಸುಳಿವು ಆಧರಿಸಿ ರೆಸಾರ್ಟ್‌ ಮೇಲೆ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಭಾರಿ ಪ್ರಮಾಣದ ಡ್ರಗ್ಸ್ ಜಪ್ತಿ ಮಾಡಿದ್ದರು.

ಆರೋಪಿಗಳ ಹೇಳಿಕೆ ಹಾಗೂ ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರ ಮಾಹಿತಿ ಸಂಗ್ರಹಿಸಿರುವ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಎಲ್ಲವನ್ನೂ ಉಲ್ಲೇಖಿಸಿದ್ದಾರೆ. ಅದಕ್ಕೆ ಪುರಾವೆಯಾಗಿರುವ ಫೋಟೊಗಳನ್ನು ಹಾಗೂ ಮಹಜರು ದಾಖಲೆಗಳನ್ನೂ ಲಗತ್ತಿಸಿದ್ದಾರೆ.

‘ಮಾಜಿ ಸಚಿವರೊಬ್ಬರ ಪುತ್ರನಾದ ಆದಿತ್ಯ ಆಳ್ವ, ಡ್ರಗ್ಸ್ ಪ್ರಕರಣದ 6ನೇ ಆರೋಪಿ (ಎ–6). ಹೆಬ್ಬಾಳದ ಮರಿಯಣ್ಣಪಾಳ್ಯದ ಎಂ.ಎಂ. ರೆಡ್ಡಿ ರಸ್ತೆಯಲ್ಲಿರುವ ‘ಹೌಸ್ ಆಫ್ ಲೈಫ್’ ರೆಸಾರ್ಟ್ ಆತನ ಒಡೆತನದಲ್ಲಿದೆ. ಅಲ್ಲೇ ಪಾರ್ಟಿ ಆಯೋಜಿಸುತ್ತಿದ್ದ ಆತ, ಇತರೆ ಆರೋಪಿಗಳ ಜೊತೆ ಸೇರಿ ಡ್ರಗ್ಸ್ ಮಾರುತ್ತಿದ್ದ. ಆತನೂ ಡ್ರಗ್ಸ್ ಸೇವನೆ ಮಾಡಿರುವ ಪುರಾವೆಗಳೂ ಸಿಕ್ಕಿವೆ’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.

‘ನ್ಯಾಯಾಲಯದ ಅನುಮತಿ ಪಡೆದು ‘ಹೌಸ್ ಆಫ್ ಲೈಫ್’ ರೆಸಾರ್ಟ್ ಮೇಲೆ ದಾಳಿ ಮಾಡಲಾಗಿತ್ತು. 55 ಗ್ರಾಂ ಗಾಂಜಾ ಹಾಗೂ 3.50 ಗ್ರಾಂ ಎಕ್ಸೈಟೆಸ್ಸಿ ಮಾತ್ರೆಗಳು ಸಿಕ್ಕಿದ್ದವು. ಅಲ್ಲಿ ಡ್ರಗ್ಸ್ ಬಚ್ಚಿಡುತ್ತಿದ್ದ ಆರೋಪಿಗಳು, ಅದನ್ನೇ ಯುವಕ–ಯುವತಿಯರಿಗೆ ಮಾರಾಟ ಮಾಡುತ್ತಿದ್ದರು’ ಎಂಬ ಅಂಶವನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ರೆಸಾರ್ಟ್‌ನಲ್ಲಿ 2018ರಿಂದಲೇ ಡಿ.ಜೆ ಕಾರ್ಯಕ್ರಮ ಹಾಗೂ ಪಾರ್ಟಿಗಳನ್ನು ಸಂಘಟಿಸಲಾಗುತ್ತಿತ್ತು. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೆಸೆಂಜರ್ ಹಾಗೂ ಇತರೆ ಆ್ಯಪ್‌ಗಳ ಮೂಲಕ ಶ್ರೀಮಂತರ ಮಕ್ಕಳನ್ನು ಪಾರ್ಟಿಗೆ ಆಹ್ವಾನಿಸಲಾಗುತ್ತಿತ್ತು. ಪಾರ್ಟಿಗೆ ಬಂದ ಬಹುತೇಕರು ಎಕ್ಸೈಟೆಸ್ಸಿ ಮಾತ್ರೆಗಳು, ಕೊಕೇನ್, ಎಂಡಿಎಂಎ, ಗಾಂಜಾ ಸೇವಿಸುತ್ತಿದ್ದರು.’

‘2019ರ ಡಿಸೆಂಬರ್ 24ರಂದು ಕ್ರಿಸ್‌ಮಸ್‌ ಹಬ್ಬದಂದು ರೆಸಾರ್ಟ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿ
ಮುಗಿಸಿ ಕೆಲವರು ಹೊರಟು ಹೋಗಿದ್ದರು. ಆಯ್ದ 120 ಜನರನ್ನು ಸೇರಿಸಿಕೊಂಡು ‘ಆಫ್ಟರ್‌ ಪಾರ್ಟಿ’ ಆಯೋಜಿಸಿ, ಪ್ರತಿಯೊಬ್ಬರಿಗೆ ಎಕ್ಸೈಟೆಸ್ಸಿ ಮಾತ್ರೆಗಳನ್ನು ನೀಡಲಾಗಿತ್ತು’ ಎಂಬ ಸಂಗತಿಯೂ ಪಟ್ಟಿಯಲ್ಲಿದೆ. ‘2019ರ ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ದಿನದಂದು ‘ಬೂಮ್ ಬಾಕ್ಸ್’ ಪಾರ್ಟಿ, 2020ರ ಮಾರ್ಚ್ 7 ಹಾಗೂ 8ರಂದು ‘ಬೂಮ್ ಬಾಕ್ಸ್ ಆ್ಯಂಡ್ ದಿ ಬಿಯರ್’ ಪಾರ್ಟಿ ಆಯೋಜಿಸಲಾಗಿತ್ತು. ಉದ್ಯಮಿಗಳು, ವ್ಯಾಪಾರಿಗಳು, ನಟ–ನಟಿಯರು, ವಿದೇಶಿಗರು, ಶ್ರೀಮಂತರ ಮಕ್ಕಳು ಪಾಲ್ಗೊಂಡಿದ್ದರು. ಅಲ್ಲೆಲ್ಲ ಪ್ರತಿ ಗ್ರಾಂಗೆ ₹3,000–₹5,000 ಬೆಲೆಯಲ್ಲಿ ಕೊಕೇನ್ ಮಾರಲಾಗಿತ್ತು’ ಎಂಬ ಅಂಶವೂ ಪತ್ತೆಯಾಗಿದೆ.

ಯುವತಿಯರಿಗೆ ಉಚಿತ ಪ್ರವೇಶ: ‘ಆರಂಭದಲ್ಲಿ ತಿಂಗಳಿಗೊಂದು ಪಾರ್ಟಿ ಇರುತ್ತಿತ್ತು. ಡ್ರಗ್ಸ್‌ಗೆ ಬೇಡಿಕೆ ಬರುತ್ತಿದ್ದಂತೆ, ಪ್ರತಿ ವಾರದ ಕೊನೆ ದಿನಗಳಂದು ಪಾರ್ಟಿ ಆಯೋಜನೆ ಹೆಚ್ಚಾಯಿತು. ಯುವಕರನ್ನು ಪಾರ್ಟಿಗೆ ಸೆಳೆಯಲೆಂದು, ಯುವತಿಯರಿಗೆ ಉಚಿತ ಪ್ರವೇಶ ನೀಡಲಾಗಿತ್ತು’ ಎಂಬ ವಿಚಾರವೂ ಆರೋಪ ಪಟ್ಟಿಯಲ್ಲಿದೆ.

‘ಆಫ್ಟರ್ ಪಾರ್ಟಿ ಹೆಸರಿನಲ್ಲಿ ರಾತ್ರಿಯಿಂದ ಮರುದಿನ ನಸುಕಿನವರೆಗೂ ಮೋಜು–ಮಸ್ತಿ ಇರುತ್ತಿತ್ತು. 100ರಿಂದ 120 ಜನರು ಪಾರ್ಟಿಯಲ್ಲಿರುತ್ತಿದ್ದರು. ಇಂಥ ಪಾರ್ಟಿಗಳಲ್ಲಿ ನಟಿ ರಾಗಿಣಿ,ಆಕೆಯ ಗೆಳೆಯ ಬಿ.ಕೆ. ರವಿಶಂಕರ್ ಹಾಗೂ ಇತರೆ ಆರೋಪಿಗಳೂ ಪಾಲ್ಗೊಂಡಿದ್ದರು’ ಎಂಬುದನ್ನೂ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT