ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ–ಕಮಲ ಗಟ್ಟಿ: ದಳ ಪಲ್ಟಿ

ತಮ್ಮ ನಾಯಕತ್ವದ ಮೊದಲ ಚುನಾವಣೆಯಲ್ಲೇ ಮುಗ್ಗರಿಸಿದ ಬೊಮ್ಮಾಯಿ
Last Updated 2 ನವೆಂಬರ್ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಗೆದ್ದೇ ಗೆಲ್ಲುವ ಹುಮ್ಮಸಿನಲ್ಲಿದ್ದ ಬಿಜೆಪಿಗೆ ಮಂಕು ಕವಿದಿದ್ದರೆ, ಕಮಲ ತೆಕ್ಕೆಯಲ್ಲಿದ್ದ ಒಂದು ಕ್ಷೇತ್ರವನ್ನು ಕಿತ್ತುಕೊಂಡ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಮೂಡಿಸಿದಂತಾಗಿದೆ.

ಅನ್ಯರಿಗೆ ನೆರವಾಗಲು ಅಥವಾ ಮತ್ತೊಬ್ಬರನ್ನು ಸೋಲಿಸಲು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂಬ ಅಪವಾದ ಹೊತ್ತುಕೊಂಡಿದ್ದ ಜೆಡಿಎಸ್‌ ಎರಡೂ ಕಡೆ ಮಕಾಡೆ ಮಲಗಿದ್ದು, ನಿರೀಕ್ಷೆಯ ಮತ ಗಿಟ್ಟಿಸಲೂ ಸಾಧ್ಯವಾಗದಂತಹ ದುರ್ಬಲ ಸಾಧನೆ ತೋರಿದೆ.

ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಸವರಾಜ ಬೊಮ್ಮಾಯಿ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ನಡೆದ ಮೊದಲ ಉಪ ಚುನಾವಣೆ ಇದಾಗಿದೆ. ತಮ್ಮ ನಾಯಕತ್ವದಲ್ಲಿ ಎದುರಾದ ಮೊದಲ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಪಣ ತೊಟ್ಟು, ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದ ಬೊಮ್ಮಾಯಿ ತಮ್ಮ ತವರು ಜಿಲ್ಲೆ, ಅದರಲ್ಲೂ ಅವರೇ ಪ್ರತಿನಿಧಿಸುವ (ಶಿಗ್ಗಾಂವಿ) ಕ್ಷೇತ್ರದ ಮಗ್ಗುಲಿನಲ್ಲೇ ಇರುವ ಹಾನಗಲ್‌ನಲ್ಲಿ ಮುಗ್ಗರಿಸಿದ್ದಾರೆ. ಆದರೆ, ಸಿಂದಗಿಯಲ್ಲಿ 31,185 ಮತಗಳಿಂದ ಬಿಜೆಪಿ ಜಯಭೇರಿ ಬಾರಿಸಿರುವುದು ಅವರ ಪಾಲಿಗೆ ಸಮಾಧಾನ ತರುವ ಅಂಶ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಚುನಾವಣೆಗಳೂ ಸೇರಿ 21 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. 16 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಸಾಧಿಸಿದೆ. ಕಾಂಗ್ರೆಸ್ 4, ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ ಕಳೆದುಕೊಂಡಿದ್ದು ಬಿಟ್ಟರೆ ಗಳಿಕೆ ಶೂನ್ಯ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ 19 ಉಪ ಚುನಾವಣೆಗಳಲ್ಲಿ 15 ರಲ್ಲಿ ಬಿಜೆಪಿಯೇ ಗೆದ್ದಿತ್ತು. ಬಿಜೆಪಿಯ ಅಸ್ತಿತ್ವವೇ ಕ್ಷೀಣವಾಗಿದ್ದ ಕೆ.ಆರ್. ಪೇಟೆ, ಶಿರಾ, ಚಿಕ್ಕಬಳ್ಳಾಪುರದಲ್ಲಿ ಕೂಡ ‘ಪಕ್ಷಾಂತರಿ’ಗಳು ವಿಜಯ ಸಾಧಿಸಿದ್ದರು. ಆದರೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಪುತ್ರ ಶರತ್‌ ಬಚ್ಚೇಗೌಡ ಪಕ್ಷೇತರರಾಗಿ ಜಯಗಳಿಸಿದ್ದರು. ಆಗೆಲ್ಲ ಕಾಂಗ್ರೆಸ್‌ ಗೆದ್ದುಕೊಂಡಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು.

ಬಿಜೆಪಿಯ ಸಿ.ಎಂ. ಉದಾಸಿ ಹಾಗೂ ಜೆಡಿಎಸ್‌ನ ಎಂ.ಸಿ. ಮನಗೂಳಿ ಅವರ ಅಕಾಲಿಕ ನಿಧನದಿಂದಾಗಿ ಈ ಎರಡು ಕ್ಷೇತ್ರಗಳಿಗೆ ಚುನಾವಣೆಗಳು ನಡೆದವು. ಹಾನಗಲ್‌ ಗೆಲ್ಲುವುದು ಬೊಮ್ಮಾಯಿಗೆ ಸವಾಲಿನ ಕೆಲಸವೂ ಆಗಿತ್ತು. ಶಿಗ್ಗಾಂವಿಯಲ್ಲಿ ಮುಸ್ಲಿಂ ಮತದಾರರು ತಮ್ಮ ಕೈಹಿಡಿಯುತ್ತಿರುವಂತೆ ಹಾನಗಲ್‌ನಲ್ಲೂ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬ ಬೊಮ್ಮಾಯಿ ಲೆಕ್ಕಾಚಾರ ಉಲ್ಟಾ ಆಗಿದೆ. ಇಲ್ಲಿ ಬಿಜೆಪಿ ಸೋತಿದ್ದು, ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಅವಧಿಗೆ ಮುನ್ನವೇ ಕೆಳಗಿಳಿಸಿರುವುದು, ಅಭ್ಯರ್ಥಿ ಆಯ್ಕೆಯಲ್ಲಿ ಕೈಗೊಂಡ ನಿರ್ಧಾರಗಳು ಚುನಾವಣೆ ಮೇಲೆ ಪ್ರಭಾವ ಬೀರಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಉದಾಸಿ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬುದು ಬಿಜೆಪಿಯ ರಾಜ್ಯ ಪ್ರಮುಖರ ಬೇಡಿಕೆಯಾಗಿತ್ತು. ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೇಲುಗೈ ಸಾಧಿಸಿದ್ದರು.

ಕುಟುಂಬ ರಾಜಕಾರಣ ಬೇಡ ಎಂಬ ಲೆಕ್ಕಾಚಾರ ಹಾಗೂ ಬಸವಕಲ್ಯಾಣದ ಗೆಲುವಿನ ಉಮೇದಿನಲ್ಲಿ ಶಿವರಾಜ ಸಜ್ಜನರ ಅವರಿಗೆ ಟಿಕೆಟ್ ಕೊಟ್ಟಿದ್ದು, ಸೋಲಿನ ರುಚಿ ಉಣಿಸಿತು ಎಂಬ ಚರ್ಚೆ ಪಕ್ಷದೊಳಗೆ ನಡೆದಿದೆ. ಅದರಲ್ಲೂ ಬಿಜೆಪಿಯ ಸಂಸದ ಶಿವಕುಮಾರ ಉದಾಸಿ ಪ್ರತಿನಿಧಿಸುವ ಹಾಗೂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಸೋಲು ಕಂಡಿರುವುದು ಕಮಲ ಪಾಳೆಯಕ್ಕೆ ದೊಡ್ಡ ಹಿನ್ನಡೆ.

ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಭರ್ಜರಿ ತಯಾರಿಯಲ್ಲಿರುವ ಕಾಂಗ್ರೆಸ್‌ ನಾಯಕರ ಉತ್ಸಾಹವನ್ನು ಹಾನಗಲ್‌ ಫಲಿತಾಂಶ ಇಮ್ಮಡಿಗೊಳಿಸಿದೆ. ಬಿಜೆಪಿ ತೆಕ್ಕೆಯಿಂದ ಕ್ಷೇತ್ರವನ್ನು ವಶಪಡಿಸಿಕೊಂಡಿದ್ದು, ಮುಂದಿನ ಚುನಾವಣೆ ಗೆಲುವಿನ ಮೊದಲ ಮೆಟ್ಟಿಲು ಎಂದವರು ಭಾವಿಸಲೂ ಕಾರಣವಾಗಿದೆ.

ಸಿಂದಗಿಯಲ್ಲಿ ಮನಗೂಳಿ ಪುತ್ರ ಅಶೋಕ ಮನಗೂಳಿ ಅವರನ್ನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಕರೆತಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ, ಅದು ಫಲಕೊಟ್ಟಿಲ್ಲ. ತಂದೆಯ ಮರಣದ ಅನುಕಂಪ ಅಶೋಕ ಕೈಹಿಡಿದಿಲ್ಲ. ಈ ಕ್ಷೇತ್ರದಲ್ಲಿ ಯಾವಾಗಲೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಿದ್ದ ಕಾಂಗ್ರೆಸ್‌, 62,680 (ಶೇ 38.27) ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಅಸ್ತಿತ್ವವೇ ಇಲ್ಲದ ಕ್ಷೇತ್ರದಲ್ಲಿ ಪೈಪೋಟಿ ನೀಡುವಷ್ಟರ ಮಟ್ಟಿಗೆ ಕಾಂಗ್ರೆಸ್‌ ಯಶ ಸಾಧಿಸಿರುವುದು ಆ ಪಕ್ಷದ ನಾಯಕರ ವಿಶ್ವಾಸವನ್ನು ಹೆಚ್ಚಿಸಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯ ಸಚಿವರ ದಂಡೇ ಬೀಡುಬಿಟ್ಟಿತ್ತು. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಹಾಗಿದ್ದರೂ ಲಿಂಗಾಯತ ಮತ ಬಾಹುಳ್ಯವಿರುವ ಹಾನಗಲ್‌ನಲ್ಲಿ ಸೋಲು ಕಂಡಿದೆ. 2018ರ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿಂದ ಸಿಂದಗಿಯಲ್ಲಿ ರಮೇಶ ಭೂಸನೂರು ಅವರನ್ನು ಸೋಲಿಸಿದ್ದ ಅನುಕಂಪವೂ ಅವರ ಈಗಿನ ಗೆಲುವಿಗೆ ದಾರಿ ಮಾಡಿಕೊಟ್ಟಿದೆ.

ಜೆಡಿಎಸ್‌ ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿತ್ತು. ಎಚ್‌.ಡಿ. ದೇವೇಗೌಡರು ಸಿಂದಗಿಯಲ್ಲಿ ಉಳಿದುಕೊಂಡು ಮತ ಸೆಳೆಯುವ ಕಸರತ್ತು ನಡೆಸಿದ್ದರು. ಆರೆಸ್ಸೆಸ್‌ ವಿರುದ್ಧ ಟೀಕಾಸ್ತ್ರದ ಮಹಾಪ್ರಯೋಗ ಮಾಡಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಭಾರಿ ಸಂಖ್ಯೆಯ ಮತಗಿಟ್ಟಿಸುವ ಅಂದಾಜಿನಲ್ಲಿದ್ದರು. ಹಾನಗಲ್‌ನಲ್ಲಿ ಜೆಡಿಎಸ್‌ಗೆ ಅಷ್ಟಾಗಿ ನೆಲೆ ಇಲ್ಲದೇ ಇದ್ದರೂ (1994 ಚುನಾವಣೆವರೆಗೂ ಇದ್ದ ರೀತಿಯೊಳಗೆ) ಸಿಂದಗಿಯಲ್ಲೇ ಯಾವಾಗಲೂ ಬಿಜೆಪಿ, ಜೆಡಿಎಸ್ ಮಧ್ಯೆಯೇ ಪೈಪೋಟಿ ಇತ್ತು. ಈ ಬಾರಿ ಜೆಡಿಎಸ್‌ ಕಡೆಗೆ ಮತದಾರ ಒಲವು ತೋರಲೇ ಇಲ್ಲ. ಸಿಂದಗಿಯ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ 4,353(ಶೇ 2.66) ಮತ ಪಡೆದಿದ್ದರೆ, ಹಾನಗಲ್‌ನಲ್ಲಿ ನಿಯಾಜ್ ಶೇಖ್‌ 927 (ಶೇ 0.54) ಮತ ಗಿಟ್ಟಿಸಿದ್ದಾರೆ. ಈ ಚುನಾವಣೆಯಲ್ಲಿ ದಳಪತಿಗಳು ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಇದ್ದ ಕಡೆಯೂ ನೆಲೆ ಕಳೆದುಕೊಂಡು ತಬ್ಬಲಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT