ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶ ಪಡೆದರು; ಲೋಕಸೇವೆಗೆ ಹೊರಟರು

Published 24 ಮೇ 2023, 0:28 IST
Last Updated 24 ಮೇ 2023, 0:28 IST
ಅಕ್ಷರ ಗಾತ್ರ

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕಳೆದ ವರ್ಷ ನಡೆಸಿದ್ದ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ್ದು, ರಾಜ್ಯದ ಹಲವು ಪ್ರತಿಭಾವಂತರು ಸಾಧನೆ ಮೆರೆದು 'ಲೋಕಸೇವೆ'ಗೆ ಸಜ್ಜಾಗಿದ್ದಾರೆ. ಈ ಸಾಧಕರು ಕಂಡ ಕನಸು, ಅದನ್ನು ನನಸು ಮಾಡಿಕೊಳ್ಳಲು ನಡೆಸಿದ ಪ್ರಯತ್ನದ ಇಣುಕು ನೋಟವೊಂದು ಇಲ್ಲಿದೆ...

ಛಲ ಬಿಡದ ಕಲ್ಲೂರಿನ ಸಾಧಕ

ರಾಯಚೂರು: ಜಿಲ್ಲೆಯ ಸಿರವಾರ ತಾಲ್ಲೂಕು ಕಲ್ಲೂರು ಗ್ರಾಮದ ಪಿ.ಶ್ರವಣಕುಮಾರ್ ಅವರು ಈ ಬಾರಿ ಲೋಕಸೇವಾ ಆಯೋಗ (ಯುಪಿಎಸ್‌ಸಿ) ದ ಪರೀಕ್ಷೆಯಲ್ಲಿ 222ನೇ ರ‍್ಯಾಂಕ್ ಗಿಟ್ಟಿಸಿದ್ದಾರೆ.

ತಂದೆ ರಾಘವೇಂದ್ರರಾವ್ ಪೂಜಾರಿ ಅವರು ಹೈದರಾಬಾದ್‌ನಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್)ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಬೇರೆ ಬೇರೆ ರಾಜ್ಯಗಳಿಗೆ ವರ್ಗಾವಣೆ ಆಗುವುದರಿಂದ ಶ್ರವಣ್‌ ಒಂದೇ ಕಡೆಗೆ ಆರಂಭಿಕ ಶಿಕ್ಷಣ ಮುಗಿಸಿಲ್ಲ.

ಬೆಂಗಳೂರಿನ ಆರ್.ವಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. 2021ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಾಗ 521ನೇ ರ‍್ಯಾಂಕಿಂಗ್ ಪಡೆದು ಇಂಡಿಯನ್ ರೆವಿನ್ಯೂ ಸರ್ವಿಸ್ (ಐಆರ್‌ಎಸ್)ನಲ್ಲಿ ಆಯ್ಕೆ ಆಗಿ ಈಗಾಗಲೇ ಐಆರ್‌ಎಸ್ ತರಬೇತಿ ಪಡೆಯುತ್ತಿದ್ದಾರೆ. ರ‍್ಯಾಂಕಿಂಗ್ ಹೆಚ್ಚಿಸಿಕೊಳ್ಳಲು ಈ ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದರು. ತಾಂತ್ರಿಕ ಶಿಕ್ಷಣ ಪಡೆದರೂ ಯುಪಿಎಸ್‌ಸಿ ಪರೀಕ್ಷೆಗಾಗಿ ರಾಜ್ಯಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡಿದ್ದರು.

‘ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’

ಧಾರವಾಡ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯ ಸಾಧನೆಯ ಆಧಾರದಲ್ಲಿ 2021ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕರಾಗಿರುವ ನಗರದ ಉಳವಿ ಚನ್ನಬಸವೇಶ್ವರ ಬಡಾವಣೆಯ ಸೌರಭ್ ನರೇಂದ್ರ ಅವರು, 2022ರ ಪರೀಕ್ಷೆಯಲ್ಲಿ 198ನೇ ರ‍್ಯಾಂಕ್ ಪಡೆದಿದ್ದಾರೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಹೊಂದಿರುವ ಸೌರಭ್, ಖಾಸಗಿ ವಲಯದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಿಂದ ನಿರಂತರವಾಗಿ ಲೋಕಸೇವಾ ಆಯೋಗ ಪರೀಕ್ಷೆ ಎದುರಿಸಿರುವ ಇವರು, 2019ರಲ್ಲಿ ಮುಖ್ಯ ಪರೀಕ್ಷೆ ಪಾಸು ಮಾಡಿದ್ದರು. 2021ರಲ್ಲಿ ಏಳು ಅಂಕಗಳಲ್ಲಿ ಅವಕಾಶ ವಂಚಿತರಾದ ಇವರಿಗೆ, ಭಾರತೀಯ

ಕ್ರೀಡಾ ಪ್ರಾಧಿಕಾರದ ಸಂದರ್ಶನದಲ್ಲಿ ಸಹಾಯಕ ನಿರ್ದೇಶಕ ಹುದ್ದೆ ಪಡೆದಿದ್ದರು. ಸದ್ಯ ಪುದುಚೇರಿಯಲ್ಲಿ ಕರ್ತವ್ಯದಲ್ಲಿದ್ದಾರೆ.

ತಂದೆ ಅಮೃತ ನರೇಂದ್ರ ಅವರು ವಿಮಾ ಏಜೆಂಟ್ ಆಗಿದ್ದಾರೆ. ತಾಯಿ ಸುನೀತಾ ಹಾಗೂ ತಮ್ಮ ಅಮೋಘ ಇದ್ದಾರೆ. ‘ಇಲ್ಲಿಯವರೆಗೂ ಪಟ್ಟ ಪ್ರಯತ್ನಕ್ಕೆ ತಕ್ಕ ಫಲ ದೊರೆತಿದೆ’ ಎಂದು ತಿಳಿಸಿದರು.

ಸೇವೆಯಲ್ಲಿದ್ದುಕೊಂಡೆ ಯಶಸ್ಸು

ಬೆಂಗಳೂರು: ಸೊಲ್ಲಾಪುರದಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವೆಯಲ್ಲಿ ಸಹಾಯಕ ಕಾರ್ಯಾಚರಣೆ ವ್ಯವಸ್ಥಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಎಚ್.ಎಸ್. ಭಾವನಾ, ಕೇಂದ್ರ ನಾಗರಿಕ ಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 55ನೇ ರ್‍ಯಾಂಕ್ ಪಡೆದಿದ್ದಾರೆ.

ಅವರು ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಪದವೀಧರೆ ಆಗಿದ್ದು, ಬನಶಂಕರಿಯ ನಿವಾಸಿ. ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣವನ್ನು ಅವರು ಇಲ್ಲಿಯೇ ಪೂರೈಸಿದ್ದಾರೆ. ಸೇವೆಯಲ್ಲಿದ್ದುಕೊಂಡೇ ಪರೀಕ್ಷೆ ಬರೆದು, 6ನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.

‘ಕೆಲಸಕ್ಕೆ ಸೇರಿದ ಮೇಲೆ ಓದುವುದು ಕಷ್ಟವಾಯಿತು. ಆದರೂ ದಿನಕ್ಕೆ 6ರಿಂದ 7 ಗಂಟೆ ಓದುತ್ತಿದ್ದೆ. ಕೆಲಸಕ್ಕೆ ಸೇರುವ ಮೊದಲು 10ರಿಂದ 11 ಗಂಟೆ ಓದುತ್ತಿದ್ದೆ. ಇದರಿಂದ ಯಶಸ್ಸು ಸಾಧ್ಯವಾಯಿತು. ಇನ್ನಷ್ಟು ಓದಬೇಕು ಎಂಬ ಆಸೆಯಿದೆ. ಜನರಿಗೆ ನೇರ ಸಂಪರ್ಕ ಹೊಂದಿರುವ ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ’ ಎಂದು ತಿಳಿಸಿದರು.

ಹಳ್ಳಿ ಹುಡುಗನ ಸಾಧನೆ

ವಿಜಯಪುರ: ತಂದೆ ಗೂಡಂಗಡಿ ಮಾಲೀಕ, ತಾಯಿ ಗೃಹಿಣಿ, ಬಡತನ ಬೆನ್ನಿಗಂಟಿದ್ದರೂ ಸಾಧನೆಗೆ ಬಡತನದ ಹಂಗಿಲ್ಲ ಎಂಬುದಕ್ಕೆ ಯುಪಿಎಸ್‌ಸಿ ಪಾಸ್ ಮಾಡಿದ ಈ ಹಳ್ಳಿ ಹುಡುಗನ ಸಾಧನೆಯೇ ಸಾಕ್ಷಿ!

ಹೌದು, ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಪುಟ್ಟ ಗೂಡಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿರುವ ಶ್ರೀಶೈಲ ಸೋಮಜಾಳ ಅವರ ಪುತ್ರ ಸತೀಶ ಈಗ ಯುಪಿಎಸ್‌ಸಿ ಪಾಸ್ ಮಾಡಿದ್ದು, ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸತೀಶ 588ನೇ ರ‍್ಯಾಂಕ್ ಪಡೆದಿದ್ದು, ಆ ಕುಟುಂಬದಲ್ಲೀಗ ಸಂತಸ ಮನೆಮಾಡಿದೆ.

ಸತೀಶ ಹುಟ್ಟೂರು ಹಿರೇಮಸಳಿ, ಬಾಲ್ಯ ಕಳೆದಿದ್ದು, ಸಿಂದಗಿ ತಾಲ್ಲೂಕಿನ ದೇವಣಗಾಂವ ಮತ್ತು ವಿಜಯಪುರ ನಗರದಲ್ಲಿ. ದೇವಣಗಾಂವದಲ್ಲಿ ಪೂರ್ವ ಪ್ರಾಥಮಿಕ ಮುಗಿಸಿದ್ದು, 5 ರಿಂದ ದ್ವಿತೀಯ ಪಿಯುಸಿ ವರೆಗೆ ಸೈನಿಕ ಶಾಲೆಯಲ್ಲಿ ಓದಿದ್ದಾರೆ. ‘ಸೈನಿಕ ಶಾಲೆಯ ವಾತಾವರಣವೇ ಯುಪಿಎಸ್‌ಸಿ ತೇರ್ಗಡೆಯಾಗಲು ಪ್ರೇರಣೆ’ ಎನ್ನುತ್ತಾರೆ ಸತೀಶ. ಸೈನಿಕ ಶಾಲೆಯಲ್ಲಿ ಕಲಿತ ಅನೇಕರು ಪ್ರಸ್ತುತ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದಾರೆ. ಅವರಿಂದ ಪ್ರೇರಣೆ ಪಡೆದಿದ್ದಲ್ಲದೇ, ಬೆಳೆದು ಬಂದ ಬಗೆಯೇ ಯುಪಿಎಸ್‌ಸಿ ತೇರ್ಗಡೆಯಾಗಬೇಕೆಂಬ ಛಲ ಮೂಡಿಸಿತ್ತು ಎನ್ನುತ್ತಾರೆ.

ಸೌರಭ್‌ಗೆ ‘ಪೃಥ್ವಿ’ ಸಿನಿಮಾ ಪ್ರೇರಣೆ

ಮೈಸೂರು: ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 260ನೇ ರ‍್ಯಾಂಕ್‌ ಪಡೆದಿರುವ ಇಲ್ಲಿನ ವಿಜಯನಗರದ ಕೆ.ಸೌರಭ್‌ ಅವರಿಗೆ ಪುನೀತ್‌ ರಾಜ್‌ ಕುಮಾರ್‌ ಅವರ ‘ಪೃಥ್ವಿ’ ಸಿನಿಮಾ ಪ್ರೇರಣೆ ನೀಡಿದೆ! ಡೆಹ್ರಾಡೂನ್‌ನ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಭಾರತೀಯ ಅರಣ್ಯ ಸೇವೆ ತರಬೇತಿಯಲ್ಲಿರುವ ಅವರು, ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಮುಂದುವರಿಸಿ ವಿದೇಶಾಂಗ ಸೇವೆ ಸೇರುವ ಕನಸನ್ನು ನನಸು ಮಾಡಿಕೊಂಡಿದ್ದಾರೆ.

‘2021ರಲ್ಲಿ ಭಾರತೀಯ ಅರಣ್ಯ ಸೇವೆ ಹಾಗೂ ನಾಗರಿಕ ಸೇವಾ ಪರೀಕ್ಷೆಗಳೆರಡಲ್ಲೂ ಉತ್ತೀರ್ಣನಾದೆ. ಅರಣ್ಯ ಸೇವಾ ಪರೀಕ್ಷೆಯಲ್ಲಿ 45ನೇ ರ‍್ಯಾಂಕ್‌ ಪಡೆದಿದ್ದರಿಂದ, ಅದನ್ನೇ ಆಯ್ಕೆ ಮಾಡಿಕೊಂಡೆ. ಇದೀಗ ವಿದೇಶಾಂಗ ಸೇವೆ ಸಿಗುವ ನಿರೀಕ್ಷೆಯಿದೆ’ ಎಂದು ಸೌರಭ್‌ ಸಂತಸ ಹಂಚಿಕೊಂಡರು. ‘ಪದವಿ ಓದುವಾಗ, ಪುನೀತ್‌ ಅವರ ಪೃಥ್ವಿ ಸಿನಿಮಾ ಆಕರ್ಷಿಸಿತ್ತು. ಈಗಲೂ ಸಿನಿಮಾವನ್ನು ನೆನೆದರೆ ರೋಮಾಂಚನವಾಗುತ್ತದೆ. ದೆಹಲಿಗೆ ಹೋಗಿ ವಾಜಿರಾಮ್ ಅಂಡ್‌ ರವಿಯಲ್ಲಿ ಕೋಚಿಂಗ್‌ ಪಡೆದೆ. ನಂತರ ಮನೆಯಲ್ಲಿ ತಯಾರಿ ನಡೆಸಿದೆ’ ಎಂದು ಸ್ಮರಿಸಿದರು.

‘ನಿರಂತರ ಪ್ರಯತ್ನಪಟ್ಟರೆ ಯಶಸ್ಸು’

ರಾಮನಗರ: ಎರಡನೇ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 345ನೇ ರ್‍ಯಾಂಕ್‌ನ ಸಾಧನೆ ಮಾಡಿದ್ದಾರೆ ಚನ್ನಪಟ್ಟಣ ತಾಲ್ಲೂಕಿನ ಮಳೂರು ಪಟ್ಟಣದ ದಾಮಿನಿ ದಾಸ್‌.

ಕೃಷಿಕ ಕುಟುಂಬದ ಹಿನ್ನೆಲೆಯ ದಾಮಿನಿ ಕಂಪ್ಯೂಟರ್‌ ಸೈನ್ಸ್ ಪದವೀಧರೆ. ಮೊದಲ ಪ್ರಯತ್ನದಲ್ಲಿ ಯಶಸ್ಸುಸಿಗದಿದ್ದರೂ, ಎರಡನೇ ಪ್ರಯತ್ನದಲ್ಲಿ ಪರೀಕ್ಷೆ ಬರೆದು ಮೊದಲ ಬಾರಿಗೆ ಸಂದರ್ಶನಕ್ಕೆ ಆಯ್ಕೆಯಾಗಿ ಯಶಸ್ಸು ಕಂಡಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯವನ್ನು ಐಚ್ಚಿಕ ವಿಷಯವನ್ನಾಗಿ ತೆಗೆದುಕೊಂಡಿರುವುದು ವಿಶೇಷ.

‘ದಿನದ ಹತ್ತು ಗಂಟೆ ಓದಿಗೆ ಮೀಸಲಿಟ್ಟಿದ್ದೆ. ಆನ್‌ಲೈನ್‌ ಕೋಚಿಂಗ್‌ ಜೊತೆಗೆ ಹಲವು ಪರಿಣಿತರ ಮಾರ್ಗದರ್ಶನ ಪಡೆದಿದ್ದೆ. ಸತತ ಅಧ್ಯಯನದಿಂದ ಎರಡನೇ ಪ್ರಯತ್ನದಲ್ಲೇ ಯಶಸ್ಸು ಸಾಧ್ಯವಾಗಿದೆ’ ಎಂದು ದಾಮಿನಿ ಹರ್ಷ ವ್ಯಕ್ತಪಡಿಸಿದರು. ಮುಂದೆ ಆರೋಗ್ಯ ಅಥವಾ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಇರಾದೆ ಅವರದ್ದು.

ಆರನೇ ಯತ್ನದಲ್ಲಿ ಸಾಧಿಸಿದ ಸಾಫಲ್ಯ

ಬೆಳಗಾವಿ: ‘ನನಗೆ ಬಾಲ್ಯದಿಂದಲೂ ಐಎಎಸ್‌ ಅಧಿಕಾರಿಯಾಗಬೇಕೆಂಬ ಕನಸಿತ್ತು. ಹಾಗಾಗಿ ವೈದ್ಯಕೀಯ, ಎಂಜಿನಿಯರಿಂಗ್‌ ಕೋರ್ಸ್‌ಗಳಿಗೆ ಪ್ರವೇಶ ಪಡೆಯದೆ, ಬಿ.ಎಸ್ಸಿ ವ್ಯಾಸಂಗ ಮಾಡಿದ್ದೆ. ಐದು ಬಾರಿ ಪ್ರಯತ್ನ ಕೈಗೂಡದಿದ್ದರೂ, ನಿರಾಸೆಗೊಳ್ಳದೆ ಅಧ್ಯಯನ ಮುಂದುವರಿಸಿದ್ದೆ. ಇಷ್ಟು ವರ್ಷಗಳ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ’ ಎಂದು 2022ನೇ ಸಾಲಿನಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 362ನೇ ರ‍್ಯಾಂಕ್‌ ಪಡೆದಿರುವ ಶ್ರುತಿ ಯರಗಟ್ಟಿ ಸಂತಸ ವ್ಯಕ್ತಪಡಿಸಿದರು.

ಮೂಲತಃ ಯರಗಟ್ಟಿ ತಾಲ್ಲೂಕಿನ ತಲ್ಲೂರ ಗ್ರಾಮದವರಾದ ಶ್ರುತಿ, 6ನೇ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಸದ್ಯ ಮೂಡಲಗಿ ತಾಲ್ಲೂಕಿನ ಅರಭಾವಿಯಲ್ಲಿ ಶ್ರುತಿ ಕುಟುಂಬ ನೆಲೆಸಿದೆ. ತಂದೆ ಶಿವಾನಂದ ಯರಗಟ್ಟಿ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

‘ಮೊದಲ ಮೂರು ಪರೀಕ್ಷೆಗಳಲ್ಲಿ ಪಾಸ್‌ ಮಾಡಲಾಗಿರಲಿಲ್ಲ. ಆದರೆ, 4 ಮತ್ತು 5ನೇ ಬಾರಿ ಪರೀಕ್ಷೆಯಲ್ಲಿ ಸಂದರ್ಶನ ಹಂತದವರೆಗೆ ಹೋಗಿದ್ದೆ. ಸ್ವಲ್ಪದರಲ್ಲೇ ಅವಕಾಶ ಕೈತಪ್ಪಿತ್ತು. ಆರನೇ ಬಾರಿ ಗುರಿ ಮುಟ್ಟಿದೆ’ ಎಂದರು.

ಕೋಚಿಂಗ್‌ ಪಡೆಯದ ಪೂಜಾ

ಮೈಸೂರು: ಕುವೆಂ‍ಪುನಗರದ ಎಂ.ಪೂಜಾ, ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ರ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ 390ನೇ ರ‍್ಯಾಂಕ್‌ ಪಡೆದಿದ್ದಾರೆ. ಎಲ್ಲಿಯೂ ಕೋಚಿಂಗ್‌ ಪಡೆಯದೇ ಉತ್ತೀರ್ಣರಾಗಿರುವುದು ವಿಶೇಷ.

ಕಳೆದ ಬಾರಿ ಯಶ ಕಂಡಿರಲಿಲ್ಲ. ಎರಡನೇ ಬಾರಿ ಯಶಸ್ಸು ಗಳಿಸಿದ್ದಾರೆ. ಅವರು ಮುಕುಂದ ರಾವ್‌ ಬೇದ್ರೆ ಹಾಗೂ ಎಂ.ಪದ್ಮಾವತಿ ದಂಪತಿ ಪುತ್ರಿ.

ಕುವೆಂಪುನಗರದ ಕಾವೇರಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ, ಮರಿಮಲ್ಲಪ್ಪ ಪಿಯು ಕಾಲೇಜಿನಲ್ಲಿ ಪಿಯು ಹಾಗೂ ಗೋಕುಲಂನ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ‌

‘2019ರಲ್ಲಿ ಪದವಿ ಮುಗಿಸಿದೆ. 2020 ಡಿಸೆಂಬರ್‌ನಿಂದ ತಯಾರಿ ಆರಂಭಿಸಿದೆ. ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದೆ. ಈ ಬಾರಿ ಸಂದರ್ಶನ ತರಬೇತಿಯನ್ನು ಮಾತ್ರ ಬೆಂಗಳೂರಿನ ಇನ್‌ಸೈಟ್ಸ್‌ ಆನ್‌ ಇಂಡಿಯಾದಲ್ಲಿ ಪಡೆದೆ. ಐಎಎಸ್‌ ಅಥವಾ ಐಪಿಎಸ್‌ ಹುದ್ದೆ ಸಿಗುವ ನಿರೀಕ್ಷೆ ಇದೆ’ ಎಂದು ಪೂಜಾ ‘‍ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

‘ಮಗ ಹುಟ್ಟಿದ ನಂತರ ತಯಾರಿ’

ಮೈಸೂರು: ‘2019ರಲ್ಲಿ ಮದುವೆಯಾದೆ, ಮಗ ಅಥರ್ವ 2020ರ ಜುಲೈನಲ್ಲಿ ಹುಟ್ಟಿದ. ಜವಾಬ್ದಾರಿಗಳು ಹೆಚ್ಚಿದ್ದ ವೇಳೆಯೇ ಯುಪಿಎಸ್‌ಸಿ ನಾಗರಿಕ ಸೇವಾ ‍ಪರೀಕ್ಷೆ ಬರೆಯುವ ಕನಸು ಹುಟ್ಟಿತ್ತು. ತಯಾರಿ ಆರಂಭಿಸಿದೆ. ಈಗ 448ನೇ ರ‍್ಯಾಂಕ್‌ ಸಿಕ್ಕಿದೆ. ಖುಷಿಯಾಗಿದೆ’

ತಾಲ್ಲೂಕಿನ ಬೆಳವಾಡಿ ಗ್ರಾಮದ ಜೆ.ಭಾನುಪ್ರಕಾಶ್‌ ‘ಪೋಷಕರು ಹಾಗೂ ವೈದ್ಯೆ, ಪತ್ನಿ ಡಾ.ಚೈತ್ರಾ ಅವರ ಪ್ರೋತ್ಸಾಹವೇ ಸಾಧನೆಗೆ ಪ್ರೇರಣೆ’ ಎನ್ನುತ್ತಾರೆ. ಕಳೆದೆರಡು ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ. ಮೂರನೇ ಬಾರಿಗೆ, ತಮ್ಮ ಮೂವತ್ತೆರಡೂವರೆ ವರ್ಷಕ್ಕೆ ತೇರ್ಗಡೆಯಾಗಿದ್ದಾರೆ.

ಕೆ.ಆರ್‌.ನಗರ ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಭಾನುಪ್ರಕಾಶ್‌ ಅವರ ತಂದೆ ಜಯರಾಮೇಗೌಡರು ಕೃಷಿಕರು. ತಾಯಿ ಗಿರಿಜಮ್ಮ ಅಂಗನವಾಡಿ ಶಿಕ್ಷಕಿ.

‘ಕೋವಿಡ್‌ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಆಗ, ನಾಗರಿಕ ಸೇವಾ ಅಧಿಕಾರಿಯಾಗಬೇಕು, ಸಮಾಜಕ್ಕೆ ಇನ್ನಷ್ಟು ಸೇವೆ ಮಾಡಬೇಕೆಂಬ ಕನಸು ಮೂಡಿತ್ತು’ ಎಂದು ಹೇಳಿದರು.

ಹಳ್ಳಿ ಹುಡುಗನ ಸಾಧನೆ

ವಿಜಯಪುರ: ತಂದೆ ಗೂಡಂಗಡಿ ಮಾಲೀಕ, ತಾಯಿ ಗೃಹಿಣಿ, ಬಡತನ ಬೆನ್ನಿಗಂಟಿದ್ದರೂ ಸಾಧನೆಗೆ ಬಡತನದ ಹಂಗಿಲ್ಲ ಎಂಬುದಕ್ಕೆ ಯುಪಿಎಸ್‌ಸಿ ಪಾಸ್ ಮಾಡಿದ ಈ ಹಳ್ಳಿ ಹುಡುಗನ ಸಾಧನೆಯೇ ಸಾಕ್ಷಿ!

ಹೌದು, ಇಂಡಿ ತಾಲ್ಲೂಕಿನ ಹಿರೇಮಸಳಿ ಗ್ರಾಮದಲ್ಲಿ ಪುಟ್ಟ ಗೂಡಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿರುವ ಶ್ರೀಶೈಲ ಸೋಮಜಾಳ ಅವರ ಪುತ್ರ ಸತೀಶ ಈಗ ಯುಪಿಎಸ್‌ಸಿ ಪಾಸ್ ಮಾಡಿದ್ದು, ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸತೀಶ 588ನೇ ರ‍್ಯಾಂಕ್ ಪಡೆದಿದ್ದು, ಆ ಕುಟುಂಬದಲ್ಲೀಗ ಸಂತಸ ಮನೆಮಾಡಿದೆ.

ಸತೀಶ ಹುಟ್ಟೂರು ಹಿರೇಮಸಳಿ, ಬಾಲ್ಯ ಕಳೆದಿದ್ದು, ಸಿಂದಗಿ ತಾಲ್ಲೂಕಿನ ದೇವಣಗಾಂವ ಮತ್ತು ವಿಜಯಪುರ ನಗರದಲ್ಲಿ. ದೇವಣಗಾಂವದಲ್ಲಿ ಪೂರ್ವ ಪ್ರಾಥಮಿಕ ಮುಗಿಸಿದ್ದು, 5 ರಿಂದ ದ್ವಿತೀಯ ಪಿಯುಸಿ ವರೆಗೆ ಸೈನಿಕ ಶಾಲೆಯಲ್ಲಿ ಓದಿದ್ದಾರೆ. ‘ಸೈನಿಕ ಶಾಲೆಯ ವಾತಾವರಣವೇ ಯುಪಿಎಸ್‌ಸಿ ತೇರ್ಗಡೆಯಾಗಲು ಪ್ರೇರಣೆ’ ಎನ್ನುತ್ತಾರೆ ಸತೀಶ. ಸೈನಿಕ ಶಾಲೆಯಲ್ಲಿ ಕಲಿತ ಅನೇಕರು ಪ್ರಸ್ತುತ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದಾರೆ. ಅವರಿಂದ ಪ್ರೇರಣೆ ಪಡೆದಿದ್ದಲ್ಲದೇ, ಬೆಳೆದು ಬಂದ ಬಗೆಯೇ ಯುಪಿಎಸ್‌ಸಿ ತೇರ್ಗಡೆಯಾಗಬೇಕೆಂಬ ಛಲ ಮೂಡಿಸಿತ್ತು ಎನ್ನುತ್ತಾರೆ.

ಯಶಸ್ಸು ಸಾಧಿಸಿದ ಕನ್ನಡಪ್ರೇಮಿ

ಧಾರವಾಡ: ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಪೂರೈಸಿ, ಕನ್ನಡ ವಿಷಯವನ್ನೇ ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡ ಅಣ್ಣಿಗೇರಿಯ ಎಂಜಿನಿಯರ್‌ ಸಿದ್ಧಲಿಂಗಪ್ಪ ಕೆ. ಪೂಜಾರ ಅವರು ಕೇಂದ್ರ ಲೋಕಸೇವಾ ಆಯೋಗ 2022ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 589ನೇ ರ‍್ಯಾಂಕ್ ಪಡೆದಿದ್ದಾರೆ.

ತಂದೆ ಕರಿಸಿದ್ದಪ್ಪ ಪೂಜಾರ ಅವರು ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕರಾಗಿದ್ದಾರೆ. ತಾಯಿ ಶಾಂತವ್ವ ಹೊಲದ ಕೆಲಸ ನೋಡಿಕೊಳ್ಳುತ್ತಿದ್ದಾರೆ. ಅಣ್ಣಿಗೇರಿಯಲ್ಲಿ ಮೂರು ಎಕರೆ ಜಮೀನು ಹೊಂದಿದ್ದಾರೆ.

ಕನ್ನಡ ವಿಷಯದಲ್ಲಿ ಅಪಾರ ಆಸಕ್ತಿ ಹೊಂದಿರುವ ಸಿದ್ಧಲಿಂಗಪ್ಪ ಬೆಂಗಳೂರಿನ ಯುವಿಸಿಇ ಕಾಲೇಜಿನಲ್ಲಿ 2015ರಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಬಳಿಕ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ನಿರಂತರ ಸಿದ್ಧತೆ ನಡೆಸಿದ್ದರು. ಅವರು ಒಂದು ಬಾರಿ ಯುಪಿಎಸ್‌ಸಿ ಸಂದರ್ಶನವನ್ನೂ ನೀಡಿದ್ದರು.

‘ಬೆಂಗಳೂರಿನ ಇನ್‌ಸೈಟ್‌, ಐಎಎಸ್‌ ಬಾಬಾ, ಇಂಡಿಯಾ ಫಾರ್ ಐಎಎಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದೇನೆ. ಅದರ ಮುಖ್ಯಸ್ಥರು ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ’ ಎಂದು ತಿಳಿಸಿದರು.

ಎರಡನೇ ಯತ್ನದಲ್ಲಿ ಗೆಲುವಿನ ನಗೆ

ಶಿವಮೊಗ್ಗ: ಇಲ್ಲಿನ ಹಾಲ್ಕೊಳ ಬಡಾವಣೆಯ ನಿವಾಸಿ ಐ.ಎನ್.ಮೇಘನಾ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ದ ಪರೀಕ್ಷೆಯ ಫಲಿತಾಂಶದಲ್ಲಿ 617ನೇ ರ‍್ಯಾಂಕ್ ಪಡೆದಿದ್ದಾರೆ.

ನಿವೃತ್ತ ಡಿಸಿಎಫ್ ಐ.ಎಂ.ನಾಗರಾಜ್ ಹಾಗೂ ಜಿ.ಜಿ.ನಮಿತಾ ದಂಪತಿ ಪುತ್ರಯಾಗಿರುವ ಮೇಘನಾ 2021–22ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದರೂ ಸಂದರ್ಶನದಲ್ಲಿ ತೇರ್ಗಡೆ ಆಗಿರಲಿಲ್ಲ. ಎರಡನೇ ಪ್ರಯತ್ನದಲ್ಲಿ ತೇರ್ಗಡೆ ಆಗಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಮೈಸೂರು ಜಿಲ್ಲೆ ಬಂಡೀಪುರ ಹಾಗೂ ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಮುಗಿಸಿದ್ದು, ಶಿವಮೊಗ್ಗದ ಸಾಂದೀಪನಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಶಿವಮೊಗ್ಗದ ಪೇಸ್‌ ಕಾಲೇಜಿನಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ‘ಬೆಂಗಳೂರಿನ ವಿಜಯನಗರದ ಇನ್‌ಸೈಟ್ಸ್‌ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ತರಬೇತಿ ಪಡೆದಿರುವ ಪುತ್ರಿ ಎಂಜಿನಿಯರಿಂಗ್ ಮುಗಿಸುತ್ತಿದ್ದಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಬೆಳಿಗ್ಗೆ 7 ಗಂಟೆಯಿಂದ ಓದಿನಲ್ಲಿ ತೊಡಗಿಕೊಳ್ಳುತ್ತಿದ್ದಳು’ ಎಂದು ಐ.ಎಂ. ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT