ಬೆಂಗಳೂರು: ವಯನಾಡ್‌ನ ಭೂಕುಸಿತ ದುರಂತ ಮತ್ತು ರಾಜ್ಯದಲ್ಲಿ ವಿವಿಧೆಡೆ ಸಂಭವಿಸಿದ ಭೂಕುಸಿತದ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಪಶ್ಚಿಮಘಟ್ಟ ಪ್ರದೇಶದಲ್ಲಿ ಅರಣ್ಯ ಒತ್ತುವರಿ, ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್‌ಗಳ ವಿರುದ್ಧ ತಕ್ಷಣದಿಂದಲೇ ಕ್ರಮ ಜರುಗಿಸಲು ಕಾರ್ಯಪಡೆ ರಚಿಸಿದೆ.
‘ಪಶ್ಚಿಮಘಟ್ಟ ಅರಣ್ಯ ಒತ್ತು ವರಿ ತೆರವು ಕಾರ್ಯಪಡೆ’ ಹೆಸರಿನ ಈ ಕಾರ್ಯಪಡೆಯು ಸೋಮವಾರ ದಿಂದಲೇ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಲಿದೆ.
ಕೆಲವು ವರ್ಷಗಳಿಂದ ಪಶ್ಚಿಮಘಟ್ಟ ಪ್ರದೇಶದ ವ್ಯಾಪ್ತಿಯಲ್ಲಿರುವ ರಾಜ್ಯದ 10 ಜಿಲ್ಲೆಗಳ ಹಲವೆಡೆ ಭೂಕುಸಿತ ಸಂಭವಿಸಿತ್ತು. ಅಲ್ಲಿನ ಅರಣ್ಯ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಸುತ್ತಿರುವ ತೋಟ, ರೆಸಾರ್ಟ್ ಮತ್ತಿತರ ಚಟುವಟಿಕೆಗಳೇ ಇದಕ್ಕೆ ಕಾರಣ. ಒತ್ತುವರಿ ತೆರವು ಮಾಡಿದರೆ ಭೂಕುಸಿತದಂತಹ ದುರಂತಗಳನ್ನು ತಪ್ಪಿಸಬಹುದು. ಇದಕ್ಕಾಗಿ ಕಾರ್ಯಪಡೆ ರಚಿಸಬೇಕು ಎಂದು ಅರಣ್ಯ ಇಲಾಖೆ 2023ರ ಸೆಪ್ಟೆಂಬರ್‌ನಲ್ಲೇ ಟಿಪ್ಪಣಿ ಹೊರಡಿಸಿತ್ತು. ಆದರೆ ಕಾರ್ಯಪಡೆ ರಚನೆಯಾಗಿರಲಿಲ್ಲ.
ಜುಲೈ ತಿಂಗಳಲ್ಲಿ ರಾಜ್ಯದ ಶಿರೂರು, ಸಕಲೇಶಪುರ, ಶಿರಾಡಿ ಘಾಟ್, ಚಾರ್ಮಾಡಿ ಘಾಟ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಸಾಲು ಸಾಲು ಭೂಕುಸಿತ ಸಂಭವಿಸಿದ್ದವು. ಆಗಲೂ ಕಾರ್ಯಪಡೆ ರಚನೆಯ ಅವಶ್ಯಕತೆ ಇದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು. ಆದರೂ ಕಾರ್ಯಪಡೆ ರಚನೆಯಾಗಿರಲಿಲ್ಲ. ರಾಜ್ಯದೊಂದಿಗೆ ಗಡಿ ಹಂಚಿಕೊಂಡಿ ರುವ ಕೇರಳದ ವಯನಾಡ್ ಜಿಲ್ಲೆಯಲ್ಲಿ ಜುಲೈ ಕೊನೆಯ ವಾರ ಸಂಭವಿಸಿದ ಭಾರಿ ಭೂಕುಸಿತದ ನಂತರ ಸರ್ಕಾರ ಎಚ್ಚೆತ್ತುಕೊಂಡಿದೆ.
ಸಕಲೇಶಪುರ ತಾಲ್ಲೂಕಿನ ಹಾರ್ಲೆ ಎಸ್ಟೇಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿರುವುದು ಭೂಕುಸಿತ.
ಪ್ರಜಾವಾಣಿ ಚಿತ್ರ/ಜಾನೇಕೆರೆ ಆರ್.ಪರಮೇಶ್
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಈಗ ಕಾರ್ಯಪಡೆ ರಚಿಸಿದೆ.
2015ರ ನಂತರ ನಡೆದ ಒತ್ತುವರಿಗಳ ಪೈಕಿ, ಒತ್ತುವರಿ ಸಾಬೀತಾದ ಪ್ರಕರಣಗಳಲ್ಲಿ ತಕ್ಷಣದಿಂದಲೇ ತೆರವು ಕಾರ್ಯ ಆರಂಭಿಸಬೇಕು. ಕೋರ್ಟ್‌ನಲ್ಲಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಡ್ವೊಕೇಟ್ ಜನರಲ್ ಜೊತೆಗೆ ಸಮಾಲೋಚಿಸಿ, ಕ್ರಮ ತೆಗೆದುಕೊಳ್ಳುವಂತೆ ಸಚಿವರು ಕಾರ್ಯಪಡೆಗೆ ಸೂಚಿಸಿದ್ದಾರೆ.
ಒತ್ತುವರಿಗೆ ಸಂಬಂಧಿಸಿದಂತೆ ಇತ್ಯರ್ಥವಾಗದೇ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ತೆಗೆದುಕೊಳ್ಳಬೇಕು. ಈ ಪ್ರಕ್ರಿಯೆಗೆ ವಾರದಲ್ಲಿ ಎರಡು ದಿನ ಮೀಸಲಿಡಬೇಕು ಎಂದು ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.