ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ಕು ಕಡೆ ಕಿದ್ವಾಯಿ ಮಾದರಿ ಆಸ್ಪತ್ರೆ: ಡಾ.ಶರಣಪ್ರಕಾಶ ಪಾಟೀಲ

ಕಿದ್ವಾಯಿ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಸಚಿವ ಶರಣಪ್ರಕಾಶ್ ಪಾಟೀಲ ಭೇಟಿ
Published 19 ಜೂನ್ 2024, 15:21 IST
Last Updated 19 ಜೂನ್ 2024, 15:21 IST
ಅಕ್ಷರ ಗಾತ್ರ

ಬೆಂಗಳೂರು: ‘ತುಮಕೂರು, ಶಿವಮೊಗ್ಗ, ಮಂಡ್ಯ, ಕಾರವಾರದಲ್ಲಿ ಕಿದ್ವಾಯಿ ಮಾದರಿಯ ಆಸ್ಪತ್ರೆ ಹಾಗೂ ಕಲಬುರಗಿಯಲ್ಲಿ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಆರಂಭಿಸುವ ಚಿಂತನೆಯಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ನಗರದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಬುಧವಾರ ದಿಢೀರ್ ಭೇಟಿ ನೀಡಿ ವೈದ್ಯರ ಕಾರ್ಯವೈಖರಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.

‘ರಾಜ್ಯದ ನಾನಾ ಭಾಗಗಳಿಂದ ರೋಗಿಗಳು ಬೆಂಗಳೂರಿಗೆ ಬರುವುದರಿಂದ ಕಿದ್ವಾಯಿಯಲ್ಲಿ ಎಲ್ಲರಿಗೂ ಉತ್ತಮವಾದ ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ಇತರ ಕಡೆ ಇದೇ ಮಾದರಿಯ ಆಸ್ಪತ್ರೆ ತೆರೆಯುವ ಆಲೋಚನೆಯಿದೆ‌. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯನ್ನು ಕಲಬುರಗಿಯಲ್ಲಿ ಆರಂಭಿಸುವ ಕುರಿತು ಮುಖ್ಯಮಂತ್ರಿ‌ ಜೊತೆ ಚರ್ಚೆ ನಡೆಸಲಾಗುವುದು’ ಎಂದು ಪಾಟೀಲ ಹೇಳಿದರು.

ಕಾಲಮಿತಿಯಲ್ಲಿ ಪರಿಹಾರ: ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ‘ಎಷ್ಟು ರೋಗಿಗಳು ದಾಖಲಾಗುತ್ತಿದ್ದಾರೆ, ವಸತಿ ಸೌಲಭ್ಯ ಹೇಗಿದೆ, ಯಾವೆಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದೀರಿ’ ಎಂದು ಆಡಳಿತಾಧಿಕಾರಿ ಮಂಜುಶ್ರೀ ಮತ್ತು ನಿರ್ದೇಶಕ ಡಾ. ಲೋಕೇಶ್ ಅವರನ್ನು ಪ್ರಶ್ನಿಸಿದರು.

‘ರೋಗಿಗಳಿಗೆ ಚಿಕಿತ್ಸೆ ಕೊಡಲು ಎಷ್ಟು ದಿನ ಬೇಕು. ಕ್ಯಾನ್ಸರ್ ಪತ್ತೆ ಮಾಡಲು ಎಷ್ಟು ದಿನ ಬೇಕಾಗುತ್ತದೆ. ಚಿಕಿತ್ಸೆ ನೀಡಲು ಎಷ್ಟು ದಿನ ತೆಗೆದುಕೊಳ್ಳುತ್ತೀರಿ. ಕ್ಯಾನ್ಸರ್ ಪತ್ತೆಯಾದ ಬಳಿಕ ರೋಗಿಯನ್ನು ಎಷ್ಟು ದಿನಗಳ ನಂತರ ದಾಖಲು ಮಾಡಿಕೊಳ್ಳುತ್ತಿದ್ದೀರಿ. ಯಾವ ಸಮಯದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ’ ಎಂದೂ ವಿವರ ಕೇಳಿದರು.

‘ಆಸ್ಪತ್ರೆಯಲ್ಲಿ ಕೆಲವು ಸಮಸ್ಯೆಗಳು ಇರುವುದು ನನ್ನ ಗಮನಕ್ಕೆ ಬಂದಿದೆ. ಈ ಸಮಸ್ಯೆಗಳ ನಡುವೆಯೂ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ. ಕಾಲಮಿತಿಯೊಳಗೆ ಹಂತಹಂತವಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಉಚಿತವಾಗಿ ಔಷಧಿ ನೀಡಲು ಸೂಚನೆ: ₹75 ಸಾವಿರದಷ್ಟು ದೊಡ್ಡ ಮೊತ್ತ ಪಾವತಿಸಿ ಔಷಧಿಗಳನ್ನು ಖರೀದಿಸಲು ಹಣವಿಲ್ಲ ಎಂದು ಅಂಗವಿಕಲ ರೋಗಿ ರಮೇಶ್ ಎಂಬುವರು ಅಳಲು ತೋಡಿಕೊಂಡಾಗ, ಅವರಿಗೆ ತಕ್ಷಣ ಉಚಿತವಾಗಿ ಔಷಧಿ ನೀಡುವಂತೆ ವೈದ್ಯರಿಗೆ ಸಚಿವರು ಸೂಚಿಸಿದರು.

ವೈದ್ಯರ ಕಾರ್ಯವೈಖರಿಗೆ ಸಿಡಿಮಿಡಿ

ಮೊದಲು ಕಿದ್ವಾಯಿ ಆಸ್ಪತ್ರೆಗೆ ಭೇಟಿ ಕೊಟ್ಟ ಸಚಿವರು ತುರ್ತು ಚಿಕಿತ್ಸಾ ವಾರ್ಡ್ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಒಂದು ತಿಂಗಳಾದರೂ ಚಿಕಿತ್ಸೆ ನೀಡದಿರುವುದನ್ನು ಕಂಡು ವೈದ್ಯರ ವಿರುದ್ಧ ಸಿಡಿಮಿಡಿಗೊಂಡರು. ‘ದಾಖಲಾಗಿ ಒಂದು ತಿಂಗಳಾದರೂ ಏಕೆ ಸರ್ಜರಿ ಮಾಡಿಲ್ಲ. ವಿಳಂಬ ಮಾಡುತ್ತಿರುವ ಉದ್ದೇಶವಾದರೂ ಏನು’ ಎಂದು ಪ್ರಶ್ನಿಸಿದ ಸಚಿವರು ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT