ಬೆಂಗಳೂರು: ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಮುಳುಗಿ ಬಿಡುತ್ತವೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯ ಅರ್ಥಶಾಸ್ತ್ರದ ಬೃಹಸ್ಪತಿಗಳು ಈಗ ದ್ರಾಕ್ಷಿ ಸಿಗದ ನರಿಯಂತೆ ಆಗಿದ್ದಾರೆ ಎಂದು ಕಾಂಗ್ರೆಸ್ ಗೇಲಿ ಮಾಡಿದೆ.
ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆಯು, ಸತತ ನಷ್ಟ ಅನುಭವಿಸುತ್ತಿದ್ದ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ವರಮಾನವನ್ನು ಹೆಚ್ಚಿಸಿದೆ ಎಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ವಿಶೇಷ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
'ಸಾರಿಗೆ ಸಂಸ್ಥೆಗಳಿಗೆ ವರಮಾನ ಶಕ್ತಿ' –ವರದಿಯನ್ನು ಹಂಚಿಕೊಂಡಿರುವ ಆಡಳಿತ ಪಕ್ಷ, 'ನಷ್ಟದ ಹಾದಿಯಲ್ಲಿದ್ದ ಸಾರಿಗೆ ಸಂಸ್ಥೆಗಳು ಈಗ ಲಾಭದ ದಾರಿಗೆ ಮರಳಿವೆ. ಪುರುಷ ಪ್ರಯಾಣಿಕರ ಸಂಖ್ಯೆಯೂ ಗಣನಿಯವಾಗಿ ಹೆಚ್ಚಳವಾಗಿ ಸಾರಿಗೆ ಸಂಸ್ಥೆಗಳಿಗೆ ಆದಾಯ ಹರಿದುಬರುತ್ತಿದೆ. ಬಿಜೆಪಿಯ ಖಾಸಗೀಕರಣದ ಹುನ್ನಾರಕ್ಕೆ, ನಷ್ಟದ ಕೂಪಕ್ಕೆ ಜಾರಿದ್ದ ಸಾರಿಗೆ ಸಂಸ್ಥೆಗಳು ಈಗ ತಲೆ ಎತ್ತಿ ಬೀಗುತ್ತಿವೆ' ಎಂದು ಹೇಳಿದೆ.
ಮುಂದುವರಿದು, 'ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಮುಳುಗಿಯೇ ಬಿಡುತ್ತವೆ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಯ ಅರ್ಥಶಾಸ್ತ್ರದ ಬೃಹಸ್ಪತಿಗಳು ಈಗ ದ್ರಾಕ್ಷಿ ಸಿಗದ ನರಿಯಂತೆ ಆಗಿದ್ದಾರೆ!' ಎಂದು ಕಿಚಾಯಿಸಿದೆ.
ಇಂದು (ಜೂನ್ 30) ಪ್ರಜಾವಾಣಿ ಮುಖಪುಟದಲ್ಲಿ ಪ್ರಕಟವಾಗಿರುವ ವರದಿಯಲ್ಲಿ, ಕೆಎಸ್ಆರ್‌ಟಿಸಿ ನಿತ್ಯದ ವರಮಾನದಲ್ಲಿ ಸರಾಸರಿ ₹ 1.56 ಕೋಟಿಯಷ್ಟು ಹೆಚ್ಚಳವಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ಆದಾಯ ನಿತ್ಯ ಸರಾಸರಿ ₹ 90 ಲಕ್ಷ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಎನ್‌ಡಬ್ಲ್ಯುಕೆಆರ್‌ಟಿಸಿ) ಆದಾಯ 17 ದಿನಗಳಲ್ಲಿ ₹110 ಕೋಟಿ ಮೀರಿದೆ. ಬಿಎಂಟಿಸಿಯ ದಿನದ ಆದಾಯ ₹ 56 ಲಕ್ಷದಷ್ಟು ಹೆಚ್ಚಾಗಿದೆ ಎಂಬ ಅಂಕಿಅಂಶ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.