ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕರ್ನಾಟಕ ಮಾದರಿ' ಆಡಳಿತ ಪರಿಚಯಿಸುತ್ತೇವೆ: ರಾಜ್ಯಪಾಲ ಥಾವರಚಂದ್ ಗೆಹಲೋತ್

Published 3 ಜುಲೈ 2023, 7:55 IST
Last Updated 3 ಜುಲೈ 2023, 7:55 IST
ಅಕ್ಷರ ಗಾತ್ರ

ಬೆಂಗಳೂರು: ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನೂ ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ ಮಾದರಿಯೊಂದನ್ನು ತಮ್ಮ ಸರ್ಕಾರವು ದೇಶಕ್ಕೆ ಪರಿಚಯಿಸಲಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಭರವಸೆ ನೀಡಿದರು.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಸೋಮವಾರ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಿನ ಐದು ವರ್ಷದಲ್ಲಿ ಏನೆಲ್ಲ ಮಾಡಲಿದೆ ಎಂಬ ದಿಕ್ಸೂಚಿಯೊಂದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದರು.

‘ಒಂದು ಕಾಲದಲ್ಲಿ ಇಡೀ ದೇಶದಲ್ಲಿ ಎಲೆ ಎತ್ತಿ ನಿಂತಿದ್ದ, ದೇಶದ ಬೊಕ್ಕಸಕ್ಕೆ ಅಪಾರ ಕೊಡುಗೆ ನೀಡುತ್ತಿರುವ ರಾಜ್ಯವು ಈಗ ಒಂದು ರೀತಿಯ ಸಂಕಟದ ಸ್ಥಿತಿಯಲ್ಲಿ ನಿಂತುಬಿಟ್ಟಿದೆ. ಈ ಆರ್ಥಿಕ ಸ್ಥಿತಿಯಿಂದ ರಾಜ್ಯವನ್ನು ಮೇಲೆತ್ತುವುದು ಸರ್ಕಾರದ ಆದ್ಯತೆಯಾಗಲಿದೆ’ ಎಂದರು.

ಸಂತರು, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ಕವಿಗಳು ಮುಂತಾದವರಿಂದ ಪ್ರೇರಿತವಾಗಿ ಜನಕೇಂದ್ರಿತ ಆರ್ಥಿಕತೆ, ಜನಕೇಂದ್ರಿತ ಸಾಂಸ್ಕೃತಿಕತೆ ಮತ್ತು ಸಮಷ್ಟಿ ಕೇಂದ್ರಿತ ಅಭಿವೃದ್ಧಿ ಮಾದರಿಗಳನ್ನು ರೂಪಿಸಲು ಸರ್ಕಾರ ಉದ್ದೇಶಿಸಿದೆ. ಆ ಮೂಲಕ ದೇಶಕ್ಕೆ ಕರ್ನಾಟಕದ ಮಾದರಿಗಳನ್ನು ನಿರ್ಮಿಸಿ, ಸಾಬೀತುಮಾಡಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಬಡವರು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರ ಪರವಾಗಿ ಸರ್ಕಾರ ನಿಲ್ಲಲಿದೆ. ಎಲ್ಲ ಜಾತಿ, ಧರ್ಮ ಮತ್ತು ಪಂಗಡಗಳ ಜನರು ತಮ್ಮ ನ್ಯಾಯಯುತ ಪಾಲನ್ನು ಪಡೆಯುವಂತೆ ಮಾಡುವುದು ಈ ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ಜನಕೇಂದ್ರಿತ ಆರ್ಥಿಕತೆಗಾಗಿ ಕಡಿಮೆ ಜಾಗದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಜಿಸಬೇಕು. ಉತ್ಪಾದನೆ, ವಿತರಣೆ ಮತ್ತು ಮಾರುಕಟ್ಟೆ ವ್ಯವಸ್ಥೆಯಲ್ಲಿ ನೆರೆಯ ರಾಜ್ಯಗಳಷ್ಟೇ ಅಲ್ಲದೆ ದೂರದ ಚೀನಾ ದೇಶದ ಜತೆಗೂ ಸ್ಪರ್ಧೆಗೆ ಸಿದ್ಧವಾಗಬೇಕು. ಅದಕ್ಕೆ ಪೂರಕವಾದ ಯೋಜನೆ ರೂಪಿಸಲಾಗುವುದು ಎಂದರು.

ಜನಕೇಂದ್ರಿತ ಆರ್ಥಿಕತೆಗೆ ಪೂರಕವಾದ ಯೋಜನೆಗಳನ್ನು ರೂಪಿಸಿ, ಬೆಲೆ ಏರಿಕೆ ಮತ್ತು ಕಡಿಮೆ ಆದಾಯದಿಂದ ತತ್ತರಿಸಿರುವ ಜನರಿಗೆ ಘನತೆಯನ್ನು ತಂದುಕೊಡುವ ಪ್ರಯತ್ನ ಮಾಡಲಾಗುವುದು. ಆ ಮೂಲಕ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ತಗ್ಗಿಸುವ ಕೆಲಸ ಮಾಡಲಾಗುವುದು ಎಂದು ರಾಜ್ಯಪಾಲರು ತಿಳಿಸಿದರು.

ಕಳೆದ 34 ವರ್ಷಗಳಲ್ಲಿ ಯಾರಿಗೂ ನೀಡದಂತಹ ಬಹುಮತವನ್ನು ಜನರು ಈ ಸರ್ಕಾರಕ್ಕೆ ನೀಡಿದ್ದಾರೆ. ಜನರು ಮಹತ್ತರವಾದುದನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದು ಈ ತೀರ್ಪಿನ ಹಿಂದಿದೆ. ಅವರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಬಸವಣ್ಣನರ ದೀಕ್ಷಾ ವಾಕ್ಯವಾದ ‘ನುಡಿದಂತೆ ನಡೆಯಬೇಕು’ ಎಂಬುದನ್ನು ಈ ಸರ್ಕಾರ ಕರ್ತವ್ಯ ಗೀತೆಯಾಗಿ ಅಳವಡಿಸಿಕೊಂಡಿದೆ ಎಂದು ಹೇಳಿದರು.

ಶಿಕ್ಷಣದಲ್ಲಿ ಸುಧಾರಣೆ: ಶಿಕ್ಷಣದಲ್ಲಿ ಸಮಗ್ರ ಸುಧಾರಣೆ ತರುವ ಗುರಿಯನ್ನು ಸರ್ಕಾರ ಹೊಂದಿದೆ. ಕೈ, ಕಾಲುಗಳ ಮೂಲಕ ಕೌಶಲವನ್ನು, ಮಿದುಳು, ಹೃದಯದ ಮೂಲಕ ಬುದ್ಧಿ– ಕರುಣೆಗಳು ಸೇರಿದ ಸಮಗ್ರ ಶಿಕ್ಷಣವನ್ನು ರೂಪಿಸಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸಾಮರಸ್ಯದ ವಾತಾವರಣದಲ್ಲಿ ಕಲಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದರು.

‘ಗ್ಯಾರಂಟಿಗಳ ಮೂಲಕ ಕೈಲಾಸ’: ‘ಅನ್ನವನ್ನು ನೀಡುವುದು ನನ್ನಿಯನು ನುಡಿಯುವುದು ತನ್ನಂತೆ ಪರರ ಬಗೆದೊಡೆ ಕೈಲಾಸ ಭಿನ್ನಾಣವಕ್ಕು ಎಂದು ಕವಿ ಸರ್ವಜ್ಞ ಹೇಳಿದ್ದಾರೆ. ನಮ್ಮ ಸರ್ಕಾರವು ಗ್ಯಾರಂಟಿಗಳ ಮೂಲಕವೂ ಇದನ್ನೇ ಸಾಧಿಸಲು ಹೊರಟಿದೆ’ ಎಂದು ಗೆಹಲೋತ್‌ ಹೇಳಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರಯತ್ನ ಮಾಡಲಾಗುವುದು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಆರೋಗ್ಯ, ಶಿಕ್ಷಣ ಮತ್ತು ಅಗತ್ಯ ಸೇವೆಗಳನ್ನು ಒದಗಿಸಲು ವಿಶೇಷ ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

‘ದ್ವೇಷರಹಿತ, ಪ್ರೀತಿಯುಕ್ತ ಕರ್ನಾಟಕ’

‘ಸಂಕುಚಿತವಾದಿ ಮನಸ್ಸುಗಳು ಗಂಡು– ಹೆಣ್ಣುಗಳ ಮಧ್ಯೆ ಹಾಗೂ ಸಮಾಜದ ವಿವಿಧ ಸಮುದಾಯಗಳ ಮಧ್ಯೆ ತಾರತಮ್ಯ, ಒಡಕು ಸೃಷ್ಟಿಸಿದ್ದವು. ದ್ವೇಷರಹಿತ, ಪ್ರೀತಿಯುಕ್ತ ಸಮಾಜ ನಿರ್ಮಾಣ ಮಾಡಲು ಈ ಸರ್ಕಾರ ಕ್ರಮ ಕೈಗೊಳ್ಳಲಿದೆ’ ಎಂದು ರಾಜ್ಯಪಾಲ ಗೆಹಲೋತ್‌ ಹೇಳಿದರು.

‘ಪರರ ವಿಚಾರ ಮತ್ತು ಪರ ಧರ್ಮವನ್ನು ಗೌರವಿಸುವುದೇ ಬಂಗಾರದ ಒಡವೆ ಇದ್ದಂತೆ ಕವಿ ಶ್ರೀವಿಜಯ ಕನ್ನಡದ ಮೊದಲ ಲಭ್ಯ ಕೃತಿ ‘ಕವಿರಾಜಮಾರ್ಗ’ದಲ್ಲಿ ಹೇಳಿದ್ದರು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಕವಿ ಪಂಪ ಹೇಳಿದ್ದರು. ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ರಾಷ್ಟ್ರಕವಿ ಕುವೆಂಪು ಬಣ್ಣಿಸಿದ್ದರು. ರಾಜ್ಯದ ಜನರು ಅದಕ್ಕೆ ಪೂರಕವಾದ ಆಡಳಿತವನ್ನೇ ಈ ಸರ್ಕಾರದಿಂದ ಬಯಸಿದ್ದಾರೆ’ ಎಂದರು.

‘ನಾವು ಏನು ಮಾಡಬೇಕೆಂಬ ನೀಲಿನಕಾಶೆ ನಮ್ಮ ಮುಂದೆ ಇದೆ. ಇಚ್ಛಾಶಕ್ತಿಯೂ ಇದೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಲು ಬದ್ಧರಾಗಿದ್ದೇವೆ. ಯಾರನ್ನೂ ಹೊರಗೆ ಇಡದೆ ಎಲ್ಲರನ್ನೂ ಒಳಗೊಂಡು ‘ಇವ ನಮ್ಮವ’ ಎಂದು ಕೂಡಿ ಬಾಳುವ ನಮ್ಮ ಹಿರಿಯರ ಕನಸನ್ನು ನನಸು ಮಾಡಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

‘ಕೃತಕ ಬುದ್ಧಿಮತ್ತೆಗೆ ಕಡಿವಾಣ‘

‘ಕೃತಕ ಬುದ್ಧಿಮತ್ತೆಯು ಹೊಸ ಅವಕಾಶಗಳ ಜತೆಯಲ್ಲೇ ಭಯದ ವಾತಾವರಣವನ್ನೂ ಸೃಷ್ಟಿಸುತ್ತಿದೆ. ಈ ತಂತ್ರಜ್ಞಾನವನ್ನು ಮನುಕುಲದ ಒಳಿತಿಗಾಗಿ ಮಾತ್ರ ಬಳಸಬೇಕು. ದುರುಪಯೋಗಪಡಿಸಿಕೊಳ್ಳದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ರಾಜ್ಯಪಾಲರು ಘೋಷಿಸಿದರು.

ಹಿಂದಿಯಲ್ಲಿ ಅರ್ಧ ಗಂಟೆ ಭಾಷಣ

ಮಧ್ಯಾಹ್ನ 11.55ಕ್ಕೆ  ವಿಧಾನಸಭೆಗೆ ಬಂದ ರಾಜ್ಯಪಾಲರನ್ನು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ ಸ್ವಾಗತಿಸಿದರು. 12 ಗಂಟೆಗೆ ಹಿಂದಿಯಲ್ಲಿ ತಮ್ಮ ಭಾಷಣ ಆರಂಭಿಸಿದ ರಾಜ್ಯಪಾಲರು 12.30ಕ್ಕೆ ಮುಗಿಸಿದರು. 

ಪ್ರಮುಖ ಘೋಷಣೆಗಳು:

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಜಮೀನುಗಳ ರಕ್ಷಣೆಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂ ಪರಭಾರೆ ನಿಷೇಧ (ಪಿಟಿಸಿಎಲ್‌) ಕಾಯ್ದೆಗೆ ತಿದ್ದುಪಡಿ.

* ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳನ್ನು ಸಮಾನ ದೃಷ್ಟಿಯಲ್ಲಿ ಪರಿಗಣಿಸುವುದು.

* ಬಡತನ ರೇಖೆಗಿಂತ ಕೆಳಗಿರುವ ಎಲ್ಲ ಕುಟುಂಬಗಳಿಗೂ ಐದು ವರ್ಷದೊಳಗೆ ಪಕ್ಕಾ ಮನೆ ನಿರ್ಮಾಣ.

* 2013–2018ರ ಅವಧಿಯ ಕಾಂಗ್ರೆಸ್‌ ಸರ್ಕಾರದಲ್ಲಿ ಜಾರಿಯಾಗಿದ್ದ ಪಶು ಭಾಗ್ಯ, ಅನುಗ್ರಹ ಯೋಜನೆಗಳ ಮರು ಜಾರಿ.

* ಅಲೆಮಾರಿ ಕುರಿಗಾರರ ಹಿತರಕ್ಷಣೆಗೆ ಕಾಯ್ದೆ.

* ಬಾಕಿ ಇರುವ ಎಲ್ಲ ನೀರಾವರಿ ಯೋಜನೆಗಳನ್ನು ಐದು ವರ್ಷದೊಳಗೆ ಪೂರ್ಣಗೊಳಿಸುವುದು.

* ಪ್ರವಾಸೋದ್ಯಮ ಕ್ಷೇತ್ರದಲ್ಲಿ ಐದು ಲಕ್ಷ ಉದ್ಯೋಗ ಸೃಷ್ಟಿ.

* ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT