ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌ಡಿಕೆಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು: ಡಿ.ಕೆ. ಶಿವಕುಮಾರ್

Published : 10 ಆಗಸ್ಟ್ 2024, 13:15 IST
Last Updated : 10 ಆಗಸ್ಟ್ 2024, 13:15 IST
ಫಾಲೋ ಮಾಡಿ
Comments

ಕನಕಪುರ: ‘ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ನೀಡುತ್ತಿರುವ ಹೇಳಿಕೆ ನೋಡುತ್ತಿದ್ದರೆ, ಅವರಿಗೆ ಆದಷ್ಟು ಬೇಗ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಕನಕಪುರದಲ್ಲಿ ಶನಿವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ, ‘ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಸಾವಿಗೆ ಕಾರಣ ಯಾರು?’ ಎಂದು ಎಚ್‌ಡಿಕೆ ಮಾಡಿರುವ ಆರೋಪ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ನಾನು ಅವರ ತಂದೆ ವಿರುದ್ಧ 1985ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೆ. ಬಂಗಾರಪ್ಪನವರ ಸಂಪುಟದಲ್ಲಿ ಸಚಿವನಾಗಿದ್ದೆ. ನನ್ನ ಹಾಗೂ ಎಸ್.ಎಂ. ಕೃಷ್ಣ ಅವರ ನಡುವಣ ಸಂಬಂಧ ಕುರಿತು ಕುಮಾರಸ್ವಾಮಿಗೆ ಏನು ಗೊತ್ತಿದೆ? ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಅವರ ಪಕ್ಷದವರಿಗೆ, ನಾಯಕರಿಗೆ, ಹಿತೈಷಿಗಳಿಗೆ ಹೇಳೋಣ’ ಎಂದು ಕಿಡಿಕಾರಿದರು.

‘ನಾನು ಬಡವರ ಆಸ್ತಿ ಲೂಟಿ ಮಾಡಿದ್ದೇನೆ ಎನ್ನುವ ಕುಮಾರಸ್ವಾಮಿ, ಅವರನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಲಿ. ಬಡವರಿಗೆ ತೊಂದರೆ ನೀಡಿ ಆಸ್ತಿ ಕಿತ್ತುಕೊಳ್ಳುವುದು ನಮ್ಮ ಜಾಯಮಾನದಲ್ಲಿಲ್ಲ. ಕುಮಾರಸ್ವಾಮಿ ಬಗ್ಗೆ ಯೋಗೇಶ್ವರ್ ಅವರೇ ಈಗಾಗಲೇ ಮಾಹಿತಿ ನೀಡಿದ್ದಾರೆ. ಅವರ ಬಗ್ಗೆ ಯೋಗೇಶ್ವರ್ ಉತ್ತರ ನೀಡುತ್ತಾರೆ’ ಎಂದು ತಿರುಗೇಟು ನೀಡಿದರು.

‘ನಾವು ಬಡವರು. ಹೊಲ ಉಳುಮೆ ಮಾಡಿಕೊಂಡಿದ್ದೆವು. ನಾನು ಬೆಂಗಳೂರಿನ ಎನ್‌ಪಿಎಸ್ ಶಾಲೆಯಲ್ಲಿ ಓದಿದವನು. ನನ್ನ ಇತಿಹಾಸ ಅಲ್ಲಿಂದ ಶುರುವಾಗಿದೆ. ನನ್ನನ್ನು ಜೈಲಿಗೆ ಹಾಕಲು ಮೊದಲಿಂದಲೂ ದೊಡ್ಡ ಸಂಚು ನಡೆದುಕೊಂಡು ಬಂದಿದೆ. ಈಗಲೂ ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ 10 ತಿಂಗಳಲ್ಲಿ ಸರ್ಕಾರ ತೆಗೆಯುವುದಾಗಿ ಹೇಳಿದ್ದಾರೆ’ ಎಂದರು.

‘ಶಿವಕುಮಾರ್ ನನ್ನ ಮೇಲೆ ಕಲ್ಲು ಬಂಡೆ ಎತ್ತಿ ಹಾಕಿದ್ದಾರೆ’ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, ‘ನಾನು ಯಾವ ರೀತಿ ಅವರ ಮೇಲೆ ಬಂಡೆ ಹಾಕಿದ್ದೇನೆ ಎಂದು ಅವರು ಮತ್ತು ಅವರ ಪಕ್ಷದ ನಾಯಕರು ಹೇಳಲಿ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅವರಿಗೆ ಚಿಕಿತ್ಸೆ ಕೊಡಿಸುವುದು ಉತ್ತಮ’ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಮೇಲೆ ಕಣ್ಣಾಕಿದರೆ ಸರ್ವನಾಶವಾಗುತ್ತಾರೆ ಎಂಬ ಎಚ್‌ಡಿಕೆ ಹೇಳಿಕೆಗೆ, ‘ನಮ್ಮ ಮೇಲೆ ಕಣ್ಣಾಕಿದರೂ ಅದೇ ಸಮಸ್ಯೆ ಆಗುತ್ತದೆಯಲ್ಲವೇ’ ಎಂದು ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT