ಮಂಡ್ಯ: ‘ಸಿಎಂ ಪ್ರಾಸಿಕ್ಯೂಶನ್ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ನನ್ನ ನೈತಿಕತೆ ಏನು ಅನ್ನೋದು ಸಾಬೀತಾಗಲಿ. ಯಾವುದೇ ತೀರ್ಮಾನ ಆಗದೇ ಇದ್ದರೂ ನನ್ನನ್ನು ಒಂದು ಪ್ರಕರಣದಲ್ಲಿ ಆರೋಪಿ ಮಾಡುತ್ತಿದ್ದಾರೆ. ನನ್ನ ಮೇಲಿನ ಆರೋಪ ಎಲ್ಲಾ ಮುಗಿಯಲಿ, ನಂತರ ಮಾತನಾಡುತ್ತೇನೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಮೈಸೂರು ಪಾದಯಾತ್ರೆಗೆ ನಾನೂ ಹೋಗಿದ್ದೆ, ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಎಂದು ನಾನು ಒತ್ತಾಯ ಮಾಡುವುದಿಲ್ಲ. ದೇಶದ ಕಾನೂನಿನಲ್ಲಿ ರಕ್ಷಣೆ ಪಡೆಯಲು ಎಲ್ಲರಿಗೂ ಅವಕಾಶ ಇದೆ. ಕಾನೂನು ಬಾಹಿರ ಚಟುವಟಿಕೆ ಮಾಡಿದ್ದರೆ, ನ್ಯಾಯಾಲಯ ತೀರ್ಪು ಕೊಡುತ್ತದೆ’ ಎಂದರು.
ಬೀಡಾಡಿ ಮಂತ್ರಿಗಳು
ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಅನುಮಾನ ಇದೆ. ಕುಮಾರಸ್ವಾಮಿ ಕೇಂದ್ರ ಸಚಿವನಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಜನರ ನಡುವೆ ಕಂದಕ ಸೃಷ್ಟಿ ಮಾಡಲು ಹೀಗೆ ಮಾಡುತ್ತಿದ್ದಾರೆ. ನಾಲ್ಕೈದು ಮಂದಿ ಬೀಡಾಡಿ ಮಂತ್ರಿಗಳು ನನ್ನ ಮೇಲೆ ಆರೋಪ ಮಾಡಿದ್ದಾರೆ. ಅವರಿಗೆ ನಾನು ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ರಾಜೀನಾಮೆ ನೀಡಲಿ
ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಸತ್ಯ ಎತ್ತಿ ಹಿಡಿಯುವ ಕೆಲಸವಾಗಿದೆ. ಪಾರದರ್ಶಕ ತನಿಖೆ ನಡೆಯಲಿ. ಹೈಕೋರ್ಟ್ ಆದೇಶ ಸ್ವಾಗತಿಸಿಸುತ್ತೇವೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು. ರಾಜ್ಯದ ಎಲ್ಲಾ ಜನರಿಗೂ ಮುಡಾ ಹಗರಣದ ಬಗ್ಗೆ ಗೊತ್ತಿದೆ. ಸಿಎಂ ಅವರ ಕೈವಾಡ, ಅಧಿಕಾರ ದುರ್ಬಳಕೆ ಸ್ಪಷ್ಟವಾಗಿದೆ. ಸಿದ್ದರಾಮಯ್ಯ ರಾಜೀನಾಮೆಗೆ ಜನರು ಆಗ್ರಹಿಸುತ್ತಿದ್ದಾರೆ’ ಎಂದು ತಿಳಿಸಿದರು.