ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆಯಲ್ಲಿ ‍‍ಪ್ರಜ್ವಲ್ ರೇವಣ್ಣ ಗೆದ್ದರೆ ಸಂಸದ ಸ್ಥಾನ ಅಬಾಧಿತವೇ?

Published 25 ಮೇ 2024, 0:04 IST
Last Updated 25 ಮೇ 2024, 0:04 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಪಹರಣ ಆರೋಪದಡಿ ಹಲವು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ಹಾಸನದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಈ ಚುನಾವಣೆಯಲ್ಲಿ ಗೆದ್ದರೆ ಸಂಸದ ಸ್ಥಾನ ಅಬಾಧಿತವಾಗಿ ಮುಂದುವರಿಯಲಿದೆ.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸಿದ್ದರು. ಏಪ್ರಿಲ್‌ 26ರಂದು ಮತದಾನ ನಡೆದಿತ್ತು. ಜೂನ್‌ 4ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆಯೇ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ತುಣುಕುಗಳು ಬಹಿರಂಗಗೊಳ್ಳುತ್ತಿದ್ದಂತೆಯೇ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್‌, ಅಲ್ಲಿಯೇ ತಲೆಮರೆಸಿಕೊಂಡಿದ್ದಾರೆ.

ಆರೋಪಿಯು ದೇಶಕ್ಕೆ ಬಂದಿಳಿಯುತ್ತಿದ್ದಂತೆಯೇ ಬಂಧಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಸಜ್ಜಾಗಿ ಕುಳಿತಿದೆ. ಪ್ರಜ್ವಲ್‌ ಬಂಧನವಾದರೆ ಚುನಾವಣಾ ಫಲಿತಾಂಶದ ನಂತರ ನಡೆಯಬಹುದಾದ ಬೆಳವಣಿಗೆಗಳ ಕುರಿತು ಜನರಲ್ಲಿ ತೀವ್ರ ಕುತೂಹಲವಿದೆ. ಗೆದ್ದರೆ ಸಂಸದ ಸ್ಥಾನ ಉಳಿಯುವುದೆ? ಬಂಧನದಲ್ಲಿದ್ದು ಪ್ರಮಾಣವಚನ ಸ್ವೀಕರಿಸಲು ಅವಕಾಶವಿದೆಯೆ ಎಂಬ ಪ್ರಶ್ನೆಗಳ ಸುತ್ತ ಜೋರಾಗಿ ಚರ್ಚೆ ನಡೆಯುತ್ತಿದೆ.

ಕಾನೂನು ತಜ್ಞರ ಪ್ರಕಾರ, ಪ್ರಜ್ವಲ್‌ ರೇವಣ್ಣ ಮತ್ತೆ ಸಂಸದನಾಗಿ ಆಯ್ಕೆಯಾದರೆ ಪ್ರಮಾಣವಚನ ಸ್ವೀಕರಿಸುವುದು ಮತ್ತು ಸಂಸದ ಹುದ್ದೆಯಲ್ಲಿ ಮುಂದುವರಿಯುವುದಕ್ಕೆ ಕಾನೂನಿನ ಯಾವ ಅಡತಡೆಯೂ ಇಲ್ಲ. ಆರೋಪ ಹೊತ್ತವರನ್ನು ಚುನಾಯಿತ ಪ್ರತಿನಿಧಿಯ ಸ್ಥಾನದಿಂದ ಅನರ್ಹಗೊಳಿಸುವ ಕಾನೂನು ದೇಶದಲ್ಲಿ ಇಲ್ಲದಿರುವುದರಿಂದ ಅಬಾಧಿತವಾಗಿ ಸಂಸದ ಸ್ಥಾನದಲ್ಲಿ ಮುಂದುವರಿಯಬಹುದು.

ಪ್ರಜಾಪ್ರಾತಿನಿಧ್ಯ ಕಾಯ್ದೆ–1951ರ ಅಡಿಯಲ್ಲಿ ಸಂಸತ್‌ ಮತ್ತು ವಿಧಾನಮಂಡಲದ ಚುನಾವಣೆಗಳು ನಡೆಯುತ್ತವೆ. ಈ ಕಾಯ್ದೆಯ ಸೆಕ್ಷನ್‌ 8ರ ಪ್ರಕಾರ, ಸಂಸದ ಅಥವಾ ಶಾಸಕರಾಗಿ ಆಯ್ಕೆಯಾದವರು ಕೆಲವು ನಿರ್ದಿಷ್ಟ ಅಪರಾಧಗಳು ಸಾಬೀತಾಗಿ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ಮಾತ್ರ ಅವರನ್ನು ಅನರ್ಹಗೊಳಿಸಬಹುದು.

ವಿಚಾರಣಾಧೀನ ಅಥವಾ ಸಜಾ ಬಂದಿಯಾಗಿ ಜೈಲಿನಲ್ಲಿರುವವರು ಮತದಾನಕ್ಕೆ ಅರ್ಹರಲ್ಲ ಎಂಬುದು ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್‌ 62 (5)ರಲ್ಲಿದೆ. ಆದರೆ, ಅಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಯಾವ ನಿರ್ಬಂಧವೂ ಇಲ್ಲ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ, ‘ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗುವ ಚುನಾಯಿತ ಪ್ರತಿನಿಧಿಗಳನ್ನು ಮಾತ್ರವೇ ಅನರ್ಹಗೊಳಿಸಲು ನಮ್ಮ ಕಾನೂನಿನಲ್ಲಿ ಅವಕಾಶವಿದೆ. ಪ್ರಜ್ವಲ್‌ ರೇವಣ್ಣ ಮರು ಆಯ್ಕೆಯಾದರೆ ಅದೇ ಹುದ್ದೆಯಲ್ಲಿ ಮುಂದುವರಿಯಬಹುದು’ ಎಂದರು.

‘ಹಲವು ರಾಜಕಾರಣಿಗಳು ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಉದಾಹರಣೆಗಳಿವೆ. ಭ್ರಷ್ಟಾಚಾರ ಆರೋಪದಡಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಜಾಮೀನು ಪಡೆದು ಈ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಅದೇ ಸಾಲಿಗೆ ಪ್ರಜ್ವಲ್‌ ರೇವಣ್ಣ ಪ್ರಕರಣವೂ ಸೇರಬಹುದು’ ಎಂದು ಹೇಳಿದರು.

ಪ್ರಜ್ವಲ್‌ ಪುನರಾಯ್ಕೆ ಆಗಿ, ದೇಶಕ್ಕೆ ಬಂದಿಳಿದ ತಕ್ಷಣ ಬಂಧನವಾದರೆ ಪ್ರಮಾಣವಚನ ಸ್ವೀಕಾರಕ್ಕೂ ಅಡ್ಡಿಗಳಿರುವುದಿಲ್ಲ. ಪ್ರಕರಣದ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ. ನ್ಯಾಯಾಲಯದಿಂದ ಆದೇಶ ಪಡೆದು ಸಂಸತ್ತಿಗೆ ಹೋಗಿ ಪ್ರಮಾಣವಚನ ಸ್ವೀಕರಿಸಬಹುದು. ಅಪರಾಧಿ ಎಂದು ಸಾಬೀತಾಗಿ, ಶಿಕ್ಷೆಯ ಪ್ರಮಾಣ ಪ್ರಕಟವಾಗುವವರೆಗೂ ಸಂಸದ ಸ್ಥಾನಕ್ಕೆ ಯಾವ ತೊಂದರೆಯೂ ಇರದು ಎಂಬುದು ಕಾನೂನು ತಜ್ಞರ ಅಭಿಪ್ರಾಯ.

ಮಾರ್ಚ್‌ ತಿಂಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಆಯ್ಕೆಯಾಗಿದ್ದ ಎಎಪಿಯ ಸಂಜಯ್‌ ಸಿಂಗ್‌ ಅವರು, ನ್ಯಾಯಾಲಯದ ಅನುಮತಿ ಪಡೆದು ರಾಜ್ಯಸಭೆಗೆ ಹಾಜರಾಗಿ ಪ್ರಮಾಣ ಸ್ವೀಕರಿಸಿದ್ದರು.

‘ಪ್ರಜ್ವಲ್‌ ರೇವಣ್ಣ ಸಂಸದನಾಗಿ ಆಯ್ಕೆಯಾದರೆ ಹುದ್ದೆಯಲ್ಲಿ ಮುಂದುವರಿಯಲು ದೇಶದಲ್ಲಿ ಈಗ ಇರುವ ಕಾನೂನಿನಲ್ಲಿ ಅವಕಾಶವಿದೆ. ಆರೋಪಿಯಾದರೂ ಸಂಸದ ಸ್ಥಾನಕ್ಕೆ ಯಾವ ಕುತ್ತೂ ಇಲ್ಲ’ ಎಂದು ರಾಜ್ಯದ ಹಿರಿಯ ವಕೀಲರೊಬ್ಬರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT