ಬೆಂಗಳೂರು: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಿದ್ದರೆ ಭಾರತದಲ್ಲಿ ಕರ್ನಾಟಕಕ್ಕಿಂತ ವಿಶ್ವಾಸಾರ್ಹ ತಾಣ ಮತ್ತೊಂದಿಲ್ಲ. ಇಲ್ಲಿ ಹೂಡಿಕೆ ಸ್ನೇಹಿ ವಾತಾವರಣವಿದ್ದು, ಎಲ್ಲ ಸ್ವರೂಪದ ಪ್ರತಿಭೆಯ ಲಭ್ಯತೆಯೂ ಇದೆ. ಈ ಎಲ್ಲ ಅನುಕೂಲಗಳನ್ನು ಹೂಡಿಕೆದಾರರು ಬಳಸಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.

ಮಾಹಿತಿ ತಂತ್ರಜ್ಞಾನ ಇಲಾಖೆಯು ನಗರದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ಒಟ್ಟು ಮಾಹಿತಿ ತಂತ್ರಜ್ಞಾನ (ಐಟಿ) ರಫ್ತಿನಲ್ಲಿ ಕರ್ನಾಟಕದ ಪಾಲು ಶೇಕಡ 42ರಷ್ಟು ಇದೆ. ಮಾಹಿತಿ ತಂತ್ರಜ್ಞಾನ, ಡೀಪ್ಟೆಕ್ ಮತ್ತು ಬಾಹ್ಯಾಕಾಶ ಸಂಶೋಧನೆಯ ನಡುವಣ ಗೆರೆಗಳು ಈಗ ಮಸುಕಾಗುತ್ತಿವೆ. ಇದಕ್ಕೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ತಂತ್ರಜ್ಞಾನ ನೀತಿಗಳನ್ನು ರೂಪಿಸಿದ್ದೇವೆ’ ಎಂದರು.

‘2030ರ ವೇಳೆಗೆ ಭಾರತದ ಐಟಿ ರಫ್ತು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ರಾಜ್ಯದ ಪಾಲನ್ನು ಶೇ 50ರಷ್ಟಕ್ಕೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದೆ. ಕರ್ನಾಟಕದ ಈ ಪ್ರಗತಿ ಆಕಸ್ಮಿಕವೂ ಅಲ್ಲ, ಕಾಕತಾಳೀಯವೂ ಅಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉತ್ತೇಜನಕ್ಕಾಗಿ ರಾಜ್ಯವು 1998ರಲ್ಲೇ ನೀತಿ ರೂಪಿಸಿತ್ತು. ಆದ್ದರಿಂದಲೇ ಇಂದು ದೇಶದಲ್ಲಿ ಐಟಿ ದಿಗ್ಗಜನಾಗಿ ಬೆಂಗಳೂರು ಮತ್ತು ಕರ್ನಾಟಕವು ನಿಂತಿದೆ’ ಎಂದರು.

‘ರಾಜ್ಯದಲ್ಲಿ 16,000ಕ್ಕೂ ಹೆಚ್ಚು ನವೋದ್ಯಮಗಳು ಇವೆ. ಫಾರ್ಚೂನ್ 500 ಕಂಪನಿಗಳ ಪೈಕಿ 400, ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಕರ್ನಾಟಕದಲ್ಲಿ 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು, 1,800 ಐಟಿಐಗಳು ಇವೆ. ಅಪಾರ ಪ್ರಮಾಣದ ಮತ್ತು ಕೌಶಲಯುಕ್ತ ಮಾನವ ಸಂಪನ್ಮೂಲ ಇಲ್ಲಿನ ಹೆಗ್ಗಳಿಕೆ. ಇದರೊಂದಿಗೆ ಸರ್ಕಾರದ ಸಹಕಾರವೂ ಇದೆ. ಈ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಿ’ ಎಂದು ಕರೆ ನೀಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ 13 ಲಕ್ಷ ಐಟಿ ತಂತ್ರಜ್ಞರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಐಟಿ ತಂತ್ರಜ್ಞರು ಇದ್ದಾರೆ. ಎಲ್ಲ ಹಂತದ ಮತ್ತು ಕೌಶಲಯುಕ್ತ ಪರಿಣಿತರು ಇಲ್ಲಿದ್ದು, ಹೂಡಿಕೆಗೆ ಪೂರಕ ವಾತಾವರಣ ಇದೆ. ನಿಮ್ಮಲ್ಲರ ಸಹಕಾರವನ್ನು ಎದುರು ನೋಡುತ್ತಿದ್ದೇವೆ’ ಎಂದು ಹೂಡಿಕೆದಾರರಿಗೆ ಆಹ್ವಾನ ನೀಡಿದರು.

ಐಟಿ ನೀತಿ ಬಾಹ್ಯಾಕಾಶ ನೀತಿ ಬಿಡುಗಡೆ

ಕರ್ನಾಟಕದಿಂದ ಸಾಫ್ಟ್ವೇರ್ ರಫ್ತನ್ನು 2030ರ ವೇಳೆಗೆ ₹4.09 ಲಕ್ಷ ಕೋಟಿಯಿಂದ ₹11.5 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿರುವ ‘ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030’ಯನ್ನು ಶೃಂಗಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಬೆಂಗಳೂರಿನಾಚೆಗೆ ಮೈಸೂರು ಮಂಗಳೂರು ಹುಬ್ಬಳ್ಳಿ–ಧಾರವಾಡ ಬೆಳಗಾವಿ ತುಮಕೂರು ಕಲಬುರಗಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಇತರ ನೂತನ ತಂತ್ರಜ್ಞಾನಗಳ ಹೂಡಿಕೆಗೆ ಈ ನೀತಿಯು ಆದ್ಯತೆ ನೀಡುತ್ತದೆ. ರಾಜ್ಯದಲ್ಲಿರುವ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಳಸಿಕೊಂಡು ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿ ಪರಿವರ್ತಿಸುವ ಉದ್ದೇಶದ ‘ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025–2030’ಯನ್ನು ಬಿಡುಗಡೆ ಮಾಡಲಾಯಿತು. ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರೀಯ ಮಾರುಕಟ್ಟೆ ಪಾಲಿನ ಶೇ 50ರಷ್ಟನ್ನು ಹೊಂದುವ ಮೂಲಕ ಕರ್ನಾಟಕವನ್ನು ಭಾರತದಲ್ಲಿ ನಂಬರ್ 1 ತಾಣವಾಗಿ ಉಳಿಸಿಕೊಳ್ಳುವುದು ಮತ್ತು ಜಾಗತಿಕ ಮಾರುಕಟ್ಟೆ ಪಾಲಿನ ಶೇ 5ರಷ್ಟನ್ನು ಹೊಂದುವ ಮೂಲಕ ಕರ್ನಾಟಕವನ್ನು ಬಾಹ್ಯಾಕಾಶ ತಂತ್ರಜ್ಞಾನದ ಜಾಗತಿಕ ತಾಣವಾಗಿಸುವುದು ಈ ನೀತಿಯ ಗುರಿ.

‘ಎನ್ಆರ್ಐ ಹೂಡಿಕೆಗೆ ಪ್ರತ್ಯೇಕ ಇಲಾಖೆ’

‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನಿವಾಸಿ ಭಾರತೀಯರು ಹೂಡಿಕೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಅವರ ಹೂಡಿಕೆಗೆ ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶದಿಂದ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ‘ಅನಿವಾಸಿ ಭಾರತೀಯರು ಆಸಕ್ತಿ ಹೊಂದಿದ್ದರೂ ಹೇಗೆ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಹೊಂದಿರುವುದಿಲ್ಲ. ಅಲ್ಲದೆ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂಬುದೂ ಸ್ಪಷ್ಟವಾಗಿರುವುದಿಲ್ಲ. ಈ ಬಗ್ಗೆ ಹಲವು ಮಂದಿ ನನ್ನ ಗಮನ ಸೆಳೆದಿದ್ದಾರೆ. ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ್ದು ಪ್ರತ್ಯೇಕ ಇಲಾಖೆ ಸ್ಥಾಪಿಸಲಾಗುತ್ತದೆ’ ಎಂದು ವಿವರಿಸಿದ್ದರು.

‘200 ಎಕರೆಯಲ್ಲಿ ಸೆಮಿಕಂಡಕ್ಟರ್ ಪಾರ್ಕ್’

‘ದಾಬಸ್ಪೇಟೆ ಸಮೀಪ ರೂಪಿಸಲಾಗುತ್ತಿರುವ ಕ್ವಿನ್ ಸಿಟಿಯ ವ್ಯಾಪ್ತಿಯಲ್ಲಿ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸಲಾಗುತ್ತದೆ. 200 ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಸ್ಥಾಪನೆಗೆ ರೂಪುರೇಷೆ ಸಿದ್ಧವಾಗಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ‘ರಾಜ್ಯದ ಇತರೆಡೆ ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು ಸಿದ್ಧವಾಗುತ್ತಿವೆ. ಕ್ವಿನ್ ಸಿಟಿಯಲ್ಲಿ ಸ್ಥಾಪಿಸಲಾಗುವ ಪಾರ್ಕ್ ಸೆಮಿಕಂಡಕ್ಟರ್ ತಯಾರಿಕೆಗೆ ಬೇಕಾಗುವ ಎಲ್ಲ ಸವಲತ್ತುಗಳನ್ನೂ ಹೊಂದಿರಲಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸೆಮಿಕಂಡಕ್ಟರ್ ಜೋಡಣೆ ಮತ್ತು ತಯಾರಿಕೆಗೆ ಅಗತ್ಯವಾದ ಎಲ್ಲ ಸವಲತ್ತುಗಳನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ತಂತ್ರಜ್ಞಾನ ಕ್ಷೇತ್ರದ ಬಂಡವಾಳ ಆಕರ್ಷಣೆಗೆ ‘ಇಂಡಸ್ಟ್ರಿ 5.0’ ಕಾರ್ಯನೀತಿಯನ್ನು ರೂಪಿಸಲಾಗಿದೆ. ಸಂಬಂಧಿತ ಎಲ್ಲ ಇಲಾಖೆಗಳೂ ಇದಕ್ಕೆ ಪೂರಕವಾಗಿ ಕೆಲಸ ಮಾಡಲಿವೆ’ ಎಂದರು.

‘ನವೋದ್ಯಮಕ್ಕೆ ₹1100 ಕೋಟಿ ನಿಧಿ’

‘ನವೋದ್ಯಮಗಳ ಉತ್ತೇಜನಕ್ಕೆ ₹1100 ಕೋಟಿ ಮೊತ್ತದ ನಿಧಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು. ನವೋದ್ಯಮಗಳ ಕುರಿತಾದ ಗೋಷ್ಠಿಯಲ್ಲಿ ಉದ್ಯಮಿಗಳಾದ ಕಿರಣ್ ಮಜುಂದಾರ್ ಷಾ ಕ್ರಿಸ್ ಗೋಪಾಲಕೃಷ್ಣನ್ ಅವರ ಜತೆಗೆ ವೇದಿಕೆ ಹಂಚಿಕೊಂಡಿದ್ದ ಅವರು ‘ಈ ನಿಧಿ ಸ್ಥಾಪನೆಗೆ ಹೂಡಿಕೆದಾರರ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಕರ್ನಾಟಕ ಸರ್ಕಾರವು ₹670 ಕೋಟಿ ಮಾಡಲಿದೆ. ಹೂಡಿಕೆದಾರರು ₹430 ಕೋಟಿ ಒದಗಿಸಲಿದ್ದಾರೆ’ ಎಂದರು. ‘ನವೋದ್ಯಮ ಉತ್ತೇಜನದ ಭಾಗವಾಗಿ ನಡೆಯಲಿರುವ ಸಮ್ಮೇಳನದಲ್ಲಿ 143 ನವೋದ್ಯಮಗಳಿಗ ಈ ನಿಧಿಯನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ನವೋದ್ಯಮಕ್ಕೆ ಕನಿಷ್ಠ ₹2 ಕೋಟಿಯಿಂದ ಗರಿಷ್ಠ ₹45 ಕೋಟಿಯವರೆಗೆ ಸಹಾಯಾನುದಾನ ಒದಗಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.