ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆ ಭಾಗ್ಯ ಯೋಜನೆ: ಕಾರ್ಮಿಕರ ಮಕ್ಕಳ ಸಹಾಯಧನಕ್ಕೆ ಕತ್ತರಿ

Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಹುಬ್ಬಳ್ಳಿ/ಚಿಕ್ಕಮಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ‘ಕಲಿಕೆ ಭಾಗ್ಯ’ ಯೋಜನೆಯಡಿ ನೀಡುತ್ತಿದ್ದ ಶೈಕ್ಷಣಿಕ ಸಹಾಯಧನ ಮೊತ್ತವನ್ನು ರಾಜ್ಯ ಸರ್ಕಾರ ಭಾರಿ ಪ್ರಮಾಣದಲ್ಲಿ ಕಡಿತ ಮಾಡಿದೆ.

ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಕನಿಷ್ಠ ₹5 ಸಾವಿರದಿಂದ ಗರಿಷ್ಠ ₹60 ಸಾವಿರ ತನಕ ಸಹಾಯಧನ ನೀಡಲಾಗುತ್ತಿತ್ತು. ಈ ಮೊತ್ತವನ್ನು ಈಗ ಕನಿಷ್ಠ ₹1,100 ಮತ್ತು ಗರಿಷ್ಠ ₹11 ಸಾವಿರಕ್ಕೆ ಇಳಿಕೆ ಮಾಡಿ ಕಾರ್ಮಿಕ ಇಲಾಖೆ ಅ.30ರಂದು ಆದೇಶ ಹೊರಡಿಸಿದೆ.

ಅಪಾಯಕಾರಿ, ಅಸುರಕ್ಷಿತ ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಕಟ್ಟಡ ಕಾರ್ಮಿಕ ಕಾನೂನು (1996), ಸೆಸ್ ಕಾನೂನು ಜಾರಿಗೆ ಬಂದಿದೆ. ಈ ಕಾನೂನು ಜಾರಿಯಾಗಿ 10 ವರ್ಷಗಳ ಬಳಿಕ (2006ರಲ್ಲಿ) ಕರ್ನಾಟಕದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ ಸ್ಥಾಪನೆಯಾಗಿದೆ. ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರಿಗೆ ಸವಲತ್ತು ನೀಡಲಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಸೆಸ್ ಸಂಗ್ರಹ ಹೆಚ್ಚಾಗುತ್ತಿದ್ದು, ಸದ್ಯ ₹10,263 ಕೋಟಿಗೂ ಹೆಚ್ಚು ಮೊತ್ತ ನಿಧಿಯಲ್ಲಿ ಇದೆ. ಈ ಪೈಕಿ ₹3,559 ಕೋಟಿಯನ್ನು ವಿವಿಧ ಯೋಜನೆಗಳ ಅಡಿ ಫಲಾನುಭವಿಗಳಿಗೆ ತಲುಪಿಸಲು ಕಾರ್ಮಿಕ ಇಲಾಖೆ ಉದ್ದೇಶಿಸಿದೆ. ಇನ್ನೂ ₹6,700 ಕೋಟಿಗೂ ಅಧಿಕ ಮೊತ್ತ ನಿಧಿಯಲ್ಲಿ ಉಳಿಯಲಿದೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ನೋಂದಣಿ ಕೂಡ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಕಾರ್ಮಿಕರಲ್ಲದವರೂ ನೋಂದಣಿ ಮಾಡಿಸಿದ್ದಾರೆ ಎಂಬ ಆರೋಪ ಇದೆ. ಇದನ್ನು ತಡೆಯಲು ವೇತನ ಚೀಟಿ ಅಥವಾ ಹಾಜರಾತಿ ಪಟ್ಟಿ ಸಲ್ಲಿಸುವುದು ಕಡ್ಡಾಯ ಎಂಬ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ. ಕಟ್ಟಡ ಕಾರ್ಮಿಕರು ವೇತನ ಚೀಟಿ ಎಲ್ಲಿಂದ ತರಬೇಕು ಎಂಬುದು ಕಾರ್ಮಿಕರ ಪ್ರಶ್ನೆ. ಈ ನಡುವೆ ಈಗ ‘ಕಲಿಕೆ ಭಾಗ್ಯ’ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸಹಾಯಧನ ಕಡಿಮೆ ಮಾಡಲಾಗಿದೆ. ಕಾರ್ಮಿಕ ನಿಧಿಯ ಮೊತ್ತವನ್ನು ಸಾಮಗ್ರಿ ಖರೀದಿಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲು ಕಾರ್ಮಿಕ ಮಂಡಳಿ ಹೊರಟಿದೆ ಎಂಬುದು ಕಟ್ಟಡ ಕಾರ್ಮಿಕ ಸಂಘಟನೆಗಳ ಅಸಮಾಧಾನ.

‘10 ಸಾವಿರ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ಅದಕ್ಕೆ ₹30 ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಹಿಂದಿನ ಸರ್ಕಾರದಲ್ಲೂ ಖರೀದಿಗೆ ಹೆಚ್ಚಿನ ಮೊತ್ತ ಖರ್ಚು ಮಾಡಲಾಗಿದೆ. ವಿದ್ಯಾರ್ಥಿ ಗಳಿಗೆ ಸಹಾಯಧನ ನೀಡಿದರೆ ಹೆಚ್ಚು ಅನುಕೂಲವೇ ಹೊರತು ಸಲಕರಣೆ ನೀಡುವುದರಿಂದ ಏನೂ ಪ್ರಯೋಜನ ಇಲ್ಲ’ ಎಂಬುದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಅಭಿಪ್ರಾಯ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ.

ಅರ್ಜಿಗಳ ಮಹಾಪೂರ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾಗುವ ಶೈಕ್ಷಣಿಕ ಸಹಾಯಧನ ಕೋರಿ 11 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಕಾರ್ಮಿಕ ಇಲಾಖೆಗೆ ಸಲ್ಲಿಕೆಯಾಗಿವೆ.

‘ಕೋವಿಡ್‌ ದಿನಗಳಿಗೂ ಮೊದಲು ಸಹಾಯಧನ ಕೋರಿ 3 ಲಕ್ಷ ಅರ್ಜಿ ಸಲ್ಲಿಕೆ ಆಗುತ್ತಿದ್ದವು. ಕೋವಿಡ್‌ ಸಮಯದಲ್ಲಿ ಕಾರ್ಮಿಕರಿಗೆ ಆರ್ಥಿಕ ನೆರವಿನ ಜೊತೆಗೆ ಜೀವನಾವಶ್ಯಕ ವಸ್ತುಗಳನ್ನು ಪೂರೈಸಿದೆವು. ಅದರಿಂದಾಗಿ ಕಾರ್ಮಿಕ ಕಾರ್ಡ್‌ ಪಡೆಯುವವರ ಸಂಖ್ಯೆ ಏರಿಕೆಯಾಗಿ ಈಗ 45 ಲಕ್ಷಕ್ಕೆ ತಲುಪಿದೆ. ಇದರಲ್ಲಿ ಕೆಲವರು ಕಾರ್ಮಿಕ ರಲ್ಲದವರೂ ಸೇರಿಕೊಂಡಿದ್ದಾರೆ’ ಎಂದು ಕಾರ್ಮಿಕ ಕಲ್ಯಾಣ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾರ್ಮಿಕ ಕಾರ್ಡ್‌ಗಾಗಿ ಮತ್ತೆ ಹೊಸದಾಗಿ 14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಸೂಕ್ತ ದಾಖಲೆ ಪತ್ರಗಳುಳ್ಳ 7 ಲಕ್ಷ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ’ ಎಂದರು.

₹500 ಕೋಟಿ ಬಜೆಟ್‌: ‘ಮಂಡಳಿಯ ಬಜೆಟ್‌ ₹500 ಕೋಟಿ ಇದೆ. ಶೈಕ್ಷಣಿಕ ಸಹಾಯಧನ ಕೋರಿ ಮೊದಲೆಲ್ಲ 3 ಲಕ್ಷದವರೆಗೆ ಅರ್ಜಿ ಸಲ್ಲಿಕೆ ಆಗುತ್ತಿದ್ದವು. ಹೆಚ್ಚಿನ ಜನರಿಗೆ ನೆರವಾಗಲು ಸಾಧ್ಯವಾಗುತಿತ್ತು. ಆದರೆ, ಈಗ 11 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿರುವ ಕಾರಣ ಅನಿವಾರ್ಯವಾಗಿ ಸಹಾಯಧನದ ಪ್ರಮಾಣ ಕಡಿತಗೊಳಿಸಲಾಗಿದೆ’ ಎಂದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಭಾರತಿ ಹೇಳಿದರು.

‘ಪಿಂಚಣಿ, ಮದುವೆ ಸಹಾಯಧನ, ಸಾವಿಗೆ ಪರಿಹಾರ, ಆಸ್ಪತ್ರೆ ವೆಚ್ಚ ಸೇರಿ ಇತರ ಸೌಲಭ್ಯಗಳನ್ನೂ ಕಾರ್ಮಿಕರಿಗೆ ನೀಡಬೇಕಿದೆ. ಲಭ್ಯವಿರುವ ಹಣದಲ್ಲೇ ಎಲ್ಲವನ್ನೂ ಸರಿದೂಗಿಸಬೇಕಾದ ಅನಿವಾರ್ಯ ಇದೆ’ ಎಂದರು.

ಆದೇಶ ವಾಪಸ್ ಪಡೆಯಲು ಒತ್ತಾಯ

‘ಸಹಾಯಧನ ಕಡಿಮೆ ಮಾಡಿರುವುದು ಸರಿಯಲ್ಲ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಈಗಾಗಲೇ ಪತ್ರ ಚಳವಳಿ ಆರಂಭಿಸಿದ್ದಾರೆ. ಈ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು’ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಒತ್ತಾಯಿಸಿದರು.

ಕ್ರಮ ವಹಿಸದಿದ್ದಲ್ಲಿ ಕಲ್ಯಾಣ ಮಂಡಳಿ ಎದುರು ಕಾರ್ಮಿಕರು ಮತ್ತು ಅವರ ಮಕ್ಕಳೊಂದಿಗೆ ಅನಿರ್ದಿಷ್ಟ ಅವಧಿ ಹೋರಾಟ‌ ನಡೆಸಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಶೈಕ್ಷಣಿಕ ಸಹಾಯಧನ ಕಳೆದ ವರ್ಷ ನೀಡಿರಲಿಲ್ಲ. ಪರಿಷ್ಕೃತ ಆದೇಶವು 2022–23ರಿಂದಲೇ ಅನ್ವಯವಾಗಲಿದೆ.
–ಡಿ.ಭಾರತಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT