ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Assembly | ನಗರ ಆಸ್ತಿ ನೋಂದಣಿಗೆ ಇ–ಖಾತೆ ಕಡ್ಡಾಯ

Published 22 ಫೆಬ್ರುವರಿ 2024, 0:30 IST
Last Updated 22 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಪ್ರದೇಶಗಳ ಆಸ್ತಿ ನೋಂದಣಿಗೆ ಇ–ಸ್ವತ್ತು ಕಡ್ಡಾಯಗೊಳಿಸಿದ ಮಾದರಿಯಲ್ಲೇ ನಗರ ಪ್ರದೇಶಗಳ ಆಸ್ತಿ ನೋಂದಣಿಗೆ ಡಿಜಿಟಲ್‌ ಸ್ವರೂಪದ ಇ–ಖಾತಾ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸುವ ‘ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆ–2024’ಕ್ಕೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿತು.

ಡಿಜಿಟಲ್‌ ಸ್ವರೂಪದಲ್ಲಿ ಹಾಜರುಪಡಿಸುವ ಕೆಲವು ದಾಖಲೆಗಳನ್ನು ಎರಡೂ ಕಡೆಯವರ ಖುದ್ದು ಹಾಜರಿ ಇಲ್ಲದೆ ಕಡ್ಡಾಯವಾಗಿ ನೋಂದಣಿಗೆ ಅವಕಾಶ ಕಲ್ಪಿಸುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿತ್ತು. ಅದನ್ನು ಅನುಷ್ಠಾನಕ್ಕೆ ತರಲು ಈ ತಿದ್ದುಪಡಿ ಮಸೂದೆ ರೂಪಿಸಲಾಗಿದೆ. ಇದೇ ಮಸೂದೆಯಲ್ಲಿ ಇ–ಖಾತಾ ಕಡ್ಡಾಯಗೊಳಿಸುವ ಅಂಶವೂ ಇದೆ.

‘ವಿದ್ಯುನ್ಮಾನ ಮಾಧ್ಯಮದ ಸಾಧನಗಳ ಮೂಲಕ ಇತರ ಇಲಾಖೆಯ ತಂತ್ರಾಂಶದೊಂದಿಗೆ ಸಂಯೋಜಿಸಿದ ಹೊರತು ಸ್ಥಿರ ಸ್ವತ್ತಿನ ವರ್ಗಾವಣೆ ಅಥವಾ ಪರಭಾರೆ ಮಾಡುವಂತಿಲ್ಲ’ ಎಂಬುದನ್ನು ನೋಂದಣಿ ಕಾಯ್ದೆ–1908ರ ಸೆಕ್ಷನ್‌ 71–ಎಗೆ ಸೇರಿಸಲಾಗಿದೆ.

‘ಗ್ರಾಮೀಣ ಪ್ರದೇಶಗಳ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ನೋಂದಣಿ ಪ್ರಕ್ರಿಯೆಯಲ್ಲಿ ಇ–ಸ್ವತ್ತು ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ನಗರ ಪ್ರದೇಶಗಳಲ್ಲಿ ಭೌತಿಕ ಕಡತದ (ಕಾಗದದ) ಖಾತೆ ಆಧಾರದಲ್ಲಿ ಈಗಲೂ ನೋಂದಣಿ ನಡೆಯುತ್ತಿದೆ. ಇದರಿಂದ ಅಕ್ರಮವಾಗಿ ಸ್ವತ್ತುಗಳ ನೋಂದಣಿ, ವಂಚನೆ ನಡೆಯುತ್ತಿದೆ. ಅದನ್ನು ತಪ್ಪಿಸಲು ಇ–ಖಾತೆ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ತಿಳಿಸಿದರು.

‘ಈ ತಿದ್ದುಪಡಿ ಜಾರಿಯಾದ ಬಳಿಕ ನಗರ ಪ್ರದೇಶಗಳ ಆಸ್ತಿಗಳ ನೋಂದಣಿ ಇ–ಖಾತೆ ಇದ್ದರೆ ಮಾತ್ರ ಸಾಧ್ಯ. ಬಿಬಿಎಂಪಿ, ಬಿಡಿಎ, ಕೆಐಎಡಿಬಿ ವ್ಯಾಪ್ತಿಯ ಸ್ವತ್ತುಗಳು ಮತ್ತು ಇತರ ಎಲ್ಲ ನಗರ ಪ್ರದೇಶಗಳ ಸ್ವತ್ತುಗಳಿಗೂ ಇದು ಅನ್ವಯವಾಗುತ್ತದೆ’ ಎಂದರು.

‘ನೋಂದಣಿ ಇಲಾಖೆಯಲ್ಲಿಯಲ್ಲಿರುವ ಹಳೆ ಕರಾರು, ಕ್ರಯಪತ್ರಗಳನ್ನು ಸ್ಕ್ಯಾನಿಂಗ್‌ ಮಾಡಿ, ಡಿಜಿಟಲೀಕರಣಗೊಳಿಸಲಾಗುವುದು. ಮುಂದೆ ಪ್ರಮಾಣೀಕೃತ ಪ್ರತಿಯನ್ನೂ ಡಿಜಿಟಲ್‌ ರೂಪದಲ್ಲೇ ಒದಗಿಸಲಾಗುವುದು’ ಎಂದು ತಿಳಿಸಿದರು.

ಇ–ಪಾವತಿ ಕಡ್ಡಾಯ: ಯಾವುದೇ ಕಾಗದಪತ್ರಗಳ ನೋಂದಣಿ ಸಂದರ್ಭದಲ್ಲಿ ಡಿಮಾಂಡ್‌ ಡ್ರಾಫ್ಟ್‌ ಅಥವಾ ಪೇ ಆರ್ಡರ್‌ ಮೂಲಕ ಮುದ್ರಾಂಕ ಶುಲ್ಕ ಪಾವತಿಸುವುದನ್ನು ನಿಷೇಧಿಸುವ ‘ಕರ್ನಾಟಕ ಸ್ಟಾಂಪು (ತಿದ್ದುಪಡಿ) ಮಸೂದೆ–2024’ಕ್ಕೂ ವಿಧಾನಸಭೆ ಬುಧವಾರ ಅಂಗೀಕಾರ ನೀಡಿತು.

ಈ ತಿದ್ದುಪಡಿ ಜಾರಿಯಾದ ಬಳಿಕ, ಇ–ಪಾವತಿ ಮೂಲಕವೇ ಮುದ್ರಾಂಕ ಶುಲ್ಕ ಪಾವತಿಸುವುದು ಕಡ್ಡಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT