ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ಪಶು ವೈದ್ಯರ ನೇಮಕಾತಿಗೆ ಸಂಪುಟ ಒಪ್ಪಿಗೆ: ಸಚಿವ ಜೆ.ಸಿ.ಮಾಧುಸ್ವಾಮಿ

Last Updated 27 ಜನವರಿ 2022, 11:15 IST
ಅಕ್ಷರ ಗಾತ್ರ

ಬೆಂಗಳೂರು: ಪಶು ವೈದ್ಯ ಇಲಾಖೆಗೆ 400 ಪಶು ವೈದ್ಯರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸುಮಾರು 800 ಹುದ್ದೆಗಳು ಖಾಲಿ ಇದ್ದು, ಪಶು ವೈದ್ಯರ ತೀವ್ರ ಕೊರತೆ ಅನುಭವಿಸುತ್ತಿರುವುದರಿಂದ, 400 ವೈದ್ಯರನ್ನು ಇಲಾಖಾ ನೇಮಕಾತಿ ಮೂಲಕ ಭರ್ತಿ ಮಾಡಲು ಒಪ್ಪಿಗೆ ನೀಡಲಾಯಿತು ಎಂದು ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 14 ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು 87 ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ 6000 ಸ್ಮಾರ್ಟ್‌ ತರಗತಿಗಳನ್ನು ಆರಂಭಿಸಲು ₹97.50 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದರು.

ಪ್ರಮುಖ ಅಂಶಗಳು:

* 2022–23 ನೇ ಶೈಕ್ಷಣಿಕ ಸಾಲಿಗೆ ವಿದ್ಯಾವಿಕಾಸ ಪ್ರೋತ್ಸಾಹದಾಯಕ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ 1 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲು ₹93.27 ಕೋಟಿ.

*ರಾಜ್ಯದಲ್ಲಿ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕು ದಾಖಲೆಗಳನ್ನು ಹಾಗೂ ಕೃಷಿ ಭೂಮಿಯ ಹಕ್ಕು ದಾಖಲೆಗಳನ್ನು ಮತ್ತು ಪಟ್ಟಣ/ನಗರ ಆಸ್ತಿಗಳ ದಾಖಲೆಗಳನ್ನು ಸಿದ್ಧಪಡಿಸುವುದಕ್ಕಾಗಿ ಕೆಟಿಪಿಪಿ ಕಾಯ್ದೆ ಅನುಸರಿಸಿ ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋನ್‌ ಒಂದು ಸೇವೆ ಅಥವಾ ವೈಮಾನಿಕ ಸಮೀಕ್ಷೆ ನಡೆಸಲು ₹287 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಅನುಮತಿ. ಕೇಂದ್ರ ಸರ್ಕಾರ 5 ಡ್ರೋನ್‌ಗಳನ್ನು ನೀಡಿತ್ತು. ಹೆಚ್ಚುವರಿ ಡ್ರೋನ್‌ಗಳನ್ನು ಖರೀದಿಸಿ ಸಮೀಕ್ಷೆ ನಡೆಸಲಾಗುವುದು.

*ಉಡುಪಿ ಜಿಲ್ಲೆ ಉದ್ಯಾವರ ನದಿ ಪಡುಕೆರೆ ಸಮೀಪ ಮೀನುಗಾರಿಕೆ ಜೆಟ್ಟಿ ನಿರ್ಮಾಣ ಕಾಮಗಾರಿಯ ₹10.52 ಕೋಟಿ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

*ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಮತ್ತು ಕರ್ನಾಟಕ ಗೇರು ಅಭಿವೃದ್ಧಿ ನಿಗಮಗಳನ್ನು ಒಂದೇ ನಿಗಮವಾಗಿ ವಿಲೀನಗೊಳಿಸಲು ಒಪ್ಪಿಗೆ

* ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 166 ಜೀವಾವಧಿ ಶಿಕ್ಷಾ ಬಂದಿಗಳನ್ನ ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ.

* ರಾಮನಗರ ಜಿಲ್ಲೆ ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ರಾಮನಗರ ಚನ್ನಪಟ್ಟಣ ಹೈಟೆಕ್‌ ರೇಷ್ಮೆ ಗೂಡು ಮಾರುಕಟ್ಟೆಯನ್ನು ನಬಾರ್ಡ್‌ ಸಹಯೋಗದೊಂದಿಗೆ ₹75 ಕೋಟಿಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ.

*ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾದೇಶಿಕ ನಿಧಿಯಡಿ ಕಲಬುರಗಿ ನಗರದ ಸೇಡಂ ರಿಂಗ್‌ ರಸ್ತೆ ರಾಷ್ಟ್ರೀಯ ಹೆದ್ದಾರಿ–50 ರ ಕಿ.ಮೀ 355.78 ರಲ್ಲಿ ಖರ್ಗೆ ಪೆಟ್ರೋಲ್‌ ಪಂಪ್‌ ಬಳಿ ಫ್ಲೈಓವರ್‌ ನಿರ್ಮಾಣಕ್ಕೆ ₹49ಕೋಟಿ ಆಡಳಿತಾತ್ಮ ಅನುಮೋದನೆ.

*ಮೈಸೂರು ಜಿಲ್ಲೆ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳ ಪರಿಷ್ಕೃತ ಅಂದಾಜು ₹92.81 ಕೋಟಿಗೆ ಅನುಮೋದನೆ.

*ಬೆಂಗಳೂರು ಜಿಲ್ಲೆ ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯ ಹುಳಿಮಾವು ಗ್ರಾಮದಲ್ಲಿ 4 ಎಕರೆ 19 ಗುಂಟೆ ಸರ್ಕಾರಿ ಜಮೀನನ್ನು ರಾಜ್ಯ ಗುಪ್ತ ವಾರ್ತೆ ಘಟಕದ ತರಬೇತಿ ಅಕಾಡೆಮಿಯನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಒಳಾಡಳಿತ ಇಲಾಖೆಗೆ ಉಚಿತವಾಗಿ ನೀಡಲು ಒಪ್ಪಿಗೆ.

* ಡಾ. ಕೆ.ಶಿವರಾಮಕಾರಂತ ಬಡಾವಣೆಗಾಗಿ ಹೊರಡಿಸಿರುವ ಅಧಿಸೂಚನೆಯಲ್ಲಿ ಒಳಗೊಂಡಿರುವ ಬೆಂಗಳೂರು ನಗರ ಜಿಲ್ಲೆ, ಯಲಹಂಕ ತಾಲ್ಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ಸರ್ಕಾರಿ ಜಮೀನುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಮಂಜೂರು ಮಾಡಲು ಅನುಮೋದನೆ. ವ್ಯಾಜ್ಯ ರಹಿತ 67.17 ಎಕರೆ ಜಮೀನು ನೀಡಲಾಗುವುದು.

* ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಪ್ರಸ್ತುತ ಚಾಲನೆಯಲ್ಲಿರುವ 131 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯ 32 ಗ್ರಾಮಗಳಿಗೆ ವಿಸ್ತರಿಸುವ ₹22 ಕೋಟಿ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

*ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಬಾಕಿ ಇರುವ 300 ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ₹392.08 ಕೋಟಿ ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

*ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಮಂಗಳೂರು ತಾಲ್ಲೂಕು, ಚೇಳ್ಯಾರು, ಪದವು ಮತ್ತು ಮಧ್ಯ ಗ್ರಾಮಗಳಲ್ಲಿ ಪ್ರಾಧಿಕಾರದ ವತಿಯಿಂದ 45 ಎಕರೆ 85.5 ಸೆಂಟ್ಸ್‌ ಭೂಮಿಯಲ್ಲಿ ಉದ್ದೇಶಿಸಿರುವ ವಸತಿ ಬಡಾವಣೆ ಯೋಜನೆಗೆ ₹30.50 ಕೋಟಿ ವಿಸ್ತೃತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ.

* ಯಾದಗಿರಿ ಜಿಲ್ಲೆ ಗುರುಮಠಕಲ್ ವ್ಯಾಪ್ತಿಯಲ್ಲಿ ಭೀಮಾನದಿ ಪಾತ್ರದಿಂದ 20 ಕೆರೆಗಳಿಗೆ ನೀರು ತುಂಬಿಸುವ ₹165 ಕೋಟಿ ಅಂದಾಜು ಮೊತ್ತದ ಯೋಜನೆಯನ್ನು ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೆತ್ತಿಕೊಳ್ಳುವ ವಿವರ ಯೋಜನಾ ವರದಿಗೆ(ಡಿಪಿಆರ್‌) ಆಡಳಿತಾತ್ಮಕ ಅನುಮೋದನೆ.

* ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಯಡೂರು ರಸ್ತೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಮರು ನಿರ್ಮಾಣ ಕಾಮಗಾರಿಯ ₹35 ಕೋಟಿಯ ವಿವರ ಯೋಜನಾ ವರದಿಗೆ(ಡಿಪಿಆರ್‌) ಆಡಳಿತಾತ್ಮಕ ಅನುಮೋದನೆ.

* ಧಾರವಾಡದ ಐಐಟಿ ಕ್ಯಾಂಪಸ್‌ಗೆ ರಾಜ್ಯ ಸರ್ಕಾರದ ವತಿಯಿಂದ ಮೂಲಸೌಕರ್ಯ ಒದಗಿಸುವ ಬದ್ಧತೆ ಅನುಸಾರ ಕುಡಿಯುವ ನೀರು ಒದಗಿಸಲು ₹11.21 ಕೋಟಿ ನೀಡಲು ಒಪ್ಪಿಗೆ.

*ವರ್ತೂರು ಬಳಿ 1.3 ಕಿ.ಮೀ ಎಲಿವೇಟೆಡ್‌ ರಸ್ತೆಯನ್ನು 1.92 ಕಿ.ಮೀ ವಿಸ್ತರಿಸಲು ₹482.14 ಪರಿಷ್ಕೃತ ಅಂದಾಜಿಗೆ ಅನುಮೋದನೆ.

*ಕೆಪಿಎಸ್‌ಸಿ 2011 ರ ಬ್ಯಾಚ್‌ನ ಪಟ್ಟಿಗೆ ಅನುಮತಿ ನೀಡಲು ಈ ಹಿಂದೆಯೆ ಒಪ್ಪಿಗೆ ಆಗಿದೆ. ಈ ಬಾರಿ ವಿಧಾನಮಂಡಲ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಲು ತೀರ್ಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT