ಹೆಬ್ಬನಹಳ್ಳಿ (ಸಕಲೇಶಪುರ): ಸದ್ಯ 19 ಟಿಎಂಸಿ ಅಡಿ ನೀರು ಸಿಗುತ್ತಿದ್ದು, ತಗ್ಗುಪ್ರದೇಶದ ಇನ್ನಷ್ಟು ಹಳ್ಳಗಳಿಂದ ನೀರು ಎತ್ತುವ ಮೂಲಕ ಕೊರತೆ ಇರುವ 5 ಟಿಎಂಸಿ ಅಡಿ ನೀರನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಯ ಹಂತ 1ಕ್ಕೆ ಶುಕ್ರವಾರ ಸಕಲೇಶಪುರ ತಾಲ್ಲೂಕಿನ ದೊಡ್ಡನಗರದಲ್ಲಿ ಚಾಲನೆ ನೀಡಿ, ಹೆಬ್ಬನಹಳ್ಳಿಯಲ್ಲಿ ನೀರು ವಿತರಣಾ ತೊಟ್ಟಿಗಳಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
‘10 ವರ್ಷದ ತಾಂತ್ರಿಕ ವರದಿ ಪ್ರಕಾರ 19 ಟಿಎಂಸಿ ನೀರು ಸಿಗುತ್ತಿದೆ. ಏಳು ಜಿಲ್ಲೆಗಳಿಗೆ ಕುಡಿಯಲು ಬೇಕಿರುವುದು 14 ಟಿಎಂಸಿ ಅಡಿ ನೀರು. ಹಾಗಾಗಿ ಕುಡಿಯುವ ನೀರಿಗೆ ಯಾವುದೇ ಕೊರತೆಯಾಗುವುದಿಲ್ಲ. ಅದರ ಜೊತೆಗೆ ಕೆರೆಗಳಿಗೆ ನೀರು ತುಂಬಿಸಲು ನೀರು ಅಗತ್ಯವಿದೆ. ಒಟ್ಟು 24 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಅಂದರೆ 5 ಟಿಎಂಸಿ ಅಡಿ ನೀರು ಕಡಿಮೆ ಇದೆ. ಅದನ್ನು ಭರ್ತಿ ಮಾಡಲು ಹಳ್ಳಗಳ ಸಮೀಕ್ಷೆ ಆರಂಭಿಸಲಾಗಿದೆ’ ಎಂದು ಹೇಳಿದರು.
‘ಎರಡು ಹಂತದ ಯೋಜನೆ ಇದಾಗಿದ್ದು, 2ನೇ ಹಂತವೂ ನಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣಗೊಳ್ಳಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಈ ಯೋಜನೆ ಸಾಕಾರಗೊಳ್ಳುವುದಿಲ್ಲ ಎಂದು. ಕೆಲವರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅದರಲ್ಲಿ ಯಾವುದೇ ಸತ್ಯ ಇಲ್ಲ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಹಣ ನೀಡಲಿಲ್ಲ. ಅವರು ಅನುದಾನ ಒದಗಿಸುತ್ತಿದ್ದರೆ ಇಷ್ಟು ಹೊತ್ತಿಗೆ ಎರಡೂ ಹಂತಗಳು ಪೂರ್ಣಗೊಳ್ಳುತ್ತಿದ್ದವು’ ಎಂದು ಟೀಕಿಸಿದರು.
ನೀರು ತುಂಬಿಸುವ ಯೋಜನೆಗೆ ಅರಣ್ಯ ಇಲಾಖೆಯಿಂದ ಕೆಲವು ಕಡೆಗಳಲ್ಲಿ ಸಮಸ್ಯೆಯಾಗಿದೆ. ಕುಡಿಯುವ ನೀರಿಗೆ ಯಾವುದೇ ಅಡ್ಡಿಪಡಿಸಬಾರದು. ಈ ಬಗ್ಗೆ ಕಾನೂನಿನ ತೊಡಕುಗಳಿದ್ದರೆ ಅರಣ್ಯ ಇಲಾಖೆಯವರನ್ನು ಸಭೆ ಕರೆದು ಚರ್ಚಿಸಿ ಪರಿಹರಿಸಲಾಗುವುದು ಎಂದರು.
ರೈತರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಏಲಕ್ಕಿ ಬೆಳೆಗಾರರ ಸಾಲ ಮನ್ನಾ ಮಾಡಲಾವುದು ಎಂದು ಭರವಸೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ರಾಜ್ಯದಲ್ಲಿ ಐತಿಹಾಸಿಕ ಮತ್ತು ಪವಿತ್ರವಾದ ದಿನ, ಗೌರಿ ಹಬ್ಬದ ದಿನ ಗಂಗೆ ಸಕಲೇಶಪುರದಿಂದ ಮಾರಮ್ಮನ ಕಣಿವೆಗೆ (ವಾಣಿವಿಲಾಸ) ಹರಿಯುತ್ತಿದ್ದಾಳೆ’ ಎಂದು ಬಣ್ಣಿಸಿದರು.
‘ಏಳೆಂಟು ಜನರು ತಮ್ಮ ಉದ್ಯಮ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ತಡೆಯಾಜ್ಞೆ ತರಲು ಪ್ರಯತ್ನಿಸಿದ್ದರು. ನಿಮ್ಮ ವೈಯಕ್ತಿಕ ವಿಚಾರ ಇದಲ್ಲ. ರಾಜ್ಯದ ಜನರಿಗೆ ನೀರು ಹರಿಯುವ ಯೋಜನೆ ಇದು. ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇನೆ’ ಎಂದು ಹೇಳಿದರು.
ಈ ಯೋಜನೆ ಪೂರ್ಣಗೊಳ್ಳುವುದಿಲ್ಲ. ಪೂರ್ಣಗೊಂಡರೆ ತಲೆ ಬೋಳಿಸುವುದಾಗಿ ಕೆಲವರು ಹೇಳಿಕೆ ನೀಡಿದ್ದರು. ಅವರು ತಲೆ ಬೋಳಿಸಿಕೊಳ್ಳುವುದು ಬೇಡ. ಒಳ್ಳೆಯ ದಿನ ಒಳ್ಳೆಯ ಮಾತು ಆಡೋಣ. 2027ರ ಒಳಗೆ ಎರಡನೇ ಹಂತವೂ ಮುಗಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಬ್ಬನಹಳ್ಳಿ ತೊಟ್ಟಿಗಳಲ್ಲಿ ಶುಕ್ರವಾರ ಎತ್ತಿನ ಹೊಳೆ ಯೋಜನೆಯ ನೀರು ಉಕ್ಕಿ ಹರಿಯಿತು.
ಹೆಬ್ಬನಹಳ್ಳಿಯಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ- 1ಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲು ಇಲ್ಲಿ ನಿರ್ಮಿಸಲಾಗಿದ್ದ ಮಂಟಪವು ಶುಕ್ರವಾರ ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಕುಸಿದು ಬಿತ್ತು.
ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಮಧ್ಯಾಹ್ನ 12ಕ್ಕೆ ಚಾಲನೆ ನೀಡಿದ ಬಳಿಕ ಹೆಬ್ಬನಹಳ್ಳಿಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಅದಕ್ಕಾಗಿ ಹೂವು, ತೋರಣಗಳಿಂದ ಅಲಂಕೃತವಾದ ಮಂಟಪ ನಿರ್ಮಿಸಲಾಗಿತ್ತು.
ಶುಕ್ರವಾರ 11.15ರ ಹೊತ್ತಿಗೆ ಮಂಟಪ ಕುಸಿದು ಬಿತ್ತು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಬರಪೀಡಿತ 29 ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆಯ ಉದ್ಘಾಟನೆ ಮುನ್ನ ಈ ರೀತಿ ಆಗಿರುವುದು ಅಧಿಕಾರಿಗಳಿಗೆ, ಜನಪ್ರತಿನಿದಿಗಳಿಗೆ ಬೇಸರ ಉಂಟು ಮಾಡಿತು.
ಆಲಮಟ್ಟಿ ಅಣೆಕಟ್ಟಿನಲ್ಲಿ 535 ಅಡಿಗೆ ಗೇಟ್ ಅಳವಡಿಸಲಾಗುತ್ತಿತ್ತು. ಈ ಗೇಟ್ ಅನ್ನು ಕತ್ತರಿಸಲಾಗಿದೆ. ಅದು ನನ್ನ ಹೃದಯ ಕತ್ತರಿಸಿದಂತಾಗಿದೆ. ಮತ್ತೆ ಅಷ್ಟೇ ಎತ್ತರಕ್ಕೆ ಗೇಟ್ ನಿರ್ಮಿಸುವ ಮೂಲಕ 130 ಟಿಎಂಸಿ ಅಡಿ ನೀರು ರಾಜ್ಯಕ್ಕೆ ಸಿಗುವಂತೆ ಮಾಡಬೇಕು.-ವೀರಪ್ಪ ಮೊಯಿಲಿ, ಮಾಜಿ ಮುಖ್ಯಮಂತ್ರಿ
ಕಾಂಗ್ರೆಸ್ ಪಕ್ಷದ ಕನಸಿನ ಕೂಸು, 7 ಜಿಲ್ಲೆಗಳ ಲಕ್ಷಾಂತರ ಜನರ ಬದುಕು ಬದಲಿಸುವ "ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ"ಯ ಹಂತ-1ಕ್ಕೆ ಚಾಲನೆ ನೀಡಿ ಮಾತನಾಡಿದೆ.
— Siddaramaiah (@siddaramaiah) September 6, 2024
ಎತ್ತಿನಹೊಳೆ ಎರಡನೇ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ. ಇದು ಎರಡು ಹಂತದ ಯೋಜನೆ. ಮೊದಲ ಹಂತ ಇಂದು… pic.twitter.com/w4Wbxp1645
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.