ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ ಟಿಕೆಟ್‌: ಧಾರವಾಡದ ಇಬ್ಬರು ಹಾಲಿ ಶಾಸಕರ ಪೈಕಿ ಒಬ್ಬರ ಹೆಸರು ಘೋಷಣೆ

Last Updated 25 ಮಾರ್ಚ್ 2023, 10:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರನ್ನು ಹೊಂದಿದೆ. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ್ದು, ಇದರಲ್ಲಿ ಹುಬ್ಬಳ್ಳಿ– ಧಾರವಾಡ ಪೂರ್ವ ಕ್ಷೇತ್ರದ ಪ್ರಸಾದ್‌ ಅಬ್ಬಯ್ಯ ಅವರ ಹೆಸರು ಮಾತ್ರ ಇದೆ. ಕುಂದಗೋಳ ಕ್ಷೇತ್ರದ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಹೆಸರು ಇಲ್ಲದಿರುವುದು ಕುತೂಹಲ ಹುಟ್ಟಿಸಿದೆ.

ಎಸ್‌.ಸಿ ಮೀಸಲಾಗಿರುವ ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಿಂದ ಪ್ರಸಾದ್‌ ಅಬ್ಬಯ್ಯ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಖಾತರಿಯಾಗಿದೆ. 2013ರಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ ಪ್ರಸಾದ್‌ ಅಬ್ಬಯ್ಯ ಅವರು ಮೋದಿ ಅಲೆಯ ನಡುವೆಯೂ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಜಯಗಳಿಸಿದ್ದರು. 2018ರಲ್ಲಿಯೂ ತಮ್ಮ ವಿಜಯಯಾತ್ರೆ ಮುಂದುವರಿಸಿದರು. ಕಳೆದ ಹತ್ತು ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಲ ಪುನಃ ಕಣಕ್ಕಿಳಿಯಲಿದ್ದು, ಮೂರನೇ ಬಾರಿ ಚುನಾವಣೆ ಎದುರಿಸಲಿದ್ದಾರೆ.

ಕುಂದಗೋಳ ಕುತೂಹಲ:

ಕಾಂಗ್ರೆಸ್‌ ಶಾಸಕರಿರುವ ಮತ್ತೊಂದು ಕ್ಷೇತ್ರವಾಗಿರುವ ಕುಂದಗೋಳದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ 14 ಜನರು ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಾಲಿ ಶಾಸಕರಿದ್ದೂ ಟಿಕೆಟ್‌ ಘೋಷಿಸದೇ ಇರುವುದು ಕುತೂಹಲ ಸೃಷ್ಟಿಸಿದೆ.

ಕುಸುಮಾವತಿ ಶಿವಳ್ಳಿ ಅವರ ಪತಿ, ಕುರುಬ ಸಮುದಾಯದ ಸಿ.ಎಸ್‌. ಶಿವಳ್ಳಿ ಕಾಂಗ್ರೆಸ್‌ನ ಕಟ್ಟಾ ಕಾರ್ಯಕರ್ತರಾಗಿದ್ದರು. ಕ್ಷೇತ್ರದ ತುಂಬ ಓಡಾಡಿ, ಒಳ್ಳೆಯ ಹಿಡಿತ ಹೊಂದಿದ್ದರು. ಆ ಕಾರಣಕ್ಕಾಗಿ 2013 ಹಾಗೂ 2018ರಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದರು. ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ಅವರ ಹಠಾತ್‌ ಸಾವಿನಿಂದಾಗಿ, ಪತ್ನಿ ಕುಸುಮಾವತಿ ಅವರು ರಾಜಕೀಯ ಪ್ರವೇಶಿಸಿದರು. ಉಪಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಜಯಗಳಿಸಿದರು. ಈ ಸಲ ಪುನಃ ಸ್ಪರ್ಧಿಸುವ ಬಯಕೆಯಿಂದ ಅರ್ಜಿ ಸಲ್ಲಿಸಿದ್ದಾರೆ.

ಸಿ.ಎಸ್‌.ಶಿವಳ್ಳಿ ಅವರ ಸಹೋದರ ಮುತ್ತಣ್ಣ ಶಿವಳ್ಳಿ ಉಪಚುನಾವಣೆ ವೇಳೆ ಸ್ಪರ್ಧಿಸಲು ಬಯಸಿದ್ದರು. ಆದರೆ, ಪಕ್ಷದ ಹೈಕಮಾಂಡ್‌ ಕುಸುಮಾವತಿ ಅವರಿಗೆ ಅವಕಾಶ ನೀಡಿತ್ತು. ಈಗ ಮುತ್ತಣ್ಣ ಪುನಃ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸಿದ್ದಾರೆ. ಇವರಲ್ಲದೇ, ಮಾಜಿ ಶಾಸಕ, ಎಂ.ಎಸ್. ಅಕ್ಕಿ, ಅರವಿಂದ ಕಟಗಿ, ಗೌಡಪ್ಪಗೌಡ ಪಾಟೀಲ, ಶಿವಾನಂದ ಬೆಣತೂರ, ಚಂದ್ರಶೇಖರ ಜುಟ್ಟಲ ಸೇರಿಂದತೆ ಇನ್ನುಳಿದವರು ಕೂಡ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT