ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ; ರಾಜ್ಯ ಸರ್ಕಾರದ ಆದೇಶ ಪಟ್ಟಿ ಇಲ್ಲಿದೆ

Published 26 ಜನವರಿ 2024, 12:29 IST
Last Updated 26 ಜನವರಿ 2024, 12:29 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ನಾಯಕರ ಮಧ್ಯೆ ‘ಸಂಘರ್ಷ’ಕ್ಕೆ ಕಾರಣವಾಗಿದ್ದ ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನದ ಪಟ್ಟಿ ಕೊನೆಗೂ ಮುಕ್ತಿ ಕಂಡಿದ್ದು, 34 ಶಾಸಕರಿಗೆ ಅಧ್ಯಕ್ಷ ಸ್ಥಾನದ ಜತೆಗೆ ಸಂಪುಟ ದರ್ಜೆಯ ಸಚಿವರಿಗೆ ನೀಡುವ ಸ್ಥಾನ ಹಾಗೂ ಸೌಲಭ್ಯಗಳನ್ನು ನೀಡಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರಿ ರಜಾದಿನವಾದ ಶುಕ್ರವಾರ (ಜ.26) ಈ ಕುರಿತ ಆದೇಶ ಹೊರಡಿಸಿದೆ. ಅಧ್ಯಕ್ಷರ ಕಾರ್ಯನಿರ್ವಹಣೆಯ ಆದೇಶ ಹೊರಡಿಸುವಂತೆ ನಿಗಮ–ಮಂಡಳಿಗಳಿಗೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ.

ಪಟ್ಟಿ ಹೊರಬಿದ್ದ ಬೆನ್ನಲ್ಲೇ, ಇಬ್ಬರು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ನಿಗಮ–ಮಂಡಳಿ ಒಪ್ಪಿಕೊಂಡವರಿಗೆ 16ನೇ ವಿಧಾನಸಭೆ ಅವಧಿಯಲ್ಲಿ ಸಚಿವಗಿರಿ ಸಿಗುವುದಿಲ್ಲ ಎಂದು ಹೇಳಲಾಗಿತ್ತು. ಹೀಗಾಗಿ, ಕೆಲವು ಶಾಸಕರು ತಮಗೆ ನೀಡಿದ ‘ಸಚಿವ ಗರಿ’ಯನ್ನು ನಿರಾಕರಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

ನಿಗಮ–ಮಂಡಳಿಯ ಅಧ್ಯಕ್ಷ ಹುದ್ದೆಯು ಮುಂದಿನ ಎರಡು ವರ್ಷ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶ ಉಲ್ಲೇಖಿಸಿದೆ. ಅಂದರೆ, ಎರಡು ವರ್ಷದ ಬಳಿಕ ಸಂಪುಟ ಪುನಾರಚನೆ ಹಾಗೂ ನಿಗಮ–ಮಂಡಳಿಗಳಿಗೆ ಹೊಸದಾಗಿ ನೇಮಕ ಮಾಡುವ ಲೆಕ್ಕಾಚಾರವೂ ಇದರ ಹಿಂದಿದೆ ಎಂದೂ ಹೇಳಲಾಗುತ್ತಿದೆ. 

ಸಚಿವ ಸ್ಥಾನವೇ ಬೇಕು ಎಂದು ಪಟ್ಟು ಹಿಡಿದಿದ್ದ ಹಲವು ಶಾಸಕರಿಗೆ ಅಧ್ಯಕ್ಷ ಹಾಗೂ ಸಚಿವರ ಸ್ಥಾನಮಾನ ನೀಡುವ ಮೂಲಕ ‘ಓಲೈಕೆ’ಯ ಯತ್ನವನ್ನು ಕಾಂಗ್ರೆಸ್ ಮಾಡಿದೆ. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮುದ್ದೇಬಿಹಾಳದ ಅಪ್ಪಾಜಿ ನಾಡಗೌಡ, ಭದ್ರಾವತಿಯ ಬಿ.ಕೆ.ಸಂಗಮೇಶ್ವರ, ಚಾಮರಾಜನಗರದ ಸಿ.ಪುಟ್ಟರಂಗಶೆಟ್ಟಿ, ಶಾಂತಿನಗರದ ಎನ್‌.ಎ.ಹ್ಯಾರಿಸ್‌, ಹೊಸದುರ್ಗದ ಬಿ.ಜಿ.ಗೋವಿಂದಪ್ಪ ಸೇರಿದಂತೆ ಹಲವರು ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರು. ಇವರೆಲ್ಲರನ್ನೂ ‘ಲಾಭದಾಯಕ’ವಾದ ಪ್ರಮುಖ ನಿಗಮ–ಮಂಡಳಿಗಳಿಗೆ ನೇಮಕ ಮಡಲಾಗಿದೆ.

ಡಿಸಿಎಂಗೂ ಸಲಹೆಗಾರ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿವಿಧ ಸಲಹೆಗಾರರನ್ನು ನೇಮಕ ಮಾಡಿದಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರನ್ನು ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ. ಸೋರಿಕೆಯಾದ ಪಟ್ಟಿಯಲ್ಲಿ ಮಾನೆ ಹೆಸರು ಇತ್ತು. ಅವರಿಗೆ ಡಿಸಿಎಂ ರಾಜಕೀಯ ಸಲಹೆಗಾರರ ಸ್ಥಾನ ನೀಡಲಾಗಿತ್ತು. ಶುಕ್ರವಾರದ ಆದೇಶದಲ್ಲಿ ಅವರ ಹೆಸರಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. 135 ಸ್ಥಾನ ಗೆದ್ದು ಅಧಿಕಾರ ಹಿಡಿದಿದ್ದರಿಂದಾಗಿ, ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು.

ಸಚಿವಗಿರಿ ಕೈತಪ್ಪಿದ ಶಾಸಕರ ಅಸಮಾಧಾನ ತಣಿಸಲು ನಿಗಮ–ಮಂಡಳಿಗಳಿಗೆ ನೇಮಕ ಮಾಡುವ ಭರವಸೆ ನೀಡುತ್ತಾ ಬರಲಾಗಿತ್ತು.

32ರಿಂದ 35 ಶಾಸಕರಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆದಿತ್ತು. ಸಾಕಷ್ಟು ಸಮಯದ ನಂತರ ಪಟ್ಟಿ ಸಿದ್ಧಪಡಿಸಲಾಗಿತ್ತು. ಶಾಸಕರ ಜತೆಗೇ ಪಕ್ಷದ ಕಾರ್ಯಕರ್ತರಿಗೂ ಅವಕಾಶ ನೀಡ ಬೇಕು ಎಂದು ರಾಹುಲ್‌ ಗಾಂಧಿ ಸೂಚಿಸಿದ್ದರಿಂದ ಮತ್ತೆ ವಿಳಂಬವಾಗಿತ್ತು.

ಕೆಲ ದಿನಗಳ ಹಿಂದೆಯಷ್ಟೇ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಒಳಗೊಂಡ ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತರದೆ ಕೆಲ ಹೆಸರು ಸೇರ್ಪಡೆಯಾಗಿವೆ ಎಂಬ ಅಸಮಾಧಾನ ಸ್ಫೋಟವಾದ ಕಾರಣ ಪಟ್ಟಿ ತಡೆಹಿಡಿಯಲಾಗಿತ್ತು. ಪಟ್ಟಿ ಸಿದ್ಧಪಡಿಸುವ ಮುನ್ನ ತಮ್ಮ ಅಭಿಪ್ರಾಯ ಕೇಳಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. 17ಕ್ಕೂ ಹೆಚ್ಚು ಸಚಿವರು ತಮ್ಮ ಇಲಾಖೆ ವ್ಯಾಪ್ತಿಯ ನಿಗಮ–ಮಂಡಳಿಗಳಿಗೆ ತಮ್ಮನ್ನು ಕೇಳದೇ ನೇಮಕ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಹೈಕಮಾಂಡ್ ಹಸ್ತಕ್ಷೇಪದ ಬಗ್ಗೆ ಸಿಡಿದೆದ್ದಿದ್ದರು.

ಗಣರಾಜ್ಯೋತ್ಸವದ ದಿನ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಸಿ.ಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವ ಕುಮಾರ್ ಚರ್ಚೆ ನಡೆಸಿದರು. ಅದಾದ ಬಳಿಕ ನೇಮಕಾತಿ ಆದೇಶ ಹೊರಬಿದ್ದಿದೆ.

74 ಮಂದಿಗೆ ಸಂಪುಟ ದರ್ಜೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿ ಸಂಪುಟದಲ್ಲಿ 34 ಸಚಿವರು ಇದ್ದಾರೆ. ವಿಧಾನಸಭೆಯ ಐವರು ಹಾಗೂ ಪರಿಷತ್ತಿನ ಮೂವರು ಸದಸ್ಯರಿಗೆ ರಾಜಕೀಯ ಕಾರ್ಯದರ್ಶಿ, ಸಲಹೆಗಾರರು, ಅಧ್ಯಕ್ಷ ಇಂತಹ ಸ್ಥಾನ ನೀಡಿ ಸಚಿವ ದರ್ಜೆ ಸ್ಥಾನ–ಸೌಲಭ್ಯ ನೀಡಲಾಗಿದೆ. ಇವರಲ್ಲದೇ, ಇಬ್ಬರು ಸಲಹೆಗಾರರಿಗೆ ಇದೇ ಸೌಲಭ್ಯಗಳಿವೆ. ಈ 10 ಜನರ ಜತೆಗೆ ಈಗ ನಿಗಮ ಮಂಡಳಿಗಳಿಗೆ ನೇಮಕ ವಾಗಲಿರುವ 34 ಶಾಸಕರಿಗೂ ಸಂಪುಟ ದರ್ಜೆಯ ಸೌಲಭ್ಯ ನೀಡಲಾಗಿದೆ. ಹೀಗಾಗಿ, ಒಟ್ಟು 74 ಮಂದಿಗೆ ಸಚಿವ ದರ್ಜೆಯ ಸೌಲಭ್ಯ ನೀಡಿದಂತಾಗುತ್ತದೆ.

ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಕಾರಣಾಂತರದಿಂದ ಕೈಬಿಟ್ಟರು. ಆಗಲೇ ನನಗೆ ಯಾವುದೇ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರಿಗೆ ಪತ್ರ ಸಹ ನೀಡಿದ್ದೆ. ಆದರೂ, ಏಕೆ ಕೊಟ್ಟರೊ ಗೊತ್ತಿಲ್ಲ. ಯಾವುದೇ ಕಾರಣಕ್ಕೂ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ.
–ಎಸ್‌.ಎನ್.ಸುಬ್ಬಾರೆಡ್ಡಿ, ಬಾಗೇಪಲ್ಲಿ ಶಾಸಕ

‌ಹೊಸಬರಿಗಿಲ್ಲ ಅವಕಾಶ

ನಿಗಮ–ಮಂಡಳಿಗಳ ನೇಮಕದಲ್ಲಿ ಹಿರಿಯ ಶಾಸಕರು ಹಾಗೂ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸೇರಿದ್ದ ವಲಸಿಗರಿಗೆ ಮಣೆ ಹಾಕಲಾಗಿದೆ. ಮೊದಲ ಬಾರಿ ಶಾಸಕರಾದವರಿಗೆ ಹಾಗೂ ವಿಧಾನ ಪರಿಷತ್‌ನ ಯಾವ ಸದಸ್ಯರಿಗೂ ಅವಕಾಶ ನೀಡಿಲ್ಲ. ನಿಗಮ–ಮಂಡಳಿಗಳ ನೇಮಕಾತಿಗೆ ಸಿದ್ಧಪಡಿಸಿದ್ದ ಕಾರ್ಯಕರ್ತರ ಪಟ್ಟಿ ಸೋರಿಕೆಯಾಗಿತ್ತು. ಆದರೆ, ಬಿಡುಗಡೆಯಾದ ಪಟ್ಟಿಯಲ್ಲಿ ಶಾಸಕರ ಹೆಸರುಗಳಷ್ಟೇ ಇವೆ.

ಸುಬ್ಬಾರೆಡ್ಡಿ, ಸೈಲ್‌ ಅಸಮಾಧಾನ

ಬಾಗೇಪಲ್ಲಿ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಹಾಗೂ ಕಾರವಾರ ಶಾಸಕ ಸತೀಶ್‌ ಸೈಲ್‌ ತಮಗೆ ನೀಡಿದ ನಿಗಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಬ್ಬಾರೆಡ್ಡಿ ಅವರಿಗೆ ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಸೈಲ್‌ ಅವರಿಗೆ ಕರ್ನಾಟಕ ಮಾರ್ಕೆಟಿಂಗ್‌ ಕನ್ಸಲ್ಟೆಂಟ್‌ ಆ್ಯಂಡ್‌ ಏಜೆನ್ಸಿಸ್‌ನ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.

ಎಂಸಿಎ ಹುದ್ದೆಯನ್ನು ಪಕ್ಷದ ಹಿರಿಯ ಕಾರ್ಯಕರ್ತರಿಗೆ ನೀಡಲು ಕೋರಿದ್ದೆ. ನನಗೆ ಅದೇ ಹುದ್ದೆ ಕೊಡಲಾಗಿದ್ದು, ಸದ್ಯಕ್ಕೆ ಒಪ್ಪಲ್ಲ. ತಿರಸ್ಕರಿಸುವ ನಿರ್ಧಾರವನ್ನೂ ಕೈಗೊಂಡಿಲ್ಲ. ಎರಡು ದಿನಗಳ ಬಳಿಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಿ ಬಳಿಕ ಸೂಕ್ತ ನಿರ್ಣಯ ಕೈಗೊಳ್ಳುವೆ.
–ಸತೀಶ ಸೈಲ್, ಕಾರವಾರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT