ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದತ್ತ ಬೊಟ್ಟು ಮಾಡಿ ಬೆಲೆ ಏರಿಕೆ ಆರೋಪದಿಂದ ಪಾರಾಗಲು ಯತ್ನ: ವಿಜಯೇಂದ್ರ

Published 18 ಜೂನ್ 2024, 8:31 IST
Last Updated 18 ಜೂನ್ 2024, 8:31 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿ ಇರಬೇಕೆಂದರೆ ತೆರಿಗೆಯ ಮೇಲೆ ತೆರಿಗೆ, ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ ಮಾಡಿ ಜನರನ್ನು ಸುಲಿಗೆ ಮಾಡುವುದೊಂದೇ ಉಳಿದಿರುವ ಮಾರ್ಗವಾಗಿದೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಸಿದ್ದರಾಮಯ್ಯನವರೇ, ನಿಮ್ಮ ಅಸಮರ್ಥ ಆಡಳಿತ, ಆರ್ಥಿಕ ಸಮತೋಲನದ ವೈಫಲ್ಯ, ಮತ ಬ್ಯಾಂಕ್ ಆಧಾರಿತ ಯೋಜನೆಗಳಿಗೆ ಜನರ ತೆರಿಗೆಗಳಿಂದ ಸಂಗ್ರಹವಾದ ರಾಜ್ಯದ ಖಜಾನೆಯನ್ನು ಬರಿದು ಮಾಡಿದ್ದೀರಿ. ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಗಳಿಗೆ ಕಾಂಗ್ರೆಸ್‌ ಸರ್ಕಾರ ರೂವಾರಿ ಆಗಿರುವುದು ರಾಜ್ಯದ ದುರಂತವೇ ಸರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಆಡಳಿತ ರಾಜಕೀಯ ಅರಾಜಕತೆ ಸೃಷ್ಟಿಸುವತ್ತ ಮುನ್ನಡೆದಿದೆ. ನೀವು ಅಧಿಕಾರಿದಲ್ಲಿ ಇರಲೇಬೇಕೆಂದರೆ ‘ತೆರಿಗೆಯ ಮೇಲೆ ತೆರಿಗೆ, ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ’ ಮಾಡಿ ಜನರನ್ನು ಸುಲಿಗೆ ಮಾಡುವುದೊಂದೇ ಉಳಿದಿರುವ ಮಾರ್ಗವಾಗಿದೆ. ಹೀಗಿರುವಾಗ, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ಬೆಲೆ ಏರಿಕೆ ಆರೋಪದಿಂದ ನುಣುಚಿಕೊಳ್ಳುವ ನಿಮ್ಮ ಪ್ರಯತ್ನ ರಾಜ್ಯದ ಜನತೆಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸುಳ್ಳುಗಳ ಸರಮಾಲೆ ಕಟ್ಟಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ನಿಮ್ಮ ಆಟ ಮುಗಿಯುತ್ತಾ ಬರುತ್ತಿದೆ, ಸತ್ಯ ಏನೆಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ ಸಂಪನ್ಮೂಲ, ಸಮೃದ್ಧತೆ ಹೊಂದಿರುವ ಮುಂಚೂಣಿ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ಸದಾ ಮುಂದು. ಇಂತಹ ಸಂಪತ್ಭರಿತ ಕರ್ನಾಟಕವನ್ನು ಬರಡು ಮಾಡಲು ಹೊರಟಿರುವ ನಿಮ್ಮ ಆಡಳಿತ ವೈಖರಿ ಇತಿಹಾಸದ ಕಪ್ಪು ಚುಕ್ಕೆಯಾಗುತ್ತಿದೆ ಎಂದು ಟೀಕಿಸಿದ್ದಾರೆ.

ಹಾಲಿನ ದರ ಹೆಚ್ಚಳ, ಮೋಟಾರ್‌ ವಾಹನ ತೆರಿಗೆ ದರ ಹೆಚ್ಚಳ, ಅಬಕಾರಿ ಶುಲ್ಕ ಹೀಗೆ ಏರಿಸಿದ ಆದಾಯದ ಮೂಲಗಳು ಎಲ್ಲಿ ಹೋಯಿತು?, ಎಲ್ಲಿ ಹೋಗುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇದೀಗ ಪೆಟ್ರೋಲ್‌, ಡೀಸೆಲ್‌ ದರ ಏರಿಸಿದ್ದೀರಿ. ಇನ್ನೂ ಯಾವ್ಯಾವುದರ ಮೇಲೆ ದರ ಏರಿಕೆಯಾಗಲಿದೆಯೋ ಎಂದು ರಾಜ್ಯದ ಜನತೆ ಆತಂಕಿತರಾಗಿದ್ದಾರೆ. ಜನರ ಕಿಸೆಯನ್ನು ಬರಿದು ಮಾಡದೇ ಆಡಳಿತ ನಡೆಸುವ ಮಾರ್ಗವಿದ್ದರೆ ಮುನ್ನಡೆಯಿರಿ. ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸುವ ಸರಮಾಲೆ ಹೆಣೆಯುವ ವಸೂಲಿ ಯೋಜನೆಗಳಿದ್ದರೆ ಈ ಕೂಡಲೇ ರಾಜೀನಾಮೆ ಕೊಟ್ಟು ಹೊರಡಿ ಎಂದು ಕಿಡಿಕಾರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT