ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಜಾಬ್ ನಿಷೇಧ ವಿಚಾರ: ಕಾಂಗ್ರೆಸ್‌ –ಬಿಜೆಪಿ ಮಧ್ಯೆ ರಾಜಕೀಯ ಜಗಳ

Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ‘ಕೇಸರಿ ಪಡೆ’ ತಿರುಗಿಬಿದ್ದಿದೆ. ಈ ಬೆನ್ನಲ್ಲೇ, ಚರ್ಚಿಸಿ ಆದೇಶ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಹಿಜಾಬ್ ನಿಷೇಧದಿಂದಾಗಿ ಶಿಕ್ಷಣ ವಂಚಿತರಾಗಿದ್ದ ಮುಸ್ಲಿಂ ವಿದ್ಯಾರ್ಥಿನಿಯರು, ವಿವಿಧ ಸಂಘಟನೆಗಳು ಸರ್ಕಾರದ ಆಲೋಚನೆಯನ್ನು ಸ್ವಾಗತಿಸಿದ್ದಾರೆ.

ಶಾಲೆ- ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ಇನ್ನೂ ವಾಪಸ್ ಪಡೆದಿಲ್ಲ. ಆ ಬಗ್ಗೆ ಯೋಚನೆ ಮಾಡಿದ್ದೇವೆ, ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ
ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಹಿಜಾಬ್ ವಿಷಯ ತೇಲಿಬಿಟ್ಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಹುನ್ನಾರ ಬಯಲಾಗುತ್ತಿದ್ದಂತೆ ದಿಢೀರನೇ ಯೂಟರ್ನ್‌ ಹೊಡೆದಿದ್ದಾರೆ.
–ಆರ್. ಅಶೋಕ, ವಿರೋಧ ಪಕ್ಷದ ನಾಯಕ
ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸಿದಾಗ ಧ್ವನಿ ಎತ್ತಿದ್ದಕ್ಕೆ ಪ್ರತಿಫಲ ದೊರೆತಿದೆ. ನನ್ನ ವಸ್ತ್ರ ನನ್ನ ಹಕ್ಕಾಗಿದ್ದು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ ಎಂಬುದನ್ನು ಸರ್ಕಾರ ತೋರಿಸಬೇಕು.
–ತೆಹ್ರೀನ್ ಬೇಗಂ, ಸುಪ್ರೀಂಕೋರ್ಟ್‌ನಲ್ಲಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿ, ಉಡುಪಿ

ಅನ್ಯಾಯ ಸರಿಪಡಿಸುವ ಕೆಲಸ: ಎಚ್.ಕೆ. ಪಾಟೀಲ

ಬೆಂಗಳೂರು: ‘ಹಿಜಾಬ್ ವಿಷಯದಲ್ಲಿ ಭಯ ಮೂಡಿಸುವಂಥ ನಿರ್ಣಯವನ್ನು ಹಿಂದಿನ ಸರ್ಕಾರ ಮಾಡಿತ್ತು. ಅದನ್ನು ಸರಿಪಡಿಸುವ ಕೆಲಸವನ್ನು  ನಮ್ಮ ಸರ್ಕಾರ ಮಾಡುತ್ತಿದೆ. ಆದಷ್ಟು ಬೇಗ ಸರ್ಕಾರ ಆದೇಶ ಹೊರಡಿಸಲಿದೆ’ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಇದು ನಮ್ಮ ಸರ್ಕಾರ, ಪಕ್ಷದ ಚಿಂತನೆಯಾಗಿದೆ. ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದಿನ ಅವಧಿಯಲ್ಲಿ ಅನ್ಯಾಯವಾಗಿದೆ’ ಎಂದು ಪ್ರತಿಪಾದಿಸಿದರು.

‘ನಾವು ಏನು ತುಷ್ಠೀಕರಣ ಮಾಡಿದ್ದೇವೆ. ಸಂವಿಧಾನದ ಅನುಷ್ಠಾನಗೊಳಿಸುವುದು ತಪ್ಪೇ? ಸಂವಿಧಾನದ ಆಶಯಗಳನ್ನು ತಿರುಚುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ’ ಎಂದು ಹೇಳಿದರು.

ಯಾವ ನಿರ್ಬಂಧವೂ ಇಲ್ಲ: ‘ಮುಖ್ಯಮಂತ್ರಿ ಏನು ಹೇಳಿದ್ದಾರೋ ಅದೇ ಅಂತಿಮ. ನನ್ನ ಅಭಿಪ್ರಾಯವೂ ಅದೇ ಆಗಿದೆ. ನೂರಾರು ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ಯಾರು, ಯಾವುದೇ ವಸ್ತ್ರವನ್ನಾದರೂ ಧರಿಸಬಹುದು. ವಸ್ತ್ರ ಧರಿಸಲು ಯಾವ ನಿರ್ಬಂಧವೂ ಇಲ್ಲ. ಖಾಸಗಿ ಶಾಲೆಗಳಲ್ಲಿ ವಸ್ತ್ರಸಂಹಿತೆ ಇರುತ್ತದೆ. ಆದರೆ, ಸರ್ಕಾರಿ‌ ಶಾಲೆಗಳಲ್ಲಿ ಯಾವುದೇ ವಸ್ತ್ರಸಂಹಿತೆ ಇಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

‘ಕೇಸರಿ ಶಾಲು ತ್ಯಾಗದ ಸಂಕೇತ. ನಾನು ಅಂಜನಾದ್ರಿಗೆ ಹೋಗಿದ್ದಾಗ ಕೇಸರಿ ಶಾಲು ಧರಿಸಿದ್ದೆ. ನಾವೂ (ಕಾಂಗ್ರೆಸ್‌ನವರು) ಕೇಸರಿ ಶಾಲು ಹಾಕಿಕೊಳುತ್ತೇವೆ. ಕೇಸರಿ ಶಾಲು ಏನು ಬಿಜೆಪಿಯವರದ್ದಾ. ಅದನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ’ ಎಂದು ಪ್ರಶ್ನಿಸಿದರು.

ಮರಳಿ ಕಾಲೇಜಿಗೆ ಹೋಗುವೆ: ಮುಸ್ಕಾನ್‌

ಮಂಡ್ಯ: ‘ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಇಲ್ಲಿನ ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಖಾನ್‌ ಸ್ವಾಗತಿಸಿದ್ದು, ಮತ್ತೆ ಓದು ಮುಂದುವರಿಸುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪೊಂದರ ‘ಜೈ ಶ್ರೀರಾಮ್’ ಘೋಷಣೆಗೆ ಪ್ರತಿಯಾಗಿ ‘ಅಲ್ಲಾಹು ಅಕ್ಬರ್‌’ ಘೋಷಣೆ ಕೂಗುವ ಮೂಲಕ ಅವರು ಗಮನ ಸೆಳೆದಿದ್ದರು. ಹಿಂದಿನ ಬಿಜೆಪಿ ಸರ್ಕಾರ ಶಾಲೆ–ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದಕ್ಕೆ ನಿಷೇಧ ಹೇರಿದ್ದನ್ನು ಪ್ರತಿಭಟಿಸಿ ಕಾಲೇಜು ತೊರೆದಿದ್ದು, ಬಿ.ಕಾಂ. ಪರೀಕ್ಷೆಗೂ ಹಾಜರಾಗಿರಲಿಲ್ಲ.

‘ಈ ಹಿಂದಿನ ಸರ್ಕಾರ ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದಕ್ಕೆ ನಿಷೇಧ ಹೇರಿದ್ದ ಕಾರಣ ನನ್ನ ಓದನ್ನು ನಿಲ್ಲಿಸಿದ್ದೆ. ಒಂದು ವರ್ಷದಿಂದ ಬೇರೆ ಕೋರ್ಸ್ ಓದುತ್ತಿದ್ದೆ. ಈಗ ಮುಖ್ಯಮಂತ್ರಿ ಹೇಳಿಕೆಯಿಂದ ಖುಷಿಯಾಗಿದೆ. ಮತ್ತೆ ಕಾಲೇಜಿಗೆ ತೆರಳುತ್ತೇನೆ‘ ಎಂದರು.

‘ಹಿಜಾಬ್ ನಿಷೇಧದಿಂದಾಗಿ ನನ್ನಂತೆ ಅನೇಕ ವಿದ್ಯಾರ್ಥಿನಿಯರು ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಅವರೆಲ್ಲ ಮತ್ತೆ ಕಾಲೇಜಿಗೆ ವಾಪಸ್ ಬರಬೇಕು’ ಎಂದು ಮನವಿ ಮಾಡಿದರು.

ಮುಸ್ಕಾನ್ ತಂದೆ ಮಹಮ್ಮದ್ ಉಸೇನ್ ಖಾನ್ ಪ್ರತಿಕ್ರಿಯಿಸಿ, ‘ಹಿಜಾಬ್‌ ವಿವಾದದ ಬಳಿಕ ಸುಮಾರು 85 ಸಾವಿರ ಮಕ್ಕಳು ಅರ್ಧಕ್ಕೆ ಶಿಕ್ಷಣ ತೊರೆದಿದ್ದಾರೆ ಎಂಬ ಮಾಹಿತಿ ಇದೆ. ಮುಖ್ಯಮಂತ್ರಿ ಹೇಳಿಕೆ ಸ್ವಾಗತಾರ್ಹ. ಈ ಸಂಬಂಧ ನ್ಯಾಯಾಲಯದಲ್ಲಿಯೂ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.

‘ನಾವು ಮಕ್ಕಳಿಗೆ ಚಿಕ್ಕಂದಿನಿಂದಲೂ ಹಿಜಾಬ್ ಧರಿಸುವುದನ್ನು ಅಭ್ಯಾಸ ಮಾಡಿಸಿರುತ್ತೇವೆ. ಅದಕ್ಕೆ ನಿಷೇಧ ಹೇರುವುದು ಸರಿಯಲ್ಲ. ಇನ್ನೊಂದು ಧರ್ಮದವರು ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋದರೆ ನಮ್ಮ ವಿರೋಧವಿಲ್ಲ. ಅದು ಅವರ ಅಭ್ಯಾಸ’ ಎಂದರು.

ನಿರ್ದೇಶನ ನೀಡಲು ಸಾಧ್ಯವೇ: ವಿಜಯೇಂದ್ರ

ನವದೆಹಲಿ: ’ಹಿಜಾಬ್ ‍ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಅಂತಹ ಸಂದರ್ಭದಲ್ಲಿ ಹಿಜಾಬ್‌ ನಿಷೇಧ ವಾಪಸ್‌ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಲು ಹೇಗೆ ಸಾಧ್ಯ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದರು. 

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಸ್ವತಃ ಮುಖ್ಯಮಂತ್ರಿಯೇ ಕೈಹಾಕಿರುವುದು ಈ ನಾಡಿನ ದುರದೃಷ್ಟ’ ಎಂದರು. 

‘ಕನಿಷ್ಠ ಪಕ್ಷ ಶಾಲಾ, ಕಾಲೇಜುಗಳಿಗೆ ಹೋಗುವ ಮಕ್ಕಳನ್ನಾದರೂ ರಾಜಕೀಯದಿಂದ ದೂರ ಇಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು. ಲೋಕಸಭಾ ಚುನಾವಣೆಯ ಸೋಲಿನ ಭೀತಿಯಲ್ಲಿ ಕಾಂಗ್ರೆಸ್‌ ಸರ್ಕಾರವು ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ’ ಎಂದು ಅವರು ಹೇಳಿದರು. 

‘ಹಿಜಾಬ್‌ಗೆ ಅವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿಯವರು ಒಂದು ಕಡೆ ಹೇಳುತ್ತಾರೆ. ಇನ್ನೊಂದು ಕಡೆಯಲ್ಲಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳ ತಾಳಿ, ಕಾಲುಂಗುರ ತೆಗೆಸಲಾಗುತ್ತಿದೆ. ಇದು ತಲೆ ತಗ್ಗಿಸುವ ಕೆಲಸ’ ಎಂದರು. 

‘ರಾಜ್ಯದಲ್ಲಿ ಇವತ್ತು ಭೀಕರ ಬರಗಾಲವಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಹೀಗಾಗಿ, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಹಿಜಾಬ್‌ ವಿಷಯವನ್ನು ತಂದಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT