ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ದುರಹಂಕಾರಕ್ಕೆ ಕಿಡಿ: ಮಧ್ಯವರ್ತಿಗಳ ಹಾವಳಿ ತಡೆಗೆ ‘ಕೈ’ ಶಾಸಕರ ಆಗ್ರಹ

Published 28 ಜುಲೈ 2023, 23:30 IST
Last Updated 28 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಲವು ಸಚಿವರ ಅಸಹಕಾರ ಮತ್ತು ದುರಹಂಕಾರದ ನಡವಳಿಕೆ ವಿರುದ್ಧ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೇ ಆಕ್ರೋಶ ಹೊರಹಾಕಿದ್ದ ಶಾಸಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಯ ಬಳಿಕವೂ ಮುನಿಸಿನಲ್ಲೇ ಇದ್ದಾರೆ.

ಜಿಲ್ಲಾವಾರು ಸಭೆ ಕರೆದು ಪ್ರತಿಯೊಬ್ಬರ ಸಮಸ್ಯೆ ಪರಿಹರಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದರೂ, ಹಲವು ಶಾಸಕರ ಕೋಪ ಶಮನವಾಗಿಲ್ಲ. ಕೆಲವು ಸಚಿವರು ನಡವಳಿಕೆ ಬದಲಿಸಿಕೊಂಡು, ಶಾಸಕರನ್ನು ಗೌರವಿಸುವುದನ್ನು ರೂಢಿಸಿಕೊಳ್ಳದಿದ್ದರೆ ಮತ್ತೆ ಸಿಡಿದೇಳುವುದಾಗಿ ಅನೌಪಚಾರಿಕವಾಗಿ ಅಭಿಪ್ರಾಯ ಹಂಚಿಕೊಂಡಿರುವ ಕೆಲವು ಶಾಸಕರು ಸುಳಿವು ನೀಡಿದ್ದಾರೆ.

ಶಾಸಕರ ಕೋಪ ತಣಿಸಲು ನಗರದ ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆ ಗದ್ದಲದಲ್ಲೇ ಆರಂಭವಾಗಿ, ಹಾಗೆಯೇ ಅಂತ್ಯಗೊಂಡಿದೆ. ಆರಂಭದಿಂದ ಅಂತ್ಯದವರೆಗೂ ಕೆಲವು ಸಚಿವರ ವಿರುದ್ಧ ಹರಿಹಾಯ್ದ ಅಸಮಾಧಾನಿತ ಶಾಸಕರು, ಎರಡು ತಿಂಗಳ ಅವಧಿಯಲ್ಲಿ ಎದುರಾದ ಮುಜುಗರದ ಸನ್ನಿವೇಶಗಳನ್ನು ಬಿಚ್ಚಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಚಿವರು ನಮಗೆ ಗೌರವ ನೀಡುತ್ತಿಲ್ಲ. ಸಹಕಾರವನ್ನೂ ನೀಡುತ್ತಿಲ್ಲ. ಈ ಬಗ್ಗೆ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ಕರೆಯಬೇಕು’ ಎಂದು ಆಗ್ರಹಿಸಿದ್ದ 33 ಶಾಸಕರು, ಬಿ.ಆರ್‌. ಪಾಟೀಲ ನೇತೃತ್ವದಲ್ಲಿ ಪತ್ರ ಬರೆದಿದ್ದರು. ಈ ಕಾರಣಕ್ಕಾಗಿಯೇ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿತ್ತು. ಪತ್ರಕ್ಕೆ ಸಹಿ ಮಾಡಿದ್ದವರಲ್ಲಿ ಬಸವರಾಜ ರಾಯರಡ್ಡಿ, ಕೆ.ಎಂ. ಶಿವಲಿಂಗೇಗೌಡ ಮತ್ತು ಎಸ್‌.ಎನ್‌. ನಾರಾಯಣಸ್ವಾಮಿ ಮಾತ್ರ ನಿಲುವು ಸಡಿಲಿಸಿದರು. ಉಳಿದ 30 ಶಾಸಕರೂ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ ಎಂದು ಗೊತ್ತಾಗಿದೆ.

ಸಭೆಯುದ್ದಕ್ಕೂ ವಾಕ್ಸಮರ: ಸಭೆಯ ಆರಂಭದಲ್ಲಿ ಶಾಸಕರ ಪತ್ರದ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ, ಅಸಮಾಧಾನ ಹೊರಹಾಕಿದರು. ತಕ್ಷಣವೇ ಎದ್ದು ನಿಂತ ಬಿ.ಆರ್‌. ಪಾಟೀಲ, ‘ಅಪರಾಧಿ ಸ್ಥಾನದಲ್ಲಿ ಇರುವವರು ಕೆಲವು ಸಚಿವರು. ನನ್ನನ್ನು ಏಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದೀರಿ’ ಎಂದು ಪ್ರಶ್ನಿಸಿದರು. ನಂತರ ಹಲವು ಶಾಸಕರು ಸಮರೋಪಾದಿಯಲ್ಲಿ ಸಚಿವರ ವಿರುದ್ಧ ದೂರುಗಳ ಸುರಿಮಳೆಗೈದರು. ಶಾಸಕರ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ ಎಂದು ಕಳವಳವನ್ನೂ ವ್ಯಕ್ತಪಡಿಸಿದರು ಎಂದು ಶಾಸಕರೊಬ್ಬರು ತಿಳಿಸಿದರು.

ಕೆಲವು ಸಚಿವರು ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಶಾಸಕರ ಪತ್ರಗಳನ್ನು ಕಡೆಗಣಿಸುತ್ತಿರುವುದು, ವಯಸ್ಸಿನಲ್ಲಿ ಕಿರಿಯರಾದ ಸಚಿವರು ಹಿರಿಯ ಶಾಸಕರನ್ನು ಏಕವಚನದಲ್ಲಿ ಮಾತನಾಡಿಸುತ್ತಿರುವುದು, ಬಿಜೆಪಿ ಆಡಳಿತದ ಅವಧಿಯಲ್ಲಿ ನೇಮಿಸಿದ್ದ ಅಧಿಕಾರಿಗಳನ್ನೇ ಆಯಕಟ್ಟಿನ ಸ್ಥಾನಗಳಲ್ಲಿ ಮುಂದುವರಿಸಿರುವುದು, ಕೆಲವು ಸಚಿವರು ಶಾಸಕರ ಅಧಿಕಾರದ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು, ತಾಲ್ಲೂಕು ಮಟ್ಟದ ವಿಚಾರಗಳಿಗೂ ಬೆಂಗಳೂರಿನ ಕೆಲವು ಸಚಿವರ ಕಚೇರಿಯಿಂದ ಟಿಪ್ಪಣಿ ರವಾನೆಯಾಗುತ್ತಿರುವ ಬಗ್ಗೆ ಹಲವು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯನವರ ನಡವಳಿಕೆ ಬಗ್ಗೆ ಯಾವ ಶಾಸಕರು ತಕರಾರು ಎತ್ತಲಿಲ್ಲ. ಕಿರಿಯ ಸಚಿವರು ಹಿರಿಯರಿಗೆ ಗೌರವ ಕೊಡದೇ ದುರಹಂಕಾರ ಪ್ರದರ್ಶಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

‘ಪ್ರಜಾವಾಣಿ’ ಜತೆಗೆ ಶುಕ್ರವಾರ ಮಾತನಾಡಿದ ಕೆಲವು ಶಾಸಕರು, ‘ನಾವೂ ಸೇರಿದಂತೆ 135 ಜನ ಗೆದ್ದಿದ್ದಕ್ಕೆ ಇವರು ಸಚಿವರಾಗಿದ್ದಾರೆ. ನಮಗೆ ಫಲಾಪೇಕ್ಷೆಯಿಲ್ಲ. ಸಚಿವರು ತಮ್ಮ ಧೋರಣೆ ಸರಿಪಡಿಸಿಕೊಳ್ಳದೇ ಇದ್ದರೆ, ಬುದ್ದಿ ಕಲಿಸದೇ ಬಿಡುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಹಿಂದೇಟು ಹಾಕುವುದಿಲ್ಲ’ ಎಂದು ಹೇಳಿದರು.

ಸಭೆಯ ಆರಂಭದಲ್ಲಿ ಶಾಸಕರ ವಿರುದ್ಧ ಕೋಪ ಹೊರಹಾಕಿದ್ದ ಸಿದ್ದರಾಮಯ್ಯ, ಕೊನೆಯಲ್ಲಿ ಎಲ್ಲರನ್ನೂ ಮನವೊಲಿಸುವ ಪ್ರಯತ್ನ ಮಾಡಿದರು. 

ಪತ್ರ ಹರಿದೆಸೆದ ಸಿದ್ದರಾಮಯ್ಯ
ಸಚಿವರ ವರ್ತನೆಯ ವಿರುದ್ಧ ಚನ್ನಗಿರಿ ಶಾಸಕ ಬಸವರಾಜ್‌ ಶಿವಗಂಗ ಪತ್ರವೊಂದನ್ನು ಶಾಸಕಾಂಗ ಪಕ್ಷದ ಸಭೆಯಲ್ಲೇ ಸಿದ್ದರಾಮಯ್ಯ ಅವರಿಗೆ ನೀಡಿದ್ದು, ಅದನ್ನು ಕಂಡ ಅವರು ಸಿಟ್ಟಿನಿಂದ ಹರಿದೆಸೆದಿದ್ದಾರೆ. ‘ಸಚಿವರು ನಮಗೆ ಸ್ಪಂದಿಸುತ್ತಿಲ್ಲ. ಶಾಸಕರಾಗಿದ್ದರೂ ಮರ್ಯಾದೆ ಸಿಗುತ್ತಿಲ್ಲ. ನಮ್ಮನ್ನೇ (ಶಾಸಕರನ್ನು) ಸಚಿವರ ವಿಶೇಷಾಧಿಕಾರಿಗಳನ್ನಾಗಿ ನೇಮಿಸಿ. ಆಗ ಅವರಿಂದ ಕೆಲಸ ಮಾಡಿಸಿಕೊಳ್ಳಲು ಸುಲಭವಾಗುತ್ತದೆ’ ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

ರಾಜೀನಾಮೆಗೆ ಮುಂದಾಗಿದ್ದ ಶಾಸಕ ಬಿ.ಆರ್‌. ಪಾಟೀಲ

ಸಿದ್ದರಾಮಯ್ಯ ಅವರು ಶಾಸಕರ ಪತ್ರ ಕುರಿತು ಅಸಮಾಧಾನ ಹೊರಹಾಕುತ್ತಿದ್ದಂತೆಯೇ ಸಿಟ್ಟಿಗೆದ್ದ ಶಾಸಕ ಬಿ.ಆರ್‌. ಪಾಟೀಲ, ‘ನನ್ನನ್ನು ಅಪರಾಧಿಯಂತೆ ಬಿಂಬಿಸಬೇಡಿ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಇಲ್ಲಿರುವುದಿಲ್ಲ. ರಾಜೀನಾಮೆ ಸಲ್ಲಿಸಿ ನಡೆಯುತ್ತೇನೆ’ ಎಂದು ಸಭೆಯಿಂದ ಹೊರ ನಡೆಯಲು ಮುಂದಾಗಿದ್ದರು. ಸಚಿವ ಡಾ. ಶರಣ ಪ್ರಕಾಶ ಪಾಟೀಲ ತಡೆದರು ಎಂದು ಮೂಲಗಳು ತಿಳಿಸಿವೆ.

ಎರಡು ಬಾರಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ‍ಪಾಟೀಲ, ‘ನನಗೆ 75 ವರ್ಷ ಆಯಿತು. ದಶಕಗಳ ಕಾಲದಿಂದ ರಾಜಕಾರಣದಲ್ಲಿದ್ದೇನೆ. ಮೌಲ್ಯಾಧಾರಿತ ರಾಜಕಾರಣಕ್ಕಾಗಿ ಇಲ್ಲಿ ಉಳಿದಿದ್ದೇನೆ. ವರ್ಗಾವಣೆ ದಂಧೆಗೆ ಅಧಿಕಾರ ಬಳಸಿಲ್ಲ. ಪತ್ರ ಕೊಟ್ಟರೆ ಸಚಿವರು ತೆಗೆದುಕೊಳ್ಳು ವುದಕ್ಕೂ ಹಿಂದು–ಮುಂದು ನೋಡುತ್ತಾರೆ. ನಮ್ಮ ವಯಸ್ಸಿಗೂ ಮರ್ಯಾದೆ ಬೇಡವೆ’ ಎಂದು ಪ್ರಶ್ನಿಸಿದ್ದಾಗಿ ಗೊತ್ತಾಗಿದೆ.

ದುಡ್ಡು ಕೊಟ್ಟರೆ ಮಂತ್ರಿ ಆಗಬಹುದಾ?

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನೇ ಸೋಲಿಸಲು ಪ್ರಯತ್ನಿಸಿದ ಆರೋಪದ ಮೇಲೆ ಎನ್‌.ಎಸ್‌. ಬೋಸರಾಜು ಅವರ ವಿರುದ್ಧ ರಾಯಚೂರಿನ ಶಾಸಕರು ದೂರು ನೀಡಿದ್ದರೂ, ಅದನ್ನು ಕಡೆಗಣಿಸಿ ಅವರಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಸಭೆಯಲ್ಲೇ ಅಸಮಾಧಾನ ಹೊರಹಾಕಿದ್ದಾರೆ.

‘ಚುನಾವಣೆಯಲ್ಲಿ ಒಬ್ಬರು ನಮ್ಮನ್ನೇ ಸೋಲಿಸಲು ಪ್ರಯತ್ನಿಸಿದ್ದರು. ಅವರನ್ನೇ ನೀವು ಮಂತ್ರಿ ಮಾಡಿದ್ದೀರಿ. ಏನಿದರ ಅರ್ಥ’ ಎಂದು ಮುಖ್ಯಮಂತ್ರಿಯವರನ್ನು ಹಂಪನಗೌಡ ಪ್ರಶ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅವರಿಗೆ ದನಿಗೂಡಿಸಿದ ಕೆಲವು ಶಾಸಕರು, ‘ಕೆಲವರು ದುಡ್ಡು ಕೊಟ್ಟು ಮಂತ್ರಿ ಆಗಿದ್ದಾರೆ. ಈಗ ವಿಧಾನ ಪರಿಷತ್‌ ಸ್ಥಾನವನ್ನೂ ದುಡ್ಡಿದ್ದವರಿಗೆ ಕೊಡಲು ತಯಾರಿ ನಡೆದಿದೆ. ದುಡ್ಡಿದ್ದರೆ ಎಲ್ಲವನ್ನೂ ಪಡೆಯಬಹುದಾ’ ಎಂಬುದಾಗಿ ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ.

146 ತಹಶೀಲ್ದಾರ್‌ಗಳ ವರ್ಗಾವಣೆ

ಶಾಸಕರ ಅಸಮಾಧಾನ ಹೊರಬಿದ್ದ ಬೆನ್ನಲ್ಲೇ ಗ್ರೇಡ್‌–1 ಮತ್ತು ಗ್ರೇಡ್‌–2 ದರ್ಜೆಯ 146 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ತಹಶೀಲ್ದಾರ್‌ಗಳ ವರ್ಗಾವಣೆಗೆ ಸಂಬಂಧಿಸಿದಂತೆ ಒಂದೇ ದಿನ ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಅನುಕ್ರಮವಾಗಿ 84, 46 ಮತ್ತು 16 ತಹಶೀಲ್ದಾರ್‌ಗಳ ವರ್ಗಾವಣೆಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗಿದೆ.

ಈ ಪೈಕಿ 12 ಮಂದಿ ತಹಶೀಲ್ದಾರ್‌ಗಳನ್ನು ಈಗ ಇರುವ ಸ್ಥಳದಲ್ಲೇ ಮುಂದುವರಿಸಲಾಗಿದೆ. ಅದನ್ನು ವರ್ಗಾವಣೆ ಆದೇಶದಲ್ಲೇ ಪ್ರಕಟಿಸ ಲಾಗಿದೆ. ಈ ಹಿಂದೆ ವರ್ಗಾವಣೆಯಾಗಿದ್ದು, ಸ್ಥಳ ನಿರೀಕ್ಷಣೆಯಲ್ಲಿದ್ದ ಕೆಲವರಿಗೆ ಶುಕ್ರವಾರದ ಪಟ್ಟಿಗಳಲ್ಲಿ ಹುದ್ದೆ ತೋರಿಸಲಾಗಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಮಂದಿ ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಲಾಗಿತ್ತು.  ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಶಾಸಕರು, ಸಚಿವರು ಮತ್ತು ಪಕ್ಷದ ಮುಖಂಡರ ಶಿಫಾರಸು ಆಧರಿಸಿ ತಹಶೀಲ್ದಾರ್‌ಗಳ ವರ್ಗಾವಣೆ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿತ್ತು. ಆದರೆ, ಅದನ್ನು ಪ್ರಕಟಿಸದೇ ಕೆಲವು ದಿನಗಳಿಂದ ತಡೆ ಹಿಡಿಯಲಾಗಿತ್ತು. ಶಾಸಕರು ಪತ್ರದ ಮೂಲಕ ಅಸಮಾಧಾನ ಹೊರಹಾಕಿದ ಬಳಿಕ 170 ತಹಶೀಲ್ದಾರ್‌ಗಳ ವರ್ಗಾವಣೆಗೆ ಆದೇಶ ಹೊರಡಿಸಲು ಸಿದ್ಧತೆ ನಡೆದಿತ್ತು. ಆದರೆ, ಅಂತಿಮವಾಗಿ 146 ಮಂದಿಯ ವರ್ಗಾವಣೆ ಆದೇಶಗಳು ಹೊರಬಿದ್ದಿವೆ ಎಂದು ಮೂಲಗಳು ತಿಳಿಸಿವೆ.

ನಿಗಮ– ಮಂಡಳಿ ನೇಮಕಕ್ಕೆ ಸಮಿತಿ

ನಿಗಮ, ಮಂಡಳಿ, ಪ್ರಾಧಿಕಾರ ಸೇರಿದಂತೆ ನಾಮನಿರ್ದೇಶನದ ಮೂಲಕ ಅಧಿಕಾರ ನೀಡುವ ಪ್ರಕ್ರಿಯೆಯನ್ನು ನ್ಯಾಯಸಮ್ಮತವಾಗಿ ನಡೆಸುವಂತೆ ಹಲವು ಶಾಸಕರು ಸಭೆಯಲ್ಲಿ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ನೇಮಕಾತಿಗಾಗಿ ಆಯ್ಕೆ ಸಮಿತಿ ರಚಿಸುವುದಾಗಿ ಪ್ರಕಟಿಸಿದ್ದಾರೆ.

ನೀವು ಅನುದಾನ ಕೊಡಲು ಸಾಧ್ಯವೇ ಇಲ್ಲ ಎನ್ನುತ್ತೀರಿ. ಆದರೆ, ಕಮಿಷನ್‌ ಕೊಟ್ಟರೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಮೂಲಕ ಅನುದಾನ ಕೊಡಿಸುವುದಾಗಿ ಮಧ್ಯವರ್ತಿಗಳು ನಮ್ಮ ಬಳಿ ಬರುತ್ತಿದ್ದಾರೆ. ಹೀಗಿರುವಾಗ ನಾವು ಶಾಸಕರಾಗಿಆಯ್ಕೆಯಾಗಿರುವುದು ಏಕೆ?
ಯಶವಂತರಾಯಗೌಡ ಪಾಟೀಲ, ಇಂಡಿ
ಡಿ.ಕೆ. ಶಿವಕುಮಾರ್‌ ಮತ್ತು ನಾನು ಒಟ್ಟಿಗೆ ವಿಧಾನಸಭೆಗೆ ಬಂದವರು. ಆರನೇ ಬಾರಿ ಶಾಸಕನಾದರೂ ಕಾರಣಾಂತರಗಳಿಂದ ನಾನು ಹೀಗೆ ಉಳಿದಿರಬಹುದು. ನನ್ನ ಕ್ಷೇತ್ರದಲ್ಲಿ ಬಿಜೆಪಿ ಅವಧಿಯಲ್ಲಿ ನೇಮಿಸಿದ್ದ ಅಧಿಕಾರಿಗಳ ಬದಲಾವಣೆ ಆಗುತ್ತಿಲ್ಲ. ಪಕ್ಷ ಕಾರ್ಯಕರ್ತರು ನನ್ನನ್ನೇ ಅಣಕಿಸುವಂತಾಗಿದೆ.
ಸಿ.ಎಸ್. ನಾಡಗೌಡ, ಮುದ್ದೇಬಿಹಾಳ
ನನ್ನ ಕ್ಷೇತ್ರದಲ್ಲಿ ಶಾಸಕರ ಅಧಿಕಾರದ ವ್ಯಾಪ್ತಿಯ ವಿಚಾರಗಳಿಗೂ ಮುಖ್ಯಮಂತ್ರಿ ಕಚೇರಿ ಹೆಸರಿನಲ್ಲಿ ಟಿಪ್ಪಣಿಗಳು ಬಂದಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಶಾಸಕನಾಗಿ ಏನು ಮಾಡಬೇಕು?
ವಿಜಯಾನಂದ ಕಾಶಪ್ಪನವರ, ಹುನಗುಂದ
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ₹ 12 ಲಕ್ಷ ಅನುದಾನ ಬೇಕಿದೆ. ಅದನ್ನು ಕೇಳಲು ಹೋದರೆ ಸಚಿವರು ಸ್ಪಂದಿಸುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಬಂದು ಹೀಗಾದರೆ ಗತಿ ಏನು?
ಜೆ.ಎನ್‌. ಗಣೇಶ್‌, ಕಂಪ್ಲಿ
ಕಟ್ಟಪಟ್ಟು ಗೆದ್ದು ಬಂದವರು ನಾವು. ಕೆಲವು ಸಚಿವರು ಶಾಸಕರಿಗೆ ಮರ್ಯಾದೆ ಕೊಡುತ್ತಿಲ್ಲ.
ಪಿ.ಎಂ. ನರೇಂದ್ರಸ್ವಾಮಿ, ಮಳವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT