ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ‘ಕುಣಿವ ಕಪ್ಪೆ’ಗಳು ಅಪಾಯದಂಚಿಗೆ

Published 4 ಅಕ್ಟೋಬರ್ 2023, 23:30 IST
Last Updated 4 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಜಾಗತಿಕ ಹವಾಮಾನ ಬದಲಾವಣೆ ಕಾರಣಕ್ಕಾಗಿ 2004 ರಿಂದ 2022 ರ ಅವಧಿಯಲ್ಲಿ ಜಾಗತಿಕವಾಗಿ 300 ಕ್ಕೂ ಹೆಚ್ಚು ಉಭಯಜೀವಿಗಳು ವಿನಾಶದಂಚಿಗೆ ತಲುಪಿವೆ. ಕರ್ನಾಟಕದಲ್ಲಿ ಮಾತ್ರ ಕಂಡುಬರುವ ‘ಕುಣಿವ ಕಪ್ಪೆ’ಗಳ 24 ಪ್ರಬೇಧಗಳಲ್ಲಿ 2 ವಿನಾಶದಂಚಿಗೆ ತಲುಪಿದ್ದರೆ, 15 ಪ್ರಬೇಧಗಳು ಅಪಾಯದ ಸ್ಥಿತಿಯಲ್ಲಿವೆ.

‘ನೇಚರ್‌’ ವೈಜ್ಞಾನಿಕ ಪತ್ರಿಕೆಯಲ್ಲಿ(ಅ.4 ರ ಸಂಚಿಕೆ) ಈ ಕುರಿತು ವಿಸ್ತೃತ ವೈಜ್ಞಾನಿಕ ಲೇಖನವೊಂದು ಪ್ರಕಟವಾಗಿದೆ.

‘ಕುಣಿವ ಕಪ್ಪೆ’ಗಳ ಪ್ರಬೇಧಗಳು ಭಾರತ– ಮಲಯಾ ಭೂಭಾಗದ ಅತಿ ಹೆಚ್ಚು ಅಪಾಯದಲ್ಲಿರುವ ಕಪ್ಪೆಗಳ ಕುಟುಂಬ. ಭಾರತದಲ್ಲಿ 426 ಪ್ರಬೇಧಗಳ ಅಧ್ಯಯನ ನಡೆಸಿದ್ದು, 136 ಪ್ರಬೇಧಗಳು (ಶೇ 41) ಅಪಾಯದಂಚಿಗೆ ತಲುಪಿವೆ. ಕೇರಳದಲ್ಲಿ ಅತಿ ಹೆಚ್ಚು ಪ್ರಬೇಧಗಳು ಅಪಾಯದ ಸ್ಥಿತಿಯಲ್ಲಿವೆ. ಆ ಬಳಿಕ ತಮಿಳುನಾಡು ಮತ್ತು ಕರ್ನಾಟಕದಲ್ಲೂ ಕಪ್ಪೆಗಳು ಅಪಾಯದಂಚಿಗೆ ಹೋಗಿವೆ. ರಾಜ್ಯದಲ್ಲಿ 100 ಪ್ರಬೇಧದ ಕಪ್ಪೆಗಳಲ್ಲಿ 30 ರಷ್ಟು ಅಪಾಯದಲ್ಲಿವೆ.

‘ಸೃಷ್ಟಿ ಮಣಿಪಾಲ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆ’ಯ ಪ್ರಾಧ್ಯಾಪಕ ಗುರುರಾಜ ಕೆ.ವಿ ಅವರು ಈ ವೈಜ್ಞಾನಿಕ ಲೇಖನದ ಸಹ ಲೇಖಕರೂ ಆಗಿದ್ದಾರೆ.  ಗುರುರಾಜ್‌ ಪ್ರಕಾರ ‘ಕಪ್ಪೆಗಳ ಬಗ್ಗೆ ಅರಿವು ಮಾತ್ರವಲ್ಲ, ಅವುಗಳ ಆವಾಸಸ್ಥಾನ, ಹವಾಮಾನ ವೈಪರೀತ್ಯದಿಂದ ಆಗುವ ಪರಿಣಾಮಗಳು, ಗುಣಲಕ್ಷಣಗಳು ಮತ್ತು ವಿಕಸನಗಳ ಬಗ್ಗೆ ವೈಜ್ಞಾನಿಕ ಅಧ್ಯಯನದ ಅವಶ್ಯ ಇದೆ. ಅಲ್ಲದೇ, ರಾಜ್ಯ ಮತ್ತು ರಾಷ್ಟ್ರ ವ್ಯಾಪಿ ಉಭಯ ಜೀವಿ ಸಂರಕ್ಷಣಾ ನೀತಿಯ ಅವಶ್ಯಕತೆ ಇದೆ. ಕಪ್ಪೆಗಳನ್ನು ಗುರುತಿಸುವುದರ ಜತೆಗೆ ಅಧ್ಯಯನದಲ್ಲೂ ಪಾಲ್ಗೊಳ್ಳಲು ಪ್ರೋತ್ಸಾಹ ನೀಡಬೇಕಾಗಿದೆ’.

ಹಿಂದಿನ ಅಧ್ಯಯನಕ್ಕಿಂತ ಭಿನ್ನ ಫಲಿತಾಂಶ

ಈ ಹಿಂದೆ ನಡೆಸಿದ್ದ ಅಧ್ಯಯನದಲ್ಲಿ ಆವಾಸಸ್ಥಾನ ನಾಶ ಮತ್ತು ಸಾಂಕ್ರಾಮಿಕ ರೋಗಗಳು ಉಭಯಜೀವಿಗಳ  ಅವನತಿಗೆ ಕಾರಣ ಎಂದು ಹೇಳಲಾಗಿತ್ತು. ಆದರೆ, ವಿಶ್ವದಾದ್ಯಂತ ಎರಡು ದಶಕಗಳ ಅಮೂಲ್ಯ ದತ್ತಾಂಶವನ್ನು ವಿಶ್ಲೇಷಿಸಿರುವ ಹೊಸ ಲೇಖನವು ಹವಾಮಾನ ಬದಲಾವಣೆಯು ಕಪ್ಪೆಗಳು, ಸಲಾಮಾಂಡರ್‌ಗಳು ಮತ್ತು ಸಿಸಿಲಿಯನ್‌ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಏಕೈಕ ಕಾರಣ ಎಂದು ಲೇಖನವು ಪ್ರತಿಪಾದಿಸಿದೆ.

ಕೃಷಿಯ ಪರಿಣಾಮ ಆವಾಸಸ್ಥಾನ ನಾಶ ಮತ್ತು ಅವನತಿ (ಬೆಳೆಗಳು,ಜಾನುವಾರುಗಳು ಮತ್ತು ಜಾನುವಾರು ಮೇಯಿಸುವಿಕೆ ಮತ್ತು ಮರಗಳ ಬೆಳೆಸುವುದು), ಮೂಲಸೌಕರ್ಯ ಅಭಿವೃದ್ಧಿ ಮತ್ತು ಇತರ ಕೈಗಾರಿಕೆಗಳೂ ಉಭಯಜೀವಿಗಳ ಸಂಖ್ಯೆಯ ಕುಸಿತಕ್ಕೆ ಪ್ರಮುಖ ಕಾರಣವಾಗಿವೆ. ಅಲ್ಲದೇ, ಕೆಲವು ದೇಶಗಳಲ್ಲಿ ಮಾನವರು ಮತ್ತು ಇತರ ಪ್ರಾಣಿಗಳು ಶಿಲೀಂಧ್ರವನ್ನು ಹೊಸ ಸ್ಥಳಗಳಿಗೆ ಪರಿಚಯಿಸುವುದರಿಂದ ಎರಡನೇ ಜಾಗತಿಕ ಉಭಯಜೀವಿಗಳ ಸಾಂಕ್ರಾಮಿಕ ರೋಗವನ್ನು ಕಾಣಬಹುದು. ಇದರಿಂದ ಕಪ್ಪೆಗಳ ಸಾಮೂಹಿಕ ನಾಶವಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

8000 ಉಭಯಜೀವಿ ಪ್ರಬೇಧಗಳ ಮೌಲ್ಯ ಮಾಪನ

2286 ಕಪ್ಪೆ ಜಾತಿಗಳ ಮೊದಲ ಬಾರಿ ಮೌಲ್ಯಮಾಪನ

1000 ವಿಷಯ ತಜ್ಞರು ದತ್ತಾಂಶ ಮತ್ತು ಪರಿಣಿತಿ ಹಂಚಿಕೆ

ದಕ್ಷಿಣ ಭಾರತದ ಸ್ಥಿತಿಗತಿ

ರಾಜ್ಯ;ಪ್ರಬೇಧಗಳು; ಅಳಿವಿನತ್ತ;ಶೇ

*ಕೇರಳ;178;84;53.5

*ತಮಿಳುನಾಡು;128;54;45.4

*ಕರ್ನಾಟಕ; 100;30;30

( ನೇಚರ್‌ನಲ್ಲಿ ಪ್ರಕಟಗೊಂಡ ಲೇಖನ 'ongoing declines for the worlds amphibians in the emerging threat's')

ಅಳಿವಿನಂಚಿನ ಜಾಗತಿಕ ಕಪ್ಪೆಗಳು

2004 ರ ಬಳಿಕ ಅಳಿವಿನಂಚಿನಲ್ಲಿರುವ ಕಪ್ಪೆಗಳೆಂದರೆ ಕೋಸ್ಟರಿಕಾದ ಚಿರಿಕ್ವಿ ಹಾರ್ಲೆಕ್ವಿನ್ ಟೋಡ್‌. ಆಸ್ಟ್ರೇಲಿಯಾದ ಚೂಪು ಮೂತಿಯ ದಿನದ ಕಪ್ಪೆ. ಗ್ವಾಟೆಮಾಲದ ಕ್ರಾಗಸ್ಟರ್‌ ಮೈಲೋಮಿಲೋನ್‌ ಮತ್ತು ಜಲ್ಪಾ ಫಾಲ್ಸ್‌ ಬ್ರೂಕ್‌ ಸಲಾಮಾಂಡರ್‌. 27 ಹೆಚ್ಚುವರಿ ತೀಕ್ಷ್ಣವಾಗಿ ಅಳಿವಿನಂಚಿನಲ್ಲಿರುವ ಪ್ರಭೇದಗಳು ಈಗ ವಿನಾಶ ಹೊಂದಿರುವುದಾಗಿ ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT