ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಡಿಕೆಯಿಂದ ಕೇತಗಾನಹಳ್ಳಿ ಭೂ ಕಬಳಿಕೆ ಆರೋಪ: ಸರ್ಕಾರದ ವಾದಕ್ಕೆ ಕೋರ್ಟ್ ಅತೃಪ್ತಿ

Published 16 ಜೂನ್ 2023, 19:47 IST
Last Updated 16 ಜೂನ್ 2023, 19:47 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಅವರ ಸಂಬಂಧಿ ಸಾವಿತ್ರಮ್ಮ ವಿರುದ್ಧ ಕೇತಗಾನಹಳ್ಳಿ ಭೂ ಕಬಳಿಕೆ ಆರೋಪ ಪ್ರಕರಣದಲ್ಲಿ; ಕಬಳಿಕೆಯಾದ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲು ಸೂಚಿಸಿರುವ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ಅನುಪಾಲನಾ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಜುಲೈ 7ರವರೆಗೆ ಕಾಲಾವಕಾಶ ನೀಡಿದೆ.

‘ಪ್ರಕರಣದಲ್ಲಿ ಒತ್ತುವರಿ ಜಮೀನು ವಶಕ್ಕೆ ಪಡೆಯಲು ಸೂಚಿಸಿದ ಹೈಕೋರ್ಟ್ ಆದೇಶ ಜಾರಿಗೊಳಿಸಲು ಸರ್ಕಾರ ವಿಫಲವಾಗಿದೆ‘ ಎಂದು ಆರೋಪಿಸಿ ಸಮಾಜ ಪರಿವರ್ತನಾ ಸಮಯದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು ಹಾಜರಾಗಿ, ‘ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿ ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿತ್ತು. ಅವರು ಉತ್ತರಿಸಿದ್ದು, ನಾವು ಸರ್ಕಾರಿ ಜಮೀನು ಒತ್ತುವರಿ ಮಾಡಿಲ್ಲ. ಸರ್ಕಾರ ಕೆಲವರಿಗೆ ಜಮೀನು ಮಂಜೂರು ಮಾಡಿದೆ. ಅವರಿಂದ ನಾವು ಖರೀದಿ ಮಾಡಿದ್ದೇವೆ ಎಂದು ವಿವರಣೆ ನೀಡಿದ್ದಾರೆ. ಆ ಕುರಿತ ದಾಖಲೆಗಳನ್ನು ಪರಿಶೀಲನೆ ನಡೆಸಲು ಸರ್ಕಾರ ಮುಂದಾದಾಗ ದಾಖಲೆಗಳು ನಾಶವಾಗಿರುವುದು ಕಂಡು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡಲು ಮತ್ತು ಹೈಕೋರ್ಟ್‌ನ ಹಿಂದಿನ ಆದೇಶಗಳ ಅನುಪಾಲನಾ ವರದಿ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು‘ ಎಂದು ಕೋರಿದರು.

ಈ ವಿವರಣೆಯನ್ನು ಒಪ್ಪದ ನ್ಯಾಯಪೀಠ, ’ದಾಖಲೆಗಳು ನಾಶವಾಗಿವೆ ಎಂದರೆ ಏನರ್ಥ? ಸರ್ಕಾರಿ ಭೂಮಿ ಮತ್ತು ದಾಖಲೆಗಳಿಗೆ ಸರ್ಕಾರವೇ ಕಸ್ಟೋಡಿಯನ್ ಆಗಿರುತ್ತದೆ. ದಾಖಲೆಗಳು ನಾಶವಾಗಿವೆ ಎಂದು ಹೇಳಿದರೆ ಒಪ್ಪಲಾಗದು. ಪ್ರಕರಣದಲ್ಲಿ ಏನೆಲ್ಲಾ ಕ್ರಮ ಜರುಗಿಸಬೇಕು ಎಂಬ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಅಗತ್ಯ ಕ್ರಮ ಜರುಗಿಸಲಿದೆ‘ ಎಂದು ಮೌಖಿಕ ಎಚ್ಚರಿಕೆ ನೀಡಿತು.

ಆಕ್ಷೇಪಣೆ ಏನು?: ‘ಪ್ರಕರಣದಲ್ಲಿ ಒಟ್ಟು 71 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆಯೇ ಹೊರತು 14 ಎಕರೆ 14 ಗುಂಟೆಯಲ್ಲ. ಈ ಕುರಿತು 2014ರ ಆಗಸ್ಟ್ 4ರಂದು ನೀಡಿದ ಲೋಕಾಯುಕ್ತ ವರದಿಯನ್ನು ಸರ್ಕಾರ ಒಪ್ಪಿಕೊಂಡಿದೆ. ಲೋಕಾಯುಕ್ತ ವರದಿ ಜಾರಿಗೊಳಿಸಲಾಗುವುದು ಎಂಬುದಾಗಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ. ಆದರೆ, ಈವರೆಗೂ ಒತ್ತುವರಿಯಾದ ಜಮೀನನ್ನು ಸರ್ಕಾರ ವಶಕ್ಕೆ ಪಡೆದಿಲ್ಲ‘ ಎಂದು ಅರ್ಜಿದಾರು ಆಕ್ಷೇಪಿಸಿದ್ದಾರೆ.

ವಿನಯ ಕುಲಕರ್ಣಿ ಅರ್ಜಿ: ಇಂದು ಸಿಬಿಐ ಆಕ್ಷೇಪಣೆ ಸಲ್ಲಿಕೆ

ಬೆಂಗಳೂರು: ಹುಬ್ಬಳ್ಳಿ–ಧಾರವಾಡ ಕಾರ್ಪೂರೇಷನ್‌ನ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಕಾರಣಕ್ಕಾಗಿ ಧಾರವಾಡ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡುವಂತೆ ಕೋರಿ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಜನಪ್ರತಿನಿಧಿಗಳ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಕುರಿತ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ ಇದೇ 17ರಂದು (ಶನಿವಾರ) ವಿಚಾರಣೆ ನಡೆಸಲಿದ್ದು, ಸಿಬಿಐ ತನ್ನ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಲಿದೆ.

‘ಹುಬ್ಬಳ್ಳಿ–ಧಾರವಾಡ ಕಾರ್ಪೋರೇಷನ್‌ನ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಇದೇ 20ರಂದು ಚುನಾವಣೆ ನಿಗದಿಯಾಗಿದೆ. ನಾನು ಕ್ಷೇತ್ರದ ಶಾಸಕನಾಗಿ ಮತ ಚಲಾಯಿಸಲು ಹಕ್ಕನ್ನು ಪಡೆದಿರುವ ಕಾರಣ ಅಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಧಾರವಾಡ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಬೇಕು‘ ಎಂದು ಅರ್ಜಿದಾರರು ಕೋರಿದ್ದಾರೆ.

2016ರ ಜೂನ್ 15ರಂದು ನಡೆದಿದ್ದ ಬಿಜೆಪಿ ಮುಖಂಡ ಹಾಗೂ ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಗೌಡರ್ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ ಕುಲಕರ್ಣಿ ಅವರಿಗೆ, ’ನ್ಯಾಯಾಲಯದ ಅನುಮತಿ ಇಲ್ಲದೆ ಧಾರವಾಡ
ಜಿಲ್ಲೆ ಪ್ರವೇಶಿಸಬಾರದು‘ ಎಂದು ಕೋರ್ಟ್‌ ನಿರ್ಬಂಧ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT