ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17.09 ಲಕ್ಷ ಸಣ್ಣ ರೈತ ಕುಟುಂಬಗಳಿಗೆ ಪರಿಹಾರ: ಕಂದಾಯ ಸಚಿವ ಕೃಷ್ಣ ಬೈರೇಗೌಡ

ಜೀವನೋಪಾಯ ನಷ್ಟ ಪರಿಹಾರ ವಿತರಿಸಲು ತೀರ್ಮಾನ
Published 10 ಜೂನ್ 2024, 16:38 IST
Last Updated 10 ಜೂನ್ 2024, 16:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 17.09 ಲಕ್ಷ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳಿಗೆ ಜೀವನೋಪಾಯ ನಷ್ಟ ಪರಿಹಾರವಾಗಿ ತಲಾ ₹2,800ರಿಂದ ₹3,000 ಸಾವಿರ ನೀಡಲು ಸರ್ಕಾರ ನಿರ್ಧರಿಸಿದೆ.

ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಿ, ನಿರ್ಣಯ ಕೈಗೊಳ್ಳಲು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿಯ ಸಭೆಯ ಬಳಿಕ ಈ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ‘ಜೀವನೋಪಾಯ ನಷ್ಟ ಪರಿಹಾರ ವಿತರಿಸಲು ರೈತರ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದರು.

‘ಮಳೆ ಆಶ್ರಿತ ಮತ್ತು ನಾಲೆಗಳ ಕೊನೆಯ ಭಾಗದಲ್ಲಿರುವ ರೈತರಿಗೂ ಬೆಳೆ ನಷ್ಟ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಸುಮಾರು 7 ಲಕ್ಷ ರೈತರಿಗೆ ಲಾಭವಾಗಲಿದೆ. ಜಿಲ್ಲಾಧಿಕಾರಿಗಳ ವರದಿ ಆಧಾರದಲ್ಲಿ ಈ ಪರಿಹಾರ ವಿತರಿಸಲಾಗುವುದು’ ಎಂದರು.

‘ಕೇಂದ್ರದಿಂದ ಎನ್‌ಡಿಆರ್‌ಎಫ್‌ ಪರಿಹಾರ ₹3,454 ಕೋಟಿ ಬಂದಿತ್ತು. 27.50 ಲಕ್ಷ ರೈತರಿಗೆ ₹2,451 ಕೋಟಿಯನ್ನು ಮೇ ತಿಂಗಳ ಮೊದಲ ವಾರದಲ್ಲಿಯೇ ವಿತರಿಸಲಾಗಿದೆ. ಎನ್‌ಡಿಆರ್‌ಎಫ್‌ನ ಉಳಿದ ಹಣ ಮತ್ತು ರಾಜ್ಯ ಸರ್ಕಾರದಿಂದ ₹272 ಕೋಟಿ ಸೇರಿಸಿ ನಷ್ಟ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಇನ್ನೊಂದು ವಾರದಲ್ಲಿ ಪರಿಹಾರ ಪಾವತಿಸಲು ಸಾಧ್ಯವಾಗುವಂತೆ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ’ ಎಂದರು. 

‘ಮುಂಗಾರು ಸ್ಥಿತಿಯ ಬಗ್ಗೆಯೂ ಸಭೆಯಲ್ಲಿ ಅವಲೋಕನ ನಡೆಸಲಾಗಿದೆ. ವಾಡಿಕೆಯಂತೆ ಪೂರ್ವ ಮುಂಗಾರು ಮಳೆ 115 ಮಿಮೀ ಆಗುತ್ತದೆ. ಆದರೆ, ಈ ಬಾರಿ 150 ಮಿಮೀ ಮಳೆ ಆಗಿದೆ. ಕಳೆದ ವರ್ಷ ಶೇ 71ರಷ್ಟು ಮಳೆ ಕೊರತೆ ಆಗಿತ್ತು. ಈ ಬಾರಿ ಒಂದು ಭಾಗಕ್ಕೆ ಸೀಮಿತವಾಗದೆ, ಎಲ್ಲ ಭಾಗಗಳಲ್ಲೂ ಮಳೆ ಬಂದಿದೆ. ಐದು ಜಿಲ್ಲೆಗಳಲ್ಲಿ ವಾಡಿಕೆ, ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಮತ್ತು ಉಳಿದ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗಿದೆ’ ಎಂದರು.

‘ಕೃಷಿ ವಿಮೆ ಮೂಲಕವೂ ರೈತರಿಗೆ ಈ ಬಾರಿ ಅತೀ ಹೆಚ್ಚು ₹1,654 ಕೋಟಿ ಪರಿಹಾರ ಸಿಕ್ಕಿದೆ. ಇನ್ನೂ ₹130 ಕೋಟಿ ಪರಿಹಾರ ನೀಡಲು ಬಾಕಿ ಇದೆ’ ಎಂದರು.

‘ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಮಳೆ ಸಮಯದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದೇ ಶನಿವಾರದಿಂದ ವಿಭಾಗವಾರು ಸಭೆ ನಡೆಸುತ್ತೇನೆ’ ಎಂದೂ ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT