ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮೈತ್ರಿಗೆ ಒಗ್ಗಟ್ಟಿನ ಜಪ; ಬಿಜೆಪಿಗೆ ಕೇವಲ ಮೋದಿ ಗುಂಗು

Last Updated 30 ಏಪ್ರಿಲ್ 2019, 15:45 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿದ ರೈತರು ಈಗ ಸಾಲು ಸಾಲಾಗಿ ಜೈಲು ಪಾಲಾಗುತ್ತಿದ್ದಾರೆ. ಆದರೆ, ಇಲ್ಲಿ ಇದು ಮಾತ್ರ ಚುನಾವಣೆಯ ಚರ್ಚೆಯ ವಿಷಯ ಅಲ್ಲ! ಬದಲಿಗೆ ರಾಜಕೀಯ ದೋಷಾರೋಪಣೆ ಮೇಲಾಟವೇ ನಡೆದಿದೆ.

ಇದೇ ಕ್ಷೇತ್ರದಲ್ಲಿ ಆರು ತಿಂಗಳ ಹಿಂದೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಗೆಲುವು ತಪ್ಪಿಸಿಕೊಂಡ ಮೈತ್ರಿ ಕೂಟ ಇನ್ನಷ್ಟು ತಂತ್ರಗಾರಿಕೆ ಮಾಡಿ ಗೆಲುವಿನ ಗೆರೆ ದಾಟಲು ಹವಣಿಸುತ್ತಿದೆ. ಬಿಜೆಪಿ ಎಲ್ಲರಂತೆ ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸನ್ನು ನೆಚ್ಚಿ ಕುಳಿತಿದೆ.

ಇದು ಸಾರ್ವತ್ರಿಕ ಚುನಾವಣೆ. ಈ ಚುನಾವಣೆಯಲ್ಲಿ ನಮ್ಮ ಗೆಲುವಿನ ಅಂತರ ಉಪ ಚುನಾವಣೆಯ ಎರಡರಷ್ಟು ಎಂಬ ಬಿಜೆಪಿ ಮುಖಂಡರ ಆತ್ಮವಿಶ್ವಾಸವನ್ನು ಜೆಡಿಎಸ್‌–ಕಾಂಗ್ರೆಸ್‌ ಮುಖಂಡರು ಅತಿ ಹುಮ್ಮಸ್ಸಿನಲ್ಲೇ ಅಲ್ಲಗಳೆಯುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿತ್ತು. ಮತದಾರರನ್ನು ತಲುಪಲು ಈಗ ಕಾಲಾವಕಾಶ ಸಿಕ್ಕಿದೆ. ಹಾಗಾಗಿ, ಗೆಲುವು ತಮ್ಮದೇ ಎಂದು ಮೈತ್ರಿ ಮುಖಂಡರು ಹಿಗ್ಗಿನಿಂದ ಹೇಳುತ್ತಿದ್ದಾರೆ.

‘ಉಪ ಚುನಾವಣೆಯಲ್ಲಿ ಬಿ.ವೈ. ರಾಘವೇಂದ್ರ ಗೆದ್ದ ನಂತರ ಕ್ಷೇತ್ರಕ್ಕೆ ಇಎಸ್‌ಐ ಆಸ್ಪತ್ರೆ ತಂದರು. ಜನಶತಾಬ್ಧಿ ರೈಲು ಓಡಿಸಿದರು. ವಿಐಎಸ್‌ಎಲ್ ಕಾರ್ಖಾನೆಗೆ ಗಣಿ ಮಂಜೂರು ಮಾಡಿಸಿ, ಗೆಜೆಟ್ ಅಧಿಸೂಚನೆ ಹೊರಡಿಸುವಲ್ಲಿಯೂ ಯಶಸ್ವಿಯಾದರು. ಅಪ್ಪ (ಯಡಿಯೂರಪ್ಪ)–ಮಗ (ರಾಘವೇಂದ್ರ) ಡಿ.ಕೆ. ಶಿವಕುಮಾರ್ ಮನೆಗೇ ಹೋಗಿ ನೀರಾವರಿ ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಿಕೊಂಡು ಬಂದರು’ ಎಂದು ಕೆಲಸಗಳ ಪಟ್ಟಿ ನೀಡುವ ಬಿಜೆಪಿ ಮುಖಂಡರಿಗೆ, ಇದನ್ನೇ ಮತದಾರರ ಮುಂದಿಟ್ಟು ಏಕೆ ಗಟ್ಟಿಯಾಗಿ ಮತಯಾಚಿಸುತ್ತಿಲ್ಲ ಎಂದರೆ ಉತ್ತರ ಸ್ಪಷ್ಟ ಇಲ್ಲ. ಬಿಜೆಪಿ ಕಾರ್ಯಕರ್ತರು ಬಿಡಿ, ಅಭ್ಯರ್ಥಿ ರಾಘವೇಂದ್ರ ಕೂಡ ತಾವು ಮಾಡಿದ ಕೆಲಸಗಳನ್ನು ಧೈರ್ಯದಿಂದ ಹೇಳಿಕೊಳ್ಳುತ್ತಿಲ್ಲ. ತೀರ್ಥಹಳ್ಳಿಯ ಬೆಜ್ಜವಳ್ಳಿ ಪ್ರಚಾರ ಸಭೆಯಲ್ಲಿ ಕಂಡಿದ್ದು ರಾಘವೇಂದ್ರ ಜಪಿಸಿದ ಮೋದಿ ಮಂತ್ರ.

ಮಧು ಬಂಗಾರಪ್ಪ ಸೋತರೂ ಮುಖ್ಯಮಂತ್ರಿಗೆ ಹೇಳಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ಕೊಡಿಸಿದ್ದಾರೆ ಎಂದು ಹೇಳಿಕೊಳ್ಳುವ ಜೆಡಿಎಸ್‌ ಮುಖಂಡರು, ‘ಇದು ಮತ ಗಳಿಕೆಗೆ ಅನುಕೂಲವಾಗುತ್ತದೆ. ಉಪ ಚುನಾವಣೆಯಲ್ಲಿ ಎದುರಾಳಿ ಪಡೆದಿದ್ದ 52 ಸಾವಿರ ಮತಗಳ ಅಂತರದ ಗೆಲುವು ಈ ಬಾರಿ ನಮ್ಮದಾಗುತ್ತದೆ’ ಎಂಬ ಲೆಕ್ಕಾಚಾರದಲ್ಲಿ ಮುಳುಗೇಳುತ್ತಿದ್ದಾರೆ.

ಸ್ಪಷ್ಟವಾಗದ ನಿಲುವು: ಅರಣ್ಯಹಕ್ಕು ಕಾಯ್ದೆ ತಿದ್ದುಪಡಿ, ಕಸ್ತೂರಿರಂಗನ್‌ ವರದಿ ಜಾರಿಯಲ್ಲಿನ ಗೊಂದಲ, ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರ ವಿತರಣೆಯಲ್ಲಿ ವಿಳಂಬ, ಸ್ಥಗಿತಗೊಂಡ ಮೀನುಗಾರಿಕೆ, ಕಾಡುತ್ತಿರುವ ಮಂಗನ ಕಾಯಿಲೆಯ ಬಗ್ಗೆ ಎಲ್ಲಾ ಪಕ್ಷಗಳೂ ಪ್ರಚಾರ ಸಭೆಗಳಲ್ಲಿ ಬರೀ ಭರವಸೆಯ ಮಳೆ ಸುರಿಸುತ್ತಿವೆ. ಆದರೆ, ತಮ್ಮ ಒಲವು, ನಿಲುವುಗಳನ್ನು ಎಲ್ಲೂ ಸ್ಪಷ್ಟಪಡಿಸುತ್ತಿಲ್ಲ.

‘ನಾವೆಲ್ಲ ಎರಡೆರಡು ಬಾರಿ ಸಂತ್ರಸ್ತರಾದವರು. ಒಮ್ಮೆ ತಡಗಳಲೆ ಡ್ಯಾಂ; ಇನ್ನೊಮ್ಮೆ ಲಿಂಗನಮಕ್ಕಿ ಡ್ಯಾಂನಿಂದ. ಸರ್ಕಾರವೇ ಸೂಚಿಸಿದ್ದ ಭೂಮಿಯಲ್ಲಿ ಮನೆ ಕಟ್ಟಿ, ಕೃಷಿ ಮಾಡಿ, ಹಲವು ದಶಕಗಳು ಕಳೆದಿವೆ. ಈಗ ಸುಪ್ರೀಂ ಕೋರ್ಟ್ ಸೂಚಿಸಿದೆ ಎಂದು ಹೇಳಿ ಅರಣ್ಯ ಇಲಾಖೆ ನಮ್ಮನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಈ ಭಾಗದಲ್ಲಿ ಕಾಡು ಉಳಿದಿದೆ ಎಂದರೆ ಅದು ನಮ್ಮಂತಹ ಕೃಷಿಕರಿಂದ ಹೊರತು ಅರಣ್ಯ ಇಲಾಖೆಯಿಂದ ಅಲ್ಲ. ನಾವು ಅಡಿಕೆ, ತೆಂಗು, ಸೊಪ್ಪಿನ ಮರಗಳನ್ನು ಬೆಳೆಸಿದ್ದೇವೆ ಹೊರತು ಯಾವುದೇ ಕಾರ್ಖಾನೆ ಸ್ಥಾಪಿಸಿಲ್ಲ. ಇದು ನಮ್ಮ ಪರಿಸರವಾದಿಗಳ ಕಣ್ಣಿಗೆ ಏಕೆ ಬೀಳುತ್ತಿಲ್ಲ, ಅರಣ್ಯ ಬೆಳೆಸುವ ಜವಾಬ್ದಾರಿ ನಮಗೇ ಮಾತ್ರ ಏಕೆ, ಬಯಲು ಸೀಮೆಯಲ್ಲಿ ಮರ ಬೆಳೆಸುವುದಕ್ಕೆ ಸರ್ಕಾರಕ್ಕೆ ಏನು ಸಂಕಟ’ ಎಂದು ಆಕ್ರೋಶದ ಮಳೆ ಸುರಿಸಿದರು ಸದ್ಯಕ್ಕೆ ಮಂಗನ ಕಾಯಿಲೆ ಬಾಧಿತ ಕಾರ್ಗಲ್‌ನ ಅರಲಗೋಡು ಪಕ್ಕದ ಉರುಳುಗಲ್ಲು ಗ್ರಾಮದ ಕೃಷಿಕ ನಾಗರಾಜ್.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅರಣ್ಯಹಕ್ಕು ಕಾಯ್ದೆಗೆ ತಿದ್ದುಪಡಿ ತರುವಂತೆ ಯಡಿಯೂರಪ್ಪ ಸಂಸದರಾಗಿದ್ದಾಗಲೂ ಒತ್ತಾಯಿಸಿದ್ದೆವು. ರಾಘವೇಂದ್ರ ಅವರಿಗೂ ಮನವಿ ಸಲ್ಲಿಸಿದ್ದೆವು. ಆದರೆ ಪ್ರಯೋಜನವಾಗಲಿಲ್ಲ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇತ್ತು; ಅಂಥ ಪ್ರಭಾವಿಗಳಿಗೇ ಏನೂ ಮಾಡಲು ಆಗಲಿಲ್ಲ. ಇನ್ನು ಮೈತ್ರಿ ಅಭ್ಯರ್ಥಿಗೆ ಆಗುತ್ತಾ ಹೇಳಿ’ ಎಂದು ಮರುಪ್ರಶ್ನೆ ಇಟ್ಟರು ನಾಗರಾಜ್.

ಪ್ರಧಾನಿ ನರೇಂದ್ರ ಮೋದಿ ಅವರ ಮಾತು, ನಡವಳಿಕೆ, ಯೋಜನೆಗಳನ್ನು ತಮ್ಮದೇ ಧಾಟಿಯಲ್ಲಿ ಟೀಕಿಸಿದರು ತೀರ್ಥಹಳ್ಳಿಯ ಕುಡುಮಲ್ಲಿಗೆಯ ಪೀಠೋಪಕರಣ ಅಂಗಡಿ ಮಾಲೀಕ ನಾಸೀರ್ ಅಹಮದ್.

‘ನಾವೆಲ್ಲ ಇದೇ ನೆಲದಲ್ಲಿ ಹುಟ್ಟಿ, ಬಾಳಿ, ಬದುಕುತ್ತಿದ್ದೇವೆ. ಆದರೆ, ಈ ಮೋದಿ ನಮ್ಮನ್ನು ದೇಶದ್ರೋಹಿಗಳ ರೀತಿ ಬಿಂಬಿಸುತ್ತಿದ್ದಾರೆ. ನೋಟು ರದ್ದತಿ, ಜಿಎಸ್‌ಟಿ ಬರುವುದಕ್ಕೂ ಮೊದಲು ನಾನು 26 ಜನ ಕೆಲಸಗಾರರನ್ನು ಇಟ್ಟುಕೊಂಡಿದ್ದೆ. ಈಗ 6 ಜನರಿಗಷ್ಟೇ ಕೆಲಸ ಕೊಡಲು ಸಾಧ್ಯವಾಗುತ್ತಿದೆ. ಮುಂದೆಯೂ ಮೋದಿ ಬಂದರೆ ನಾನು ಅಂಗಡಿ ಬಾಗಿಲು ಮುಚ್ಚಿ ಬೀದಿಗೆ ಬರಬೇಕಾಗುತ್ತದಷ್ಟೇ’ ಎಂದು ಆಕ್ರೋಶಭರಿತವಾಗಿಯೇ ಮಾತನಾಡಿದರು.

ಅವರ ಮಾತುಗಳಿಗೆ ಸೊರಬದ ಉಳವಿಯ ಎಲೆಕ್ಟ್ರಿಷಿಯನ್ ಜಬ್ಬೀರ್, ಹೇರ್‌ ಸೆಲೂನ್‌ನ ಪ್ರಕಾಶ್ ಭಂಡಾರಿ, ಶಿರಾಳಕೊಪ್ಪದ ಹುಣಿಸೆಹಣ್ಣಿನ ವ್ಯಾಪಾರಿ ಇಕ್ಬಾಲ್ ದನಿಗೂಡಿಸಿ, ‘ಉಪ ಚುನಾವಣೆಯಲ್ಲಿ ನಮ್ಮ ಹೆಂಗಸರು, ನಮ್ಮ ಅಪ್ಪ ವೋಟ್‌ ಮಾಡಿರಲಿಲ್ಲ. ಈ ಬಾರಿ ಅವರನ್ನಷ್ಟೇ ಅಲ್ಲ; ನಮ್ಮ ಸಂಬಂಧಿಕರಿಗೂ ಕಡ್ಡಾಯವಾಗಿ ವೋಟ್‌ ಹಾಕಲೇಬೇಕು ಎಂದು ಹೇಳಿದ್ದೇವೆ’ ಎಂದ ಈ ಮೂವರ ಮಾತಿನಲ್ಲಿ ಮೋದಿಯೆಡೆಗಿನ ಸಿಟ್ಟು ಎದ್ದು ಕಾಣುತ್ತಿತ್ತು.

ಹೊಸನಗರದ ಗಂಗನಕೊಪ್ಪದ ಹರಿಜನ ಕಾಲೊನಿಯ ದಲಿತ ಸಂಘರ್ಷ ಸಮಿತಿಯ (ಪ್ರೊ.ಕೃಷ್ಣಪ್ಪ ಬಣ) ತಾಲ್ಲೂಕು ಸಂಚಾಲಕ ಹರೀಶ್ ಹೇಳುವುದೇ ಬೇರೆ. ‘ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ನಾವು ಬೆಂಬಲಿಸಿದ್ದು ನಿಜ. ಆದರೆ, ಇದು ಸಾರ್ವತ್ರಿಕ ಚುನಾವಣೆ. ಏನಿದ್ದರೂ ದೇಶದ ಹಿತದ ಪ್ರಶ್ನೆ; ಮೋದಿ ಬಿಟ್ಟು ಇನ್ಯಾರೂ ಚೆನ್ನಾಗಿ ಕಾಯುತ್ತಾರೆಂಬ ನಂಬಿಕೆ ಇಲ್ಲ. ಹಾಗಾಗಿ, ಈ ಸಲ ನಮ್ಮದೆಲ್ಲಾ ಮೋದಿ’ ಎಂದು ಸಮರ್ಥಿಸಿಕೊಂಡರು.

ಸೊರಬದ ಹಾಲಗಳಲೆಯ ಮಾಜಿ ಸೈನಿಕ ಪರಶುರಾಮ, ಭದ್ರಾವತಿಯ ಉಂಬ್ಳೇಬೈಲು ಕೃಷಿಕ ಚಂದ್ರಪ್ಪಗೌಡ ಅವರೂ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಆದರೆ, ಈಗ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರಿಗೆ ‘ದೇಶಕ್ಕಾಗಿ ಮೋದಿ’ ಎಂಬ ಮಾತು ಆಕರ್ಷಿಸಿದೆಯಂತೆ.

‘ಸ್ಥಳೀಯ ಸಮಸ್ಯೆಗಳು ಈ ಚುನಾವಣೆಯಲ್ಲಿ ನಗಣ್ಯ. ಈ ಹಿಂದೆ ದೇಶ ಆಳಿದವರು ಏನೇನು ಮಾಡಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬುದೇ ಎಲ್ಲಾ ದೇಶವಾಸಿಗಳ ಆಸೆ’ ಎಂದು ಗುಟ್ಕಾ ಅಗಿ ಯುತ್ತಲೇ ಕುಡುಮಲ್ಲಿಗೆಯ ಬಸ್‌ ನಿಲ್ದಾಣದ ಹೋಟೆಲ್‌ನ ಟೇಬಲ್ ಕುಟ್ಟಿ ಹೇಳಿದರು ಯುವ ಉದ್ಯಮಿ ಲಕ್ಷ್ಮೀಕಾಂತ ಪಿ.ಗೌಡ.

ಮರವಂತೆಯಲ್ಲಿ ರಾಮೋತ್ಸವದ ಗುಂಗು
ಘಾಟಿ ಇಳಿದು ಕೊಲ್ಲೂರು ದಾಟುತ್ತಿದ್ದಂತೆಯೇ ಎಲ್ಲೆಡೆ ರಾಮೋತ್ಸವದ ಸಂಭ್ರಮ ಮನೆ ಮಾಡಿತ್ತು. ಹಾದಿ ತುಂಬಾ ಭಕ್ತಿಯ ಪರಾಕಾಷ್ಠೆ. ಬಿಳಿ ಪಂಚೆ, ಬಿಳಿ ಶರ್ಟ್, ಮೇಲೊಂದು ಕೇಸರಿ ಶಲ್ಯ ತೊಟ್ಟ ನೂರಾರು ಮಂದಿಯ ಶಿಸ್ತಿನ ಮೆರವಣಿಗೆ ಮರವಂತೆಯ ಸಮುದ್ರ ದಂಡೆಯವರೆಗೂ ಸಾಗಿತ್ತು. ಈ ಮಧ್ಯೆಯೇ ಮಾತಿಗೆ ಸಿಕ್ಕವರು ಬೈಂದೂರು ತಾಲ್ಲೂಕಿನ ಮೀನುಗಾರರ ಸಂಘದ ಅಧ್ಯಕ್ಷ ಮೋಹನ್ ಖಾರ್ವಿ.

‘ಯಡಿಯೂರಪ್ಪ ಸಿ.ಎಂ ಇದ್ದಾಗ ಮೀನುಗಾರಿಕೆ ಇಲಾಖೆಗೆ ಸಾಕಷ್ಟು ಅನುದಾನ ನೀಡಿದ್ದರು. ಅವರ ಮಗ ರಾಘವೇಂದ್ರ ಕೂಡ ನಮ್ಮ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ನಾವು ಪ್ರತಿ ವರ್ಷ ಆಯೋಜಿಸುವ ರಾಮೋತ್ಸವಕ್ಕೆ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಕರೆಸಲು ಅವರು ಸಹಾಯ ಮಾಡಿದ್ದಾರೆ. ಅವರ ಉಪಕಾರ ಮರೆಯುವುದುಂಟೆ’ ಎಂದು ಕೇಳಿದರು ಖಾರ್ವಿ. ಇದೇ ರೀತಿಯ ಕೃತಜ್ಞತೆಯ ಭಾವನೆ ಸ್ಫುರಿಸಿದವರು ಸಾಗರದ ಕೋಗಾರಿನ ಜಾರ್ಜ್‌, ಶಿಕಾರಿಪುರದ ಹೂವು ಮಾರಾಟಗಾರ್ತಿ ಮಂಜಮ್ಮ, ಬಾಳೆಕಾಯಿ ಅಂಗಡಿಯ ರಮೇಶ್.

ಸಾಗರ ಸಮೀಪದ ಶಿರವಾಳದ ಮಂಜಪ್ಪ, ಸೊರಬದ ನಿಸರಾಣಿಯ ಗೋಪಾಲ, ಆನಂದಪುರಂನ ರಘು ಅವರು ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಪ್ರತಿಪಾದಿಸುತ್ತಾರೆ. ‘ಮಧು ಬಂಗಾರಪ್ಪ ಬಗ್ಗೆ ಅನುಕಂಪ ಇದೆ. ಈ ಕ್ಷೇತ್ರದಲ್ಲಿ ಎಸ್‌. ಬಂಗಾರಪ್ಪ ಅವರಿಗೇ ಮೀಸಲಿರುವ ಸಾಕಷ್ಟು ಮತಗಳಿವೆ. ಈಡಿಗರು, ಮುಸ್ಲಿಮರು, ಪರಿಶಿಷ್ಟ ಜನಾಂಗದವರು ಒಟ್ಟಾದರೆ ಸಾಕಲ್ಲ?’ ಎಂಬುದು ಅವರ ಲೆಕ್ಕಚಾರ.

‘ಉಪ ಚುನಾವಣೆಯಲ್ಲಿ ಈಡಿಗರೆಲ್ಲ ಒಟ್ಟಾಗಿ ವೋಟ್ ಮಾಡಿದ್ದಕ್ಕೇ ಮೈತ್ರಿ ಅಭ್ಯರ್ಥಿಗೆ ಅಷ್ಟೊಂದು ಮತಗಳು ಸಿಕ್ಕಿದ್ದು; ಈಗ ಪರಿಸ್ಥಿತಿ ಹಾಗಿಲ್ಲ; ಗೆಲುವಿನ ಅಂತರ ಸ್ವಲ್ಪ ತಗ್ಗಬಹುದು. ಅಂತಿಮ ಗೆಲುವು ಬಿಜೆಪಿಯದ್ದು’ ಎಂಬ ವಿಶ್ವಾಸ ಶಿಕಾರಿ ಪುರ ಕಪ್ಪನಹಳ್ಳಿಯ ಮಂಜುನಾಥ, ಜೋಗ್‌ಫಾಲ್ಸ್‌ನ ರವೀಶ್ ಅವರದ್ದು.

ಮಂಗನ ಕಾಯಲು ಮೋದಿ ಬರುತ್ತಾರಾ?
‘ಮಂಗನ ಕಾಟ ವಿಪರೀತವಾಗಿದೆ. ಒಂದೇ ಒಂದು ಬೆಳೆ ಬೆಳೆಯಲು ಆಗುತ್ತಿಲ್ಲ. ಅಡಿಕೆ ಸಿಂಗಾರವನ್ನೇ ಮಂಗಗಳು ಕೀಳುತ್ತಿವೆ. ಬಾಳೆಗೊನೆ ಕಾಣದೆ ಎಷ್ಟೋ ವರ್ಷಗಳಾಗಿವೆ. ತರಕಾರಿ ಕೂಡ ಬೆಳೆಯಲು ಆಗುತ್ತಿಲ್ಲ. ಮಂಗನ ಕಾಯುವುದೇ ನಿತ್ಯದ ಗೋಳು. ಮಂಗನ ಕಾಯಲು ನಿಮ್ಮ ಮೋದಿ ಬರುತ್ತಾರಾ?’ ಎಂದು ತಮಾಷೆಯ ದನಿಯಲ್ಲಿ ಕೇಳಿದರು ಹೊಸನಗರದ ನಿಟ್ಟೂರು ಸಮೀಪದ ಮಂಜಗಳಲೆಯ ರೈತ ನಂಜಪ್ಪ.

‘ಮಂಗನ ಹೊಡೆದು ಕೊಲ್ಲೋಣ ಎಂದರೆ ಅದನ್ನೂ ಹನುಮನ ಅವತಾರ ಮಾಡಿಬಟ್ಟಿದ್ದಾರೆ ಈ ಜನ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸ್ತ್ರ ಬೇಡ, ಶಸ್ತ್ರಗಳು ಬೇಕು
‘ಅಡಿಕೆ ತಿಂದರೆ ಕ್ಯಾನ್ಸರ್‌ ಬರುತ್ತೆ ಎಂದು ಕೇಂದ್ರದ ಸಚಿವರೊಬ್ಬರು ಕೆಲ ವರ್ಷಗಳ ಹೇಳಿಕೆ ಕೊಟ್ಟಿದ್ದರು. ಇದು ಸುಳ್ಳು ಎಂದು ಮನವರಿಕೆ ಮಾಡಿಕೊಡುವ ಕೆಲಸವನ್ನು ರಾಜ್ಯದ ಎಂ.ಪಿಗಳು ಒಬ್ಬರೂ ಮಾಡಲಿಲ್ಲ. ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಕುರಿತಂತೆಯೂ ಒಬ್ಬರೂ ಚರ್ಚಿಸಲಿಲ್ಲ. ಬಿಜೆಪಿಯ ಈ ವೈಫಲ್ಯಗಳನ್ನು ಮತದಾರರಿಗೆ ಮನಮುಟ್ಟುವಂತೆ ಕ್ಷೇತ್ರದ ಕಾಂಗ್ರೆಸ್–ಜೆಡಿಎಸ್‌ ನಾಯಕರೊಬ್ಬರೂ ಹೇಳುತ್ತಿಲ್ಲ. ಚುನಾವಣೆಯಲ್ಲಿ ಗತಕಾಲದ ಕಥೆಗಳನ್ನು ಹೇಳಿದರೆ ಯಾರೂ ಕೇಳುವುದಿಲ್ಲ. ಶಸ್ತ್ರಗಳನ್ನು ಒದಗಿಸುವವರು ಬೇಕು. ತಂತ್ರಗಾರಿಕೆ ಹೆಣೆಯಬೇಕು. ಕ್ಷೇತ್ರದ ಚುನಾವಣಾ ಉಸ್ತುವಾರಿ ಡಿ.ಕೆ. ಶಿವಕುಮಾರ್ ಅವರದ್ದು ಎಂದು ಈ ಮೊದಲು ಹೇಳಲಾಗಿತ್ತು. ಆದರೆ, ಈಗ ಅವರು ದಿಢೀರ್ ಹಿಂದೆ ಸರಿದಿದ್ದು ಏಕೆ?’ ಎಂದು ಮೈತ್ರಿ ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಹೊರಹಾಕಿದರು ಭದ್ರಾವತಿಯ ಕಡದಕಟ್ಟೆಯ ಜೆಡಿಎಸ್ ನಾಯಕರೊಬ್ಬರು.

ಮಂಗನ ಕಾಯಿಲೆ: ಪುನರ್ವಸತಿ ಯಾರ ಜವಾಬ್ದಾರಿ?
ಸಾಗರ ತಾಲ್ಲೂಕಿನ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಈಗಲೂ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಡ್ಯದಲ್ಲಿ ನಡೆದ ದುರಂತಗಳಿಗೆ ತಕ್ಷಣ ಹೋಗಿ ಪರಿಹಾರ ಘೋಷಿಸುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅರಲಗೋಡಿಗೆ ಏಕೆ ಈವರೆಗೂ ಭೇಟಿ ನೀಡಿಲ್ಲ? ಮಂಡ್ಯಕ್ಕೊಂದು ನ್ಯಾಯ, ಅರಲಗೋಡಿಗೊಂದು ನ್ಯಾಯ ಏಕೆ? ಮಂಗನ ಕಾಯಿಲೆ ಪೀಡಿತರಿಗೆ ಪರಿಹಾರ, ಪುನರ್ವಸತಿ ಹಾಗಾದರೆ ಯಾರ ಜವಾಬ್ದಾರಿ? ಎನ್ನುತ್ತಾರೆ ಆನಂದಪುರಂನ ಅರುಣ್‌ಪ್ರಸಾದ್.

ಇನ್ನಷ್ಟು ಶಿವಮೊಗ್ಗಕ್ಷೇತ್ರದ ಚುನಾವಣಾ ಸುದ್ದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT