ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಮಿತ್ರರ ಸೀಟಿನ ಆಟ: ಕಾಂಗ್ರೆಸ್‌ಗೆ ಪೇಚಾಟ

Published 4 ಏಪ್ರಿಲ್ 2024, 23:44 IST
Last Updated 4 ಏಪ್ರಿಲ್ 2024, 23:44 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಸೀಟು ಹಂಚಿಕೆಯ ಕಸರತ್ತನ್ನು ಬಹುತೇಕ ಪೂರ್ಣಗೊಳಿಸಿವೆ. ಆದರೆ, ಬಿಹಾರದಿಂದ ಮಹಾರಾಷ್ಟ್ರದ ವರೆಗೆ, ತಮಿಳುನಾಡಿನಿಂದ ಉತ್ತರ ಪ್ರದೇಶದವರೆಗೆ ಕಾಂಗ್ರೆಸ್‌ಗೆ ಸೀಟುಗಳನ್ನು ಬಿಟ್ಟುಕೊಡಲು ಪ್ರಾದೇಶಿಕ ಪಕ್ಷಗಳು ಚೌಕಾಸಿ ಮಾಡಿವೆ. ಈ ಪಕ್ಷಗಳು ‘ಕೈ’ ಪಾಳಯದ ನೆಚ್ಚಿನ ಕ್ಷೇತ್ರಗಳನ್ನು ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಈ ಮೂಲಕ ‘ಕಿರಿಯ ಪಾಲುದಾರ’ ಎಂಬ ಸಂದೇಶವನ್ನು ರವಾನಿಸಿವೆ

 • ಬಿಹಾರದಲ್ಲಿ ‘ಮಹಾಘಟಬಂಧನ್‌’ನ ಪಾಲುದಾರರಾದ ಆರ್‌ಜೆಡಿ 26, ಕಾಂಗ್ರೆಸ್‌ 9, ಸಿಪಿಐ (ಎಂಎಲ್‌) 3, ಸಿಪಿಐ ಮತ್ತು ಸಿಪಿಎಂ ತಲಾ ಒಂದು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಕಾಂಗ್ರೆಸ್‌ ಹಟ ಹಿಡಿದ ಮೂರೂ ಕ್ಷೇತ್ರಗಳನ್ನು ಆರ್‌ಜೆಡಿ ಬಿಟ್ಟುಕೊಟ್ಟಿಲ್ಲ

 • ಪೂರ್ಣಿಯಾ ಕ್ಷೇತ್ರವನ್ನು ಬಿಟ್ಟುಕೊಡಲು ನಿರಾಕರಿಸಿದ್ದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ. 2019ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಣಕ್ಕಿಳಿದಿದ್ದರು. ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆ ನಡೆಸುವ ಹಂಬಲದಿಂದ ಅವರು ಮಾಜಿ ಸಂಸದ ಪಪ್ಪು ಯಾದವ್‌ ‘ಹಸ್ತ’ ಪಾಳಯಕ್ಕೆ ಸೇರ್ಪಡೆಯಾಗಿದ್ದರು

 • ಮಧೇಪುರ ಅಥವಾ ಸುಪೌಲ್‌ ಕ್ಷೇತ್ರದಿಂದ ಪಪ್ಪು ಯಾದವ್ ಅವರನ್ನು ಹುರಿಯಾಳುವನ್ನಾಗಿ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಯೋಜಿಸಿತ್ತು. ಈ ಎರಡೂ ಕ್ಷೇತ್ರಗಳು ಆರ್‌ಜೆಡಿ ಪಾಲಾಗಿವೆ. ಮಧೇಪುರ ಕ್ಷೇತ್ರದಲ್ಲಿ ಪಪ್ಪು ಯಾದವ್‌ 2014ರಲ್ಲಿ ಜಯಿಸಿದ್ದರು

 • ಯಾದವ್‌ ಪತ್ನಿ ರಂಜೀತಾ ರಂಜನ್‌ ಅವರು 2004 ಹಾಗೂ 2014ರಲ್ಲಿ ಸುಪೌಲ್‌ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2019ರ ಚುನಾವಣೆಯಲ್ಲಿ ಅವರು ಸೋತಿದ್ದರು

 • ಯುವ ನಾಯಕ ಕನ್ಹಯ್ಯ ಕುಮಾರ್ ಅವರು 2019ರಲ್ಲಿ ಬೇಗುಸರಾಯ್‌ ಕ್ಷೇತ್ರದಲ್ಲಿ ಸಿಪಿಐ ಪಕ್ಷದಿಂದ ಸ್ಪರ್ಧಿಸಿದ್ದರು. ಅವರು 2021ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಕನ್ಹಯ್ಯ ಅವರಿಗೆ ಟಿಕೆಟ್‌ ನೀಡಲು ಹೈಕಮಾಂಡ್‌ ಬಯಸಿತ್ತು. ಆದರೆ, ಈ ಕ್ಷೇತ್ರವನ್ನು ಸಿಪಿಐಗೆ ಆರ್‌ಜೆಡಿ ನೀಡಿದೆ. ಹೀಗಾಗಿ, ಕನ್ನಯ್ಯ ಅವರು ದೆಹಲಿಯ ಕ್ಷೇತ್ರವೊಂದಕ್ಕೆ ವಲಸೆ ಹೋಗಬೇಕಿದೆ 

 • ಔರಂಗಾಬಾದ್‌ ಕ್ಷೇತ್ರವನ್ನು ಕಾಂಗ್ರೆಸ್‌ಗೆ ನೀಡಲು ಆರ್‌ಜೆಡಿ ನಿರಾಕರಿಸಿದೆ. ಮಾಜಿ ಗವರ್ನರ್‌ ನಿಖಿಲ್‌ ಕುಮಾರ್ ಅವರನ್ನು ಹುರಿಯಾಳುವನ್ನಾಗಿ ಮಾಡಲು ಕಾಂಗ್ರೆಸ್‌ ನಾಯಕರು ಯೋಜಿಸಿದ್ದರು 

ತಮಿಳುನಾಡು: ಗೆದ್ದ ಕ್ಷೇತ್ರಗಳೂ ಸಿಕ್ಕಿಲ್ಲ

 • ಡಿಎಂಕೆ ಹಟಕ್ಕೆ ಮಣಿದಿರುವ ಕಾಂಗ್ರೆಸ್‌ ಪಕ್ಷವು 2019ರಲ್ಲಿ ಸ್ಪರ್ಧಿಸಿದ ಮೂರು ಕ್ಷೇತ್ರಗಳನ್ನೇ ಮಿತ್ರಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಗೆಲ್ಲುವ ಸಾಧ್ಯತೆ ಹೆಚ್ಚಿರುವ 4–5 ಕ್ಷೇತ್ರಗಳನ್ನು ಮಿತ್ರ ಪಕ್ಷದಿಂದ ಕಿತ್ತುಕೊಳ್ಳಲು ಡಿಎಂಕೆ ಬಯಸಿತ್ತು. ಮಾತುಕತೆಯ ನಂತರ 3 ಕ್ಷೇತ್ರಗಳಿಗೆ ಡಿಎಂಕೆ ಒಪ್ಪಿತು. 2019ರಲ್ಲಿ ಅರಣಿ ಹಾಗೂ ತಿರುಚಿರಾಪಳ್ಳಿಯಲ್ಲಿ ಪಕ್ಷ ಗೆದ್ದಿತ್ತು. ಈ ಸಲ ಈ ಎರಡೂ ಕ್ಷೇತ್ರಗಳ ಜತೆಗೆ ಥೇಣಿಯನ್ನು ಮಿತ್ರಪಕ್ಷಕ್ಕೆ ನೀಡಿದೆ. ಬದಲಿಯಾಗಿ ತಿರುನೆಲ್ವೇಲಿ, ಕಡಲೂರ್‌ ಮತ್ತು ಮಯಿಲಾಡುತುರೈ ಕ್ಷೇತ್ರಗಳನ್ನು ಪಡೆದಿದೆ

 • ಅರಣಿಯಲ್ಲಿ 2019ರಲ್ಲಿ ಎಂ.ಕೆ. ವಿಷ್ಣುಪ್ರಸಾದ್‌ ಜಯಿಸಿದ್ದರು. ಈ ಸಲ ಅವರು ಕಡಲೂರ್‌ಗೆ ಸ್ಥಳಾಂತರಗೊಂಡಿದ್ದಾರೆ.  ತಿರುಚಿರಾಪಳ್ಳಿಯಲ್ಲಿ ಹಾಲಿ ಸಂಸದ ಸು. ತಿರುನಾವುಕ್ಕರಸರ್ ಅವರು ಟಿಕೆಟ್‌ ವಂಚಿತರಾಗಿದ್ದಾರೆ. ಈ ಕ್ಷೇತ್ರವು ವೈಕೋ ನೇತೃತ್ವದ ಎಂಡಿಎಂಕೆ ಪಾಲಾಗಿದೆ. 

ಮಹಾರಾಷ್ಟ್ರ: ಮುಗಿಯದ ಕಿತ್ತಾಟ 

 • ರಾಜ್ಯದಲ್ಲಿ ಕಾಂಗ್ರೆಸ್, ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಹಾಗೂ ಎನ್‌ಸಿಪಿ (ಶರದ್‌ ಪವಾರ್ ಬಣ) ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಅದಕ್ಕೆ ಮುನ್ನವೇ ಮಿತ್ರ ಪಕ್ಷಗಳು ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸಿವೆ 

 • ಸಾಂಗ್ಲಿ, ಭೀವಂಡಿ, ಮುಂಬೈ ದಕ್ಷಿಣ ಮಧ್ಯ ಹಾಗೂ ಮುಂಬೈ ವಾಯವ್ಯ ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿದೆ. ಆದರೆ, ಸಾಂಗ್ಲಿ ಹಾಗೂ ಮುಂಬೈ ದಕ್ಷಿಣ ಕೇಂದ್ರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಶಿವಸೇನಾ ಪ್ರಕಟಿಸಿದೆ. ಇದು ಕಾಂಗ್ರೆಸ್‌ನ ಅಸಮಾಧಾನಕ್ಕೆ ಕಾರಣವಾಗಿದೆ 

 • ಶಾಸಕರ ಪಕ್ಷಾಂತರದಿಂದ ಚೂರಾದ ಎನ್‌ಸಿಪಿ ಹಾಗೂ ಶಿವಸೇನಾಗೆ ಹೋಲಿಸಿದರೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಹೆಚ್ಚಿನ ನೆಲೆ ಇದೆ. ರಾಜ್ಯದಲ್ಲಿ ಮೈತ್ರಿಕೂಟದ ನಾಯಕತ್ವವನ್ನು ಪಕ್ಷ ವಹಿಸಬೇಕು ಎಂಬುದು ರಾಜ್ಯದ ಕಾಂಗ್ರೆಸ್‌ ನಾಯಕರ ಬೇಡಿಕೆ. ಮಿತ್ರ ಪಕ್ಷಗಳ ಜತೆಗೆ ರಗಳೆ ಮಾಡಿಕೊಳ್ಳಲು ಹೈಕಮಾಂಡ್‌ಗೆ ಇಷ್ಟವಿಲ್ಲ 

ಉತ್ತರ ಪ್ರದೇಶ: ಎಸ್‌ಪಿ ‘ಏಕಪಕ್ಷೀಯ’ ತೀರ್ಮಾನ

 • ರಾಜ್ಯದಲ್ಲಿ 2019ರಲ್ಲಿ ಕಾಂಗ್ರೆಸ್‌ 67 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಈ ಸಲ 17 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಸಮಾಜವಾದಿ ಪಕ್ಷವು (ಎಸ್‌ಪಿ) ಏಕಪಕ್ಷೀಯವಾಗಿ 17 ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಪ್ರಕಟಿಸಿತು. ಕಾಂಗ್ರೆಸ್‌ ನಾಯಕರು ಇದಕ್ಕೆ ತಕರಾರು ಎತ್ತಲಿಲ್ಲ. 

 • ಕೈ ಪಾಳಯಕ್ಕೆ ಆರರಿಂದ ಎಂಟು ಕ್ಷೇತ್ರಗಳನ್ನು ನೀಡುವುದಾಗಿ ಎಸ್‌ಪಿ ಷರತ್ತು ಒಡ್ಡಿತ್ತು. ಬಳಿಕ 11 ಕ್ಷೇತ್ರಗಳನ್ನು ನೀಡುವುದಾಗಿ ಹೇಳಿತು. ಕನಿಷ್ಠ 25 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಪಟ್ಟು ಹಿಡಿದರು. ನಂತರ 17 ಕ್ಷೇತ್ರಗಳಿಗೆ ಏರಿಸಿತು. ಈ ಪ್ರಸ್ತಾವಕ್ಕೆ ಒಪ್ಪದಿದ್ದರೆ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಭಾಗಿಯಾಗುವುದಿಲ್ಲ ಎಂದು ಎಸ್‌ಪಿ ನಾಯಕರು ಬೆದರಿಕೆ ಒಡ್ಡಿದರು. ಕಾಂಗ್ರೆಸ್ ಮತ್ತೆ ತಕರಾರು ಎತ್ತಲಿಲ್ಲ 

ಪಶ್ಚಿಮ ಬಂಗಾಳ: ‘ಮಮತೆ’ ತೋರದ ಟಿಎಂಸಿ

 • ಟಿಎಂಸಿ ‘ಇಂಡಿಯಾ’ ಮೈತ್ರಿಕೂಟದ ಪ್ರಮುಖ ಪಕ್ಷ. ಆದರೆ, ಆ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ 

 • ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಕಳೆದ ಸಲ ಗೆದ್ದಿರುವ ಎರಡು ಕ್ಷೇತ್ರಗಳನ್ನು ನೀಡುವುದಾಗಿ ಟಿಎಂಸಿ ಹೇಳಿತ್ತು. ಪಕ್ಷಕ್ಕೆ ಕನಿಷ್ಠ 10 ಕ್ಷೇತ್ರಗಳನ್ನು ನೀಡಬೇಕು ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಹಟ ಹಿಡಿದರು. ಇದಕ್ಕೆ ಟಿಎಂಸಿ ಒಪ್ಪಲಿಲ್ಲ. ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಕಟಿಸಿದರು. ಕೆಲವು ‘ಕೈ’ ನಾಯಕರು ಕಾಡಿ ಬೇಡಿದರೂ ಅವರು ನಿಲುವು ಬದಲಿಸಲಿಲ್ಲ 

300 ಕ್ಷೇತ್ರಗಳಲ್ಲಿ ‘ಕೈ’ ಸ್ಪರ್ಧೆ?

 • ಕಾಂಗ್ರೆಸ್‌ ಪಕ್ಷವು ಈ ಸಲ ಸುಮಾರು 300 ಕ್ಷೇತ್ರಗಳಲ್ಲಷ್ಟೇ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ

 • 1996ರಲ್ಲಿ ಪಕ್ಷವು 529 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಇದು ಗರಿಷ್ಠ ಸ್ಪರ್ಧೆಯ ದಾಖಲೆ. 2004ರಲ್ಲಿ 417 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು. ಇದು ಇಲ್ಲಿಯವರೆಗಿನ ಕನಿಷ್ಠ ಸ್ಪರ್ಧೆಯ ದಾಖಲೆ

 • 233 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಗೊಳಿಸಿರುವ ಪಕ್ಷ. ಮುಂದಿನ ದಿನಗಳಲ್ಲಿ 70–80 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಲಿದೆ

 • ಉತ್ತರ ಪ್ರದೇಶದ ರಾಯ್‌ಬರೇಲಿ ಹಾಗೂ ಅಮೇಠಿ ಕ್ಷೇತ್ರಗಳ ಅಭ್ಯರ್ಥಿಗಳ ಕುರಿತು ಅಂತಿಮ ತೀರ್ಮಾನಕ್ಕೆ ಬಾರದ ಪಕ್ಷ. ರಾಯ್‌ಬರೇಲಿಯಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಅಮೇಠಿಯಿಂದ ರಾಹುಲ್‌ ಗಾಂಧಿ ಸ್ಪರ್ಧೆ ಮಾಡಲಿದ್ದಾರೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ

 • ಪಂಜಾಬ್‌, ಹರಿಯಾಣ, ದೆಹಲಿ, ಗೋವಾ, ಹಿಮಾಚಲ ಪ್ರದೇಶ, ದಾದ್ರಾ ಮತ್ತು ನಗರ್‌ ಹವೇಲಿ, ಚಂಡೀಗಢ ಹಾಗೂ ಲಡಾಕ್‌ಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಘೋಷಿಸಿಲ್ಲ

 • ಜನವರಿ 4ರಂದು ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷವು ಈ ಸಲ 255 ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಎಂದು ಸೂಚ್ಯವಾಗಿ ಹೇಳಿದ್ದರು

 • ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳತ್ತ ಹೆಚ್ಚಿನಗಮನ ಹರಿಸುವ ಹಾಗೂ ಸೀಮಿತ ಸಂಪನ್ಮೂಲದ ಗರಿಷ್ಠ ಬಳಕೆ ಮಾಡುವ ಯೋಚನೆ ಪಕ್ಷ ನಾಯಕರದ್ದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT