ಬೆಂಗಳೂರು: ಕರ್ನಾಟಕ ಕೈಗಾರಿಕೆ ಅಭಿವೃದ್ಧಿಗೆ ಅತ್ಯಂತ ಮಾದರಿ ರಾಜ್ಯವಾಗಿದ್ದು, ಬಂಡವಾಳ ಹೂಡಿಕೆಗೆ ಅತ್ಯಂತ ಸೂಕ್ತ ತಾಣವಾಗಿದೆ ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಸ್ಟ್ರೇಲಿಯಾ ಉದ್ಯಮಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಆಸ್ಟ್ರೇಲಿಯಾ ದೇಶದ ಉದ್ಯಮಿಗಳು, ಭಾರತದಲ್ಲಿನ ಆಸ್ಟ್ರೇಲಿಯಾ ರಾಯಭಾರಿ ಬಾರ್ರಿ ಒಪರಾಲ್ ಜತೆ ವೆಬಿನಾರ್ ಮೂಲಕ ಡಿಸಿಎಂ ಅಶ್ವತ್ಥನಾರಾಯಣ ಮಾತನಾಡಿದರು. ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶಗಳು ಇದ್ದು ಕರ್ನಾಟಕ ಸರ್ಕಾರ ಹಲವು ರಿಯಾಯಿತಿಗಳನ್ನು ಕೂಡ ನೀಡಲಿದೆ ಎಂದು ಉದ್ಯಮಿಗಳಿಗೆ ಅಭಯ ನೀಡಿದರಲ್ಲದೆ, ರಾಜ್ಯವು ವಿದೇಶಿ ಹೂಡಿಕೆದಾರರ ನೆಚ್ಚಿನ ತಾಣವಾಗಿರುವುದೇಕೆ ಹಾಗೂ ಅದಕ್ಕೆ ಇರುವ ಕಾರಣಗಳನ್ನು ವಿವರವಾಗಿ ತಿಳಿಸಿದರು.
ಭಾರತವು ಅನೇಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಅದೇ ನಮ್ಮ ದೇಶದಲ್ಲಿ ಕರ್ನಾಟಕವು ಹತ್ತು ಹಲವು ಕ್ಷೇತ್ರಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ, ಕೃಷಿ, ಕೈಗಾರಿಕೆ, ವೈದ್ಯಕೀಯ, ಯಂತ್ರೋಪಕರಣ, ಬಾಹ್ಯಾಕಾಶ ಹಾಗೂ ಸೇವಾ ವಲಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ರಾಜ್ಯವು ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಹೀಗಾಗಿ ಇಲ್ಲಿ ಹೂಡಿಕೆ ಮಾಡುವುದು ಅತ್ಯಂತ ಉತ್ತಮ ಎಂದು ಅವರು ಪ್ರತಿಪಾದಿಸಿದರು.
ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಆಸ್ಟ್ರೇಲಿಯಾ ದೇಶದ ಉದ್ಯಮಿಗಳು, ಭಾರತದಲ್ಲಿನ ಆಸ್ಟ್ರೇಲಿಯಾ ರಾಯಭಾರಿ @barryofarrell ಅವರ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದೆ.
— Dr. Ashwathnarayan C. N. (@drashwathcn) August 25, 2020
ಇಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಕ್ಷೇತ್ರದ ಹೂಡಿಕೆಗೆ ವಿಪುಲ ಅವಕಾಶಗಳಿದ್ದು, ಕರ್ನಾಟಕ ಸರ್ಕಾರ ಹಲವು ರಿಯಾಯಿತಿಗಳನ್ನು ಕೂಡ ನೀಡುತ್ತಿದೆ. pic.twitter.com/efFaD4zMEP
ನಿರಾತಂಕವಾಗಿ ಹೂಡಿಕೆ ಮಾಡಿ:
ಕರ್ನಾಟಕ ಆರಂಭದಿಂದಲೂ ಕೈಗಾರಿಕಾ ಸ್ನೇಹಿ ರಾಜ್ಯವಾಗಿದೆ. ಭಾರತದ ಒಟ್ಟಾರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ.40, ಜೈವಿಕ ತಂತ್ರಜ್ಞಾನ ವಲಯದಲ್ಲಿ ಶೇ.35, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ವಿನ್ಯಾಸ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಕೂಡ ಶೇ.64 ರಷ್ಟು ರಫ್ತು ಮಾಡುತ್ತಿರುವ ಅತ್ಯಂತ ಪ್ರಗತಿಪೂರಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಜತೆಗೆ, ಆಸ್ಟ್ರೇಲಿಯಾ ಜತೆ ಎಲ್ಲ ರೀತಿಯ ಕೈಗಾರಿಕಾ ಮತ್ತು ವಾಣಿಜ್ಯ ಸಂಬಂಧಗಳ ಬಗ್ಗೆ ನಮ್ಮ ರಾಜ್ಯ ಉತ್ಸುಕವಾಗಿದೆ ಎಂದು ಡಿಸಿಎಂ ಹೇಳಿದರು.
ಅನೇಕ ವರ್ಷಗಳಿಂದಲೂ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವ್ಯೂಹಾತ್ಮಕ ಪಾಳುದಾರಿಕೆ ಇದೆ. ವಾಣಿಜ್ಯ, ಕೈಗಾರಿಕೆ, ಕಲ್ಲಿದ್ದಲು, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಪರಸ್ಪರ ಕೈಜೋಡಿಸಿ ಕೆಲಸ ಮಾಡುತ್ತಿವೆ. ಜತೆಗೆ, ಎರಡೂ ದೇಶಗಳ ನಡುವೆ ಸರಕು ಮತ್ತು ಸೇವೆಯ ವ್ಯವಹಾರವೂ 2018-19ರಲ್ಲಿ 1.6 ಲಕ್ಷ ಕೋಟಿ ರೂ. ಮೀರಿತ್ತು. ಹೀಗಾಗಿ ಆಸ್ಟ್ರೇಲಿಯಾಕ್ಕೆ ಭಾರತದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ನುಡಿದರು.
ಕರ್ನಾಟಕ ನಂ.1:
ಎಲ್ಲ ರಂಗಗಳಲ್ಲೂ ಕರ್ನಾಟಕ ನಾಗಾಲೋಟದಲ್ಲಿ ಮುಂದೆ ಸಾಗುತ್ತಿದೆ. ನೀತಿ ಆಯೋಗದ 2019ನೇ ಸಾಲಿನ ವರದಿಯಲ್ಲಿ ಆವಿಷ್ಕಾರ ಕ್ಷೇತ್ರದಲ್ಲಿ ನಮ್ಮ ರಾಜ್ಯವು ಮೊದಲ ಸ್ಥಾನದಲ್ಲಿದೆ. ಸದ್ಯ ರಾಜ್ಯದ ಒಟ್ಟಾರೆ ಜಿಡಿಪಿ 220 ಶತಕೋಟಿ ಡಾಲರ್ ಆಗಿದ್ದು, ಅದನ್ನು ಹೆಚ್ಚಿಸುವ ಸ್ಪಷ್ಟ ಗುರಿ ಹೊಂದಲಾಗಿದೆ. ಇನ್ನು ವಿದೇಶಿ ಹೂಡಿಕೆ ಬರುತ್ತಿರುವ ರಾಜ್ಯಗಳಲ್ಲಿ ನಮ್ಮ ರಾಜ್ಯವು 3ನೇ ಅಗ್ರ ರಾಜ್ಯವಾಗಿದೆ. 2000-2019ರ ಅವಧಿಯಲ್ಲಿ ರಾಜ್ಯಕ್ಕೆ 42.3 ದಶಲಕ್ಷ ಡಾಲರ್ ವಿದೇಶಿ ಹೂಡಿಕೆ ಹರಿದುಬಂದಿದೆ. ಇದೇ ವೇಳೆ ಅಭಿವೃದ್ಧಿಯ ಎಲ್ಲ ಕ್ಷೇತ್ರಗಳಿಗೆ ಶಕ್ತಿ ತುಂಬುವ ಉದ್ದೇಶದಿಂದ ಈಗಾಗಲೇ ಡಿಜಿಟಲ್ ಎಕಾನಮಿ ಮಿಷನ್, ವಿಷನ್ ಗ್ರೂಪ್, ಕರ್ನಾಟಕ ಆವಿಷ್ಕಾರ ಪ್ರಾಧಿಕಾರ, ಎಂಎನ್‌ಸಿ ಎಂಗೇಜ್‌ಮೆಂಟ್ ಸೆಲ್ ಇತ್ಯಾದಿ ಸಂಸ್ಥೆಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರೊಟ್ಟಿಗೆ, ಕಳೆದ ಒಂದು ವರ್ಷದಲ್ಲಿ ಅನೇಕ ಗುರುತರ ಸುಧಾರಣೆಗಳನ್ನು ತರಲಾಗಿದೆ ಎಂದು ಉಪ ಮಖ್ಯಮಂತ್ರಿ ತಿಳಿಸಿದರು.
ವೆಬಿನಾರ್ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಉನ್ನತ ಅಧಿಕಾರಿಗಳೂ ಸೇರಿದಂತೆ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಭಾರತ- ಆಸ್ಟ್ರೇಲಿಯಾ ಚೇಂಬರ್ ಆಫ್ ಕಾಮರ್ಸ್‌ನ ಮೈಕೆಲ್ ವಾಡೆ, ಜಿತೇಶ್ ಅಗರವಾಲ್, ರೋಹಿತ್ ಮಾನ್‌ಚಂದ, ಪೀಟರ್ ಬಾಲ್ಡ್‌ವಿನ್, ಸಿದ್ದಾರ್ಥ ಮೆಹತಾ, ಪೆಟುಲಾ ಥಾಮಸ್, ರವೀನ್ ಮೀರ್‌ಚಂದಾನಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.