ಮೈಸೂರು: ‘ಸರ್ಕಾರಿ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ನಡೆಸಲು ಅವಕಾಶ ನೀಡಿರುವುದನ್ನು ಪುನರ್ ಪರಿಶೀಲಿಸುತ್ತೇವೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ಇತ್ತು. ಆದ್ದರಿಂದ ಸಾರ್ವಜನಿಕರಿಗೆ ಸೇವೆ ಸಿಗಲೆಂಬ ಕಾರಣಕ್ಕೆ ವೈದ್ಯರು ಕ್ಲಿನಿಕ್ ನಡೆಸಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿತ್ತು. ಸರ್ಕಾರಿ ವೈದ್ಯಾಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಸೇವೆ ಮಾಡಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರು ಮಾತ್ರ ಕ್ಲಿನಿಕ್ ನಡೆಸಲು ಈಗ ಅವಕಾಶ ಇದೆ. ಅದರಿಂದ ಆಗುತ್ತಿರುವ ಸಮಸ್ಯೆಗಳನ್ನು ಗಮನಿಸಿ ಪುನರ್ ಪರಿಶೀಲನೆಗೆ ಮುಂದಾಗಿದ್ದೇವೆ’ ಎಂದು ತಿಳಿಸಿದರು.
‘ಆರೋಗ್ಯ ಇಲಾಖೆಯಲ್ಲಿನ ಅರೆಕಾಲಿಕ ವೈದ್ಯರು ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವುದಕ್ಕೆ ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ’ ಎಂದರು.
ಚಾಮರಾಜನಗರದ ಆಕ್ಸಿಜನ್ ದುರಂತದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಯಾವ ಅಂಶಗಳ ಆಧಾರದ ಮೇಲೆ ಮರು ತನಿಖೆಯಾಗಬೇಕು ಎಂಬ ಚಾರ್ಜ್ ಫ್ರೇಮ್ ಸಿದ್ಧಪಡಿಸಲು ಉದ್ದೇಶಿಸಿದ್ದೇವೆ. ಕಾಲಮಿತಿಯಲ್ಲಿ ಮರು ತನಿಖೆ ನಡೆಯಬೇಕು ಎಂಬುದು ನಮ್ಮ ಆಶಯ’ ಎಂದರು.
ಸಂಜೆ ಕ್ಲಿನಿಕ್ ತೆರೆಯಲು ಸೂಚನೆ:
ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ‘ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್‌ಗಳನ್ನು ಇನ್ನು ಮುಂದೆ ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ತೆರೆಯಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ಸದ್ಯ ಈ ಕ್ಲಿನಿಕ್‌ಗಳು ಬೆಳಿಗ್ಗೆ 9ರಿಂದ ಸಂಜೆ 4ವರೆಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ನಿರೀಕ್ಷೆಯಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿಲ್ಲ. ನಗರ ಪ್ರದೇಶಗಳಲ್ಲಿ ದುಡಿಯುವ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಂಥವರಿಗೆ ಸಂಜೆ ಹೊತ್ತು ಆರೋಗ್ಯ ಸೇವೆ ದೊರೆತರೆ ಉತ್ತಮವಾಗುತ್ತದೆ. ಹೀಗಾಗಿ ಕನಿಷ್ಠ ನಗರ ಪ್ರದೇಶಗಳಲ್ಲಿ ಸಂಜೆ ಹೊತ್ತು ಈ ಕ್ಲಿನಿಕ್‌ಗಳನ್ನು ತೆರೆಯಬೇಕು’ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‌ಕುಮಾರ್ ಅವರಿಗೆ ನಿರ್ದೇಶನ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.