ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ನಾಗೇಂದ್ರ ಸ್ವಯಂ ಪ್ರೇರಣೆಯಿಂದ ರಾಜೀನಾಮೆಗೆ ಮುಂದಾಗಿದ್ದಾರೆ: ಡಿಕೆಶಿ

Published 6 ಜೂನ್ 2024, 9:07 IST
Last Updated 6 ಜೂನ್ 2024, 9:08 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷ ಹಾಗೂ ಸರ್ಕಾರದ ಘನತೆಗೆ ಧಕ್ಕೆ ಆಗಬಾರದು ಎಂಬ ಕಾರಣಕ್ಕೆ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರು ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿ ಬಳಿ ಗುರುವಾರ ಮಾತನಾಡಿದ ಅವರು, 'ನಾನು ಮತ್ತು ಗೃಹ ಸಚಿವರು ನಾಗೇಂದ್ರ ಅವರ ಜತೆ ಚರ್ಚೆ ಮಾಡಿದ್ದೇವೆ. ಅವರು ಈ ಅಕ್ರಮದಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಅವರು ರಾಜೀನಾಮೆ ಕೊಡುವ ಅಗತ್ಯವಿಲ್ಲ. ಆದರೆ, ಪಕ್ಷದ ಹಾಗೂ ಸರ್ಕಾರದ ಘನತೆಗೆ ಧಕ್ಕೆ ಬರಬಾರದು ಎಂದು ಸ್ವತಃ ನಾಗೇಂದ್ರ ಅವರೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂದೇ ಅವರು ರಾಜೀನಾಮೆ ನೀಡಬಹುದು' ಎಂದರು.

ಸರ್ಕಾರ ಅವರ ರಾಜೀನಾಮೆಯನ್ನು ಸ್ವೀಕರಿಸಲಿದೆಯೇ ಎಂದು ಕೇಳಿದಾಗ, ‘ಮುಖ್ಯಮಂತ್ರಿಯವರು ಪಕ್ಷದ ಹೈಕಮಾಂಡ್ ಜತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಸಂತೋಷವಾಗಿದೆ. ನಮ್ಮ ಮೈತ್ರಿಕೂಟ ಅಧಿಕಾರದ ಸನಿಹಕ್ಕೆ ಬಂದರೂ ಸರ್ಕಾರ ರಚನೆ ಪ್ರಯತ್ನದಿಂದ ದೂರವಿರಲು ನಿರ್ಧರಿಸಿದೆ. ಪ್ರತಿಪಕ್ಷಗಳು ಬಲಿಷ್ಠವಾಗಿರಬೇಕು ಎಂದು ದೇಶ ಅಭಿಪ್ರಾಯ ಪಟ್ಟಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ರಕ್ಷಣೆಗೆ ಹೊಸ ಭರವಸೆ ಸಿಕ್ಕಿದೆ. ಭವಿಷ್ಯದ ಬಗ್ಗೆ ಎಐಸಿಸಿ ಅಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ’ ಎಂದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಾಗುವುದು. ಕಾಂಗ್ರೆಸ್ ಪಕ್ಷ ಎಂದಿಗೂ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯುವುದಿಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT