ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲ ಗಲಭೆ ಪೂರ್ವ ನಿಯೋಜಿತ: ವಿಜಯೇಂದ್ರ ಆರೋಪ

Published : 12 ಸೆಪ್ಟೆಂಬರ್ 2024, 16:23 IST
Last Updated : 12 ಸೆಪ್ಟೆಂಬರ್ 2024, 16:23 IST
ಫಾಲೋ ಮಾಡಿ
Comments

ನಾಗಮಂಗಲ (ಮಂಡ್ಯ ಜಿಲ್ಲೆ): ‘ಪಟ್ಟಣದ ಮೈಸೂರು ರಸ್ತೆಯಲ್ಲಿ ಶಾಂತಿಯುತ ಗಣಪತಿ‌ ಮೆರವಣಿಗೆಯ ವೇಳೆ ಬುಧವಾರ ರಾತ್ರಿ ಒಂದು ಕೋಮಿನವರು ಕಲ್ಲು ತೂರಾಟ, ತಲ್ವಾರ್ ಪ್ರದರ್ಶನ, ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಾಕಿರುವ ಕೃತ್ಯ ಪೂರ್ವ ನಿಯೋಜಿತವಾಗಿದ್ದು, ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದಾರೆ. ದೇಶದ್ರೋಹಿಗಳು ಎಲ್ಲೆಡೆಯು ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಗಲಭೆಯಲ್ಲಿ ಬೆಂಕಿ ಹಚ್ಚಿ ಸುಟ್ಟು ಕರಕಲಾಗಿರುವ ಅಂಗಡಿಮುಂಗಟ್ಟುಗಳನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಿ.ಟಿ.ರವಿ ಜೊತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ವಿಜಯೇಂದ್ರ ಮಾತನಾಡಿದರು. 

ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರುವ ಜೊತೆಗೆ ಹಿಂದೂಗಳ ಮೇಲೆ ಹಲ್ಲೆಗೆ ಯತ್ನ ಮಾಡಲಾಗಿದೆ. ಘಟನೆ ವೇಳೆ  ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ. ಕಾಂಗ್ರೆಸ್ ಶಾಸಕರೇ ನಿಮ್ಮ ಮನೆಗಳಿಗೂ ಈ ದೇಶದ್ರೋಹಿಗಳು ನುಗ್ಗುತ್ತಾರೆ. ಬಂಧಿತ ಹಿಂದೂ ಯುವಕರನ್ನು ಬಿಡುಗಡೆ ಮಾಡುವ ಜೊತೆಗೆ ದೇಶ ದ್ರೋಹಿಗಳಿಗೆ ಶಿಕ್ಷೆ ನೀಡಲು ಕ್ರಮವಹಿಸಿ ಎಂದರು. ಕೆರಗೋಡಿನಲ್ಲಿ ಹನುಮ ಧ್ವಜದ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ವಿವಾದ ಸೃಷ್ಟಿಸಿತ್ತು ಎಂದು ನೆನಪಿಸಿದರು.

‘ಮಸೀದಿಯಲ್ಲಿ ಯೋಜನೆ’

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಭಯೋತ್ಪಾದನಾ ಕೃತ್ಯದಂತೆ ಕಿಡಿಗೇಡಿಗಳು ಕಾನೂನು ಉಲ್ಲಂಘಿಸುತ್ತಿದ್ದಾರೆ. ಕಳೆದ ಬಾರಿಯೂ ಗಣಪತಿ ವಿಚಾರಕ್ಕೆ ಇದೇ ಜಾಗದಲ್ಲಿ ಗಲಾಟೆ ನಡೆದಿತ್ತು. ಅಧಿಕಾರಿಗಳಿಗೆ, ಪೊಲೀಸರಿಗೆ ಅಷ್ಟು ಪರಿಜ್ಞಾನವು ಇಲ್ಲವೇ? ಕಾಂಗ್ರೆಸ್ಸಿನ ಪ್ರಚೋದನೆ ಇಲ್ಲದೇ ನಡೆಯಲು ಸಾಧ್ಯವಿಲ್ಲ ಎಂದರು.

ಕೆರಗೋಡು ಧ್ವಜ ಪ್ರಕರಣದ ನಂತರ ಈಗ ಗಣೇಶನ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ ಬಿದ್ದಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಕೆ ಮಾಡುತ್ತಾ ಬಂದರೆ  ಸರ್ವ ನಾಶವಾಗುತ್ತದೆ. ಗೃಹ ಸಚಿವರು ಇದನ್ನು ಸಣ್ಣ ಘಟನೆ ಎಂದು ಹೇಳುತ್ತಾರೆ. ಮಸೀದಿಯಲ್ಲಿ ಯೋಜನೆ ಮಾಡಿ ಗಲಭೆ ಎಬ್ಬಿಸಿ ಮಂಡ್ಯದಲ್ಲಿ ಗಣಪತಿ ಹಬ್ಬ ನಡೆಯಬಾರದು ಎನ್ನುವಂತೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆರೋಪಿಗಳನ್ನು ಬಂಧಿಸಿ’

ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ‘ನಾಗಮಂಗಲದಲ್ಲಿ ಶೇ 90ರಷ್ಟು ಹಿಂದೂಗಳಿರುವ ಕಡೆಗಳಲ್ಲೂ ಗಣೇಶೋತ್ಸವ ನಡೆಸಲು ಸಂಕಷ್ಟ  ಆಗುತ್ತಿದೆ. ಗಲಭೆಯಿಂದ ಆಗಿರುವ ನಷ್ಟವನ್ನೂ ಆರೋಪಿಗಳಿಂದ ಭರಿಸುವ ಕೆಲಸವಾಗಬೇಕು. ಯಾರು ಗಲಭೆ ಮಾಡಿದ್ದಾರೋ, ಬೆಂಕಿ ಹಚ್ಚಿದರೋ ಅವರನ್ನು ಬಂಧಿಸಲಿ. ಅದನ್ನು ಬಿಟ್ಟು ಗಣೇಶೋತ್ಸವದಲ್ಲಿ ಭಾಗಿಯಾಗಿದ್ದ ಅಮಾಯಕ ಹಿಂದೂಗಳನ್ನು ಬಂಧಿಸುವುದಲ್ಲ ಎಂದರು.

 ಬಿಜೆಪಿ ಮುಖಂಡರಾದ ಅಶ್ವತ್ಥ್‌ನಾರಾಯಣ್, ಸುನೀಲ್, ನಾರಾಯಣಗೌಡ, ಜೆಡಿಎಸ್ ಮುಖಂಡ ಸುರೇಶ್ ಗೌಡ, ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT