ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಆಯೋಗದ ಸಭೆಗೆ ಗೈರಾದ ಸಿದ್ದರಾಮಯ್ಯ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ: ಬಿಜೆಪಿ ಟೀಕೆ

Published 29 ಮೇ 2023, 9:18 IST
Last Updated 29 ಮೇ 2023, 9:18 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಆಯೋಗದ ಸಭೆಗೆ ಗೈರಾಗುವ ಮೂಲಕ ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ನೀತಿ ಆಯೋಗದ ಸಭೆ ವಿಷಯ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ರಾಜ್ಯಗಳ ಅಭಿವೃದ್ಧಿಯಿಂದ ದೇಶ ಸುಭಿಕ್ಷ - ದೇಶದ ಪ್ರಗತಿಯಿಂದ ರಾಜ್ಯಗಳ ಸಮೃದ್ಧಿ. ಸಮನ್ವಯ ಸಹಕಾರಗಳ ಒತ್ತಾಸೆಯೊಂದಿಗೆ 2047ರ ವೇಳೆಗೆ ಭಾರತವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಅಪೇಕ್ಷಿತರಿರುವ, ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರಾಗಿ, ರಾಷ್ಟ್ರಮಟ್ಟದಲ್ಲಿ ರಾಜ್ಯಕ್ಕೆ ಅವಮಾನ ಮಾಡಿದ್ದಾರೆ’ ಎಂದು ಕಿಡಿಕಾರಿದೆ.

‘ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುವ ಕರ್ನಾಟಕವನ್ನು ಬಹುಮುಖ್ಯ ಸಭೆಯೊಂದರಲ್ಲಿ ಪ್ರತಿನಿಧಿಸದೆ ಇರುವುದು ಕಾಂಗ್ರೆಸ್‌ನ ಕರ್ನಾಟಕ ವಿರೋಧಿ ನಡೆಯಾಗಿದೆ. ಇದು ಮೂರೂ ಹೊತ್ತು ರಾಜ್ಯ-ಕೇಂದ್ರದ ಸಂಬಂಧ, ಫೆಡರಲಿಸಂ ಮುಂತಾದ ಕಥೆ ಸೃಷ್ಟಿಸಿ ತುತ್ತೂರಿ ಊದುವ ಸಿಎಂ ಸಿದ್ದರಾಮಯ್ಯನವರ ಬೇಜವಾಬ್ದಾರಿತನ. ಪ್ರತಿಯೊಂದರಲ್ಲಿಯೂ ರಾಜಕೀಯ ದ್ವೇಷ ಹಾಗು ಸೇಡನ್ನು ತೀರಿಸಿಕೊಳ್ಳುವ ಮಾನಸೀಕತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸರ್ಕಾರದಿಂದ ರಾಜ್ಯದ ಅಭಿವೃಧ್ಧಿ ಅಸಾಧ್ಯ’ ಎಂದು ಬಿಜೆಪಿ ಗುಡುಗಿದೆ.

ನೀತಿ ಆಯೋಗ ಸಮಿತಿ ಸಭೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಗೈರಾಗಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸಭೆಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT