ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ಪ್ರಕರಣ: ದೇವರಾಜೇಗೌಡ ಹೇಳಿಕೆ ರಾಜಕೀಯ ಪ್ರೇರಿತ– ಸಚಿವ ರಾಮಲಿಂಗಾರೆಡ್ಡಿ

Published 18 ಮೇ 2024, 12:29 IST
Last Updated 18 ಮೇ 2024, 12:29 IST
ಅಕ್ಷರ ಗಾತ್ರ

ರಾಮನಗರ: ‘ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆಸಿರುವ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿಯ ದೇವರಾಜೇಗೌಡ ನೀಡುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದರು.

ಪ್ರಕರಣ ಕುರಿತು ನಗರದಲ್ಲಿ ಶನಿವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದೇವರಾಜೇಗೌಡ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಬಿಜೆಪಿ–ಜೆಡಿಎಸ್‌ ಮೈತ್ರಿಗೂ ಮುಂಚೆ ಹಾಸನದಲ್ಲಿ ಜೆಡಿಎಸ್ ಮತ್ತು ಆ ಪಕ್ಷದ ನಾಯಕರ ವಿರುದ್ಧ ಅವರು ತೊಡೆ ತಟ್ಟಿ ನಿಂತಿದ್ದರು. ಮೈತ್ರಿ ಬಳಿಕ ಪ್ರಜ್ವಲ್ ಪ್ರಕರಣ ಹೊರಬರುತ್ತಿದ್ದಂತೆ, ಯೂಟರ್ನ್ ತೆಗೆದುಕೊಂಡು ಕಾಂಗ್ರೆಸ್ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದರು.

‘ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ನಾಲ್ವರು ಸಚಿವರ ವಿರುದ್ಧ ಅವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ದೇವರಾಜೇಗೌಡ ಹಿಂದೆ ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿರುವ ಅವರ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಕಿಡಿಕಾರಿದರು.

‘ಹೊಳೆನರಸೀಪುರ ಮತ್ತು ಹಾಸನದಲ್ಲಿ ಸುತ್ತುತ್ತಿದ್ದ ಪ್ರಜ್ವಲ್ ರೇವಣ್ಣ, ಎಚ್‌.ಡಿ. ರೇವಣ್ಣ ಹಾಗೂ ದೇವರಾಜೇಗೌಡ ನಡುವಣ ವೈಯಕ್ತಿಕ ವಿಚಾರವನ್ನು ರಾಜ್ಯಮಟ್ಟಕ್ಕೆ ಸ್ವತಃ ದೇವರಾಜೇಗೌಡ ಎಳೆದು ತಂದಿದ್ದಾರೆ. ಪ್ರಜ್ವಲ್ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಪೆನ್‌ಡ್ರೈವ್ ಅನ್ನು ದೇವರಾಜೇಗೌಡ ಒಂದು ವರ್ಷದಿಂದ ತಮ್ಮ ಬಳಿ ಇಟ್ಟುಕೊಂಡು ಏನು ಮಾಡುತ್ತಿದ್ದರು?’ ಎಂದು ಪ್ರಶ್ನಿಸಿದರು.

‘ದೇವರಾಜೇಗೌಡ ಜೈಲಿನಿಂದ ಹೊರಬಂದ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ’ ಎಂಬ ವಿರೋಧ ಪಕ್ಷದವರ ಹೇಳಿಕೆ ಕುರಿತ ಪ್ರಶ್ನೆಗೆ, ‘ಮೊದಲು ಅವರ ಜೈಲಿನಿಂದ ಬಿಡುಗಡೆಯಾಗಲಿ. ಆಮೇಲೆ ಸರ್ಕಾರ ಬೀಳುತ್ತೊ, ನಿಲ್ಲುತ್ತೊ ಎಂಬುದನ್ನು ನೋಡೋಣ’ ಎಂದು ವ್ಯಂಗ್ಯವಾಡಿದರು.

ರಾಮನಗರ ಜಿಲ್ಲೆಯಲ್ಲಿ ಮಳೆ ಕೊರತೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಮಾವು ನೆಲ ಕಚ್ಚಿದ್ದು, ನಷ್ಟದಲ್ಲಿರುವ ಬೆಳೆಗಾರರಿಗೆ ವಿಶೇಷ ಪರಿಹಾರ ಪ್ಯಾಕೇಜ್‌ ನೀಡುವ ಕುರಿತು ಸಚಿವ ಸಂಪುಟದಲ್ಲಿ ಪ್ರಸ್ತಾಪ ಮಾಡುವೆ
– ರಾಮಲಿಂಗಾ ರೆಡ್ಡಿ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ

‘ಬಿಜೆಪಿ ಅವಧಿಯಲ್ಲೇ ಹೆಚ್ಚು ಕೊಲೆ’

‘ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವ ಬಿಜೆಪಿಯವರಿಗೆ ಮಾಡುವುದಕ್ಕೆ ಬೇರೆ ಕೆಲಸಗಳಿಲ್ಲ. ಹಿಂದೆ ಅವರ ಸರ್ಕಾರವಿದ್ದಾಗ ಒಂದೇ ವರ್ಷದಲ್ಲಿ 1,300 ಕೊಲೆ ಪ್ರಕರಣಗಳು ದಾಖಲಾಗಿವೆ. ಬಿಜೆಪಿಯ ಅಂಗಸಂಸ್ಥೆಗಳಾದ ಆರ್‌ಎಸ್‌ಸ್, ಬಜರಂಗದಳದ ಕಾರ್ಯಕರ್ತರ ನೈತಿಕ ಪೊಲೀಸ್‌ಗಿರಿ ಮಿತಿ ಮೀರಿತ್ತು. ಪೊಲೀಸರಿಗೂ ಕೇಸರಿ ಶಾಲು ಹಾಕಿದ್ದರು. ಅವರ ಸರ್ಕಾರಕ್ಕೆ ಹೋಲಿಸಿದರೆ ನಮ್ಮ ಸರ್ಕಾರ ಬಂದ ಬಳಿಕ 400 ಕೊಲೆಗಳಾಗಿವೆ. ಅಪರಾಧ ನಿಯಂತ್ರಣಕ್ಕೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT