ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆನ್‌ ಡ್ರೈವ್‌ ಬಹಿರಂಗಕ್ಕೆ ಅಮಿತ್‌ ಶಾ ಆಶೀರ್ವಾದ ಇರಬಹುದು: ಪ್ರಿಯಾಂಕ್‌ ಖರ್ಗೆ

Published 18 ಮೇ 2024, 9:39 IST
Last Updated 18 ಮೇ 2024, 9:39 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವಿಡಿಯೊಗಳುಳ್ಳ ಪೆನ್‌ ಡ್ರೈವ್‌ ಬಹಿರಂಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಶೀರ್ವಾದ ಇರಬಹುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಪೆನ್‌ ಡ್ರೈವ್‌ ಪ್ರಕರಣದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಲು ಡಿ.ಕೆ. ಶಿವಕುಮಾರ್‌, ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ ಮತ್ತು ಎನ್. ಚಲುವರಾಯಸ್ವಾಮಿ ಆಮಿಷ ಒಡ್ಡಿದ್ದರು’ ಎಂಬ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೆ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.

‘ದೇವರಾಜೇಗೌಡ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದವರು. ಅವರು ನೇರವಾಗಿ ಅಮಿತ್‌ ಶಾ ಜತೆ ಸಂಪರ್ಕ ಹೊಂದಿದ್ದರು. ಅಮಿತ್‌ ಶಾ ಆಶೀರ್ವಾದದಿಂದಲೇ ಎಲ್ಲವನ್ನೂ ಮಾಡುತ್ತಿದ್ದೇನೆ ಎಂದು ಹಿಂದೆ ಹೇಳಿಕೊಂಡಿದ್ದರು. ಪೆನ್‌ ಡ್ರೈವ್‌ ಬಹಿರಂಗಕ್ಕೂ ಅಮಿತ್‌ ಶಾ ಆಶೀರ್ವಾದ ಇದ್ದಿರಬಹುದು’ ಎಂದರು.

‘₹ 100 ಕೋಟಿ ಆಮಿಷ ಒಡ್ಡಿ, ₹ 5 ಕೋಟಿ ಮುಂಗಡ ನೀಡಲಾಗಿತ್ತು ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಅದು ನಿಜವೇ ಆಗಿದ್ದರೆ ಅಮಿತ್‌ ಶಾ ಅವರಿಗೆ ಮಾಹಿತಿ ನೀಡಿ ಆದಾಯ ತೆರಿಗೆ, ಸಿಬಿಐ ಅಥವಾ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕಿತ್ತು. ವಕೀಲರಾಗಿರುವ ಅವರು ನ್ಯಾಯಾಧೀಶರ ಮುಂದಾದರೂ ಮಾಹಿತಿ ನೀಡಬೇಕಿತ್ತು’ ಎಂದು ಹೇಳಿದರು.

‘ಬಿಜೆಪಿಯವರಿಗೆ ಆಪರೇಷನ್ ಕಮಲ ನಡೆಸಿ ₹ 100 ಕೋಟಿ ಸಾಗಿಸುವುದು ಹೇಗೆ ಎಂಬುದು ಗೊತ್ತಿರುತ್ತದೆ. ಈಗ ಪ್ರಕರಣ ಮುಚ್ಚಿಹಾಕಲಿ ಟೆಂಪೊಗಳಲ್ಲಿ ಹಣ ಸಾಗಿಸುತ್ತಿದ್ದಾರೆ. ಜನರ ದಿಕ್ಕುತಪ್ಪಿಸಿ ಪ್ರಕರಣ ಮುಚ್ಚಿಹಾಕಲು ಹಣ ನೀಡುತ್ತಿದ್ದಾರೆ’ ಎಂದು ಪ್ರಿಯಾಂಕ್‌ ಆರೋಪಿಸಿದರು.

ಬಿಜೆಪಿ, ಜೆಡಿಎಸ್‌ ಷಡ್ಯಂತ್ರ: ‘ಪ್ರಜ್ವಲ್‌ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಮುಚ್ಚಿಹಾಕಲು ಬಿಜೆಪಿ ಮತ್ತು ಜೆಡಿಎಸ್‌ನವರು ಷಡ್ಯಂತ್ರ ಮಾಡುತ್ತಿದ್ದಾರೆ. ಪ್ರಜ್ವಲ್‌ ದೌರ್ಜನ್ಯ ನಡೆಸಿರುವುದು, ವಿಡಿಯೊ ರೆಕಾರ್ಡಿಂಗ್‌ ಮಾಡಿಕೊಂಡ ಬಗ್ಗೆ ಅವರು ಮಾತನಾಡುತ್ತಿಲ್ಲ. ವಿಡಿಯೊ ಸೋರಿಕೆ ಆಗಿದ್ದೇ ತಪ್ಪು ಎಂದು ಬಿಂಬಿಸಲು ಹೊರಟಿದ್ದಾರೆ. ಇದರ ಹಿಂದೆ ‍ಪ್ರಜ್ವಲ್‌ ರಕ್ಷಿಸುವ ತಂತ್ರಗಾರಿಕೆ ಇದೆ’ ಎಂದು ದೂರಿದರು.

ರಾಜೀನಾಮೆ ನೀಡಬೇಕಿತ್ತು: ‘ಎಚ್.ಡಿ. ದೇವೇಗೌಡರ ಕುಟುಂಬದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅಧಿಕಾರ ಹೊಂದಿದ್ದಾರೆ. ಪ್ರಜ್ವಲ್ ರೇವಣ್ಣ ನಡೆಸಿದ ಹೀನ ಕೃತ್ಯದ ನೈತಿಕ ಹೊಣೆ ಹೊತ್ತು ಅವರ ಕುಟುಂಬದವರೆಲ್ಲರೂ ರಾಜೀನಾಮೆ ನೀಡಬೇಕಿತ್ತು. ಆತನ ಕೃತ್ಯಕ್ಕಾಗಿ ರಾಜ್ಯದ ಜನರ ಕ್ಷಮೆ ಯಾಚಿಸಬೇಕಿತ್ತು. ಆದರೆ, ಅವರಿಗೆ ಕುಟುಂಬ ಮತ್ತು ಪಕ್ಷವೇ ಮುಖ್ಯವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಮಹಾನಾಯಕ, ಷಡ್ಯಂತ್ರ, ತಿಮಿಂಗಿಲ ಎಂದೆಲ್ಲ ಹೇಳಿಕೆ ನೀಡಿ ಜನರ ದಿಕ್ಕುತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಇವರು ಸರಿಯಾಗಿ ಆತ್ಮಾವಲೋಕನ ಮಾಡಿಕೊಂಡು ಮನೆಯೊಳಕ್ಕೆ ಒಮ್ಮೆ ಶೋಧಿಸಲಿ. ಇವರ ಮನೆಯೊಳಗೆ ಎಷ್ಟು ತಿಮಿಂಗಿಲಗಳಿವೆ ಎಂಬುದು ಗೊತ್ತಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT