ಬೆಂಗಳೂರು: ‘ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಚಟುವಟಿಕೆಗಳಿಗೆ ನಿಷೇಧ ಹೇರುವ ಕುರಿತಂತೆ ಪರಿಶೀಲಿಸಿ, ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ.

ಸರ್ಕಾರಿ ಸ್ಥಳಗಳಲ್ಲಿ ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಿನಲ್ಲಿ ಆರ್ಎಸ್ಎಸ್ ನಡೆಸುವ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿಷೇಧ ಹೇರಬೇಕೆಂದು ಮುಖ್ಯಮಂತ್ರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅ. 4ರಂದು ಪತ್ರ ಬರೆದಿದ್ದರು. ಪ್ರಿಯಾಂಕ್ ಬರೆದ ಈ ಪತ್ರದ ಮೇಲೆಯೇ ಮುಖ್ಯಮಂತ್ರಿ ಈ ನಿರ್ದೇಶನ ನೀಡಿದ್ದಾರೆ.

ಆರ್ಎಸ್ಎಸ್ ಸಂಘಟನೆಗೆ ನೂರು ವರ್ಷ ತುಂಬಿದ ಸಂಭ್ರಮಾಚರಣೆ ಸಂದರ್ಭದಲ್ಲೇ ರಾಜ್ಯದಲ್ಲಿ ಅದರ ಚಟುವಟಿಕೆಗೆ ಅಂಕುಶ ಹಾಕುವಂತೆ ಪ್ರಿಯಾಂಕ್ ಬರೆದ ಪತ್ರ ಮತ್ತು ಮುಖ್ಯಮಂತ್ರಿ ನೀಡಿರುವ ಸೂಚನೆ ಬಿಜೆಪಿ ನಾಯಕರನ್ನು ಕೆರಳಿಸಿದೆ.

ಪ್ರಿಯಾಂಕ್ ಬರೆದ ಪತ್ರದಲ್ಲಿ ಏನಿದೆ?: ‘ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಅಧಿಕಾರವನ್ನು ನೀಡುತ್ತದೆ.’

‘ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸಿನಲ್ಲಿ ಭಾರತ ಏಕತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬುತ್ತಿದೆ’.

‘ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಧ ಮಕ್ಕಳು ಹಾಗೂ ಯುವಜನರ ಮನಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳದಲ್ಲಿ ಆರ್ಎಸ್ಎಸ್ ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲ ಬಗೆಯ ಚಟುವಟಿಕೆಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಈ ಪತ್ರವನ್ನು ಲಗತ್ತಿಸಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಭಾನುವಾರ ಪೋಸ್ಟ್ ಮಾಡಿರುವ ಪ್ರಿಯಾಂಕ್, ‘ಆರ್ಎಸ್ಎಸ್ ಪ್ರತಿಪಾದಿಸುವ ಮೂಲಭೂತವಾದಿ ಸಿದ್ದಾಂತದ ಪರಿಣಾಮದಿಂದಲೇ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸುವ ಮನಃಸ್ಥಿತಿ ಬೆಳೆದಿದೆ. ಮಕ್ಕಳು ಹಾಗೂ ಯುವ ಸಮುದಾಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡಲು ಯತ್ನಿಸುವ ಆರ್ಎಸ್ಎಸ್ ಪ್ರಯತ್ನವನ್ನು ತಡೆಯುವ, ಸಂವಿಧಾನದ ಆಶಯಗಳನ್ನು, ಏಕತೆ, ಸಮಾನತೆ, ಸಮಗ್ರತೆಯನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಎಲ್ಲ ಸಾರ್ವಜನಿಕ ಪ್ರದೇಶದಲ್ಲಿ ಆರ್ಎಸ್ಎಸ್ನ ಚಟವಟಿಕೆಯನ್ನು ನಿರ್ಬಂಧಿಸುವಂತೆ ಮುಖ್ಯಮಂತ್ರಿಗೆ ಕೋರಿಕೆ ಸಲ್ಲಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್ಎಸ್ಎಸ್ನ ಪ್ರಾರ್ಥನಾ ಗೀತೆ, ‘ನಮಸ್ತೇ ಸದಾ ವತ್ಸಲೇ..’ ಹಾಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಇದನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದರು. ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಡಿ.ಕೆ. ಶಿವಕುಮಾರ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿದ ಬಳಿಕ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮದ ಮುಂದೆ ಕ್ಷಮೆ ಕೇಳಿ ಪರಿಸ್ಥಿತಿ ತಿಳಿಗೊಳಿಸಿದ್ದರು.

‘ಅಧಿಕಾರ ಇದ್ದಿದ್ದರೆ ಆರ್ಎಸ್ಎಸ್ ನಿಷೇಧಿಸುತ್ತಿದ್ದೆ’

‘ಆರ್ಎಸ್ಎಸ್ಗೂ ತಾಲಿಬಾನ್ಗೂ ಏನೂ ವ್ಯತ್ಯಾಸ ಇಲ್ಲ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ಆರ್ಎಸ್ಎಸ್ ಅನ್ನು ನಿಷೇಧ ಮಾಡುತ್ತಿದ್ದೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಮುಖ್ಯಮಂತ್ರಿಗೆ ಪತ್ರ ಬರೆದಿರುವ ಕುರಿತು ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು ‘ನನ್ನ ಇತಿಮಿತಿಯಲ್ಲಿ ನನಗೆ ಆರ್ಎಸ್ಎಸ್ ಅನ್ನು ನಿಷೇಧಿಸಲು ಸಾಧ್ಯವಿಲ್ಲ. ಹೀಗಾಗಿ ಪತ್ರ ಬರೆದಿದ್ದೇನೆ’ ಎಂದರು. ‘ಸರ್ಕಾರಿ ಶಾಲೆಯಲ್ಲಿ ಆರ್ಎಸ್ಎಸ್ ಬೈಠಕ್ ಆಗಬಾರದು. ನಮ್ಮದು ಬಸವ ತತ್ವದ ಮೇಲೆ ನಡೆಯುವ ಸರ್ಕಾರ’ ಎಂದೂ ಹೇಳಿದರು. ‘ಆರ್ಎಸ್ಎಸ್ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ವ್ಯಂಗ್ಯ ಮಾಡಿದ್ದನ್ನು ಬೇರೆಯದೇ ರೀತಿಯಲ್ಲಿ ತಿರುಚಲಾಯಿತು. ಬೇರೆ ಸಂಘಟನೆಯ ಇತಿಹಾಸ ತಿಳಿಯುವುದು ತಪ್ಪಲ್ಲ’ ಎಂದ ಪ್ರಿಯಾಂಕ್ ‘ಸಂವಿಧಾನ ಬೇಡ ಮನುಸ್ಮೃತಿ ಬೇಕು ಎಂದವರು ಯಾರು? ಸಾವರ್ಕರ್ ಅವರಿಗೆ ವೀರ ಬಿರುದ್ದು ಕೊಟ್ಟವರು ಯಾರು’ ಎಂದೂ ಪ್ರಶ್ನಿಸಿದರು. ‘ಧರ್ಮ ರಕ್ಷಣೆ ಗೋ ರಕ್ಷಣೆ ಹೆಸರಲ್ಲಿ ಆರ್ಎಸ್ಎಸ್ನವರಿಂದ ವಿಷಬೀಜ ಬಿತ್ತುವ ಕೆಲಸ ಆಗುತ್ತಿದೆ. ಈ ತತ್ವ ಸಿದ್ಧಾಂತ ಬಡವರಿಗೆ ಹಿಂದುಳಿದವರಿಗೆ ಮಾತ್ರ ಏಕೆ? ಇತ್ತೀಚೆಗೆ ದೊಡ್ಡ ನಾಯಕರು ಗಣವೇಷ (ಆರ್ಎಸ್ಎಸ್ ಸಮವಸ್ತ್ರ) ಹಾಕುತ್ತಿದ್ದಾರೆ. ಈ ಹಿಂದೆ ಹೀಗೆ ಗಣವೇಷ ಹಾಕುತ್ತಿರಲಿಲ್ಲ. ಈ ನಾಯಕರ ಮಕ್ಕಳು ಎಲ್ಲಿದ್ದಾರೆ? ಅವರು ಯಾಕೆ ಗಣವೇಷ ಹಾಕುವುದಿಲ್ಲ? ಅವರ ಮಕ್ಕಳಿಗೆ ಯಾಕೆ ತ್ರಿಶೂಲ ದೀಕ್ಷೆ ಕೊಡುವುದಿಲ್ಲ? ಹೆಚ್ಚು ಮಕ್ಕಳು ಹುಟ್ಟಿಸಬೇಕು ಎಂದವರು ಯಾಕೆ ಬ್ರಹ್ಮಚಾರಿಗಳಾಗಿದ್ದಾರೆ’ ಎಂದೂ ಕೇಳಿದರು.

‘ಆರ್ಎಸ್ಎಸ್ನವರು ತಾಲಿಬಾನಿಗಳು’

‘ಆರ್ಎಸ್ಎಸ್ನವರು ಭಾರತದ ತಾಲಿಬಾನಿಗಳು’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು. ಆರ್ಎಸ್ಎಸ್ ಚಟುವಟಿಕೆ ನಿಷೇಧಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ‘ಸರ್ಕಾರಿ ಜಾಗದಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಆದರೆ ನೋಂದಣಿಯೇ ಆಗಿಲ್ಲ ’ಎಂದರು. ಆರ್ಎಸ್ಎಸ್ ಸಂಘಟನೆಯವರು ಅನುಮತಿ ಪಡೆಯದೆ ಹಲವು ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ಶಾಖೆ ನಡೆಸಿಕೊಂಡು ಬಂದಿದ್ದಾರೆ. ಲಾಠಿ ತಲ್ವಾರ್ ತಿರುಗಿಸಿಕೊಂಡು ಓಡಾಡುತ್ತಾರೆ’ ಎಂದರು. ‘ಪ್ಯಾಲೇಸ್ಟೀನ್ ಪರ ಪ್ರತಿಭಟನೆ ಮಾಡಿದರೆ ಪೊಲೀಸರು ಬಂಧಿಸುತ್ತಾರೆ. ಆರ್ಎಸ್ಎಸ್ ಶಾಖೆ ನಡೆಸಲು ಪೊಲೀಸರು ಏಕೆ ಅನುಮತಿ ಕೊಟ್ಟಿದ್ದಾರೆ. ಅನುಮತಿ ಪಡೆದು ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ಮಾಡುವುದಾದರೆ ನಮ್ಮ ಅಭ್ಯಂತರ ಇಲ್ಲ’ ಎಂದರು. ‘ಬಜರಂಗದಳ ಸಂಘಟನೆಯನ್ನು ನಿಷೇಧ ಮಾಡುತ್ತೇವೆ ಎಂದು ನಾವು ಪ್ರಣಾಳಿಕೆಯಲ್ಲೇ ಹೇಳಿದ್ದೇವೆ’ ಎಂದೂ ಹೇಳಿದರು.

ತಾಕತ್ತಿದ್ದರೆ ನಿಷೇಧಿಸಿ: ಆರ್.ಅಶೋಕ

‘ನಿಮಗೆ ತಾಕತ್ತಿದ್ದರೆ ಆರ್ಎಸ್ಎಸ್ ಮತ್ತು ಸಂಘದ ಚಟುವಟಿಕೆ ನಿಷೇಧ ಮಾಡಿ ತೋರಿಸಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸವಾಲು ಹಾಕಿದ್ದಾರೆ. ‘ಸಂಘ ಮತ್ತು ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡುವುದು ಅಸಾಧ್ಯ. ನೀವು ನಂಬಿರುವ ಸಿದ್ಧಾಂತದ ಬಗ್ಗೆ ನಿಜಕ್ಕೂ ಬದ್ಧತೆ ಇದ್ದರೆ ನಿಷೇಧ ಮಾಡಿ’ ಎಂದು ಅವರು ‘ಎಕ್ಸ್’ ಮಾಡಿದ್ದಾರೆ. ‘325 ಸೀಟು ಗೆದ್ದಿದ್ದ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾಗಾಂಧಿ ಅವರ ಕೈಯಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧ ಮಾಡಲು ಆಗಲಿಲ್ಲ. 414 ಸೀಟುಗಳನ್ನು ಗೆದ್ದಿದ್ದ ರಾಜೀವ್ ಗಾಂಧಿ ಅವರ ಕೈಯಲ್ಲೂ ಸಂಘದ ಚಟುವಟಿಕೆ ನಿಷೇಧ ಮಾಡಲು ಆಗಿರಲಿಲ್ಲ. ಇನ್ನು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಲಿರುವ ಸಿದ್ದರಾಮಯ್ಯ ಅವರು ಏನು ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘ವಿಧಾನಸೌಧದಲ್ಲಿ ಸದನದ ಕಲಾಪದ ವೇಳೆ ನಿಮ್ಮ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಮ್ಮೆಯಿಂದ ಸಂಘದ ಪ್ರಾರ್ಥನಾ ಗೀತೆಯನ್ನು ಹಾಡಿದ್ದರು. ಸಂಘದ ಚಟುವಟಿಕೆ ನಿಷೇಧ ಮಾಡುವ ಮೊದಲು ನಿಮ್ಮ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಶಿವಕುಮಾರ್ ಅವರನ್ನು ಕಾಂಗ್ರೆಸ್ನಿಂದ ಉಚ್ಚಾಟನೆ ಮಾಡಿಸಿ ನೋಡೋಣ. ಆಗುತ್ತದೆಯೇ’ ಎಂದು ಅಶೋಕ ಪ್ರಶ್ನಿಸಿದ್ದಾರೆ. ‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ದೇಶದ್ರೋಹಿಗಳನ್ನು ಸಮರ್ಥನೆ ಮಾಡಿಕೊಳ್ಳುವ ನೀವು ಭಾರತದ ಏಕತೆ ಸಮಗ್ರತೆ ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವುದು ನಿಜಕ್ಕೂ ಹಾಸ್ಯಾಸ್ಪದ’ ಎಂದಿದ್ದಾರೆ. ‘ನಿಮ್ಮ ವೈಫಲ್ಯ ದುರಾಡಳಿತ ಮುಚ್ಚಿಕೊಳ್ಳಲು ಈ ರೀತಿ ಕೆಲಸಕ್ಕೆ ಬಾರದ ಪತ್ರಗಳನ್ನು ಬರೆಯುವುದನ್ನು ಬಿಟ್ಟು ಖಾತೆಗಳನ್ನು ಸರಿಯಾಗಿ ನಿರ್ವಹಿಸಿ. ನೆರೆಯಿಂದ ಸಂಕಷ್ಟದಲ್ಲಿರುವ ಕಲ್ಯಾಣ ಕರ್ನಾಟಕದ ರೈತರಿಗೆ ನೆರವು ನೀಡುವ ಕೆಲಸ ಮಾಡಿ’ ಎಂದು ಅಶೋಕ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.