ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಬಿರುಸಿನ ಮಳೆಯಾಗಿದ್ದು, ಬಹುತೇಕ ಜಲಾಶಯಗಳಲ್ಲಿ ಒಳಹರಿವಿನ ಮಟ್ಟ ಏರಿಕೆಯಾಗಿದೆ.
ಹಲವು ಜಿಲ್ಲೆಗಳಲ್ಲಿ ಮನೆ ಮತ್ತು ರಸ್ತೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕೆಲ ಜಿಲ್ಲೆಗಳಲ್ಲಿ ಜಮೀನು ಜಲಾವೃತವಾಗಿದ್ದು, ಬೆಳೆ ನಷ್ಟವಾಗಿದೆ. ಮಳೆಯಿಂದಾಗಿ ಹಾವೇರಿ, ಧಾರವಾಡ, ಉಡುಪಿ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಶಾಲಾ–ಕಾಲೇಜುಗಳಿಗೆ ಸೋಮವಾರ ಜಿಲ್ಲಾಡಳಿತ ರಜೆ ಘೋಷಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಡ್ಡೆಕೇರಿ, ಚಿಕ್ಕನಕೋಡ, ಹಡಿನಬಾಳ ಸೇರಿದಂತೆ 8ಕ್ಕೂ ಹೆಚ್ಚು ಗ್ರಾಮಗಳ 250ಕ್ಕಿಂತ ಹೆಚ್ಚು ಮನೆಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ.
ನೀರಿನ ಮಟ್ಟ ಏರಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪಾ, ಕದ್ರಾ, ಕೊಡಸಳ್ಳಿ ಜಲಾಶಯಗಳಿಗೆ ನೀರಿನ ಹರಿವಿನ ಪ್ರಮಾಣ ಗಣನೀಯ ಏರಿಕೆ ಕಂಡಿದೆ. ಹುಬ್ಬಳ್ಳಿಯ ತೋಳನಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಉಣಕಲ್ ಕೆರೆಯೂ ಮೂರು ದಿನಗಳಿಂದ ತುಂಬಿ ಹರಿಯುತ್ತಿದೆ.
ಜೊಯಿಡಾ ಭಾಗದ ಕೊಡಸಳ್ಳಿ ಜಲಾಶಯದಿಂದ 28 ಸಾವಿರ ಕ್ಯುಸೆಕ್, ಕದ್ರಾ ಜಲಾಶಯದಿಂದ 71 ಸಾವಿರ ಕ್ಯುಸೆಕ್ ನೀರನ್ನು ಕಾಳಿನದಿಗೆ ಹರಿಸಲಾಗಿದೆ.
ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಕೆಲವೆಡೆ ಉತ್ತಮ ಮಳೆಯಾಗಿದ್ದು, ಅರಸೀಕೆರೆ ಹೋಬಳಿಯ ಚೆಕ್‌ಡ್ಯಾಂಗಳು ಮತ್ತು ಗೋಕಟ್ಟೆಗಳು ತುಂಬಿವೆ. ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ 59,500 ಕ್ಯುಸೆಕ್‌ಗೆ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 5 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹ ಹೆಚ್ಚಳವಾಗಿದೆ.
ಬೆಳಗಾವಿ ಜಿಲ್ಲೆಯ ರಕ್ಕಸಕೊಪ್ಪ ಜಲಾಶಯದಲ್ಲಿ 2,470.20 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ‘ಜಲಾಶಯ ಭರ್ತಿಗೆ ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದೆ.
ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯಕ್ಕೆ 46,600 ಒಳಹರಿವು ಇದ್ದು, ಜಲಾಶಯದ 22 ಕ್ರಸ್ಟ್ ಗೇಟ್ ಗಳ ಪೈಕಿ 21 ಗೇಟ್‌ಗಳ ಮೂಲಕ 50,000 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.
ಶೃಂಗೇರಿಯಲ್ಲಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಭಾರತೀತೀರ್ಥ ರಸ್ತೆ, ಕುರುಬಗೆರೆ ರಸ್ತೆ ಮುಳುಗಡೆಯಾಗಿದೆ.
ಬೆಳೆ ಹಾನಿ
ಹುಬ್ಬಳ್ಳಿ ಜಿಲ್ಲೆಯ ಅಗಡಿ ಗ್ರಾಮದ ಹೊಲದಲ್ಲಿ ಜಲಾವೃತವಾಗಿದ್ದು, ಸೋಯಾಬಿನ್ ಬೆಳೆ ಹಾಳಾಗಿದೆ. ಜೊಯಿಡಾ ಭಾಗದ ಕದ್ರಾ ಜಲಾಶಯದಿಂದ ಹೆಚ್ಚಿನ ನೀರು ಹೊರಬಿಟ್ಟಿದ್ದರಿಂದ ನದಿಪಾತ್ರದ ಕೃಷಿ ಭೂಮಿ ಜಲಾವೃತಗೊಂಡಿದೆ.
ಶಿರಸಿ ತಾಲ್ಲೂಕಿನ ವರದಾ ನದಿ ಭರ್ತಿಯಾಗಿದ್ದು, ನದಿ ಇಕ್ಕೆಲಗಳ ಜಮೀನಿಗೆ ನೀರು ನುಗ್ಗಿದ್ದು ಅಡಿಕೆ ತೋಟಗಳು ಜಲಾವೃತಗೊಂಡಿವೆ. ಮುಂಡಗೋಡ-ಯಲ್ಲಾಪುರ ರಾಜ್ಯ ಹೆದ್ದಾರಿ ಮೇಲೆ ಹರಿದು ರಸ್ತೆ ಪಕ್ಕದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ. ರಾಣೇಬೆನ್ನೂರ ತಾಲೂಕಿನ ಬಿಲ್ಲಹಳ್ಳಿಯ ಕಾಲುವೆ ಒಡೆದು ರೈತರ ಕೃಷಿ ಭೂಮಿಗೆ ನೀರು ನುಗ್ಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ಭತ್ತದ ಗದ್ದೆಯಲ್ಲಿದ್ದ ಸಸಿ ಮಡಿ ಕೊಚ್ಚಿ ಹೋಗಿದೆ.
ಕೊಡಗು ಜಿಲ್ಲೆಯಲ್ಲಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಮತ್ತಷ್ಟು ಹಚ್ಚಾಗಿದೆ. ವಿರಾಜಪೇಟೆಯ ಭೇತ್ರಿಯ ಕಿಗ್ಗಾಲು ರಸ್ತೆಯ ಬದಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ನೀರಿನ ಮಟ್ಟ ಏರುತ್ತಲೇ ಇದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಅನೇಕ ಕಡೆ ರಸ್ತೆಗೆ ಮರಗಳು ಬಿದ್ದು ಸಂಚಾರಕ್ಕೆ ಹಾನಿ ಉಂಟಾಯಿತು.
ಸ್ನಾನಘಟ್ಟ ಮುಳುಗಡೆ
ಘಟ್ಟ ಪ್ರದೇಶಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ಅಲ್ಲಿನ ಲಗೇಜ್ ಕೊಠಡಿ, ಶೌಚಾಲಯಗಳೆಲ್ಲ ಜಲಾವೃತವಾಗಿದ್ದರಿಂದ ಭಕ್ತರು ತೀರ್ಥ ಸ್ನಾನಕ್ಕೆ ಸಮಸ್ಯೆ ಎದುರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.